ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ: ಪ್ರತಿಮೆ ವೀಕ್ಷಣೆಗೆ ನಿರ್ಬಂಧ

31ರ ರಾತ್ರಿ ಬೆಟ್ಟಕ್ಕೆ ಹೋಗುವ ಸಂದರ್ಭದಲ್ಲಿ ಬಿದ್ದ ಮಹಿಳೆ
Last Updated 2 ಏಪ್ರಿಲ್ 2023, 16:24 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಬೆಟ್ಟದ ದೀಪದಗಿರಿ ಒಡ್ಡುವಿನಲ್ಲಿ ನಿರ್ಮಿಸಲಾಗಿರುವ ಮಹದೇಶ್ವರ ಸ್ವಾಮಿಯ 108 ಅಡಿ ಎತ್ತರದ ಪ್ರತಿಮೆ ವೀಕ್ಷಣೆಗೆ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ. ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭವಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಚ್‌ 31ರ ರಾತ್ರಿ ಪ್ರತಿಮೆ ವೀಕ್ಷಣೆಗೆ ತೆರಳುತ್ತಿದ್ದ ಮಹಿಳೆಯೊಬ್ಬರು ಬಿದ್ದು ಗಾಯಗೊಂಡಿದ್ದು, ಆ ಬಳಿಕ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಭಕ್ತರ ಪ್ರವೇಶವನ್ನು ನಿರ್ಬಂಧಿಸಿದೆ. ಗಾಯಗೊಂಡಿದ್ದ ಮಹಿಳೆಯನ್ನು ಗುಂಡ್ಲುಪೇಟೆ ತಾಲ್ಲೂಕಿನ ಪುಷ್ಪಲತಾ ಎಂದು ಗುರುತಿಸಲಾಗಿದೆ.

ಪುಷ್ಪಲತಾ ಅವರು ಇಬ್ಬರು ಮಕ್ಕಳೊಡನೆ ದೀಪದಗಿರಿ ಒಡ್ಡುವಿಗೆ ತೆರಳುತ್ತಿದ್ದರು. ಬೀದಿ ದೀಪ ಇಲ್ಲದಿರುವುದರಿಂದ ಕಲ್ಲು ತಡೆದು ಬಿದ್ದಾಗ ಕಲ್ಲಿಗೆ ತಲೆ ತಾಗಿದ್ದರಿಂದ ತೀವ್ರ ಪೆಟ್ಟಾಗಿದ್ದು, ಜೊತೆಯಲ್ಲಿದ್ದ ಭಕ್ತರು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪ್ರಥಮ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳದಲ್ಲಿ ಪ್ರಜ್ಞೆ ತಪ್ಪಿದ ಮಹಿಳೆಗೆ, ಭಾನುವಾರ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಕಾಮಗಾರಿ ಪೂರ್ಣಗೊಳಿಸಿ: ಮಾರ್ಚ್ 18ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಮೆಯನ್ನು ಉದ್ಘಾಟಿಸಿದ್ದರು. ಪ್ರತಿಮೆ ಕಾಮಗಾರಿ ಮಾತ್ರ ಮುಗಿದಿದ್ದು, ಮ್ಯೂಸಿಯಂ ಸೇರಿದಂತೆ ಇನ್ನಿತರ ಕೆಲಸಗಳು ಆಗಿರಲಿಲ್ಲ. ಪ್ರತಿಮೆ ಇರುವ ಜಾಗಕ್ಕೆ ತೆರಳುವ ರಸ್ತೆಯ ಅಭಿವೃದ್ಧಿಯಾಗಿಲ್ಲ. ಕಚ್ಚಾ ರಸ್ತೆಯಲ್ಲೇ ಸಾಗಬೇಕಾಗಿದೆ.

‘ಕೂಡಲೇ ರಸ್ತೆ, ವಿದ್ಯುತ್‌ ಮತ್ತು ಶೌಚಾಲಯ ವ್ಯವಸ್ಥೆಯನ್ನು ಶೀಘ್ರವಾಗಿ ಕಲ್ಪಿಸಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರಾಧಿಕಾರದ ಕಾರ್ಯದರ್ಶಿ ಎಸ್‌.ಕಾತ್ಯಾಯಿನಿ ದೇವಿ, ‘ಪ್ರತಿಮೆಗೆ ತೆರಳುವ ರಸ್ತೆ ಕಾಮಗಾರಿ ಪ್ರಾರಂಭವಾಗಿರುವುದರಿಂದ ಪ್ರತಿಮೆಗೆ ತೆರಳುವ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಮಹಿಳೆ ಬಿದ್ದಿರುವ ಘಟನೆ ನನ್ನ ಗಮನಕ್ಕೆ ಬಂದಿದೆ. ಮೇಲೆ ಹೋಗುವುದಕ್ಕೆ ಅವಕಾಶ ಇಲ್ಲ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದರೂ ಅವರು ತೆರಳಿದ್ದು, ವಿಡಿಯೊ ಮಾಡುವ ಸಂದರ್ಭದಲ್ಲಿ ಬಿದ್ದಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT