ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳಿಗೆ ಸೈಕಲ್ ಕೊಟ್ಟಿಲ್ಲ: ರಾಜೀನಾಮೆ ಕೊಟ್ಟೋಗ್ರಿ!’

Published 11 ನವೆಂಬರ್ 2023, 6:02 IST
Last Updated 11 ನವೆಂಬರ್ 2023, 6:02 IST
ಅಕ್ಷರ ಗಾತ್ರ

ಚಾಮರಾಜನಗರ: ‘ಚುನಾವಣೆ ಸಮಯದಲ್ಲಿ ಹಲವಾರು ಭರವಸೆ ನೀಡಿದ್ದೀರಿ. ಗೆದ್ದು ಗದ್ದುಗೆಗೆ ಕೂತಿದ್ದೀರಿ. ಆದರೆ, ಪ್ರಣಾಳಿಕೆಯಲ್ಲಿ ಘೋಷಿಸಿದ ಯೋಜನೆಗಳನ್ನು ಸಮಯದ ಮಿತಿಯೊಳಗೆ ಜಾರಿ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಜನ ಸಾಮಾನ್ಯರು ಇನ್ನೂ ಕಚೇರಿಗೆ ಅಲೆಯುತ್ತಿದ್ದಾರೆ. ಬರಿ ಆಶ್ವಾಸನೆ ಕೊಡುತ್ತಿದ್ದೀರಿ. ಕೆಲಸ ಮಾಡಕ್ಕೆ ಆಗೋದಿಲ್ಲ ಎಂದರೆ ಸಚಿವ ಸಂಪುಟ ವಿಸರ್ಜಿಸಿ ಚುನಾವಣೆಗೆ ಬನ್ನಿ…’ ಎಂದು ವಿರೋಧ ಪಕ್ಷದವರು ಕಾಲು ಎಳೆದರು.

‘ನೋಡ್ರಪ್ಪಾ, ಸಚಿವನಾಗಿ ಮೂರು ಮಾಸ ತುಂಬಿಲ್ಲ. ಅನುದಾನ ಕೈಸೇರಿಲ್ಲ. ಇಂತಹ ಕಷ್ಟದ ಸಮಯದಲ್ಲೂ ಕೆಲಸ ಶುರು ಮಾಡಿದ್ದೇವೆ. ಸುಮ್ಮನೆ ಆರೋಪ ಹೊರಿಸಬೇಡಿ, ಮಕ್ಕಳಿಗೆ ಸೈಕಲ್ ಕೊಡುತ್ತೇವೆ. ಸಂಶಯ ಬೇಡ’ ಎಂದು ಆಡಳಿತ ಪಕ್ಷದ ಸಚಿವರು ಸಮಜಾಯಿಷಿ ನೀಡಿದರು. 

ಇದು ವಿಧಾನಸಭೆಯಲ್ಲಿ ನಡೆದ ಸಂಭಾಷಣೆ ಅಲ್ಲ. ನಗರದ ಜಿಲ್ಲಾಡಳಿತ ಭವನದ ಕೆಡಿಪಿ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವ ಸಂಸತ್‌ ಸ್ಪರ್ಧೆಯಲ್ಲಿ ಶಾಲಾ ಮಕ್ಕಳ ನಡುವಿನ ಸಂವಾದದಲ್ಲಿ ಕೇಳಿ ಬಂದ ಸಂಭಾಷಣೆಗಳು. 

ಮಕ್ಕಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ, ಸದನ, ಕಲಾಪ, ಅಲ್ಲಿ ಆಗುವ ಚರ್ಚೆಗಳ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಮಕ್ಕಳ ನಡುವಿನ ಸಂವಾದ ಎಲ್ಲರ ಮೆಚ್ಚುಗೆ ಗಳಿಸಿತು.

ಉತ್ತಮ ಸಂಸದೀಯ ಪಟುವಾಗಿ ಹೊರಹೊಮ್ಮಿದ ಇಬ್ಬರು ವಿದ್ಯಾರ್ಥಿಗಳನ್ನು ರಾಜ್ಯಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು
ಪುಷ್ಪರಾಜ್, ವಿಷಯ ಪರಿವೀಕ್ಷಕರು, ಚಾಮರಾಜನಗರ

ಕಲಾಪದಲ್ಲಿ ಸರ್ಕಾರಿ ಪ್ರೌಢಶಾಲೆಗಳ 60 ವಿದ್ಯಾರ್ಥಿಗಳು ವಿಧಾನಸಭೆ ಸಭಾಧ್ಯಕ್ಷ, ಮುಖ್ಯಮಂತ್ರಿ, ಆರೋಗ್ಯ, ಸಾರಿಗೆ ಮತ್ತು ಶಿಕ್ಷಣ ಸಚಿವರಾಗಿ ಐದು ತಾಲ್ಲೂಕುಗಳನ್ನು ಪ್ರತಿನಿಧಿಸಿದ್ದರು.

ಅಧಿವೇಶನದ ಸಂದರ್ಭದಲ್ಲಿ ನಡೆಯುವ ಚರ್ಚೆಗಳ ಮಾದರಿಯಲ್ಲೇ ಮಕ್ಕಳು ಸಚಿವರು, ವಿರೋಧ ಪಕ್ಷದ ಸದಸ್ಯರಾಗಿ ತಮ್ಮ ವಾದಗಳನ್ನು ಮುಂದಿಟ್ಟರು.  

‘ಯುವ ಸಂಸತ್ತಿನಲ್ಲಿ ಶೂನ್ಯ ವೇಳೆ, ಚುಕ್ಕಿ ಗುರತಿನ ಪ್ರಶ್ನೆ, ಶಾಸನ ಸಭೆ ನಿರ್ಣಯ,  ಸಭಾಧ್ಯಕ್ಷರ ಕರ್ತವ್ಯ, ಗಲಾಟೆ, ಗದ್ದಲ ನಿಯಂತ್ರಿಸಲು ಇರುವ ಅವಕಾಶಗಳ ಬಗ್ಗೆ ತಿಳಿಯಿತು. ವಿಷಯದ ಬಗ್ಗೆ ಚರ್ಚೆ, ಸಾಮಾಜಿಕ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಕಾನೂನು ಮಾಡುವ ಪ್ರಕ್ರಿಯೆಗಳು ಹೇಗೆ ನಡೆಯುತ್ತವೆ ಎಂಬುದನ್ನು ವೀಕ್ಷಿಸುವ, ಮಾತನಾಡುವ ಅವಕಾಶ ಸಿಕ್ಕಿದ್ದು ಖುಷಿ ನೀಡಿತು’ ಎಂದು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ಭವ್ಯ ಹೇಳಿದಳು

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಮತಕ್ಕೆ ಹೆಚ್ಚಿನ ಮನ್ನಣೆ ಇದೆ. ಮುಖ್ಯಮಂತ್ರಿ ಸಚಿವರನ್ನು ಆಯ್ಕೆ ಮಾಡಿಕೊಂಡು ಸರ್ಕಾರ ರಚಿಸಬಹುದು. ವಿರೋಧಪಕ್ಷದ ಸದಸ್ಯರು ಆಡಳಿತ ಪಕ್ಷದ ನಡೆಯನ್ನು ತಿದ್ದಲು, ಪ್ರಶ್ನಿಸುವ ಜವಾಬ್ಧಾರಿ ಹೊಂದಿರುತ್ತಾರೆ. ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಮೂಲಕ ಸರ್ಕಾರವನ್ನು ಸರಿದಾರಿಗೆ ತರುವ ಕೆಲಸ ಮಾಡಬಹುದು. ಯುವ ಸಂಸತ್‌ ಸ್ಪರ್ಧೆಯ ಮೂಲಕ ಮಕ್ಕಳಿಗೆ ಇವೆಲ್ಲದರ ಬಗ್ಗೆ ತಿಳಿಸುವ ಪ್ರಯ್ನ ಮಾಡಲಾಗಿದೆ ಎಂದು ಸಂಪನ್ಮೂಲ ಶಿಕ್ಷಕ ಸಿದ್ದರಾಜು ಹೇಳಿದರು. 

ಇಬ್ಬರು ಆಯ್ಕೆ: ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದ ಮಾನ್ಯ ಮತ್ತು ನಾಗರತ್ನ ಅವರು ಇದೇ 25ರಂದು  ಗದಗ ಜಿಲ್ಲೆಯಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

‘ಎಲ್ಲ ಕ್ಷೇತ್ರಗಳ ಬಗ್ಗೆ ತಿಳಿಯಿರಿ’

ಯುವ ಸಂಸತ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ರಾಮಚಂದ್ರ ರಾಜೇ ಅರಸ್ ‘ಮಕ್ಕಳು ಓದಿಗೆ ಮಿತಿಗೊಳ್ಳದೆ ಎಲ್ಲ ಕ್ಷೇತ್ರಗಳನ್ನು ತಿಳಿಯುವ ಪ್ರಯತ್ನ ಮಾಡಬೇಕು. ವೃತ್ತಿಗೆ ಪದವಿ ಪಡೆಯುವುದೇ ಅಂತಿಮವಲ್ಲ. ಕ್ರೀಡೆ ಸಹಪಠ್ಯ ಪ್ರತಿಭಾ ಕಾರಂಜಿ ನಟನೆ ಗಾಯನ ಮಾದರಿ ತಯಾರಿಗಳ ಅನುಭವ ಪಾಠ ಹಾಗೂ ಕಾನೂನು ಆರೋಗ್ಯ ಮೂಲಭೂತ ಕರ್ತವ್ಯ ಹಕ್ಕು ಜವಾಬ್ಧಾರಿಗಳ ಬಗ್ಗೆ ಸಮಾಜ ವಿಜ್ಞಾನ ತಿಳಿಸುತ್ತದೆ. ಯುವ ಸಂಸತ್ ಸ್ಪರ್ಧೆಯು ಭಾವಿ ಪ್ರಜೆಗಳಿಗೆ ರಾಜಕೀಯ ವ್ಯವಸ್ಥೆ ರಾಜಕಾರಣದ ಗುಣಾತ್ಮಕ ಮೌಲ್ಯಗಳನ್ನು ಕಲಿಸಲಿದೆ’ ಎಂದರು.

ವಿಜೇತರು ಇವರು

ಉತ್ತಮ ವಾಕ್ಚಾತುರ್ಯ ಸಮಯ ಪ್ರಜ್ಞೆ ಧೈರ್ಯ ಸೂಕ್ಷ್ಮತೆ ಮತ್ತು ವಿಷಯ ಮಂಡನೆಯ ಆಧಾರದ ಮೇಲೆ ಆರು ವಿದ್ಯಾರ್ಥಿಗಳನ್ನು ಬಹುಮಾನಗಳಿಗೆ ಆಯ್ಕೆ ಮಾಡಲಾಯಿತು.  

ಪ್ರಥಮ: ಮಾನ್ಯ ಸರ್ಕಾರಿ ಪ್ರೌಢಶಾಲೆ ಮುಳ್ಳೂರು ಕೊಳ್ಳೇಗಾಲ ತಾಲ್ಲೂಕು

ದ್ವಿತೀಯ: ನಾಗರತ್ನ ಸರ್ಕಾರಿ ಆದರ್ಶ ವಿದ್ಯಾಲಯ ಚಾಮರಾಜನಗರ

ತೃತೀಯ: ಮಾನಸ ಸರ್ಕಾರಿ ಪ್ರೌಢಶಾಲೆ ಕೆಸ್ತೂರು ಯಳಂದೂರು ತಾಲ್ಲೂಕು

ಸಮಾಧಾನಕರ: ಭವ್ಯ ಮತ್ತು ಶಶಾಂಕ್‌ ಸ.ಪ.ಪೂ.ಕಾಲೇಜು (ಪ್ರೌಢಶಾಲಾ ವಿಭಾಗ) ಸಂತೇಮರಹಳ್ಳಿ ಚಾಮರಾಜನಗರ ತಾಲ್ಲೂಕು ಹಾಗೂ ಧನುಶ್ರೀ ಕೆ.ಪಿ.ಎಸ್ ಶಾಲೆ ಲೊಕ್ಕನಹಳ್ಳಿ ಹನೂರು ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT