ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಚರಂಡಿ, ಒಳಚರಂಡಿ, ರಸ್ತೆಯದ್ದೇ ಸಮಸ್ಯೆ

ಚಾಮರಾಜನಗರ: 14ನೇ ವಾರ್ಡ್‌ನಲ್ಲಿದೆ ಹಲವು ಸಮಸ್ಯೆಗಳು, ರಸ್ತೆ ವಿಸ್ತರಿಸಲು ಇಲ್ಲ ಜಾಗ
Last Updated 16 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಇಲ್ಲಿನ ನಗರಸಭೆಯ 14ನೇ ವಾರ್ಡ್‌ನಲ್ಲಿ ಮುಸ್ಲಿಂ ಸಮುದಾಯದವರು ವಾಸಿಸುತ್ತಿರುವ ಪ್ರದೇಶದಲ್ಲಿ ರಸ್ತೆ, ಚರಂಡಿ, ಒಳಚರಂಡಿ ವ್ಯವಸ್ಥೆ ಸರಿ ಇಲ್ಲದೆ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ನಗರದ ದೊಡ್ಡ ವಾರ್ಡ್‌ಗಳ ಪೈಕಿ 14ನೇ ವಾರ್ಡ್‌ ಕೂಡ ಒಂದು. 2,350 ಮತದಾರರು ಇಲ್ಲಿದ್ದಾರೆ. 1200ಕ್ಕೂ ಹೆಚ್ಚು ಕುಟುಂಬಗಳು ವಾಸ ಇವೆ. ದಲಿತ ಸಮುದಾಯದವರು ಹಾಗೂ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ 600ರಷ್ಟು ಹಾಗೂ 400ರಷ್ಟು ಮುಸ್ಲಿಮರ ಮನೆಗಳು ಇಲ್ಲಿವೆ.

ಪರಿಶಿಷ್ಟ ಜಾತಿಯವರು ವಾಸಿಸುತ್ತಿರುವ ಪ್ರದೇಶದಲ್ಲಿ ಕೆಲವು ಬೀದಿಗಳು ಕಿರಿದಾಗಿವೆ ಎನ್ನುವುದು ಬಿಟ್ಟರೆ ಉಳಿದ ರಸ್ತೆಗಳು ಚೆನ್ನಾಗಿವೆ. ಕಾಂಕ್ರೀಟ್‌ ರಸ್ತೆಗಳೇ ಇವೆ. ಚರಂಡಿ ಕಿರಿದಾಗಿದ್ದು, ಮಳೆ ನೀರು ಬಂದಾಗ ಉಕ್ಕುವ ಸಮಸ್ಯೆ ಇದೆ.

ಪರಿಶಿಷ್ಟ ಜಾತಿ ವಿಶೇಷ ಉಪಯೋಜನೆಯಲ್ಲಿ ಅನುದಾನ ಲಭ್ಯವಾಗುವುದರಿಂದ ಅವರು ವಾಸಿಸುವ ಪ್ರದೇಶದಲ್ಲಿ ಮೂಲಸೌಕರ್ಯಗಳ ಕೆಲಸ ಆಗುತ್ತಿದೆ.

‘ನಮ್ಮಲ್ಲಿ ರಸ್ತೆ, ಬೀದಿ ದೀಪಗಳ ವ್ಯವಸ್ಥೆ ಎಲ್ಲ ಇದೆ. ಆದರೆ, ಕಾವೇರಿ ನೀರು ಸಮರ್ಪಕವಾಗಿ ಬರುತ್ತಿಲ್ಲ. ಬೇರೆ ಸಮಸ್ಯೆ ಇಲ್ಲ’ ಎಂದು ಸ್ಥಳೀಯ ನಿವಾಸಿ ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮುಸ್ಲಿಮರು ಹಾಗೂ ಇತರ ಸಮುದಾಯದವರು ವಾಸಿಸುತ್ತಿರುವ ಜಾಗದಲ್ಲಿ ಸಮಸ್ಯೆಗಳು ಹೆಚ್ಚಿವೆ.

ಇಲ್ಲಿ ರಸ್ತೆಗಳು ಕಿರಿದಾಗಿವೆ. ಕೆಲವು ಕಡೆಗಳಲ್ಲಿ ಸೈಕಲ್‌, ದ್ವಿಚಕ್ರವಾಹನಗಳು ಹೋಗುವಷ್ಟೇ ದಾರಿ ಇದೆ. ಇಲ್ಲಿ ಇನ್ನೂ ಕಂದಾಯ ನಿವೇಶನಗಳು ಇವೆ ಎಂದು ಹೇಳುತ್ತಾರೆ. ಕಿರುದಾರಿಗೆ ಹೊಂದಿಕೊಂಡಂತೆ ಮನೆಗಳು ಇರುವುದರಿಂದ ರಸ್ತೆ ವಿಸ್ತರಿಸುವುದಕ್ಕೆ ಅವಕಾಶ ಇಲ್ಲ. ಅಗಲವಾಗಿ ಇರುವ ರಸ್ತೆಗಳಲ್ಲಿ ಟಾರು, ಕಾಂಕ್ರೀಟ್‌ ಕಿತ್ತು ಬಂದಿದೆ. ಓಡಾಡುವುದಕ್ಕೆ ತೊಂದರೆಯಾಗುತ್ತದೆ.

ಚರಂಡಿಗಳ ಸ್ವಚ್ಛತಾ ಕಾರ್ಯ ನಿಯಮಿತವಾಗಿ ಆಗುತ್ತಿಲ್ಲ. ಒಳಚರಂಡಿ ವ್ಯವಸ್ಥೆ ಇಲ್ಲ. ಹಾಗಾಗಿ, ಮನೆಗಳ ಶೌಚಾಲಯದ ಸಂಪರ್ಕ ತೆರೆದ ಚರಂಡಿಗೆ ನೀಡಲಾಗಿದೆ. ಮಳೆಗಾಲದಲ್ಲಿ ಚರಂಡಿಯಲ್ಲಿ ನೀರು ನಿಂತು ಅಥವಾ ನೀರು ಉಕ್ಕಿ ಅನೈರ್ಮಲ್ಯ ವಾತಾವರಣ ಮನೆ ಮಾಡುತ್ತದೆ.

‘ಚರಂಡಿಯದ್ದೇ ನಮಗೆ ದೊಡ್ಡ ಸಮಸ್ಯೆ. ಕಿರಿದಾದ ದಾರಿ ನಡುವೆಯೇ ಚರಂಡಿ ಇದೆ. ಇಲ್ಲಿ ಒಳಚರಂಡಿಯೂ ಇಲ್ಲ. ಹೀಗಾಗಿ ಸ್ವಚ್ಛತೆ ಇಲ್ಲ. ನಿಯಮಿತವಾಗಿ ಚರಂಡಿ ಸ್ವಚ್ಛತೆಯನ್ನೂ ಮಾಡುವುದಿಲ್ಲ. ಇದರಿಂದ ನಿವಾಸಿಗಳಿಗೆ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ನಿವಾಸಿ ಹಮ್ಜಾ ದೂರಿದರು.

‘ರಸ್ತೆಗಳು ಕಿರಿದಾಗಿರುವುದರಿಂದ ಇಲ್ಲಿಗೆ ಜೆಸಿಬಿ ಇನ್ನಿತರ ಯಂತ್ರಗಳನ್ನು ತರುವುದಕ್ಕೆ ಆಗುವುದಿಲ್ಲ. ಒಳಚರಂಡಿಗಾಗಿ ಗುರುತು ಮಾಡಿ ಹೋಗಿದ್ದಾರೆ. ನಮ್ಮ ವಾರ್ಡ್‌ನಲ್ಲೇ ಬೇರೆ ಕಡೆ ಆಗಿದೆ. ನಮಗೆ ಆಗಿಲ್ಲ’ ಎಂದು ಅವರು ಅಳಲು ತೋಡಿಕೊಂಡರು.

ರಸ್ತೆ ಸರಿ ಇಲ್ಲ: ‘ಇರುವ ರಸ್ತೆಗಳೂ ಸಮರ್ಪಕವಾಗಿಲ್ಲ. ಇನ್ನೂ ಕಚ್ಚಾ ರಸ್ತೆಯಲ್ಲೇ ನಾವು ಓಡಾಡಬೇಕು. ಚರಂಡಿಯಿಂದ ಹೂಳು ತೆಗೆದು ಮೇಲೆ ಹಾಕುತ್ತಾರೆ. ಆದರೆ, ಅದನ್ನು ತಕ್ಷಣವೇ ತೆರವುಗೊಳಿಸುವುದಿಲ್ಲ. ಎರಡು ಮೂರು ದಿನಗಳವರೆಗೆ ಹಾಗೆಯೇ ಬಿದ್ದಿರುತ್ತದೆ’ ಎಂದು ನಿವಾಸಿ ಸಯಿದಾ ದೂರಿದರು.

‘ಸಮಸ್ಯೆ ನಿವಾರಿಸಲು ಕ್ರಮ’

ವಾರ್ಡ್‌ನ ಸ್ಥಿತಿ ಗತಿಗಳ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಾರ್ಡ್‌ ಸದಸ್ಯೆ ಚಿನ್ನಮ್ಮ, ‘ವಾರ್ಡ್‌ನಲ್ಲಿ ದಲಿತ ಸಮುದಾಯದವರು ಇರುವ ಪ್ರದೇಶಗಳ ಅಭಿವೃದ್ಧಿಗೆ ಅನುದಾನ ಸಿಕ್ಕಿದೆ. ಇದರಿಂದಾಗಿ ಅಲ್ಲಿ ಹಲವು ಕೆಲಸಗಳು ಆಗಿವೆ. ಇತರ ಸಮುದಾಯದವರು ಇರುವ ಕಡೆಗಳಲ್ಲಿ ಸಾಕಷ್ಟು ಅನುದಾನ ಬಂದಿಲ್ಲ. ಅಲ್ಲಿ ರಸ್ತೆ ಕಿರಿದಾಗಿರುವುದರಿಂದ ಯಂತ್ರಗಳನ್ನು ತೆಗೆದುಕೊಂಡು ಹೋಗಿ ಕೆಲಸ ಮಾಡಿಸುವುದಕ್ಕೆ ಆಗುವುದಿಲ್ಲ. ಹೀಗಾಗಿ ಒಳಚರಂಡಿ ಕಾಮಗಾರಿ ನಡೆದಿಲ್ಲ. ನನ್ನ ವಾರ್ಡ್‌ ಮಾತ್ರವಲ್ಲ; ಇಂತಹ ಪರಿಸ್ಥಿತಿ ಇರುವ ಹಲವು ವಾರ್ಡ್‌ಗಳಲ್ಲಿ ಒಳಚರಂಡಿ ನಿರ್ಮಾಣ ಆಗಿಲ್ಲ’ ಎಂದರು.

ಮುಸ್ಲಿಂ ಸಮುದಾಯವರು ವಾಸಿಸುತ್ತಿರುವ ಪ್ರದೇಶದಲ್ಲಿರುವ ಸಮಸ್ಯೆಗಳ ಬಗ್ಗೆ ಅರಿವಿದೆ. ಪ್ರತಿ ದಿನ ನಿವಾಸಿಗಳನ್ನು ಭೇಟಿ ಮಾಡಿ ಕುಂದುಕೊರತೆ ಆಲಿಸಲಾಗುತ್ತಿದೆ. ನಗರೋತ್ಥಾನ ಯೋಜನೆ ಅಡಿಯಲ್ಲಿ ಸ್ವಲ್ಪ ಅನುದಾನ ಲಭ್ಯವಾಗಲಿದ್ದು, ರಸ್ತೆ, ಶುದ್ಧ ನೀರಿನ ಘಟಕ, ಉದ್ಯಾನ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಮೀಸಲಿಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT