ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗಳಲ್ಲೇ ಈದ್‌ ಉಲ್‌ ಫಿತ್ರ್‌ ಸಂಭ್ರಮ

ಬಿರಿಯಾನಿ, ಶ್ಯಾವಿಗೆ ಪಾಯಸ ಸೇರಿದಂತೆ ವಿಶೇಷ ಅಡುಗೆ ಸಿದ್ಧಪಡಿಸಿದ ಮಹಿಳೆಯರು
Last Updated 26 ಮೇ 2020, 1:36 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಾದ್ಯಂತ ಮುಸ್ಲಿಮರು ಈದ್‌ ಉಲ್‌ ಫಿತ್ರ್‌ ಹಬ್ಬವನ್ನು ತಮ್ಮ ಮನೆಗಳಲ್ಲಿ ಸರಳವಾಗಿ ಸಂಭ್ರಮದಿಂದ ಆಚರಿಸಿದರು.

30 ದಿನಗಳ ರಂಜಾನ್‌ ಉಪವಾಸದ ನಂತರ ಆಚರಿಸುವ ಈದ್‌ ಉಲ್‌ ಫಿತ್ರ್‌ ಸಂಭ್ರಮಕ್ಕೆ ಈ ವರ್ಷ ಕೋವಿಡ್–19 ಅಡ್ಡಿಯಾಯಿತು.

ಲಾಕ್‌ಡೌನ್‌ ಜಾರಿಯಲ್ಲಿ ಇರುವುದರಿಂದ ಮಸೀದಿ ಹಾಗೂ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಿರಲಿಲ್ಲ. ಹಾಗಾಗಿ, ಎಲ್ಲರೂ ಮನೆಗಳಲ್ಲೇ ಕುಟುಂಬದ ಸದಸ್ಯರೊಂದಿಗೆ ಈದ್‌ ಪ್ರಾರ್ಥನೆ ಸಲ್ಲಿಸಿದರು. ಮಸೀದಿಗಳು, ಮೈದಾನಗಳು ಬಿಕೋ ಎನ್ನುತ್ತಿದ್ದವು.

ಧರ್ಮಗುರುಗಳ ನಿರ್ದೇಶನದಂತೆ ಸಮುದಾಯದ ಬಹುತೇಕ ಮಂದಿ ಹೊಸ ಬಟ್ಟೆಗಳನ್ನು ಖರೀದಿಸಿರಲಿಲ್ಲ. ಕೆಲವರು ಮಕ್ಕಳಿಗೆ ಮಾತ್ರ ಕೊಡಿಸಿದ್ದರು. ಹಾಗಾಗಿ, ಈ ವರ್ಷ ಹೊಸ ಬಟ್ಟೆ ಧರಿಸಿಸುವ ಸಂಭ್ರಮ ಇರಲಿಲ್ಲ.

ಸುರಕ್ಷಿತ ಅಂತರ ಕಾಪಾಡಿಕೊಳ್ಳಬೇಕಾಗಿದ್ದುದರಿಂದ ಪರಸ್ಪರ ಕೈಕುಲುಕಿ, ತಬ್ಬಿ ಶುಭಾಶಯ ವಿನಿಮಯ ಮಾಡುವುದಕ್ಕೂ ಅವಕಾಶ ಇರಲಿಲ್ಲ.

ಎದುರಿಗೆ ಸಿಕ್ಕವರು ದೂರದಿಂದಲೇ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಸ್ನೇಹಿತರು, ನೆಂಟರಿಷ್ಟರಿಗೆ ದೂರವಾಣಿ ಕರೆ ಮಾಡಿ, ವಾಟ್ಸ್ಆ್ಯಪ್‌, ಫೇಸ್‌ಬುಕ್‌ಗಳಲ್ಲಿ ಸಂದೇಶ ಕಳುಹಿಸಿ ಶುಭಾಶಯ ಕೋರಿದರು.

ಸಂಭ್ರಮ ಅಡುಗೆಗಷ್ಟೇ ಸೀಮಿತ: ಕೋವಿಡ್‌–19ರ ಕಾರಣಕ್ಕೆ ಈ ವರ್ಷ ಸಾರ್ವಜನಿಕವಾಗಿ ಈದ್‌ ಹಬ್ಬದ ಸಂಭ್ರಮ ಕಾಣಲಿಲ್ಲ. ಮನೆಗಳಲ್ಲಿ ಮಹಿಳೆಯರು ಬಿರಿಯಾನಿ, ಶ್ಯಾವಿಗೆ ಪಾಯಸ, ಜಾಮೂನು ಸೇರಿದಂತೆ ವಿವಿಧ ಸಿಹಿ ತಿಂಡಿಗಳನ್ನು ತಯಾರಿಸಿದ್ದರು. ಪ್ರಾರ್ಥನೆ, ಕುರ್‌ಅನ್‌ ಪಠಣ ಸೇರಿದಂತೆ ಎಲ್ಲ ಧಾರ್ಮಿಕ ಆಚರಣೆಗಳು ಮುಗಿದ ನಂತರ ಕುಟುಂಬಸ್ಥರೆಲ್ಲ ಒಂದಾಗಿ ಸೇರಿ ಹಬ್ಬದ ಊಟ ಸವಿದರು.

‘ಲಾಕ್‌ಡೌನ್‌ ಜಾರಿಯಲ್ಲಿ ಇರುವುದರಿಂದ ಈ ಬಾರಿ ಎಲ್ಲರೂ ಅವರ ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿದರು. ಶುಭಾಶಯ ಕೋರುವ ಮಿಲನ ಕಾರ್ಯಕ್ರಮವೂ ನಡೆಯಲಿಲ್ಲ. ಸ್ನೇಹಿತರು, ನೆಂಟರಿಷ್ಟರ ಮನೆಗಳಿಗೂ ಯಾರೂ ಹೋಗಿಲ್ಲ. ಹೊಸ ಬಟ್ಟೆಗಳನ್ನು ಧರಿಸಿದವರೂ ಕಡಿಮೆಯೇ. ಮನೆಯಲ್ಲಿ ಹಬ್ಬದ ಊಟವನ್ನು ಸವಿದು ಹಬ್ಬದ ಸಂಭ್ರಮವನ್ನು ಎಲ್ಲರೂ ಆಚರಿಸಿದರು’ ಎಂದು ಸಮುದಾಯದ ಮುಖಂಡ, ನಗರಸಭಾ ಸದಸ್ಯ ಅಬ್ರಾರ್‌ ಅಹಮದ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಮಾಧಿ ಮುಂದೆ ಪ್ರಾರ್ಥನೆ: ಕೆಲವು ಮುಸ್ಲಿಮರು ಮನೆಯಲ್ಲಿ ಪ್ರಾರ್ಥನೆ ಮಾಡಿದ ನಂತರ ತಮ್ಮ ಪೂರ್ವಜನರ ಸಮಾಧಿ ಬಳಿಗೆ ತೆರಳಿ, ಪ್ರಾರ್ಥನೆ ಸಲ್ಲಿಸಿದರು.

ಯಳಂದೂರು ವರದಿ: ಮುಸ್ಲಿಮರು ಒಂದು ತಿಂಗಳಿಂದ ನಡೆಸಿದ ರಂಜಾನ್‌ ಉಪವಾಸ ವ್ರತಾಚರಣೆ ಸೋಮವಾರ ಅಂತ್ಯಗೊಂಡಿತು. ಕೊರೊನಾ ಸೋಂಕು ಈದ್ ಹಬ್ಬದ ಮೇಲೂ ಪರಿಣಾಮ ಬೀರಿದ್ದು, ಬಹುತೇಕರು ಮನೆಯಲ್ಲಿ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು.

ಪಟ್ಟಣದಲ್ಲಿ ಹಬ್ಬದ ಮುನ್ನಾ ದಿನ ಭಾನುವಾರ ಲಾಕ್‌ಡೌನ್‌ ಬಂದಿತ್ತು. ಈ ಹಿನ್ನೆಲೆಯಲ್ಲಿ ಹಬ್ಬದ ಸಾಮಗ್ರಿ ಖರೀದಿಗೆ ಬ್ರೇಕ್‌ ಬಿದ್ದಿತ್ತು. ಹೀಗಾಗಿ, ದಿನಸಿ ಮತ್ತು ಮನೆಗೆ ಬೇಕಾದ ಸಾಮಾನು – ಸರಂಜಾಮು ಕೊಳ್ಳುವವರು ಕಂಡುಬರಲಿಲ್ಲ. ಇದರಿಂದ ಈ ಬಾರಿ ಹಬ್ಬದ ಸಂತಸದ ವಾತಾವರಣ ಮನೆಗೆ ಸೀಮಿತವಾಯಿತು.

ಸೋಮವಾರ ಮುಂಜಾನೆ ಶ್ವೇತ ವಸ್ತ್ರಧಾರಿ ಯುವಕರು, ಮಕ್ಕಳು ಮತ್ತು ವೃದ್ಧರು ಮನೆಗಳಲ್ಲೇ ಇದ್ದು, ವಿಶೇಷ ನಮಾಜ್‌ ಸಲ್ಲಿಸಿದರು. ನೆಂಟರು, ಬಂಧು ಬಳಗದವರು ಒಟ್ಟುಗೂಡಿ ಹಬ್ಬ ಆಚರಿಸುವ ಜನದಟ್ಟಣೆ ಕಂಡುಬರಲಿಲ್ಲ. ಮಸೀದಿಗಳಲ್ಲಿ ಪ್ರಾರ್ಥನಾ ಗೀತೆಗಳ ಅಜಾನ್‌ ಮೊಳಗಲಿಲ್ಲ.

ಕೋವಿಡ್‌–19ರಿಂದ ದೇಶ ಸಂಕಷ್ಟದಲ್ಲಿದೆ. ಇದರಿಂದ ಪಾರಾಗಲು ಎಲ್ಲ ಮುಸ್ಲಿಮರು ಅಲ್ಲಾಹುವಿನಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಧರ್ಮಗುರುಗಳು ತಿಳಿಸಿದ್ದಾರೆ. ರಂಜಾನ್‌ ಉಪವಾಸ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿ ಜಗತ್ತಿನ ಒಳಿತಿಗೆ ಚಿಂತಿಸುವಂತೆ ಸೂಚಿಸಿದ್ದಾರೆ ಎಂದು ಕುಂಬಾರ ಗುಂಡಿಯ ಪಾಷಾ ತಿಳಿಸಿದರು.

ಮಧ್ಯಾಹ್ನ ನೆಂಟರು, ನೆರೆಹೊರೆಯವರು ಚಿಕನ್‌ ಬಿರಿಯಾನಿ, ಫಿಶ್ ಬಿರಿಯಾನಿ, ಮಟನ್ ಬಿರಿಯಾನಿ, ಚಿಲ್ಲಿ ಮಟನ್‌ ಮಂಡಿ ಸೇರಿದಂತೆ ತರಹೇವಾರಿ ತಿನಿಸುಗಳನ್ನು ತಯಾರಿಸಿ ಸೇವಿಸಿದರು.

ಬಿಕೋ ಎಂದ ಈದ್ಗಾ ಮೈದಾನ: ಇದೇ ಮೊದಲ ಬಾರಿಗೆ ಕೊರೊನಾ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿತ್ತು. ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇರಲಿಲ್ಲ. ಹೀಗಾಗಿ, ರಾಷ್ಟ್ರೀಯ ಹೆದ್ದಾರಿ ಸಮೀಪದ ಈದ್ಗಾ ಮೈದಾನ ಮುಸ್ಲಿಮರ ಆಗಮನ ಇಲ್ಲದೆ ಬಿಕೋ ಎನ್ನುತ್ತಿತ್ತು.

ಪಟ್ಟಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಶಾಂತವಾಗಿ ಮನೆಗಳಲ್ಲಿ ಹಬ್ಬ ಆಚರಿಸುವ ಮೂಲಕ ಜನರು ಸೌಹಾರ್ದತೆ ಮೆರೆದಿದ್ದಾರೆ.
ಕಾನೂನು ಸುವ್ಯವಸ್ಥೆ ಸುಗಮವಾಗಿ ರೂಪಿಸುವಲ್ಲಿ ಮುಸ್ಲಿಂ ಮುಖಂಡರ ಸಹಕಾರ ನೆರವಾಗಿದೆ ಎಂದು ಸಬ್‌ ಇನ್‌ಸ್ಪೆಕ್ಟರ್‌ ಡಿ.ಆರ್‌.ರವಿಕುಮಾರ್ ತಿಳಿಸಿದರು.

ಕೊಳ್ಳೇಗಾಲದಲ್ಲೂ ಸರಳ ಆಚರಣೆ

ಕೊಳ್ಳೇಗಾಲ: ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸರಳವಾಗಿ ಆಚರಣೆ ಮಾಡಿದರು.

ತಮ್ಮ ತಮ್ಮ ಮನೆಗಳಲ್ಲಿ ಕುಟುಂಬದವರ ಜೊತೆ ಪ್ರಾರ್ಥನೆ ಸಲ್ಲಿಸಿದರು. ನಂತರ ನಗರದ ಈದ್ಗ ಮೊಹಲ್ಲಾ ಬಡಾವಣೆಯಲ್ಲಿ ಇರುವ ಖಬರಸ್ತಾನ್ (ಸ್ಮಶಾನ) ಬಳಿ ಬಂದು ಪೂರ್ವಜರಿಗೆ ಪುಷ್ಪನಮನ, ಪ್ರಾರ್ಥನೆ ಸಲ್ಲಿಸಿದರು.

‘ದೇಶದಾದ್ಯಂತ ಕೋವಿಡ್‌–19 ಅಟ್ಟಹಾಸ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಂತಿ, ಸೌಹರ್ದತೆ ಹಾಗೂ ಸಹಬಾಳ್ವೆ ಬಹಳ ಮುಖ್ಯ. ಕೈಗನ್ನಡಿಯಾದ ಈದ್‌ ಹಬ್ಬವನ್ನು ಮನೆಯಲ್ಲೇ ಆಚರಿಸಿ, ದೇಶಕ್ಕೆ ಒಕ್ಕರಿಸಿರುವ ಕೊರೊನಾ ವೈರಸ್‌ ನಿಯಂತ್ರಣಕ್ಕೆ ಬಂದು ಎಲ್ಲರಿಗೂ ಒಳಿತಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇವೆ’ ಎಂದು ಅಂಜಮಾನ್ ಎ ಇಸ್ಲಾಮಿಯಾ ಸಂಸ್ಥೆಯ ಅಧ್ಯಕ್ಷ ಸಮೀಉಲ್ಲಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT