ಮಂಗಳವಾರ, ಅಕ್ಟೋಬರ್ 20, 2020
26 °C
60 ಹಾಸಿಗೆಗಳ ಆಸ್ಪತ್ರೆ, ಗಂಭೀರವಲ್ಲದ ಪ್ರಕರಣಗಳಿಗೆ ಚಿಕಿತ್ಸೆ

ಚಾಮರಾಜನಗರ: ಸಂತೇಮರಹಳ್ಳಿ ಕೋವಿಡ್‌ ಆಸ್ಪತ್ರೆಗೆ ಡಿ.ಸಿ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ತಾಲ್ಲೂಕಿನ ಸಂತೇಮರಹಳ್ಳಿ ಹೋಬಳಿ ಕೇಂದ್ರದಲ್ಲಿ ಇತ್ತೀಚೆಗೆ ಆರಂಭಗೊಂಡಿರುವ ಡೆಡಿಕೇಟೆಡ್ ಕೋವಿಡ್ ಹೆಲ್ತ್ ಸೆಂಟರ್‌ಗೆ (ಡಿಸಿಹೆಚ್‌ಸಿ) ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಹಾಗೂ ಸೂಕ್ತ ರೀತಿಯಲ್ಲಿ ಆರೈಕೆ ಮಾಡುವ ಉದ್ದೇಶದಿಂದ ಸಂತೇಮರಹಳ್ಳಿಯಲ್ಲಿ ಹೆಚ್ಚುವರಿಯಾಗಿ 60 ಹಾಸಿಗೆ ಸಾಮರ್ಥ್ಯದ ಚಿಕಿತ್ಸಾ ಕೇಂದ್ರವನ್ನು ಜಿಲ್ಲಾಡಳಿತ ಕೆಲವು ದಿನಗಳ ಹಿಂದೆ ಆರಂಭಿಸಿತ್ತು. 

ಸದ್ಯ, ಈ ಕೇಂದ್ರದಲ್ಲಿ ಆರೋಗ್ಯ ಸ್ಥಿತಿ ಗಂಭೀರವಿಲ್ಲದ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಂ.ಸಿ.ರವಿ ಹಾಗೂ ವೈದ್ಯ ಡಾ.ಮಹೇಶ್‌ ಅವರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅವರು, ಕೇಂದ್ರದಲ್ಲಿ ನೀಡಲಾಗುತ್ತಿರುವ ಚಿಕಿತ್ಸೆ, ಔಷಧೋಪಚಾರಗಳ ಬಗ್ಗೆ ಮಾಹಿತಿ ಪಡೆದರು. 

ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆ, ಅವರಿಗೆ ನೀಡಲಾಗುತ್ತಿರುವ ಚಿಕಿತ್ಸಾ ಸೌಲಭ್ಯಗಳು, ಊಟ ಉಪಹಾರದ ಬಗ್ಗೆ ಡಾ.ಎಂ.ಆರ್.ರವಿ ಅವರು ಮಾಹಿತಿ ಪಡೆದರು. 

‘ಸೋಂಕಿತರ ಆರೈಕೆಲ್ಲಿ, ಊಟ ಉಪಚಾರದಲ್ಲಿ ಲೋಪವಾಗಬಾರದು. ದೂರುಗಳಿಗೆ ಅವಕಾಶಬಾರದಂತೆ ಕಾರ್ಯನಿರ್ವಹಿಸಬೇಕು’ ಎಂದು ಅವರು ಸೂಚನೆ ನೀಡಿದರು. 

ಮಾರ್ಗದರ್ಶನ ಪಡೆಯಿರಿ: ‘ತುರ್ತು ಸಂದರ್ಭದಲ್ಲಿ ಹಾಗೂ ಸೋಂಕಿತರಿಗೆ ತೀವ್ರ ತೊಂದರೆ ಕಾಣಿಸಿಕೊಂಡಲ್ಲಿ ಜಿಲ್ಲೆಯ ಹಿರಿಯ ವೈದ್ಯಾಧಿಕಾರಿಗಳು ಮತ್ತು ನೋಡೆಲ್ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಸಲಹೆ, ಮಾರ್ಗದರ್ಶನ ಪಡೆದು, ಕೂಡಲೇ ಜಿಲ್ಲಾ ಆಸ್ಪತ್ರೆಯ ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಬೇಕು. ಇದಕ್ಕಾಗಿ ಆಂಬುಲೆನ್ಸ್‌ನ್ನು ಸದಾ ಸಿದ್ಧವಾಗಿಟ್ಟುಕೊಂಡಿರಬೇಕು. ನಿರ್ಲಕ್ಷ್ಯ ಧೋರಣೆ ವಹಿಸಬಾರದು’ ಎಂದು ಆಸ್ಪತ್ರೆ ಸಿಬ್ಬಂದಿಗೆ ಸೂಚಿಸಿದರು. 

ಡಾ.ರೇಣುಕಾದೇವಿ, ಡಾ.ಪೂರ್ಣಿಮಾ ಇತರರು ಇದ್ದರು. 

ಮಾಸ್ಕ್‌: ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಕೋವಿಡ್‌ ನಿಯಂತ್ರಣಕ್ಕಾಗಿ ಪ್ರತಿಯೊಬ್ಬರೂ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸೋಮವಾರ ಖುದ್ಧಾಗಿ ಸಾರ್ವಜನಿಕ ಸ್ಥಳಗಳಲ್ಲಿ ನಿಂತು ಮಾಸ್ಕ್‌ ಧರಿಸುವ ಉದ್ದೇಶದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿದರು. 

ಚಾಮರಾಜನಗರದ ಭುವನೇಶ್ವರಿ ವೃತ್ತ, ಸಂತೇಮರಹಳ್ಳಿ ಹೋಬಳಿ ಕೇಂದ್ರದ ವೃತ್ತದಲ್ಲಿ ನಿಯಮ ಪಾಲನೆಯಾಗುತ್ತಿದೆಯೇ ಎಂಬುದನ್ನು ಖುದ್ದಾಗಿ ಪರಿಶೀಲಿಸಿದರು. 

ಮಾಸ್ಕ್ ಧರಿಸದೇ ವಾಹನದಲ್ಲಿ ಸಂಚರಿಸುತ್ತಿದ್ದವರು ಕಾಲ್ನಡಿಗೆಯಲ್ಲಿ ಹೋಗುತ್ತಿದ್ದವರನ್ನು ಮಾತನಾಡಿಸಿ ಸೋಂಕು ತಡೆಗಟ್ಟಲು ಮಾಸ್ಕ್ ಧರಿಸಲೇಬೇಕಾದ ಅಗತ್ಯದ ಬಗ್ಗೆ ತಿಳಿಹೇಳಿದರು. ಸೋಂಕು ಹರಡದಂತೆ ತಡೆಯಲು ಸುರಕ್ಷಿತ ಅಂತರ ಕಾಪಾಡಿಕೊಳ್ಳಬೇಕು ಎಂದೂ ಸಲಹೆ ನೀಡಿದರು. 

ವೃತ್ತಗಳಲ್ಲಿ ಕರ್ತವ್ಯ ನಿಯೋಜಿತರಾಗಿದ್ದ ಪೊಲೀಸ್, ಇತರೆ ಅಧಿಕಾರಿಗಳೊಂದಿಗೂ ಮಾತನಾಡಿದ ಎಂ.ಆರ್.ರವಿ ಅವರು, ‘ಮಾಸ್ಕ್ ಧರಿಸಬೇಕಾದ ಮಹತ್ವದ ಬಗ್ಗೆ ಮೈಕ್ ಮೂಲಕ ತಿಳಿವಳಿಕೆ ನೀಡಬೇಕು. ಮಾಸ್ಕ್ ಧರಿಸದೇ ಇರುವುದು ಕಂಡುಬಂದಲ್ಲಿ ದಂಡ ವಿಧಿಸಬೇಕು’ ಎಂದು ಸೂಚಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು