ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಜ್ವರ, ಶೀತ, ಉಸಿರಾಟ ತೊಂದರೆಗೆ ಉದಾಸೀನ ಬೇಡ

ಜಿಲ್ಲೆಯ ಜನರಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮನವಿ
Last Updated 3 ಆಗಸ್ಟ್ 2020, 15:59 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಜನತೆ ಜ್ವರ, ಕೆಮ್ಮು, ಶೀತ, ಉಸಿರಾಟದಂತಹ ಲಕ್ಷಣಗಳು ಕಂಡುಬಂದಲ್ಲಿ ಉದಾಸೀನ ಮಾಡದೇ ತಕ್ಷಣವೇ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮನವಿ ಮಾಡಿದ್ದಾರೆ.

‘ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್ ನಿಂದಾಗಿ 11 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 8 ಮಂದಿ ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದವರಾಗಿದ್ದರು. ಇವರಲ್ಲಿ ಮೂವರು ಉದಾಸೀನ ತೋರಿ ಆರೋಗ್ಯ ಪರಿಸ್ಥಿತಿ ತೀರ ಹದಗೆಟ್ಟಾಗ ಚಿಕಿತ್ಸೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ಬರುವ ವೇಳೆಗೆ ಪರಿಸ್ಥಿತಿ ಕೈ ಮೀರಿ ಹೋದ ಕಾರಣದಿಂದ ಸಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿರುವುದು ವೈದ್ಯಕೀಯ ವಿಶ್ಲೇಷಣೆಯಿಂದ ಕಂಡುಬಂದಿದೆ’ ಎಂದು ಅವರು ಹೇಳಿದ್ದಾರೆ.

‘ಮಳೆಗಾಲ ಆರಂಭವಾಗಿದೆ. ಈ ಸಮಯದಲ್ಲಿ ಜ್ವರ, ಶೀತ ಬಾಧಿಸುವುದು ಸಾಮಾನ್ಯವಾಗಿದೆ. ಇದನ್ನು ಉಪೇಕ್ಷೆ ಮಾಡದೆ ವೈದ್ಯರ ಬಳಿ ತೆರಳಿ ಚಿಕಿತ್ಸೆ ಸಲಹೆ ಪಡೆಯಬೇಕು. ಆರಂಭದಲ್ಲಿಯೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಮುಂದೆ ಹೆಚ್ಚಿನ ಅನಾರೋಗ್ಯದಿಂದ ವಿಕೋಪ ಪರಿಸ್ಥಿತಿಗೆ ತಲುಪುವುದನ್ನು ತಪ್ಪಿಸಿಕೊಳ್ಳಬಹುದು’ ಎಂದು ಡಾ.ಎಂ.ಆರ್.ರವಿ ಅವರು ಅವರು ಸಲಹೆ ನೀಡಿದ್ದಾರೆ.

ಕೋವಿಡ್‌ಗೆ ನಿರ್ದಿಷ್ಟ ಲಸಿಕೆ ಇಲ್ಲ. ಆದರೆ, ಔಷಧ ಉಪಚಾರದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಳವಾಗಿದೆ. ಜಿಲ್ಲಾಡಳಿತ ಕೂಡಾ ಸೋಂಕಿತರ ಆರೈಕೆಗೆ ವಿಶೇಷ ಕಾಳಜಿ ವಹಿಸಿ ಚಿಕಿತ್ಸಾ ಕ್ರಮಗಳಿಗೆ ಸಕಲ ವ್ಯವಸ್ಥೆ ಕೈಗೊಂಡಿದೆ. ಇದರ ನಿಯಂತ್ರಣಕ್ಕೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ. ಜ್ವರ, ಉಸಿರಾಟ ತೊಂದರೆ, ಶೀತ, ಕೆಮ್ಮು ಕಾಣಿಸಿಕೊಂಡಲ್ಲಿ ಅಂತಹವರನ್ನು ಗ್ರಾಮ, ವಾರ್ಡ್‍ವಾರು ಟಾಸ್ಕ್ ಫೋರ್ಸ್ ಸಮಿತಿಯವರು, ಸ್ವಯಂ ಸೇವಕರು ಗುರುತಿಸಿ ಕೂಡಲೆ ವೈದ್ಯರ ಬಳಿ ಆರೋಗ್ಯ ತಪಾಸಣೆಗೆ ಕಳುಹಿಸಿಕೊಡುವ ಮೂಲಕ ಸಹಕಾರ ನೀಡಬೇಕು’ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT