ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸಮಾಜದ ನಿರ್ಮಾತೃ ಬಸವಣ್ಣ ಸದಾ ಸ್ಮರಣೀಯರು: ಪುಟ್ಟರಂಗಶೆಟ್ಟಿ

ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಭಾವಚಿತ್ರ ಅನಾವರಣ ಕಾರ್ಯಕ್ರಮ
Published 18 ಫೆಬ್ರುವರಿ 2024, 5:43 IST
Last Updated 18 ಫೆಬ್ರುವರಿ 2024, 5:43 IST
ಅಕ್ಷರ ಗಾತ್ರ

ಚಾಮರಾಜನಗರ: ಸಮಾಜದಲ್ಲಿದ್ದ ಅಂಕುಡೊಂಕುಗಳನ್ನು ತಿದ್ದುವಂತಹ ವಚನಗಳನ್ನು ರಚಿಸುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಮುಂದಾದ ಬಸವಣ್ಣನವರಂತಹ ಪುಣ್ಯ ಪುರುಷರನ್ನು ಸರ್ವಕಾಲಕ್ಕೂ ಸ್ಮರಣೆ ಮಾಡಬೇಕಾಗಿದೆ ಎಂದು ಶಾಸಕ, ಎಂಎಸ್‌ಐಎಲ್‌ ಅಧ್ಯಕ್ಷ ಸಿ. ಪುಟ್ಟರಂಗಶೆಟ್ಟಿ ಶನಿವಾರ ಹೇಳಿದರು. 

ನಗರದ ವರನಟ ಡಾ.ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ, ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಅವರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಸರ್ಕಾರವು ಬಸವಣ್ಣನವರನ್ನು ಸಾಂಸ್ಕ್ರತಿಕ ನಾಯಕರನ್ನಾಗಿ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಇವನಾರವ, ಇವನಾರವ ಎನ್ನದೇ ಇವ ನಮ್ಮವ ಇವ ನಮ್ಮವ ಎನ್ನುವ ಸಂದೇಶ ಸಾರಿದ ಬಸವಣ್ಣನವರ ನೆನೆಯುವ ಕಾರ್ಯ ನಿರಂತರವಾಗಿ ನಡೆಯಬೇಕು’ ಎಂದರು.

‘ಸಮಾಜದಲ್ಲಿದ್ದ ಮೂಢನಂಬಿಕೆ, ತಾರತಮ್ಯ, ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿ ಕಾಯಕದ ಮಹತ್ವವನ್ನು ತಿಳಿಸಿದ ಬಸವಣ್ಣನವರ ಭಾವಚಿತ್ರವನ್ನು ಎಲ್ಲ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕು. ತಪ್ಪಿದಲ್ಲಿ ಅಂತಹವರ ವಿರುದ್ಧ ಕ್ರಮವಹಿಸಬೇಕು’ ಎಂದು ಪುಟ್ಟರಂಗಶೆಟ್ಟಿ ತಿಳಿಸಿದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ, ‘ಬಸವಣ್ಣನವರು ರಚಿಸಿದ ವಚನಗಳ ಮೌಲ್ಯಗಳು ಸರ್ವಕಾಲಕ್ಕೂ ದಾರಿದೀಪವಾಗಿದೆ. ವಿಶ್ವಸಂಸ್ಕ್ರತಿ, ಉದಾರ ತತ್ವಗಳನ್ನು ಪ್ರತಿಪಾದಿಸಿದ ಬಸವಣ್ಣನವರು ವಿಶ್ವಗುರುವಾಗಿದ್ದಾರೆ. ಮಹಿಳಾ ಅಸಮಾನತೆ, ಮೂಢನಂಬಿಕೆ ವಿರೋಧಿಸಿ, ನಡೆ-ನುಡಿ ಒಂದೇ ಆಗಿರಬೇಕೆಂದ ಬಸವಣ್ಣನವರು ನುಡಿದಂತೆ ನಡೆದರು ಕೂಡ. ಇಂದಿನ ಯುವಪೀಳಿಗೆ ಹಾಗೂ ಅಧಿಕಾರಿಗಳು ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವವನ್ನು ಪಾಲಿಸಬೇಕು’ ಎಂದರು.

ಹರವೆ ವಿರಕ್ತಮಠದ ಸರ್ಪಭೂಷಣಸ್ವಾಮೀಜಿ ಮಾತನಾಡಿ, ‘ಸರ್ಕಾರವು ಬಸವಣ್ಣನವರನ್ನು ಸಾಂಸ್ಕ್ರತಿಕ ನಾಯಕರನ್ನಾಗಿ ಘೋಷಿಸಿರುವುದು ಸಂತಸದ ವಿಚಾರ. ಅನುಭವ ಮಂಟಪ ನಿರ್ಮಿಸಿ ಸಮಾನತೆ ಹಂಚಿದ ಬಸವಣ್ಣನವರು ಎಲ್ಲ ವರ್ಗಗಳಿಗೂ ಸಮಾನ ಗೌರವ ದೊರೆಯುವಂತೆ ಮಾಡಿದರು. ವಚನಗಳಲ್ಲಿನ ಸಾರವನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಸಾಮಾಜಿಕ ಸಮಸ್ಯೆಗಳು ದೂರವಾಗಲಿವೆ’ ಎಂದರು.

ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಚನ್ನಬಸವಸ್ವಾಮೀಜಿ ಮಾತನಾಡಿ, ‘ಬಸವಣ್ಣನವರು ಇಡೀ ಸಮಾಜಕ್ಕೆ ಸಮಾನತೆಯ ತತ್ವ ಭೋದಿಸಿದರು. ಅವರ ವಚನಗಳು. ಸಪ್ತಸೂತ್ರಗಳು ಎಲ್ಲರ ಜೀವನಕ್ಕೆ ದಾರಿ ದೀಪವಾಗಿವೆ. ಬಸವಣ್ಣನವರ ವಚನಗಳ ಅನುಸರಣೆಯಿಂದ ಜೀವನವನ್ನು ಸಾರ್ಥಕಪಡಿಸಿಕೊಳ್ಳಬಹುದು’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪಿ. ಲಕ್ಷಿ, ಭೂ ದಾಖಲೆ ಇಲಾಖೆಯ ಉಪನಿರ್ದೇಶಕಿ ವಿದ್ಯಾಯಿನಿ, ಮುಖಂಡರಾದ ಮೂಡ್ಲುಪುರ ನಂದೀಶ್, ಡಿ.ನಾಗೇಂದ್ರ, ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

‘ಪ್ರತಿಮೆ ನಿರ್ಮಾಣ ಕಾರ್ಯ ಆರಂಭಿಸಿ’

ಜಿಲ್ಲಾಡಳಿತ ಭವನದ ಆವರಣದಲ್ಲಿ ಬಸವಣ್ಣನವರ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಈಗಾಗಲೇ ₹15 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಪ್ರತಿಮೆ ನಿರ್ಮಾಣ ಕಾರ್ಯ ಶೀಘ್ರ ಪ್ರಾರಂಭವಾಗಬೇಕು. ಬಸವಣ್ಣನವರ ಕಂಚಿನ ಪ್ರತಿಮೆ ನೀಡುವುದಾಗಿ ಸುತ್ತೂರು ಶ್ರೀಗಳು ಹೇಳಿದ್ದಾರೆ’ ಎಂದು ಪುಟ್ಟರಂಗಶೆಟ್ಟಿ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT