ಚಾಮರಾಜನಗರ: ಕೆರೆಗಳ ಅಭಿವೃದ್ಧಿಯೇ ದೊಡ್ಡ ಸವಾಲು

ಚಾಮರಾಜನಗರ: ಜಿಲ್ಲೆಯಲ್ಲಿರುವ ಕೆರೆ ಗಳನ್ನು ಸಂರಕ್ಷಿಸುವ ಉದ್ದೇಶ ದಿಂದ ಜಿಲ್ಲಾಡಳಿತವು ಕೆರೆಗಳ ಒತ್ತುವರಿ ಗುರುತಿಸಿ, ಅದನ್ನು ತೆರವುಗೊಳಿಸಿದ ಬಳಿಕ ಆಯಾ ಇಲಾಖೆಗಳಿಗೆ ಹಸ್ತಾಂತರಿಸುತ್ತಿದೆ. ಈ ಕೆರೆಗಳನ್ನು ಅಭಿ ವೃದ್ಧಿಪಡಿಸಬೇಕು ಎಂಬ ಆಶಯವೂ ಕೆರೆ ಸಂರಕ್ಷಣೆ ಕಾರ್ಯ ಕ್ರಮದಲ್ಲಿದೆ. ಆದರೆ, ಅಭಿವೃದ್ಧಿಯು ಅಷ್ಟು ಸುಲಭವೇ?
–ಕೆರೆಗಳ ಪರಿಸ್ಥಿತಿ ಅವಲೋಕಿಸಿದರೆ ಅದು ಅಷ್ಟು ಸುಲಭವಲ್ಲ ಎಂಬುದು ಗೊತ್ತಾಗುತ್ತದೆ.
ಜಿಲ್ಲೆಯಲ್ಲಿರುವ 606 ಕೆರೆಗಳ ಪೈಕಿ ಅತಿ ಹೆಚ್ಚು ಅಂದರೆ 412 ಕೆರೆಗಳು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಬರುತ್ತವೆ. ಇವೆಲ್ಲಾ ವಿಸ್ತಾರದಲ್ಲಿ ಸಣ್ಣ ಕೆರೆಗಳು. ಬಹುತೇಕ ಕೆರೆಗಳಲ್ಲಿ ನೀರಿಲ್ಲ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ 89 ಕೆರೆಗಳು ಬರುತ್ತವೆ. ಈ ಪೈಕಿ 59 ಕೆರೆಗಳು ಬತ್ತಿ ಹೋಗಿವೆ. ಸಣ್ಣ ನೀರಾ ವರಿ ಇಲಾಖೆ ವ್ಯಾಪ್ತಿಯಲ್ಲಿ 64, ಜಲ ಸಂಪನ್ಮೂಲ ಇಲಾಖೆ ವ್ಯಾಪ್ತಿಯಲ್ಲಿ ಕಾವೇರಿ ನೀರಾವರಿ ನಿಗಮದಡಿಯಲ್ಲಿ 41 ಕೆರೆಗಳಿವೆ.
ಕೆರೆಗೆ ನೀರು ತುಂಬಿಸುವ ಯೋಜನೆ ಹಾಗೂ ಗಾಂಧಿ ಗ್ರಾಮ ಯೋಜನೆಯಡಿ ಸಣ್ಣ ನೀರಾವರಿ ಇಲಾಖೆ ಹಾಗೂ ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಬರುವ 30ಕ್ಕೂ ಹೆಚ್ಚು ಕೆರೆಗಳಿಗೆ ಈಗಾಗಲೇ ನೀರು ಹರಿಯುತ್ತಿದೆ.
ನಿರ್ವಹಣೆ ಕೊರತೆ: ಜಿಲ್ಲೆಯಲ್ಲಿರುವ ಬಹುತೇಕ ಕೆರೆಗಳು ನಿರ್ವಹಣೆಯ ಕೊರತೆಯಿಂದ ಸೊರಗಿವೆ. ನೀರಿಲ್ಲದ ಕೆರೆಗಳು ಗಿಡಗಂಟಿ, ಹೂಳು ತುಂಬಿ ಕೊಂಡು ಪಾಳು ಬಿದ್ದ ಪ್ರದೇಶ ದಂತೆ ಗೋಚರಿಸುತ್ತವೆ. ನೀರು ತುಂಬಿರುವ ಕೆರೆಗಳು ಕಾಣುವುದಕ್ಕೆ ಸರಿ ಇದ್ದಂತೆ ಕಂಡರೂ, ಎಲ್ಲ ಕೆರೆಗಳ ಏರಿಗಳು ಭದ್ರವಾಗಿಲ್ಲ. ಈಚೆಗೆ ಗುಂಡ್ಲುಪೇಟೆಯ ಬೆಳಚವಾಡಿ ಕೆರೆ ಏರಿ ಒಡೆದಿರುವುದು ಇದಕ್ಕೆ ತಾಜಾ ಉದಾಹರಣೆ.
ಕುಡಿಯುವ ನೀರಿನ ಉದ್ದೇಶಕ್ಕೆ ನೀರು ತುಂಬಿಸುವ ಯೋಜನೆ ವ್ಯಾಪ್ತಿಗೆ ಬರುವ ಹೆಚ್ಚಿನ ಕೆರೆಗಳ ಏರಿಗಳು ಭದ್ರ ವಾಗಿಲ್ಲ ಎಂದು ಹೇಳುತ್ತಾರೆ ರೈತರು. ಬೆಳಚವಾಡಿ ಕೆರೆ ಏರಿಯ ದುರಸ್ತಿ ಕಾರ್ಯ ನಡೆದದ್ದು ನಾಲ್ಕು ದಶಕದ ಹಿಂದೆ. ಸಣ್ಣ ನೀರಾವರಿ ಇಲಾಖೆಯ ಸ್ಥಳೀಯ ಎಂಜಿನಿಯರ್‌ಗಳು ದುರಸ್ತಿಗೆ ಕ್ರಿಯಾ ಯೋಜನೆ ರೂಪಿಸಿದ್ದರೂ, ಇಲಾಖೆಯಿಂದ ಅನುಮತಿ ಸಿಕ್ಕಿರಲಿಲ್ಲ. ಹಾಗಾಗಿ, ನೀರು ತುಂಬಿ ಸಿದ್ದು ವ್ಯರ್ಥವಾಯಿತು. ಅದೇ ತಾಲ್ಲೂ ಕಿನ ಕರಕಲಮಾದಳ್ಳಿ ಕೆರೆಗೂ ನೀರನ್ನೂ ತುಂಬಿಸಲಾಗಿದ್ದು, ಏರಿಯಲ್ಲಿ ಬಿರುಕು ಕಾಣಿಸಿಕೊಂಡು ಚಿಕ್ಕದಾಗಿ ನೀರು ಜಿನು ಗುತ್ತಿದೆ ಎಂದು ಹೇಳುತ್ತಾರೆ ಸ್ಥಳೀಯರು.
ಬಹುತೇಕ ಕೆರೆಗಳು ಬತ್ತಿ ದಶಕಗಳೇ ಕಳೆದಿವೆ. ಮಳೆಗಾಲದಲ್ಲೂ ಈ ಕೆರೆಗಳು ತುಂಬುವುದಿಲ್ಲ. ತಳ ಭಾಗದಲ್ಲಿ ಒಂದೆರಡು ತಿಂಗಳ ಕಾಲ ನೀರು ನಿಲ್ಲು ತ್ತದೆ. ಹಾಗಾಗಿ, ಇಲಾಖೆಗಳು ಅವುಗಳ ನಿರ್ವಹಣೆಗೆ ಗಮನ ಹರಿಸಿಲ್ಲ. ಜೊತೆಗೆ, ಕೆರೆಗಳ ದುರಸ್ತಿ, ನಿರ್ವಹಣೆ ಖರ್ಚಿನ ದಾರಿ ಎಂಬ ಭಾವನೆ ಅಧಿಕಾರಿಗಳು ಹಾಗೂ ಆಡಳಿತ ನಡೆಸುವವರಲ್ಲೂ ಇದೆ.
ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಯಡಿ ಸ್ವಲ್ಪ ಪ್ರಮಾಣದಲ್ಲಿ ಕೆರೆ ಏರಿಯ ದುರಸ್ತಿ ಕೆಲಸ ನಡೆಯುತ್ತಿದೆ. ಆದರೆ, ಈ ದುರಸ್ತಿ ಎಲ್ಲ ಹೆಚ್ಚು ಕಾಲ ಬಾಳಿಕೆ ಬರುವಂತಹದ್ದಲ್ಲ. ಅತ್ಯಂತ ವ್ಯವಸ್ಥಿತವಾಗಿ ಕೆರೆಗಳ ಏರಿಗಳ ದುರಸ್ತಿ ಮಾಡುವ ಅಗತ್ಯವಿದೆ ಎನ್ನುತ್ತಾರೆ ರೈತ ಮುಖಂಡರು.
ಮಾದರಿ ಕೆರೆ, ಬರೀ ಘೋಷಣೆ: ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಯಳಂದೂರು, ಕೊಳ್ಳೇಗಾಲ ಹಾಗೂ ಹನೂರು ತಾಲ್ಲೂಕುಗಳ ತಲಾ ಒಂದು ಕೆರೆಯನ್ನು ಮಾದರಿ ಕೆರೆಯಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಘೋಷಿಸಿದ್ದರು. ಈವರೆಗೂ ಅದು ಘೋಷಣೆಯಾಗಿಯೇ ಉಳಿದಿದೆ.
ಮೇಲ್ಭಾಗದಲ್ಲಿ ನೀರು, ಕೆಳಗಡೆ ಹೂಳು!
ನಾಲೆಗಳು, ಏತ ನೀರಾವರಿ ಯೋಜನೆಗಳ ಮೂಲಕ ತುಂಬಿರುವ ಕೆರೆಗಳು ಮೇಲ್ನೋಟಕ್ಕೆ ಭರ್ತಿಯಾದಂತೆ ಕಂಡರೂ; ಎಲ್ಲ ಕೆರೆಗಳಲ್ಲೂ ಹೂಳು ತುಂಬಿದೆ.
ಮೇಲ್ಭಾಗದಲ್ಲಿ ಎರಡರಿಂದ ಮೂರು ಅಡಿಗಳಷ್ಟು ಮಾತ್ರ ನೀರು ನಿಲ್ಲುತ್ತದೆ. ಕೊಳ್ಳೇಗಾಲದಲ್ಲಿರುವ ಚಿಕ್ಕರಂಗನಾಥನ ಕೆರೆ, ದೊಡ್ಡರಂಗನಾಥನ ಕೆರೆ, ಯಳಂದೂರು ತಾಲ್ಲೂಕಿನ ಹೊನ್ನೂರು ಕೆರೆ... ಹೀಗೆ ಎಲ್ಲ ಊರುಗಳ ಕೆರೆಗಳನ್ನು ಹೂಳಿನ ಸಮಸ್ಯೆ ಇರುವ ಪಟ್ಟಿಯಲ್ಲಿ ಸೇರಿಸಬಹುದು.
ಜಿಲ್ಲೆಯಲ್ಲೂ ಕೆರೆಗಳ ಹೂಳು ತೆಗೆಯುವ ಪ್ರಕ್ರಿಯೆ ನಡೆದಿಲ್ಲ. ಬೇಸಿಗೆಯಲ್ಲಿ ಕೆರೆ ಬತ್ತಿದಾಗ ರೈತರು ಗ್ರಾಮ ಪಂಚಾಯಿತಿಯ ಅನುಮತಿ ಪಡೆದು ಕೆರೆಯ ಮಣ್ಣನ್ನು ಕೃಷಿ ಉದ್ದೇಶಕ್ಕಾಗಿ ತೆಗೆದುಕೊಂಡು ಹೋಗುತ್ತಾರೆ. ಕಳೆ ಗಿಡಗಳದ್ದು ಇನ್ನೊಂದು ಸಮಸ್ಯೆ.
‘ನಮ್ಮೂರಿನ ಕೆರೆಯೂ ಸೇರಿದಂತೆ ಎಲ್ಲ ಕೆರೆಗಳಲ್ಲಿ ಹೂಳು ತುಂಬಿರುವುದರಿಂದ ಅವುಗಳ ಸಾಮರ್ಥ್ಯಕ್ಕೆ ತಕ್ಕಷ್ಟು ನೀರು ಸಂಗ್ರಹವಾಗುತ್ತಿಲ್ಲ. ಹೂಳು ತೆಗೆಯಲು ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಏರಿಗಳ ನಿರ್ವಹಣೆಯೂ ಸರಿಯಾಗಿಲ್ಲ. ಕೆರೆಗೆ ಬಂದ ನೀರು ಅಲ್ಲಲ್ಲಿ ಇರುವ ತೂಬುಗಳ ಮೂಲಕ ಹೊರ ಹೋಗುತ್ತದೆ. ಕೆರೆಗಳು ಕೋಡಿ ಬೀಳುವ ಪ್ರದೇಶ, ಕೆರೆಗೆ ನೀರು ಹರಿದು ಬರುವ ದಾರಿ ಇವುಗಳನ್ನು ನಿರ್ವಹಣೆ ಮಾಡುವವರೇ ಇಲ್ಲ. ಎಲ್ಲವೂ ವ್ಯವಸ್ಥಿತವಾಗಿದ್ದರೆ, ಮಳೆಗಾಲದಲ್ಲಿ ಕೆರೆ ನೀರು ತುಂಬಿ ಒತ್ತುವರಿಯಾಗುವುದಕ್ಕೆ ಅವಕಾಶವೇ ಇರುವುದಿಲ್ಲ’ ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್ ಹೇಳಿದರು.
*
ಒತ್ತುವರಿ ತೆರವುಗೊಳಿಸಿ, ಕೆರೆಯ ಗಡಿ ಗುರುತಿಸಿ ನಾವು ಹಸ್ತಾಂತರಿಸುತ್ತೇವೆ. ನಂತರ, ಆಯಾ ಇಲಾಖೆಗಳು ಅವುಗಳನ್ನು ಅಭಿವೃದ್ಧಿ ಪಡಿಸಬೇಕು.
-ಎಸ್.ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾಧಿಕಾರಿ
*
ನಮ್ಮ ವ್ಯಾಪ್ತಿಯ ಬಹುತೇಕ ಕೆರೆಗಳು ಒತ್ತುವರಿಯಾಗಿಲ್ಲ. ನರೇಗಾ ಅಡಿ ಕೆರೆ ಏರಿ ದುರಸ್ತಿ ಸೇರಿದಂತೆ ಸಂರಕ್ಷಣೆ ಕೆಲಸ ಮಾಡುತ್ತಿದ್ದೇವೆ.
-ಹರ್ಷಲ್ ಭೊಯರ್ ನಾರಾಯಣರಾವ್, ಜಿ.ಪಂ. ಸಿಇಒ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.