ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ರಫ್ತು ಉತ್ತೇಜನಕ್ಕೆ ಸಮಗ್ರ ಕ್ರಿಯಾ ಯೋಜನೆಗೆ ಡಿಸಿ ಸೂಚನೆ

Last Updated 23 ನವೆಂಬರ್ 2020, 17:08 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ತಯಾರಾಗುವ ಉತ್ಪನ್ನಗಳನ್ನು ರಫ್ತು ಮಾಡಲು ಇರುವ ಅವಕಾಶಗಳು, ಉತ್ತೇಜನ ಹಾಗೂ ರಫ್ತುದಾರರ ಮಾಹಿತಿಯುಳ್ಳ ಸಮಗ್ರ ಜಿಲ್ಲಾ ಕ್ರಿಯಾ ಯೋಜನೆಯನ್ನು ತಯಾರಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸೋಮವಾರ ಸೂಚನೆ ನೀಡಿದರು.

ಜಿಲ್ಲಾ ಮಟ್ಟದ ರಫ್ತು ಉತ್ತೇಜನ ಸಮಿತಿ ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯು ಹಲವಾರು ವಿಶೇಷ ಉತ್ಪನ್ನಗಳಿಗೆ ಪ್ರಸಿದ್ದಿ ಪಡೆದಿದೆ. ಕೈಗಾರಿಕೆ, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ.ಇವುಗಳಿಗೆ ಮಾರುಕಟ್ಟೆ ಒದಗಿಸುವ ಸಲುವಾಗಿ ರಫ್ತಿಗೆ ಉತ್ತೇಜನ ನೀಡಬೇಕಿದೆ’ ಎಂದರು.

‘ಜಿಲ್ಲೆಯಲ್ಲಿ ಬೆಳೆಯಲಾಗುವ ಅರಿಸಿನ, ಮೆಕ್ಕೆಜೋಳ, ಬಾಳೆ ಇನ್ನಿತರ ಬೆಳೆಗಳಿಗೆ ಪ್ರೋತ್ಸಾಹ ನೀಡಿ ಇವುಗಳಿಗೆ ಪೂರಕ ಕೈಗಾರಿಕೆ ಚಟುವಟಿಕೆಗಳನ್ನು ಆರಂಭಿಸುವುದರಿಂದ ಲಾಭದಾಯಕವಾಗಲು ಸಾಧ್ಯ. ಕೃಷಿ, ತೋಟಗಾರಿಕೆ, ಕೈಗಾರಿಕಾ ಇಲಾಖೆಗಳು ಸಮನ್ವಯದಿಂದ ಉದ್ಯಮ ಬೆಳವಣಿಗೆಗೆ ಅಗತ್ಯವಿರುವ ಕ್ರಮಗಳಿಗೆ ಮುಂದಾಗಬೇಕು’ ಎಂದು ಅವರು ತಿಳಿಸಿದರು.

‘ಜಿಲ್ಲೆಯ ಗ್ರ್ಯಾನೈಟ್‌ಗೆ ಹೆಚ್ಚಿನ ಬೇಡಿಕೆಯಿದೆ. ಗ್ರ್ಯಾನೈಟ್‌ ಉದ್ಯಮದಲ್ಲಿ ಪಾಲಿಶಿಂಗ್, ಕಟ್ಟಿಂಗ್ ಕೌಶಲ ಪ್ರಮುಖವಾಗಿದೆ. ಸ್ಥಳೀಯರಿಗೆ ಈ ಕೌಶಲ ತರಬೇತಿ ನೀಡಿ ಪರಿಣತರನ್ನಾಗಿಸಬೇಕು’ ಎಂದು ಡಾ.ಎಂ.ಆರ್.ರವಿ ಅವರು ಸಲಹೆ ನೀಡಿದರು.

‘ಬದನಗುಪ್ಪೆ, ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶಕ್ಕೆ ಕಬಿನಿ ನದಿಯಿಂದ ನೀರು ಸರಬರಾಜು ಮಾಡುವ ಬಾಕಿ ಉಳಿದಿರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ವಿದ್ಯುತ್ ಸರಬರಾಜಿನಲ್ಲಿ ಅಡಚಣೆಗೆ ಅವಕಾಶವಾಗಬಾರದು’ ಎಂದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿ. ಚೌಡಯ್ಯ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ವಿಜಯ್‌ಕುಮಾರ್ ಚೌರಾಸಿಯಾ, ಪರಿಸರ ಅಧಿಕಾರಿ ಎಂ.ಜಿ.ರಘುರಾಂ, ಖಾದಿ ಗ್ರಾಮೋದ್ಯೋಗ ಇಲಾಖೆಯ ಉಪನಿರ್ದೇಶಕ ಕೆ.ಎ. ರಾಜೇಂದ್ರಪ್ರಸಾದ್, ಕೆ.ಎಸ್.ಎಫ್.ಸಿ ಉಪವ್ಯವಸ್ಥಾಪಕ ಉಮೇಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚಂದ್ರಕಲಾ, ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಪ್ರತಿನಿಧಿಗಳಾದ ಜಿ.ಎಂ. ಹೆಗಡೆ, ಜಯಸಿಂಹ, ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT