ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ದರ್ಶನ್ ಅವಿರೋಧ ಆಯ್ಕೆಗೆ ಅಭಿಯಾನ: ಅರುಣ್‌ ಕುಮಾರ್

Last Updated 26 ಮಾರ್ಚ್ 2023, 8:03 IST
ಅಕ್ಷರ ಗಾತ್ರ

ಚಾಮರಾಜನಗರ: ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿವಂಗತ ಆರ್.ಧ್ರುನಾರಾಯಣ ಸ್ಮರಣಾರ್ಥ ಅವರ ಪುತ್ರ ದರ್ಶನ್ ಅವರನ್ನು ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿ ಅಭಿಯಾನ ಹಮ್ಮಿಕೊಳ್ಳಲು ಧ್ರುವನಾರಾಯಣ ಅಭಿಮಾನಿಗಳು ತೀರ್ಮಾನಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಕೀಲ ಅರುಣ್ ಕುಮಾರ್, ‘ಚಾಮರಾಜನಗರ ಜಿಲ್ಲೆಯ ಹರಿಹಾರ, ರಾಜ್ಯಕ್ಕೆ ಭರವಸೆಯ ನಾಯಕರಾಗಿದ್ದ ಧ್ರುವನಾರಾಯಣ ಅಕಾಲಿಕವಾಗಿ ನಮ್ಮನ್ನು ಅಗಲಿದ್ದಾರೆ. ಅವರ ದೂರದೃಷ್ಟಿಯ ಅಭಿವೃದ್ಧಿ ಕಾರ್ಯಗಳಿಂದ ಜಿಲ್ಲೆ ಅಭಿವೃದ್ಧಿ ಹೊಂದಿದೆ. 2004ರಲ್ಲಿ ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಒಂದು ಮತದಿಂದ ಶಾಸಕರಾಗಿ ಆಯ್ಕೆಯಾದ ನಂತರ ಅವರು ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಬಂದಿದ್ದರು. ಎರಡು ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿ ಜಿಲ್ಲೆಯಲ್ಲಿ ಕೇಂದ್ರೀಯ ವಿದ್ಯಾಲಯ, ಕೃಷಿ ಕಾಲೇಜು, ಕಾನೂನು ಕಾಲೇಜು ಸೇರಿದಂತೆ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು. ಅಭಿವೃದ್ದಿಯಲ್ಲಿ ರಾಜ್ಯದ ನಂಬರ್ ಒನ್ ಸಂಸದರಾಗಿದ್ದರು’ ಎಂದರು.

‘ಅವರು ಈ ಬಾರಿಯ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರು. ಅವರ ನಿಧನದಿಂದಾಗಿ ಕಾಂಗ್ರೆಸ್‌ ಪಕ್ಷ ಅವರ ಮಗ ದರ್ಶನ್‌ಗೆ ಟಿಕೆಟ್ ನೀಡಿ ಕಣಕ್ಕಿಳಿಸಿದೆ. ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳು ಇರುವುದು ಸಹಜ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಿರೋಧ ಆಯ್ಕೆಗೂ ಅವಕಾಶ ಇದೆ. ಧ್ರುವನಾರಾಯಣ ಗೌರವಾರ್ಥ ಅವರ ಮಗನನ್ನು ಅವಿರೋಧವಾಗಿ ಆಯ್ಕೆ ಮಾಡಲು ಎಲ್ಲರೂ ಮನಸ್ಸು ಮಾಡಬೇಕು’ ಎಂದು ಹೇಳಿದರು.

‘ಧ್ರುವನಾರಾಯಣ ನಮ್ಮ ಜಿಲ್ಲೆಯವಾಗಿರುವುದರಿಂದ ಇಲ್ಲಿಂದಲೇ ಅಭಿಯಾನ ಆರಂಭಿಸುತ್ತಿದ್ದೇವೆ. ನಂಜನಗೂಡು, ಮೈಸೂರು, ಬೆಂಗಳೂರುಗಳಲ್ಲೂ ಪತ್ರಿಕಾ ಗೋಷ್ಠಿ ಮೂಲಕ ಜನರು, ಪಕ್ಷಗಳನ್ನು ತಲುಪಲು ಯತ್ನಿಸುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲೂ ಅಭಿಯಾನ ನಡೆಸಲಿದ್ದೇವೆ. ಕಾಂಗ್ರೆಸ್‌ ಬಿಟ್ಟು ಉಳಿದ ರಾಜಕೀಯ ಪಕ್ಷಗಳ ರಾಜ್ಯ ಘಟಕಗಳ ಅಧ್ಯಕ್ಷರಿಗೆ ಪತ್ರವನ್ನೂ ಬರೆಯಲಾಗುವುದು’ ಎಂದು ಅರುಣ್‌ಕುಮಾರ್‌ ಹೇಳಿದರು.

ವಕೀಲರಾದ ಕೆ.ಪಿ.ನಾಗರಾಜ್‌, ಡಾ.ರಂಗಸ್ವಾಮಿ, ಉದಯರಂಗ, ನಾಗಾರ್ಜುನ್ ಫೃಥ್ವಿ, ಜಿ.ಮಹದೇವಸ್ವಾಮಿ , ನಾಗಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT