ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: 86 ಮಂದಿಗೆ ಕೋವಿಡ್‌ ದೃಢ

ಸಕ್ರಿಯ ಪ್ರಕರಣಗಳ ಸಂಖ್ಯೆ 174ಕ್ಕೆ ಏರಿಕೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆ
Last Updated 11 ಜನವರಿ 2022, 16:25 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ದಿನೇ ದಿನೇ ಗಣನೀಯ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಮಂಗಳವಾರ 86 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮಂಗಳವಾರ 955 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿವೆ. ಈ ಪೈಕಿ 87 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಒಂದು ಪ್ರಕರಣ ಮೈಸೂರಿಗೆ ಸೇರಿದೆ.

ಚಾಮರಾಜನಗರ ತಾಲ್ಲೂಕಿನಲ್ಲಿ 31 ಮಂದಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ. ಈ ಪ್ರಕರಣಗಳಲ್ಲಿ ಸೋಮವಾರ ಕಣ್ಣೇಗಾಲ ಗ್ರಾಮವೊಂದರಲ್ಲಿ ದೃಢಪಟ್ಟ 22 ಪ್ರಕರಣಗಳೂ ಸೇರಿವೆ.

ಕೊಳ್ಳೇಗಾಲ ತಾಲ್ಲೂಕಿನಲ್ಲಿ 22 ಮಂದಿಯಲ್ಲಿ ಸೋಂಕು ಕಂಡು ಬಂದಿದೆ. ಹನೂರಿನಲ್ಲಿ 14 ಜನರು, ಯಳಂದೂರು ತಾಲ್ಲೂಕಿನಲ್ಲಿ 10 ಹಾಗೂ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಒಂಬತ್ತು ಮಂದಿಗೆ ಸೋಂಕು ಇರುವುದು ಖಚಿತವಾಗಿದೆ.

ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ 174ಕ್ಕೆ ಏರಿದೆ. ಐವರನ್ನು ಬಿಟ್ಟು ಉಳಿದವರೆಲ್ಲರೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಭೀರವಾದ ರೋಗ ಲಕ್ಷಣ ಯಾರಲ್ಲೂ ಕಂಡು ಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 32,857ಕ್ಕೆ ಏರಿದೆ. ಮಂಗಳವಾರ ಯಾರೊಬ್ಬರೂ ಗುಣಮುಖರಾಗಿಲ್ಲ. ಇದುವರೆಗೆ 32,142 ಮಂದಿ ಗುಣಮುಖರಾಗಿದ್ದಾರೆ.

ಹನೂರು ವರದಿ: ತಾಲ್ಲೂಕಿನಲ್ಲಿ ಮಂಗಳವಾರ 30 ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಒಡೆಯರಪಾಳ್ಯ ಬಳಿಯಿರುವ ಟಿಬೆಟಿಯನ್ ನಿರಾಶ್ರಿತರ ಶಿಬಿರವೊಂದರಲ್ಲೇ 22 ಮಂದಿಗೆ ಸೋಂಕು ದೃಢಪಟ್ಟಿದೆ.

ಧಾರ್ಮಿಕ ಪ್ರವಾಸ ಕೈಗೊಂಡಿದ್ದ ಹಲವರು ಮಂಗಳವಾರ ಶಿಬಿರಕ್ಕೆ ವಾಪಸ್‌ ಆಗಿದ್ದಾರೆ. ಈ ಸಂದರ್ಭದಲ್ಲಿ ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ನಡೆಸಲಾಗಿದೆ. ಆಗ ಸೋಂಕು ತಗುಲಿರುವುದು ಖಚಿತವಾಗಿದೆ.

ಓಂಶಕ್ತಿ ದೇವಾಲಯಕ್ಕೆ ತೆರಳಿದ್ದ ಕುಂತೂರಿನ ಐವರು ಸೋಂಕಿಗೆ ತುತ್ತಾಗಿದ್ದಾರೆ. ರಾಮಾಪುರದಲ್ಲಿ ಒಬ್ಬರು ಹಾಗೂ ಮಹದೇಶ್ವರ ಬೆಟ್ಟದ ಇಬ್ಬರಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ.

ಕುಂತೂರಿನ ಕೆಲವರು ಓಂಶಕ್ತಿ ದೇವಾಲಯಕ್ಕೆ ತೆರಳಿದ್ದರು. ಅಲ್ಲಿನ ಗ್ರಾಮಸ್ಥರು ದೇವಾಲಯಕ್ಕೆ ಹೋಗಿದ್ದವರನ್ನು ಗ್ರಾಮದೊಳಗೆ ಸೇರಿಸಲು‌ ನಿರಾಕರಿಸಿದ್ದಾರೆ. ಆ ಬಳಿಕ ಯಾತ್ರಿಕರು ಹನೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿದಾಗ ಐವರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.

‘ಎಲ್ಲರನ್ನೂ ಜಿಲ್ಲಾ ಕೇಂದ್ರದಲ್ಲಿ ಕ್ವಾರಂಟೈನ್‌ಗೆ ಕಳುಹಿಸಿ ಕೊಡಲಾಗಿದೆ. ಹೊರಗಡೆಯಿಂದ ಬಂದವರೆಲ್ಲರನ್ನು ಪರೀಕ್ಷೆ ಮಾಡಲು ಸೂಚಿಸಲಾಗಿದೆ’ ಎಂದು ತಾಲ್ಲೂಕುಪ್ರಭಾರ ವೈದ್ಯಾಧಿಕಾರಿ ಡಾ.ಪ್ರಕಾಶ್ 'ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT