ಸೋಮವಾರ, ಮೇ 23, 2022
30 °C
ಕೊಳ್ಳೇಗಾಲ: ಈದ್‌ ಮೆರವಣಿಗೆ ನಡೆದ ಘಟನೆ, 12 ‌ಮಂದಿಗೆ ಗಾಯ

ಚಾಮರಾಜನಗರ | ಮುಸ್ಲಿಂ ಎರಡು ಗುಂಪುಗಳ ಘರ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ಈದ್‌ ಉಲ್‌ ಫಿತ್ರ್‌ ಹಬ್ಬದ ದಿನದಂದೇ ನಗರದಲ್ಲಿ ಮುಸ್ಲಿಮರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, 12 ಮಂದಿ ಗಾಯಗೊಂಡಿದ್ದಾರೆ. 

ಘರ್ಷಣೆಯಲ್ಲಿ ನಗರದ ಸಾಮಂದಗೇರಿ ಬಡಾವಣೆಯ ನಿವಾಸಿ, ಕಾಂಗ್ರೆಸ್ ಮುಖಂಡ ಮಹಮ್ಮದ್ ಕಿಜಾರ್, ಅಮ್ರಾನ್, ರಿಯಾಜ್, ಅಜಾನ್, ಮಹಮ್ಮದ್ ಮನ್ನಸೂರು, ಮಾಜುಲ್ಲಾ, ಸಮೀಉಲ್ಲಾ, ಜುನೇದ್, ಸಮೀರ್, ಸಮೀರ್, ನೌಸಾತ್ ಹಾಗೂ ನಾಸೀರ್‌ ಷರೀಫ್‌ ಅವರು ಗಾಯಗೊಂಡಿದ್ದಾರೆ. ನಾಸೀರ್‌ ಷರೀಫ್‌ ಅವರು ನಗರಸಭೆಯ ಅನರ್ಹ ಸದಸ್ಯರಾಗಿದ್ದಾರೆ. 

ಕಾಂಗ್ರೆಸ್ ಮುಖಂಡ ಮಹಮ್ಮದ್ ಕಿಜಾರ್ ಹಾಗೂ ನಾಸೀರ್‌ ಷರೀಫ್‌ ಅವರು ಒಂದೇ ಕುಟುಂಬದವರು. ಇವರಿಬ್ಬರ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಎಲ್ಲರೂ ಒಂದೇ ಬಡಾವಣೆಯವರು.

ರಾಜಕೀಯ ಕಾರಣಗಳಿಗೆ ಎರಡು ಗುಂಪುಗಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಮಂಗಳವಾರ ಈದ್‌ ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆಯ ನಂತರ ನಡೆದ ಮೆರವಣಿಗೆಯ ಸಂದರ್ಭದಲ್ಲಿ ರಾಜಕೀಯ ಮುಖಂಡರು ಪರಸ್ಪರ ಶುಭಕೋರುವ ವೇಳೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದೆ. ಆಗ ಅಲ್ಲಿನ ಮುಖಂಡರು ಸಮಾಧಾನ ಮಾಡಿದ್ದರು.

ಅಲ್ಲಿಂದ ಬಡಾವಣೆಗೆ ಹೋದ ಸಂದರ್ಭದಲ್ಲಿ ಎರಡು ಗುಂಪಿನವರು ಮಚ್ಚು, ಚಾಕು, ಕತ್ತಿ, ಪಂಚ್, ರಾಡ್ ಮತ್ತು ದೊಣ್ಣೆಗಳಿಂದ ಹೊಡೆದಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಎರಡೂ ಕಡೆಯವರಿಗೆ ಗಾಯಗಳಾಗಿವೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಹೋಗಿ ಲಾಠಿ ಪ್ರಹಾರ ನಡೆಸಿ ಗುಂಪುಗಳನ್ನು ಚದುರಿಸಿದ್ದಾರೆ.

ಗಾಯಗೊಂಡ ಎರಡೂ ಗುಂಪಿನವರೂ ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. 

ಘರ್ಷಣೆಯನ್ನು ಖಂಡಿಸಿ ಎರಡೂ ಕಡೆಯವರು ಆಸ್ಪತ್ರೆಯ ಮುಂದೆ ಪ್ರತಿಭಟನೆಗೆ ಮುಂದಾದಾಗ, ಸಬ್‌ ಇನ್‌ಸ್ಪೆಕ್ಟರ್‌ ಚೇತನ್ ಅವರು, ‘ಪ್ರತಿಭಟನೆ ನಡೆಸಬೇಡಿ. ದೂರು ಕೊಡಿ’ ಎಂದು ಹೇಳಿ ಮನವೊಲಿಸಿದರು. 

ಘಟನೆಯ ನಂತರ ನಗರದ ವಿವಿಧ ಬಡಾವಣೆಗಳಲ್ಲಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. 

‘ಘರ್ಷಣೆಯಲ್ಲಿ ತೊಡಗಿದ್ದ ಎರಡೂ ಗುಂಪಿನವರು ದೂರು ನೀಡಲು ಮುಂದಾಗಿದ್ದಾರೆ. ದೂರು ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಸಬ್‌ ಇನ್‌ಸ್ಪೆಕ್ಟರ್‌ ಚೇತನ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.