ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಚಂದ್ರಮಂಡಲ ಉತ್ಸವ ಅನುಮಾನ

ಚಿಕ್ಕಲ್ಲೂರು; ಭಕ್ತರಿಗೆ ನಿಷೇಧ– ಡಿ.ಸಿ ಆದೇಶ, ಅನುಮತಿಗಾಗಿ ಶಾಸಕ, ಜಿಲ್ಲಾಧಿಕಾರಿಗೆ ಮನಿ
Last Updated 12 ಜನವರಿ 2022, 6:36 IST
ಅಕ್ಷರ ಗಾತ್ರ

ಕೊಳ್ಳೇಗಾಲ: ದಟ್ಟವಾಗಿ ಆವರಿಸಿರುವ ಕೋವಿಡ್‌ ಕರಿನೆರಳು, ಈ ವರ್ಷವೂ ಚಿಕ್ಕಲ್ಲೂರಿನ ಸಿದ್ದಪ್ಪಾಜಿ ಜಾತ್ರೆಯನ್ನು ಮಸುಕಾಗಿಸಿದೆ.

ಜಾತ್ರೆಗೆ ಅವಕಾಶ ಇಲ್ಲ ಎಂದು ಜಿಲ್ಲಾಡಳಿತ ಈಗಾಗಲೇ ಸ್ಪಷ್ಟವಾಗಿ ತಿಳಿಸಿದ್ದು, ಜಾತ್ರೆಗೆ ನಿಗದಿಯಾಗಿರುವ ಇದೇ 16ರಿಂದ 22ರವರೆಗೆ ದೇವಾಲಯಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಈ ಬಾರಿಯ ಜಾತ್ರೆಯ ದಿನಾಂಕ 17ರಿಂದ 21ರವರೆಗೆ ನಿಗದಿಯಾಗಿದೆ. ಕಳೆದ ವರ್ಷ ಅದ್ಧೂರಿ ಜಾತ್ರೆಗೆ ನಿರ್ಬಂಧ ವಿಧಿಸಲಾಗಿತ್ತು. ಆದರೆ, 100 ಜನರ ಮಿತಿಯಲ್ಲಿ ಜಾತ್ರೆಗಳ ವಿಧಿ ವಿಧಾನಗಳನ್ನು ನಡೆಸುವುದಕ್ಕೆ ಜಿಲ್ಲಾಡಳಿತ ಅವಕಾಶ ನೀಡಿತ್ತು.

ಈ ವರ್ಷ ಕೋವಿಡ್‌ ಪರಿಸ್ಥಿತಿ ಭಿನ್ನವಾಗಿದ್ದು, ಪ್ರಕರಣಗಳು ಶರವೇಗದಲ್ಲಿ ಹೆಚ್ಚಾಗುತ್ತಿವೆ. ಹಾಗಾಗಿ ಜಿಲ್ಲಾಡಳಿತ ಮತ್ತಷ್ಟು ಕಠಿಣ ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆ ಇದೆ. ಹೀಗಾಗಿ ಜಾತ್ರೆಯ ಮೊದಲ ದಿನ ಚಂದ್ರಮಂಡಲ ಉತ್ಸವ ನಡೆಯುವುದೂ ಅನುಮಾನವಾಗಿದೆ.

ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಚಂದ್ರಮಂಡಲ ಉತ್ಸವಕ್ಕೆ ಅನುಮತಿ ಕೊಡಿಸಬೇಕು ಎಂದು ಚಿಕ್ಕಲ್ಲೂರು ಹೊಸ ಮತ್ತು ಹಳೆ ಮಠದ ಮುಖ್ಯಸ್ಥ ಭರತ್‌ರಾಜೇ ಅರಸ್‌ ಹಾಗೂ ಸಿದ್ದಪ್ಪಾಜಿ ನೀಲಗಾರರು ಶಾಸಕ ಎನ್.ಮಹೇಶ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.

’ಕಳೆದ ವರ್ಷ ಸಂಪ್ರದಾಯದಂತೆ ಪೂಜಾ ಕೈಂಕರ್ಯಗಳನ್ನು ನಡೆಸಲು ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿತ್ತು. ಪೊಲೀಸರ ಬಂದೋಬಸ್ತಿನಲ್ಲಿ ಚಂದ್ರಮಂಡಲ ಉತ್ಸವವನ್ನು ಸುಸೂತ್ರವಾಗಿ ನಡೆಸಲಾಗಿತ್ತು. ಚಂದ್ರಮಂಡಲ ಬೆಂಕಿಯಿಂದ ಉರಿದ ಕಪ್ಪು ಪವಿತ್ರವಾಗಿದ್ದು, ಇದನ್ನು ವರ್ಷ ಪೂರ್ತಿ ಭಕ್ತರಿಗೆ ನೀಡುವ ವಾಡಿಕೆಯಾಗಿದೆ. ಜನವರಿ 17 ರಂದು ಉತ್ಸವ ನಡೆಯಲಿದ್ದು, ಕೊರೊನಾ ಮಾರ್ಗಸೂಚಿ ಅನುಸರಿಸಿ ಅದನ್ನು ಆಚರಿಸಲು ಅನುಮತಿ ಕೊಡಿಸಬೇಕು‘ ಎಂದು ಮನವಿಯಲ್ಲಿ ಅವರು ಹೇಳಿದ್ದಾರೆ.

ಪ್ರತಿ ವರ್ಷ ನಡೆಯುವ ಪದ್ಧತಿಯಂತೆ ತಾಲ್ಲೂಕಿನ ಸುಂಡ್ರಹಳ್ಳಿ ಕುಂಚಿಟಿಗಗೌಡರು ಚಂದ್ರಮಂಡಲ ಸಿದ್ಧತೆಗೆ ಬೇಕಾದ ನಾರು ಬಿದುರನ್ನು ನೀಡುತ್ತಾರೆ. ಇಕ್ಕಡಳ್ಳಿ, ಮಡಿವಾಳ ಸಮುದಾಯದ ಭಕ್ತರು ಪಂಜುಗಳನ್ನು ತಯಾರಿಸಿ ಪಾದಯಾತ್ರೆಯಲ್ಲಿ ಬಂದು ದೇವಸ್ಥಾನಕ್ಕೆ ನೀಡುತ್ತಾರೆ. ಶಾಗ್ಯ ಗ್ರಾಮದ ಆದಿಜಾಂಬವ ಸಮುದಾಯದ 13 ಭಕ್ತರು ಚಂದ್ರಮಂಡಲದ ದಿನ ಎಣ್ಣೆತುಪ್ಪ, ಬಿದಿರು, ನಾರು ಬಟ್ಟೆಗಳನ್ನು ಬಳಸಿಕೊಂಡು ಪಂಜು ತಯಾರಿಸಿ ಅವುಗಳನ್ನು ಚಂದ್ರಮಂಡಲದ ಆಕಾರಕ್ಕೆ ಕಟ್ಟುತ್ತಾರೆ. ದೇವಸ್ಥಾನದ ಮುಂಭಾಗವಿರುವ ಮಂಟಪದಲ್ಲಿ ಸಿದ್ಧಗೊಳಿಸಿದ್ದ ಚಂದ್ರಮಂಡಲಕ್ಕೆ ಮಠದ ಅಧ್ಯಕ್ಷ ಜ್ಞಾನನಂದಚನ್ನರಾಜೇ ಅರಸ್ ಅವರು ವಿಶೇಷ ಪೂಜೆ ಸಲ್ಲಿಸಿ, ಕರ್ಪೂರದಿಂದ ಅಗ್ನಿಸ್ಪರ್ಶ ಮಾಡುತ್ತಾರೆ. ಚಂದ್ರಮಂಡಲ ಬೆಂಕಿಯ ಜ್ವಾಲೆ ಯಾವ ಭಾಗಕ್ಕೆ ಉರಿಯುತ್ತದೆಯೋ, ಆ ಭಾಗದಲ್ಲಿ ಉತ್ತಮ ಮಳೆ ಬೆಳೆಯಾಗುತ್ತದೆ ಎಂಬುದು ಸ್ಥಳೀಯರ ನಂಬಿಕೆ.

ಈ ಬಗ್ಗೆ ’ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ ಶಾಸಕ ಎನ್‌.ಮಹೇಶ್‌ ಅವರು, ’ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ಜೊತೆ ಮಾತನಾಡಿದ್ದೇನೆ. ಕಳೆದ ವರ್ಷದಂತೆ ಈ ವರ್ಷವೂ ಚಂದ್ರಮಂಡಲಕ್ಕೆ ಅವಕಾಶ ಕೊಡಬೇಕು, ಶತಮಾನಗಳಿಂದ ನಡೆದುಕೊಂಡು ಬಂದ ಪದ್ಧತಿಯ ಆಚರಣೆಗೆ ಅನುಮತಿ ನೀಡಬೇಕು ಎಂದು ಕೇಳಿದ್ದೇನೆ‘ ಎಂದು ಹೇಳಿದರು.

ಲಸಿಕೆ, ಆರ್‌ಟಿಪಿಸಿಆರ್‌ ಪ್ರಮಾಣಪತ್ರ ಕಡ್ಡಾಯ

ಚಿಕ್ಕಲ್ಲೂರು ಗ್ರಾಮದ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಇದೇ 16ರಿಂದ 22ರವರೆಗೆ ಜಾತ್ರೆ ಮತ್ತು ವಿಶೇಷ ಪೂಜಾ ಕಾರ್ಯಗಳಿಗೆ ದೇವಾಲಯದ ಅರ್ಚಕರು ಹಾಗೂ ಸಿಬ್ಬಂದಿ ಬಿಟ್ಟು ಜಿಲ್ಲಾ ಹಾಗೂ ಅಂತರ ಜಿಲ್ಲಾ ಸಾರ್ವಜನಿಕರು ಹಾಗೂ ಭಕ್ತಾದಿಗಳ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶ ಹೊರಡಿಸಿದ್ದಾರೆ.

ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರುಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರುವ ಹಾಗೂ ಆರ್‌ಟಿಪಿಸಿಆರ್ ನಗೆಟಿವ್‌ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯ ಎಂದು ಅವರು ಹೇಳಿದ್ದಾರೆ.

ನಿಯಮಗಳನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

--

ಶತಮಾನಗಳಿಂದ ನಡೆದುಕೊಂಡು ಬಂದಿರುವ ಚಂದ್ರಮಂಡಲ ಉತ್ಸವಕ್ಕೆ ಅನುಮತಿ ಕೋಡಬೇಕು ಎಂದು ಶಾಸಕರು, ಡಿಸಿಯವರಲ್ಲಿ ಕೇಳಿದ್ದೇವೆ
ಭರತ್‍ರಾಜೇ ಅರಸ್, ಚಿಕ್ಕಲ್ಲೂರು ಆಡಾಳಿತಾಧಿಕಾರಿ

--

ಜಾತ್ರೆ ರದ್ದಾದರೂ ಆಚರಿಸಿಕೊಂಡು ಬಂದಿರುವ ಪದ್ದತಿ ರದ್ದಾಗಬಾರದು. ಆ ಕಾರಣಕ್ಕೆ ಎಲ್ಲ ಪೂಜೆಗೂ ಅವಕಾಶ ಮಾಡಿಕೊಡಬೇಕು.
ಮಹದೇವ, ಕೊತ್ತನೂರು ನೀಲಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT