ಮಂಗಳವಾರ, ಸೆಪ್ಟೆಂಬರ್ 29, 2020
21 °C
ಮೀಣ್ಯಂಗೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಭೇಟಿ

ಪೊಲೀಸ್‌ ಹುತಾತ್ಮರಿಗೆ ಪುಷ್ಪನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನೂರು: ಕಾಡುಗಳ್ಳ ವೀರಪ್ಪನ್‌ ದಾಳಿಯಲ್ಲಿ ಮೃತಪಟ್ಟ ಪೊಲೀಸರ ಸ್ಮರಣಾರ್ಥ ತಾಲ್ಲೂಕಿನ ಮೀಣ್ಯಂ ಬಳಿ ನಿರ್ಮಿಸಲಾಗಿರುವ ಹುತಾತ್ಮರ ಸ್ಮಾರಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ ಕುಮಾರ್‌ ಅವರು ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು. 

28 ವರ್ಷಗಳ ಹಿಂದೆ, 1992ರ ಆಗಸ್ಟ್‌ 14ರಂದು ವೀರಪ್ಪನ್‌ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ಎಸ್‌ಪಿ ಹರಿಕೃಷ್ಣ, ಎಸ್‌ಐ ಶಕೀಲ್‌ ಅಹಮದ್‌ ಸೇರಿದಂತೆ ಆರು ಮಂದಿ ಪೊಲೀಸರನ್ನು ಹತ್ಯೆ ಮಾಡಿದ್ದ. ಇವರ ನೆನಪಿಗಾಗಿ 2014ರಲ್ಲಿ ಸ್ಮಾರಕ ನಿರ್ಮಿಸಲಾಗಿತ್ತು. 

ಸಚಿವ ಸುರೇಶ್‌ ಕುಮಾರ್‌ ಅವರು ಸ್ಮಾರಕಕ್ಕೆ ಹೂಗುಚ್ಛ ನೀಡಿ ಹುತಾತ್ಮರಿಗೆ ನಮಿಸಿದರು. 

ನಂತರ ಮಾತನಾಡಿದ ಅವರು, ‘ವೀರಪ್ಪನ್ ಕುಂತ್ರಕ್ಕೆ ಬಲಿಯಾದ ಹರಿಕೃಷ್ಣ ಅತ್ಯಂತ ಧೈರ್ಯಶಾಲಿಯಾಗಿದ್ದರು. ವೀರಪ್ಪನ್ ಕಾರ್ಯಾಚರಣೆಗೆ ಸ್ವಯಂ ಪ್ರೇರಿತರಾಗಿ ಬಂದವರು. ಕಾರ್ಯಾಚರಣೆಯಲ್ಲಿ ತಮಿಳುನಾಡು ಹಾಗೂ ಕರ್ನಾಟಕದ ಅನೇಕ ಪೊಲೀಸ್ ಅಧಿಕಾರಿಗಳು ಪ್ರಾಣ ತೆತ್ತಿದ್ದಾರೆ. ಇಷ್ಟೆಲ್ಲ ಅಟ್ಟಹಾಸ ಮೆರೆದರೂ, ಅದಕ್ಕೆ ಅಂತ್ಯ ಸಿಕ್ಕಿತೆಂಬುದೇ ನಮಗೆ ಸಮಾಧಾನಕರ ಸಂಗತಿ’ ಎಂದರು. 

‘ಎಂಟು ವರ್ಷಗಳ ಹಿಂದೆ ಮೈಸೂರು ಜಿಲ್ಲೆ ಉಸ್ತುವಾರಿಯಾಗಿದ್ದಾಗ ಹರಿಕೃಷ್ಣ ಅವರ ಪುತ್ಥಳಿಯನ್ನು ಅನಾವರಣ ಗೊಳಿಸಿದ್ದೆ. ಈ ಹಿಂದೆ, ವೀರಪ್ಪನ್ ಅಟ್ಟಹಾಸಕ್ಕೆ ಅಧಿಕಾರಿಗಳ ಬಲಿಯಾದ ಎರಡು ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಗೋಪಿನಾಥಂನಲ್ಲಿ ಅರಣ್ಯಾಧಿಕಾರಿ ದಿವಂಗತ ಪಿ.ಶ್ರೀನಿವಾಸ್ ಅವರನ್ನು ಅವರನ್ನು ಹತ್ಯೆ ಮಾಡಿದ ಎರಕೆಯಂ ಅರಣ್ಯ ಪ್ರದೇಶಕ್ಕೂ ತೆರಳಿ ಅಲ್ಲಿನ ಸ್ಮಾರಕಕ್ಕೂ ಪ್ರಣಾಮ ಸಲ್ಲಿಸಿದ್ದೇನೆ. ಬಳಿಕ ರಾಮಾಪುರ ಪೊಲೀಸ್ ಠಾಣೆಗೆ ಭೇಟಿ ನೀಡಿ ವೀರಪ್ಪನ್ ಕೃತ್ಯಕ್ಕೆ ಬಲಿಯಾದವರ ಬಗ್ಗೆ ಮಾಹಿತಿ ಪಡೆದಿದ್ದೆ. ಇಂದು ಇಲ್ಲಿಗೆ ಭೇಟಿ ನೀಡಿದ್ದೇನೆ’ ಎಂದು ಹೇಳಿದರು. 

‘ಸಮಾಜದಲ್ಲಿ ತಪ್ಪು ಮಾಡಿದವನನ್ನು ಹಿಡಿಯಲು ಹೋಗಿ ಬಲಿಯಾದ ಅಧಿಕಾರಿಗಳ ಬಲಿದಾನ ಎಂದಿಗೂ ವ್ಯರ್ಥವಾಗಲು ಬಿಡಬಾರದು. ಇಂದಿನ ಹಾಗೂ ಮುಂದಿನ ಪೀಳಿಗೆಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಇಲ್ಲಿನ ಹುತಾತ್ಮರ ಹೋರಾಟದ ಬಗ್ಗೆ ತಿಳಿಸಿ ಅವರಲ್ಲಿ ಮನಃಸ್ಥೈರ್ಯವನ್ನು ತುಂಬಬೇಕು’ ಎಂದು ಸಚಿವರು ಹೇಳಿದರು. 

ಶಾಸಕ ಆರ್.ನರೇಂದ್ರ, ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು, ಉಪವಿಭಾಗಾಧಿಕಾರಿ ನಿಖಿತಾ ಚಿನ್ನಸ್ವಾಮಿ, ಹೆಚ್ಚುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣವರ್, ಡಿವೈಎಸ್‍ಪಿ ನವೀನ್ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜು, ಬಿಜೆಪಿ ಮುಖಂಡ ಪ್ರೀತನ್ ನಾಗಪ್ಪ, ಡಾ. ದತ್ತೇಶ್ ಕುಮಾರ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.