ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಜಿಲ್ಲಾಡಳಿತದ ಮುಂದೆ ದೂರುಗಳ ಸರಮಾಲೆ

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪರಿಶಿಷ್ಟ ವರ್ಗಗಳ ಕುಂದು ಕೊರತೆ ಸಭೆ
Last Updated 9 ಸೆಪ್ಟೆಂಬರ್ 2021, 3:07 IST
ಅಕ್ಷರ ಗಾತ್ರ

ಚಾಮರಾಜನಗರ: ‘ಇ –ಸ್ವತ್ತಿಗಾಗಿ ಸರ್ವೆ ಮಾಡಿಸಲು ಹೋದರೆ ದುಡ್ಡು ಕೇಳುತ್ತಾರೆ. ಪರಿಶಿಷ್ಟ ವರ್ಗಗಳಿಗೆ ಸೇರಿದ ಸ್ಮಶಾನಗಳ ಜಾಗ ಒತ್ತುವರಿಯಾಗಿದೆ. ಕುರಿ ಖರೀದಿ ಯೋಜನೆಯಲ್ಲಿ ಮಧ್ಯವರ್ತಿಗಳ ಕಾಟ ಮಿತಿ ಮೀರಿದೆ...’ ಇಂತಹ ಹತ್ತು ಹಲವು ದೂರುಗಳನ್ನು ಪರಿಶಿಷ್ಟ ವರ್ಗದ ಮುಖಂಡರು ಜಿಲ್ಲಾಡಳಿತದ ಮುಂದೆ ತೆರೆದಿಟ್ಟರು.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಸಮುದಾಯದ ಮುಖಂಡರು, ‘ಗುಂಡ್ಲುಪೇಟೆ, ಚಾಮರಾಜನಗರ, ಕೊಳ್ಳೇಗಾಲ ತಾಲ್ಲೂಕುಗಳ ಕೆಲವೆಡೆ ಪರಿಶಿಷ್ಟ ವರ್ಗಗಳ ಜನರಿಗೆ ಸೇರಿದ ಸ್ಮಶಾನ ಭೂಮಿಯನ್ನು ಒತ್ತುವರಿ ಮಾಡಲಾಗಿದೆ. ಇನ್ನು ಕೆಲವೆಡೆ ಸ್ಮಶಾನ ಭೂಮಿ ಮಂಜೂರು ಮಾಡಬೇಕಿದೆ. ಕೊಳ್ಳೇಗಾಲದಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಿರುವ ಜಾಗವು ಒತ್ತುವರಿಯಾಗಿದೆ’ ಎಂದು ದೂರಿದರು.

‘ಜಿಲ್ಲೆಯ ಆದಿವಾಸಿಗಳಿಗೆ ಮನೆ ನಿರ್ಮಾಣ ಮಾಡಲು ಕ್ರಮ ವಹಿಸಬೇಕು. ಪರಿಶಿಷ್ಟ ವರ್ಗದವರಿಗೆ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ನೀಡಬೇಕು. ಜಿಲ್ಲಾ ಕೇಂದ್ರದಲ್ಲಿ ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಮನೆ ಕಳೆದುಕೊಂಡವರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು’ ಎಂದು ಅವರು ಒತ್ತಾಯಿಸಿದರು.

ಬದನಗುಪ್ಪೆಯ ಶಿವರಾಂ ಮಾತನಾಡಿ, ‘ಇ–ಸ್ವತ್ತು ಮಾಡಿಸುವುದಕ್ಕಾಗಿ ಸರ್ವೆ ಮಾಡಿಸುವುದಕ್ಕೆ ಮುಂದಾದರೆ ಸರ್ವೆ ಸಿಬ್ಬಂದಿ ಹಣ ಕೇಳುತ್ತಿದ್ದಾರೆ’ ಎಂದು ದೂರಿದರು.

ಎಲ್ಲರ ಅಹವಾಲುಗಳನ್ನು ಆಲಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ‘ಪರಿಶಿಷ್ಟ ವರ್ಗದವರಿಗೆ ಸೇರಿದ ಸ್ಮಶಾನ ಜಾಗ ಎಲ್ಲಿ ಒತ್ತುವರಿಯಾಗಿದೆಯೋ ಅಲ್ಲಿ ಕೂಡಲೇ ಸರ್ವೆ ನಡೆಸಿ ತಹಶೀಲ್ದಾರರು ಒತ್ತುವರಿ ತೆರವುಗೊಳಿಸಬೇಕು. ಎಲ್ಲಿ ಸ್ಮಶಾನಕ್ಕೆ ಭೂಮಿ ಬೇಕಿದೆಯೋ ಅಂತಹ ಗ್ರಾಮಗಳಲ್ಲಿ ಸರ್ಕಾರಿ ಜಾಗವನ್ನು ಗುರುತಿಸಬೇಕು. ಸರ್ಕಾರಿ ಭೂಮಿ ಲಭ್ಯವಿರದಿದ್ದಲ್ಲಿ ಖಾಸಗಿಯವರಿಂದ ಖರೀದಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಕೊಳ್ಳೇಗಾಲದಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಿರುವ ಜಾಗ ಒತ್ತುವರಿಯಾಗಿದೆ ’ ಎಂಬ ದೂರಿಗೆ ಪ್ರತಿಕ್ರಿಯಿಸಿದ ಅವರು, ಉಪವಿಭಾಗಾಧಿಕಾರಿ, ತಹಶೀಲ್ದಾರರು ಭೇಟಿ ನೀಡಿ ವರದಿ ಸಲ್ಲಿಸುವಂತೆ ತಿಳಿಸಿದರು.

ಮನೆ ನಿರ್ಮಾಣಕ್ಕೆ ಪ್ರಸ್ತಾವ: ‘ಆದಿವಾಸಿಗಳು ವಾಸಿಸುವ ಹಾಡಿ, ಪೋಡುಗಳಲ್ಲಿ ಶಿಥಿಲವಾಗಿರುವ ಮನೆಗಳನ್ನು ನಿರ್ಮಿಸಲು ಪ್ರಸ್ತಾವ ಕಳುಹಿಸಲಾಗಿದೆ. ಮನೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹಳೆಯ ಮನೆಗಳನ್ನು ದುರಸ್ತಿ ಮಾಡುವುದು ಸಾಧ್ಯವಾಗದ ಕಾರಣ, ಹೊಸ ಮನೆಗಳನ್ನು ನಿರ್ಮಿಸಲು ಪ್ರಸ್ತಾವ ಸಿದ್ಧಪಡಿಸಲಾಗಿದೆ’ ಎಂದರು.

‘ಚಾಮರಾಜನಗರದಲ್ಲಿ ರಸ್ತೆ ನಿರ್ಮಿಸುವ ವೇಳೆ ಮನೆ ಕಳೆದುಕೊಂಡವರಿಗೆ ವಸತಿ ಸೌಲಭ್ಯಕ್ಕಾಗಿ ಭೂಮಿ ಕಾಯ್ದಿರಿಸಲಾಗಿದೆ. ಇಲ್ಲಿಯೇ ಮನೆಗಳನ್ನು ನಿರ್ಮಿಸಿ ಕೊಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಲೇಔಟ್ ನಿರ್ಮಾಣ ಕುರಿತು ತುರ್ತಾಗಿ ಮುಂದಿನ ಕ್ರಮ ತೆಗೆದುಕೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಮಾತನಾಡಿ ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಬಂಧ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್‌ರಾಜ್, ಉಪ ವಿಭಾಗಾಧಿಕಾರಿ ಡಾ.ಗಿರೀಶ್ ದಿಲೀಪ್ ಬದೋಲೆ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೊನ್ನೇಗೌಡ, ಮುಖಂಡರಾದ ಸುರೇಶ್‌ನಾಯಕ, ಕೃಷ್ಣ, ಜಿ.ಬಂಗಾರು, ಕೊಪ್ಪಾಳಿ ಮಹದೇವನಾಯಕ, ಚಂಗುಮಣಿ, ಮಾದಪ್ಪ, ಡಾ.ಮಾದೇಗೌಡ, ಶಿವರಾಂ, ಪುಟ್ಟಮ್ಮ, ನಾಗಮ್ಮ, ಶಶಿಕಲಾ, ಜಯಸುಂದರ್, ಮಹೇಶ್‌ಕುಮಾರ್, ಗುಂಡ್ಲುಪೇಟೆಯ ಮಲ್ಲೇಶ್‌ನಾಯಕ, ಶ್ರೀನಿವಾಸನಾಯಕ, ಕಂದಳ್ಳಿ ಮಹೇಶ ಇತರರಿದ್ದರು.

ಹಾಡಿಗಳಲ್ಲಿ ಆರೋಗ್ಯ ಸೌಲಭ್ಯ ವಿಳಂಬ

‘ಗಿರಿಜನರ ಹಾಡಿಗಳಲ್ಲಿ ಆರೋಗ್ಯ ಸಂಚಾರ ಘಟಕ ಬರುವುದು ತಡವಾಗುತ್ತಿದೆ. ಇದು ಹೆಚ್ಚು ಅವಧಿಯಲ್ಲಿ ಕಾರ್ಯನಿರ್ವಹಿಸಬೇಕು. ಜಿಲ್ಲೆಯ ಎಲ್ಲ ಹಾಡಿಗಳಿಗೂ ತಲುಪಬೇಕು’ ಎಂದು ಗಿರಿಜನ ಮುಖಂಡರು ಸಭೆಯಲ್ಲಿ ಒತ್ತಾಯಿಸಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಕ್ರಮ ವಹಿಸಿ ಎಲ್ಲ ಕಡೆ ಸೌಲಭ್ಯ ಲಭ್ಯವಾಗುವಂತೆ ಕ್ರಮ ವಹಿಸಬೇಕು. ಹೆಚ್ಚು ಅವಧಿಯಲ್ಲಿ ಸೇವೆ ಸಿಗುವಂತೆ ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.

‘ಬ್ಯಾಂಕ್‌ಗಳಲ್ಲಿ ಪರಿಶಿಷ್ಟ ವರ್ಗದ ಫಲಾನುಭವಿಗಳಿಗೆ ಸಾಲ ಸೌಲಭ್ಯಗಳನ್ನು ತ್ವರಿತವಾಗಿ ನೀಡಬೇಕು. ಸರ್ಕಾರಿ ಯೋಜನೆಗಳಡಿ ನೀಡುವ ಆರ್ಥಿಕ ಸೌಲಭ್ಯವನ್ನು ಗುರಿ ಅನುಸಾರ ನೀಡಲೇಬೇಕು. ಪರಿಶಿಷ್ಟರ ಆರ್ಥಿಕ ಬಲವರ್ಧನೆಗೆ ಶಕ್ತಿ ತುಂಬುವ ಯಾವುದೇ ಕಾರ್ಯಕ್ರಮಗಳಿಗೆ ವಿಳಂಬ ಮಾಡಬಾರದು. ಅನಗತ್ಯವಾಗಿ ತೊಂದರೆ ನೀಡದೆ ಸ್ವಯಂ ಉದ್ಯೋಗ ಚಟುವಟಿಕೆಗಳಿಗೆ ಸಾಲ ಒದಗಿಸಬೇಕು’ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್‌ಗೆ ನಿರ್ದೇಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT