ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ರಕ್ಷಣೆಗೆ ಆಗ್ರಹ

Published 14 ಜನವರಿ 2024, 3:19 IST
Last Updated 14 ಜನವರಿ 2024, 3:19 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಬಿ. ರಾಚಯ್ಯ ಜೋಡಿ ರಸ್ತೆಯ ಆದಿಕರ್ನಾಟಕ ಅಭಿವೃದ್ದಿ ಸಂಘಕ್ಕೆ ಸೇರಿದ ಜಾಗವನ್ನು ಅಕ್ರಮವಾಗಿ ಬೇರೆಯವರಿಗೆ ಮಾರಾಟ ಮಾಡಲು ಕಾಣದ ಕೈಗಳು ಯತ್ನಿಸುತ್ತಿದ್ದು, ಸಂಘದ ಅಧ್ಯಕ್ಷ ನಂಜುಂಡಸ್ವಾಮಿ ಸೇರಿ ಪದಾಧಿಕಾರಿಗಳು ಮೌನವಾಗಿದ್ದಾರೆ ಎಂದು ಮುಖಂಡರಾದ ಅಯ್ಯನಪುರ ಶಿವಕುಮಾರ್‌, ನಲ್ಲೂರು ಸೋಮೇಶ್ವರ ಹಾಗೂ ಇತರರು ಆರೋಪಿಸಿದ್ದಾರೆ. 

‘ಸಂಘಕ್ಕೆ ಸೇರಿದ ಜಾಗವನ್ನು ಬೇರೆಯವರಿಗೆ ಖಾತೆ ಮಾಡಿಕೊಡಲು ಕೆಲವು ಪ್ರಭಾವಿ ವ್ಯಕ್ತಿಗಳು ತಹಶೀಲ್ದಾರ್‌ ಮೇಲೆ ಒತ್ತಡ ಹಾಕುತ್ತಿದ್ದು, ದಲಿತ ಸಮುದಾಯಕ್ಕೆ ಮೀಸಲಾಗಿರುವ ಜಮೀನು ರಕ್ಷಿಸಲು ಸರ್ಕಾರ ಕ್ರಮ ವಹಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ. 

ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಸಂರಕ್ಷಣಾ ಸಮಿತಿಯ ಆಶ್ರಯದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಶಿವಕುಮಾರ್‌, ಸೋಮೇಶ್ವರ, ಆರ್.ಮಹದೇವ ಮತ್ತು ಇತರರು, ‘ಸರ್ವೆ ನಂಬರ್‌ 295ರಲ್ಲಿರುವ  1 ಎಕರೆ 24 ಗುಂಟೆ ಜಮೀನನ್ನು ಎಂಟು ಗುಂಟೆಗಳ ಎಂಟು ಭಾಗಗಳನ್ನಾಗಿ ಮಾಡಿದ್ದು, ನಕಲಿ ವ್ಯಕ್ತಿಗಳ ಹೆಸರಿನಲ್ಲಿ ಖಾತೆ ಬದಲಾವಣೆಯ ಪ್ರಯತ್ನ ನಡೆಯುತ್ತಿದೆ. 295/4ಸಿ ಸರ್ವೆ ನಂಬರ್‌ನಲ್ಲಿರುವ ಎಂಟು ಗುಂಟೆ ಜಮೀನನ್ನು ಸಂಘದ ಅಧ್ಯಕ್ಷ ಎಸ್‌.ನಂಜುಂಡಸ್ವಾಮಿ ಅವರ ಸಹೋದರರ ಮಕ್ಕಳ ಹೆಸರಿಗೆ ಕ್ರಯ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿದ್ದುಕೊಂಡು ನಂಜುಂಡಸ್ವಾಮಿಯವರಿಗೆ ಇದರ ಮಾಹಿತಿ ಇಲ್ಲವೇ? ಜಾಗವನ್ನು ರಕ್ಷಿಸಲು ಸಾಧ್ಯವಾಗದ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು. 

 ಶಿವಕುಮಾರ್ ಮಾತನಾಡಿ, ‘ತಾಲ್ಲೂಕಿನ ದಲಿತ ಸಮುದಾಯದ ಶೈಕ್ಷಣಿಕ ಅಭಿವೃದ್ದಿಗಾಗಿ ದಿ. ಬಿ.ರಾಚಯ್ಯನವರು ಸಚಿವರಾಗಿದ್ದಾಗ, ಶಿಕ್ಷಣ ತಜ್ಞ ದಿ. ಕೆ.ಸಿ. ರಂಗಯ್ಯ, ಗುತ್ತಿಗೆದಾರ ದಿ. ಹೆಗ್ಗವಾಡಿ ರಂಗಸ್ವಾಮಿ, ಹನುಮಂತಯ್ಯ ಮತ್ತಿತರರು ಜಮೀನು ಖರೀದಿಸಿ, ಸಮುದಾಯದ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್‌ ನಿರ್ಮಿಸಿದ್ದರು. ಇಂತಹ ಹಾಸ್ಟೆಲ್‌ಗೆ ಸೇರಿದ ಜಾಗವನ್ನು ಕಬಳಿಸಲು ಕಾಣದ ಕೈಗಳು ಯತ್ನಿಸುತ್ತಿವೆ’ ಎಂದು ದೂರಿದರು. 

‘8 ಗುಂಟೆ ಜಾಗವನ್ನು ಅಧ್ಯಕ್ಷ ನಂಜುಂಡಸ್ವಾಮಿ ಅವರ ಸಹೋದರ ಪುತ್ರರಾದ ಸಿ.ಕೆ. ದಿಲೀಪ್‌ಕುದರ್ ಹಾಗೂ ಸಿ.ಎಸ್. ಶ್ರೀನಿಧಿ ಕುದರ್ ಅವರಿಗೆ ಕ್ರಯ (ಮಾರಾಟ) ಮಾಡಲಾಗಿದೆ. ಈ ಜಾಗವನ್ನು ಮಹೇಶ್‌ಕುಮಾರ್ ಮತ್ತು ಶಿವರಾಜು ಎಂಬುವರು 2023ರ ಜುಲೈ 31 ರಂದು ಕ್ರಯಕ್ಕೆ ನೀಡಿ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದಾರೆ. ಇದರ ಖಾತೆ ಮಾಡುವ ಸಂದರ್ಭದಲ್ಲಿ ನಗರಸಭೆ ಅಸೆಸ್‌ಮೆಂಟ್‌ ನಂಬರ್‌, ಸರ್ವೆ ನಂಬರ್‌ ಎರಡೂ ಇದ್ದುದರಿಂದ ಅನುಮಾನ ಬಂದು ತಹಶೀಲ್ದಾರ್‌ ಅವರು ಗ್ರಾಮ ಆಡಳಿತಾಧಿಕಾರಿ ಮತ್ತು ಭೂಮಾಪನಾ ಇಲಾಖೆಯ ಸಿಬ್ಬಂದಿ ಮೂಲಕ ಪರಿಶೀಲನೆ ನಡೆಸಿದ್ದರು. ಆ ಸಂದರ್ಭದಲ್ಲಿ ಈ ಜಮೀನಿನಲ್ಲಿ ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಹಾಸ್ಟೆಲ್‌ ಇರುವುದನ್ನು ಅವರು ಉಲ್ಲೇಖಿಸಿದ್ದರು. ಹೀಗಾಗಿ, ಅವರು ಖಾತೆ ಮಾಡಿಕೊಟ್ಟಿಲ್ಲ. ಈಗ ಕೆಲವು ಪ್ರಭಾವಿಗಳು ತಹಶೀಲ್ದಾರ್‌ ಮೇಲೆ ಒತ್ತಡ ಹಾಕುತ್ತಿದ್ದಾರೆ’ ಎಂದು ದೂರಿದರು. 

ಸೋಮೇಶ್ವರ ಮಾತನಾಡಿ, ‘ಎಂಟು ಗುಂಟೆಗಳ ಉಳಿದ ಏಳು ಪೋಡಿಗಳು ಕೂಡ ಬೇರೆಯವರ ಹೆಸರಿನಲ್ಲಿದೆ. ಮುಂದಿನ ದಿನಗಳಲ್ಲಿ ಅದು ಕೂಡ ಬೇರೆಯವರಿಗೆ ಪರಭಾರೆಯಾಗುವ ಸಾಧ್ಯತೆ ಇದೆ’ ಎಂದರು. 

ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ, ಮುಖಂಡರಾದ ಕಾಗಲವಾಡಿ ಶಿವಸ್ವಾಮಿ, ನಾಗಯ್ಯ, ರಂಗಸ್ವಾಮಿ ಇದ್ದರು.

ಸೂಪರ್‌ಸೀಡ್‌ ಮಾಡಲು ಆಗ್ರಹ

‘ನಮ್ಮ ಸಮುದಾಯದ ಹಿರಿಯರು ಗ್ರಾಮೀಣ ಪ್ರದೇಶಗಳಲ್ಲಿ ಭಿಕ್ಷೆ ಬೇಡಿ ಈ ಆಸ್ತಿಯನ್ನು ಸಂರಕ್ಷಣೆ ಮಾಡಿದ್ದಾರೆ. ಇದನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡಬೇಕಾಗಿದೆ. ಭೂಮಿ ರಕ್ಷಿಸಲು ಸಾಧ್ಯವಾಗದ ಸಂಘದ ಅಧ್ಯಕ್ಷರು ರಾಜೀನಾಮೆ ನೀಡಬೇಕು. ಇಲ್ಲವೇ ಗಡಿ ಕಟ್ಟೆ ಹಾಗೂ ತಾಲ್ಲೂಕಿನ ವ್ಯಾಪ್ತಿಯ ಸಮುದಾಯ ಮುಖಂಡರ ಸಭೆ ಸೇರಿಸಿ ದೊಡ್ಡ ಮಟ್ಟದ ಹೋರಾಟ ರೂಪಿಸಬೇಕಾಗುತ್ತದೆ’ ಎಂದು ಸೋಮೇಶ್ವರ ಎಚ್ಚರಿಸಿದರು.  ಆರ್.ಮಹದೇವ ಮಾತನಾಡಿ ‘ಈಗಾಗಲೇ ತಹಶೀಲ್ದಾರ್‌ಗೆ ಖಾತೆ ವರ್ಗಾವಣೆ ಮಾಡದಂತೆ ದೂರು ನೀಡಿದ್ದೇವೆ. ಸಹಕಾರ ಸಂಘಗಳ ರಿಜಿಸ್ಟ್ರಾರ್‌ಗೆ ಸಂಘದ ನಿರ್ವಹಣೆ ಮತ್ತು ಆಡಳಿತ ಮಂಡಳಿಯನ್ನು ವಜಾಗೊಳಿಸಲು ಮನವಿ ಮಾಡಲಾಗುವುದು. ಜಿಲ್ಲಾಧಿಕಾರಿಯವರ ಗಮನಕ್ಕೂ ತರಲಾಗುವುದು. ಕ್ರಮ ವಹಿಸದೆ ಮೌನವಾಗಿರುವ ಮತ್ತು ಅಧ್ಯಕ್ಷರು ಹೇಳಿದಂತೆ ಕೇಳುತ್ತಿರುವ ನಿರ್ದೇಶಕರ ಮಂಡಳಿಯನ್ನು ಸರ್ಕಾರ ಸೂಪರ್ ಸೀಡ್ ಮಾಡಬೇಕು’ ಎಂದು ಒತ್ತಾಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT