ಸೋಮವಾರ, ಸೆಪ್ಟೆಂಬರ್ 27, 2021
24 °C

ಅಂತರಜಿಲ್ಲೆ ಚೆಕ್‌ಪೋಸ್ಟ್‌ ಮತ್ತೆ ಆರಂಭ: ಡಿ.ಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಕೋವಿಡ್ ತಡೆಯುವ ಮುಂಜಾಗ್ರತಾ ಕ್ರಮವಾಗಿ ಈ ಹಿಂದೆ ಸ್ಥಾಪಿಸಲಾಗಿದ್ದ ಐದು ಅಂತರ ಜಿಲ್ಲೆ ಚೆಕ್‌ಪೋಸ್ಟ್‌ಗಳನ್ನು ಮತ್ತೆ ಆರಂಭಿಸಿ ತಪಾಸಣಾ ಕಾರ್ಯವನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಅವರು ಆದೇಶಿಸಿದ್ದಾರೆ.

ಕೋವಿಡ್-19 ನಿರ್ವಹಣೆ ಸಂಬಂಧ ಕರೆಯಲಾಗಿದ್ದ ಆರೋಗ್ಯ ಇಲಾಖೆ, ಪೊಲೀಸ್ ಅಧಿಕಾರಿಗಳು ಹಾಗೂ ಇತರೆ ಇಲಾಖೆಗಳ ನೋಡೆಲ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಅಂತರ ಜಿಲ್ಲೆಗಳನ್ನು ಸಂಪರ್ಕಿಸುವ ಟಗರುಪುರ, ಸತ್ತೇಗಾಲ, ಬಾಣಳ್ಳಿ, ಕವಲಂದೆ ಬಳಿ, ಬೇಗೂರುಗಳಲ್ಲಿ ಚೆಕ್‌ ಪೋಸ್ಟ್‌ಗಳನ್ನು ಕೂಡಲೇ ತೆರೆದು ತಪಾಸಣೆ ಕಾರ್ಯ ಆರಂಭಿಸಬೇಕು. ಪೊಲೀಸ್, ಕಂದಾಯ, ಆರೋಗ್ಯ ಇಲಾಖೆ ಅಧಿಕಾರಿಗಳನ್ನೊಳಗೊಂಡ ತಂಡವನ್ನು ನಿಯೋಜಿಸಬೇಕು’ ಎಂದರು.

‘ಚೆಕ್‌ಪೋಸ್ಟ್‌ಗಳಲ್ಲಿ ಹೊರ ಜಿಲ್ಲೆಯಿಂದ ಜಿಲ್ಲೆಯ ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲು ಬರುವವರನ್ನು ಅಲ್ಲಲ್ಲಿ ತಪಾಸಣೆಗೆ ಒಳಪಡಿಸಬೇಕು. ವಿಶೇಷವಾಗಿ 60 ದಾಟಿದವರು, ರೋಗ ಲಕ್ಷಣ ಕಂಡು ಬರುವವರಿಗೆ ಆರ್‌ಎಟಿ ಮೂಲಕ ಕೋವಿಡ್ ಪರೀಕ್ಷೆ ನಡೆಸಬೇಕು’ ಎಂದರು.

‘ಖಾಸಗಿ ಬಸ್‌ಗಳಲ್ಲಿ ನಿಗದಿಪಡಿಸಿದ ಆಸನ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರಿಗೆ ಪ್ರಯಾಣಿಸಲು ಅನುಮತಿಸುವಂತಿಲ್ಲ. ಕೆಎಸ್ಆರ್‌ಟಿ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಈ ಕುರಿತು ಖುದ್ದು ಪರಿಶೀಲನೆ ನಡೆಸಬೇಕು. ಬೇಡಗುಳಿ ಎಸ್ಟೇಟ್ ಭಾಗದಲ್ಲಿಯೂ ಇತ್ತೀಚೆಗೆ ವರದಿಯಾಗಿರುವ ಕೋವಿಡ್ ಪ್ರಕರಣಗಳು ಹರಡದಂತೆ ಸ್ಥಳೀಯವಾಗಿ ಕಂಟೈನ್‌ಮೆಂಟ್ ವಲಯ ನಿರ್ಮಿಸಿ, ಅಲ್ಲಿಯೇ ಸೋಂಕಿತರಿಗೆ ಆರೈಕೆ, ಔಷದೋಪಚಾರಗಳಿಗೆ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿ ದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ ರವಿ, ಜಿಲ್ಲಾ ಸರ್ವಲೆನ್ಸ್ ಅಧಿಕಾರಿ ಡಾ. ನಾಗರಾಜು, ಆರ್.ಸಿ.ಎಚ್. ಅಧಿಕಾರಿ ಡಾ.ವಿಶ್ವೇಶ್ವರಯ್ಯ, ಜಿಲ್ಲಾ ಆಸ್ಪತ್ರೆಯ ನೋಡೆಲ್ ಅಧಿಕಾರಿ ಇತರರು ಇದ್ದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.