ಶನಿವಾರ, ಮೇ 15, 2021
23 °C
ಕಲ್ಯಾಣಮಂಟಪ, ಹೋಟೆಲ್, ಸಿನಿಮಾ ಮಂದಿರ ಮಾಲೀಕರೊಂದಿಗೆ ಜಿಲ್ಲಾಧಿಕಾರಿ ಸಭೆ

ಕೋವಿಡ್ ಶಿಷ್ಟಾಚಾರ ಕಡ್ಡಾಯ ಪಾಲನೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್-19 ಎರಡನೇ ಅಲೆಯನ್ನು ನಿಯಂತ್ರಿಸುವ ಸಲುವಾಗಿ ಜಿಲ್ಲೆಯಲ್ಲಿರುವ ಎಲ್ಲಾ ಕಲ್ಯಾಣ ಮಂಟಪಗಳು, ಹೋಟೆಲ್ ಹಾಗೂ ಸಿನಿಮಾ ಮಂದಿರಗಳಲ್ಲಿ ಕೋವಿಡ್ ಶಿಷ್ಟಾಚಾರ ಮಾರ್ಗಸೂಚಿ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಸೋಮವಾರ ಸೂಚನೆ ನೀಡಿದರು.

ಜಿಲ್ಲೆಯ ಹೋಟೆಲ್, ಕಲ್ಯಾಣಮಂಟಪಗಳು ಹಾಗೂ ಸಿನಿಮಾ ಮಂದಿರಗಳ ಮಾಲೀಕರೊಂದಿಗೆ ನಡೆದ ಕೋವಿಡ್ ನಿಯಂತ್ರಣ ಸಭೆಯಲ್ಲಿ ಮಾತನಾಡಿದ ಅವರು, ‘ಕಳೆದ ಬಾರಿ ಸೋಂಕು ನಿಯಂತ್ರಣದಲ್ಲಿ ಜಿಲ್ಲೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ಪ್ರಸ್ತುತ ಜಿಲ್ಲೆಯ ಪರಿಸ್ಥಿತಿ ಇತರೆ ಜಿಲ್ಲೆ, ರಾಜ್ಯಗಳಿಗಿಂತ ಭಿನ್ನವಾಗಿಲ್ಲ. ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೆ ಇದೆ. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆಯಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊರಡಿಸಿರುವ ಕೋವಿಡ್ ಶಿಷ್ಠಾಚಾರ ಮಾರ್ಗಸೂಚಿ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕಲ್ಯಾಣಮಂಟಪಗಳಲ್ಲಿ ನಡೆಯುವ ಮದುವೆಗಳಿಗೆ ಒಳಾಂಗಣದಲ್ಲಿ 100 ಮಂದಿ ಹಾಗೂ ಹೊರಾಂಗಣದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ 200 ಮಂದಿ ಮಾತ್ರ ಸೇರುವಂತೆ ಆದೇಶ ಹೊರಡಿಸಲಾಗಿದೆ. ಈಗಾಗಲೇ ಬುಕ್ ಆಗಿರುವ ಕಲ್ಯಾಣಮಂಟಪಗಳಿಗೆ ತಹಶೀಲ್ದಾರರ ಅನುಮತಿ ಅಗತ್ಯವಿರುವುದಿಲ್ಲ. ಭಾನುವಾರದಿಂದ (ಏ.18) ಬುಕ್ ಆಗುವ ಕಲ್ಯಾಣ ಮಂಟಪಗಳಿಗೆ ತಹಶೀಲ್ದಾರರ ಅನುಮತಿ ಕಡ್ಡಾಯಗೊಳಿಸಲಾಗಿದೆ. ತಹಶೀಲ್ದಾರರು ನಿಗದಿಪಡಿಸಿರುವ ಜನಸಂಖ್ಯೆಗೆ ಪಾಸ್ ವಿತರಿಸಲಿದ್ದಾರೆ. ಕಲ್ಯಾಣಮಂಟಪಗಳ ಮಾಲೀಕರು ಈ ಬಗ್ಗೆ ಜನರಿಗೆ ತಿಳಿವಳಿಕೆ ನೀಡಬೇಕು ಎಂದರು.

‘ಹೋಟೆಲ್ ಮಾಲೀಕರು ತಮ್ಮ ಕಾರ್ಮಿಕರಿಗೆ ನಿಗದಿತ ಅವಧಿಯಲ್ಲಿ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಬೇಕು. ಮಾಸ್ಕ್ ಧರಿಸಬೇಕು. ಅಂತರ ಕಾಪಾಡಿಕೊಳ್ಳಬೇಕು. ಮುಖ್ಯವಾಗಿ ಶುಚಿತ್ವ ಕಾಪಾಡಿಕೊಳ್ಳುವಂತೆ ಸಲಹೆ ಮಾಡಬೇಕು. ಹೋಟೆಲ್‌ಗೆ ಬರುವ ಗ್ರಾಹಕರು ತಿಂಡಿ, ಊಟ ಮಾಡುವ ಸಂದರ್ಭ ಬಿಟ್ಟು ಉಳಿದ ಸಮಯದಲ್ಲಿ ಮಾಸ್ಕ್ ಧರಿಸುವಂತೆ ತಿಳಿವಳಿಕೆ ನೀಡಬೇಕು. ಕೋವಿಡ್ ಮಾರ್ಗಸೂಚಿ ನಿಯಮಗಳನ್ನು ಉಲ್ಲಂಘನೆಯಾದರೆ ಅಂತಹ ಗ್ರಾಹಕರಿಗೆ ಹೋಟೆಲ್‌ಗೆ ಬರಲು ಅವಕಾಶ ನೀಡಬಾರದು’ ಎಂದು ಜಿಲ್ಲಾಧಿಕಾರಿಯವರು ಕಟ್ಟುನಿಟ್ಟಾಗಿ ಸೂಚಿಸಿದರು.

ಸಿನಿಮಾ ಮಂದಿರಗಳಲ್ಲಿ ಪ್ರತಿ ಪ್ರದರ್ಶನ ಮುಗಿದ ನಂತರ ಸ್ಯಾನಿಟೈಸ್ ಮಾಡಿಸಬೇಕು. ಸಿನಿಮಾ ವೀಕ್ಷಣೆಗೆ ಬರುವವರಿಗೆ ಮಾಸ್ಕ್ ಧರಿಸುವಂತೆ ತಿಳಿ ಹೇಳಬೇಕು. ನಿಗದಿತ ಆಸನಗಳಲ್ಲಿ ಕೂರುವಂತೆ ಅಗತ್ಯ ವ್ಯವಸ್ಥೆ ಮಾಡಿರಬೇಕು ಎಂದು ಜಿಲ್ಲಾಧಿಕಾರಿಯವರು ಸಲಹೆ ನೀಡಿದರು. 

ಜಿಲ್ಲೆಯ ಎಲ್ಲ ವರ್ತಕರು, ಲಾರಿ, ಆಟೊ ಮಾಲೀಕರು ಹಾಗೂ ಚಾಲಕರು, ಖಾಸಗಿ ಬಸ್ ಮಾಲೀಕರು ತಾಲ್ಲೂಕು ಮಟ್ಟದ ಸಂಘಗಳ ಸಭೆ ಕರೆದು ಕೋವಿಡ್ ಶಿಷ್ಟಾಚಾರ ಆದೇಶ, ಪಾಲನೆ ನಿಯಮಗಳ ಬಗ್ಗೆ ಅವಶ್ಯ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಅವರು ಹೇಳಿದರು. 

119 ಪ್ರಕರಣ ದೃಢ, 35 ಮಂದಿ ಗುಣಮುಖ

ಜಿಲ್ಲೆಯಲ್ಲಿ ಸೋಮವಾರ 119 ಮಂದಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ. 35 ಮಂದಿ ಗುಣಮುಖರಾಗಿದ್ದಾರೆ. ಸಾವಿನ ಪ್ರಕರಣ ವರದಿಯಾಗಿಲ್ಲ. 

ಸಕ್ರಿಯ ಪ್ರಕರಣಗಳ ಸಂಖ್ಯೆ 577ಕ್ಕೆ ಏರಿದೆ.  ಈ ಪೈಕಿ 358 ಮಂದಿ ಮನೆಯಲ್ಲೇ ಆರೈಕೆ ಪಡೆಯುತ್ತಿದ್ದಾರೆ. 28 ಮಂದಿ ಐಸಿಯುನಲ್ಲಿದ್ದಾರೆ. 

ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 8000 ಸನಿಹ ಬಂದಿದ್ದು, 7,978 ಮಂದಿಗೆ ಸೋಂಕು ತಗುಲಿದೆ. 7,2,63 ಮಂದಿ ಗುಣಮುಖರಾಗಿದ್ದಾರೆ. 118 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದರೆ, 20 ಮಂದಿ ಕೋವಿಡ್‌ಯೇತರ ಕಾರಣಗಳಿಂದ ಕೊನೆಯುಸಿರೆಳೆದಿದ್ದಾರೆ. 

ಸೋಮವಾರ 1,459 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, ಈ ಪೈಕಿ 1,337 ವರದಿಗಳು ನೆಗೆಟಿವ್‌ ಬಂದಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು