ಶುಕ್ರವಾರ, ಸೆಪ್ಟೆಂಬರ್ 24, 2021
21 °C
ಮೇ 1ರಿಂದ ನಾಲ್ಕನೇ ಹಂತದ ಲಸಿಕಾ ಅಭಿಯಾನ, ಲಸಿಕೆಗೂ ಮುನ್ನ ರಕ್ತದಾನಕ್ಕೆ ಮನವಿ

ಚಾಮರಾಜನಗರ: ಜಿಲ್ಲೆಯಲ್ಲಿ ರಕ್ತ ಕೊರತೆಯ ಆತಂಕ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ 2ನೇ ಅಲೆ ಅಬ್ಬರಿಸುತ್ತಿರುವುದರ ಮಧ್ಯೆಯೇ, 18 ವರ್ಷದಿಂದ 44 ವರ್ಷ ವಯಸ್ಸಿನವರಿಗೆ ಮೇ 1ರಿಂದ ಕೋವಿಡ್‌ ಲಸಿಕೆ ನೀಡುವ 4ನೇ ಹಂತದ ಅಭಿಯಾನವೂ ಆರಂಭವಾಗಲಿದೆ. ಇದರ ನಡುವೆಯೇ ಜಿಲ್ಲೆಯಲ್ಲಿ ತುರ್ತು ಅಗತ್ಯಗಳಿಗೆ ರಕ್ತದ ಕೊರತೆ ಉಂಟಾಗುವ ಆತಂಕ ಎದುರಾಗಿದೆ. 

ರಕ್ತ ನೀಡುವವರಲ್ಲಿ ಬಹುಪಾಲು ಜನರು ಯುವಕರು ಹಾಗೂ ಮಧ್ಯವಯಸ್ಕರು. ಕೋವಿಡ್‌ ಲಸಿಕೆ ಪಡೆದ ನಂತರ 28 ದಿನಗಳ ವರೆಗೆ ರಕ್ತದಾನ ಮಾಡುವಂತಿಲ್ಲ. ಜನರು ರಕ್ತ ನೀಡಲು ಮುಂದಾದರೂ, ರಕ್ತ ನಿಧಿ ಕೇಂದ್ರಗಳು ಸಂಗ್ರಹಿಸುವುದಿಲ್ಲ. ಇದೇ ವಯೋ ಮಾನದವರು ಹೆಚ್ಚು ರಕ್ತದಾನ ಮಾಡುವುದರಿಂದ ರಕ್ತದ ಸಮಸ್ಯೆ ಉಂಟಾಗಬಹುದು ಎಂಬ ಆತಂಕದಲ್ಲಿ ರಕ್ತ ನಿಧಿ ಕೇಂದ್ರದವರು ಹಾಗೂ ಜಿಲ್ಲಾಸ್ಪತ್ರೆಯ ವೈದ್ಯರು ಇದ್ದಾರೆ. ಹಾಗಾಗಿ, ಲಸಿಕೆ ಪಡೆಯುವುದಕ್ಕೂ ಮೊದಲೇ ರಕ್ತದಾನ ಮಾಡುವಂತೆ ಅವರು ಜನರಿಗೆ ಕರೆ ನೀಡಿದ್ದಾರೆ. 

‘ಮೊದಲ ಡೋಸ್‌ ಪಡೆದ ನಂತರ 28 ದಿನಗಳ ರಕ್ತ ಪಡೆಯುವಂತಿಲ್ಲ. ಎರಡನೇ ಡೋಸ್‌ ಪಡೆದು ಮತ್ತೆ 28 ದಿನಗಳ ಕಾಲ ರಕ್ತ ಸಿಗುವುದಿಲ್ಲ. ಹಾಗಾಗಿ ಸುಮಾರು ಎರಡು ತಿಂಗಳು ದಾನಿಗಳಿಗೆ ರಕ್ತ ನೀಡುವುದಕ್ಕೆ ಆಗುವುದಿಲ್ಲ. ಈ ಅವಧಿಯಲ್ಲಿ ರಕ್ತ ನಿಧಿ ಕೇಂದ್ರದಲ್ಲಿ ರಕ್ತದ ಕೊರತೆ ಉಂಟಾಗಬಹುದೇನೋ ಎಂಬ ಯೋಚನೆ ಇದೆ. ಹಾಗಾಗಿ, ಯುವಕರು ಹಾಗೂ ಮಧ್ಯವಯಸ್ಕರು‌ ಲಸಿಕೆ ಪಡೆಯುವುದಕ್ಕೆ ಮೊದಲೇ ರಕ್ತದಾನ ಮಾಡಿದರೆ ಅನುಕೂಲವಾಗುತ್ತದೆ’ ಎಂದು ಜಿಲ್ಲಾಸ್ಪತ್ರೆಯ ರಕ್ತ ನಿಧಿ ಕೇಂದ್ರದ ಮುಖ್ಯಸ್ಥೆ ಡಾ.ದಿವ್ಯಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಬೇಡಿಕೆಯಷ್ಟು ಸಂಗ್ರಹ ಇಲ್ಲ: ಜಿಲ್ಲಾಸ್ಪತ್ರೆಯಲ್ಲಿ ನಡೆಯುವ ಹೆರಿಗೆ, ರಕ್ತ ಹೀನತೆ, ಶಸ್ತ್ರಕ್ರಿಯೆ, ಅಪಘಾತದಂತಹ ತುರ್ತು ಪರಿಸ್ಥಿತಿಗಳಲ್ಲಿ ರೋಗಿಗಳಿಗೆ ರಕ್ತದ ಅವಶ್ಯಕತೆ ಇದೆ. ಪ್ರತಿ ತಿಂಗಳು ಕನಿಷ್ಠ 350ರಿಂದ 360 ಯೂನಿಟ್‌ಗಳಷ್ಟು ರಕ್ತ ಬೇಕಾಗುತ್ತದೆ. ಆದರೆ, ಬೇಡಿಕೆಗೆ ತಕ್ಕಂತೆ ರಕ್ತ ಸಂಗ್ರಹವಾಗುವುದಿಲ್ಲ. ಸರಾಸರಿ 250 ಯೂನಿಟ್‌ಗಳಷ್ಟೇ ಸಂಗ್ರಹವಾಗುತ್ತದೆ. ಕೊರತೆಯಾದ ಸಂದರ್ಭದಲ್ಲಿ ಮೈಸೂರಿನ ಕೆ.ಆರ್‌.ಆಸ್ಪತ್ರೆ, ಖಾಸಗಿ ರಕ್ತನಿಧಿ ಕೇಂದ್ರಗಳಿಂದ ವ್ಯವಸ್ಥೆ ಮಾಡಬೇಕಾಗುತ್ತದೆ. ಲಸಿಕಾ ಅಭಿಯಾನ ಎಲ್ಲ ಕಡೆಗಳಲ್ಲೂ ನಡೆಯುವುದರಿಂದ ಎಲ್ಲರಲ್ಲೂ ಇದೇ ಸಮಸ್ಯೆ ಇರುತ್ತದೆ. ಹಾಗಾಗಿ, ಜಿಲ್ಲೆಯಲ್ಲೇ ಸಾಕಷ್ಟು ರಕ್ತ ಲಭ್ಯವಾದರೆ, ತುರ್ತು ಸಂದರ್ಭಗಳಲ್ಲಿ ಪರದಾಡುವುದು ತಪ್ಪುತ್ತದೆ ಎಂಬುದು ವೈದ್ಯರ ಹೇಳಿಕೆ. 

‘ಜಿಲ್ಲಾಸ್ಪತ್ರೆಯಲ್ಲಿ ಪ್ರತಿ ದಿನ 16ರಿಂದ 18 ಹೆರಿಗೆಗಳು ನಡೆಯುತ್ತವೆ.  6ರಿಂದ 7 ಯೂನಿಟ್‌ ರಕ್ತ ಬೇಕು. ಅಂದರೆ, ತಿಂಗಳಿಗೆ 210ರಿಂದ 220 ಯೂನಿಟ್‌ಗಳು ಬೇಕು. ಶೇ 40ರಷ್ಟು ರಕ್ತ ಹೆರಿಗೆ ಉದ್ದೇಶಕ್ಕೆ ಬೇಕು. ಜಿಲ್ಲೆಯಲ್ಲಿ ರಕ್ತಹೀನತೆಯಿಂದ ಬಳಲುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರ ಚಿಕಿತ್ಸೆಗಾಗಿ ತಿಂಗಳಿಗೆ ಸರಾಸರಿ 85 ಯೂನಿಟ್‌ಗಳು ಬೇಕು. ಗರ್ಭಕೋಶ ಶಸ್ತ್ರಚಿಕಿತ್ಸೆಗಾಗಿ ಅಂದಾಜು 100 ಯೂನಿಟ್‌ಗಳು ಬೇಕು. ಇದಲ್ಲದೇ, ಎಚ್‌ಐವಿ ಸೋಂಕಿತರಿಗೆ, ಅಪಘಾತದ ಸಂದರ್ಭದಲ್ಲೂ ರಕ್ತದ ಅವಶ್ಯಕತೆ ಇರುತ್ತದೆ’ ಎಂದು ರಕ್ತನಿಧಿ ಕೇಂದ್ರದ ಮುಕುಂದ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಗಾಗ ಶಿಬಿರಗಳನ್ನು ನಡೆಸುತ್ತಿರುತ್ತೇವೆ. ಏಪ್ರಿಲ್‌, ಆಗಸ್ಟ್‌, ಡಿಸೆಂಬರ್‌ ತಿಂಗಳು ಬಿಟ್ಟು ಉಳಿದ ತಿಂಗಳಲ್ಲಿ ನಾಲ್ಕೈದು ಶಿಬಿರಗಳನ್ನು ನಡೆಸಲಾಗುತ್ತದೆ. ಈ ಮೂರು ತಿಂಗಳಲ್ಲಿ ಏಳರಿಂದ ಎಂಟು ಶಿಬಿರಗಳು ನಡೆಯುತ್ತವೆ. ಕೆಲವರು ತಮ್ಮ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಸೇರಿದಂತೆ ವಿಶೇಷ ದಿನಗಳಲ್ಲಿ ರಕ್ತ ನಿಧಿ ಕೇಂದ್ರಕ್ಕೆ ಬಂದು ರಕ್ತದಾನ ಮಾಡುತ್ತಾರೆ. ಅಂತಹವರ ಸಂಖ್ಯೆ ಕಡಿಮೆ ಇದೆ’ ಎಂದು ಅವರು ಮನವಿ ಮಾಡಿದರು. 

‘ರಕ್ತದಾನ ಮಾಡಿದವರಿಗೇ ಅನುಕೂಲ’

‘ರಕ್ತದಾನ ಮಾಡುವುದಕ್ಕೆ ಯಾರೂ ಭಯಪಡಬಾರದು. ರಕ್ತದಾನ ಮಾಡುವುದರಿಂದ ಆರೋಗ್ಯದ ವಿಚಾರದಲ್ಲಿ ಹಲವು ಪ್ರಯೋಜನಗಳಿವೆ. ಪ್ರಮುಖವಾಗಿ ಯಾವುದೇ ವೆಚ್ಚವಿಲ್ಲದೇ ಎಚ್‌ಐವಿ, ಮಲೇರಿಯಾ ಸೇರಿದಂತೆ ವಿವಿಧ ಕಾಯಿಲೆಗಳ ಪರೀಕ್ಷೆ ನಡೆಸಿದಂತೆ ಆಗುತ್ತದೆ (ಈ ಪರೀಕ್ಷೆಗಳಿಗೆ ₹7,000 ವೆಚ್ಚವಾಗುತ್ತದೆ). ರಕ್ತದಲ್ಲಿ ಕೊಬ್ಬಿನ ಅಂಶ (ಕೊಲೆಸ್ಟ್ರಾಲ್‌) ನಿಯಂತ್ರಿಸುವುದಕ್ಕೂ ರಕ್ತದಾನ ಸಹಕಾರಿ. ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತದ ಸಾಧ್ಯತೆ ಕಡಿಮೆ ಮಾಡುತ್ತದೆ. ರಕ್ತದಾನದಿಂದ ರಕ್ತದ ಕಣಗಳು ಸಕ್ರಿಯವಾಗುತ್ತವೆ’ ಎಂದು ಮುಕುಂದ್‌ ಅವರು ವಿವರಿಸಿದರು. 

‘ನಿಯಮಿತವಾಗಿ ರಕ್ತದಾನ ಮಾಡುತ್ತಿದ್ದರೆ, ರಕ್ತದ ಪರೀಕ್ಷೆ ಆಗಾಗ ನಡೆದಂತಾಗುತ್ತದೆ. ಇದರಿಂದ ಯಾವುದೇ ರೋಗದ ಭಯವೂ ಇರುವುದಿಲ್ಲ. ಜನರು ಸ್ವಯಂ ಪ್ರೇರಿತರಾಗಿ ರಕ್ತ ನೀಡಲು ಜನರು ಮುಂದೆ ಬರಬೇಕು’ ಎಂದು ಅವರು ಮನವಿ ಮಾಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು