ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: 2023ರಲ್ಲಿ 83 ಪೋಕ್ಸೊ ಪ್ರಕರಣ

Published 1 ಫೆಬ್ರುವರಿ 2024, 6:15 IST
Last Updated 1 ಫೆಬ್ರುವರಿ 2024, 6:15 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ 2021, 2022ನೇ ವರ್ಷಗಳಿಗೆ ಹೋಲಿಸಿದರೆ, ಕಳೆದ ವರ್ಷ ಪೋಕ್ಸೊ (ಲೈಂಗಿಕ  ಅಪರಾಧಗಳಿಂದ ಮಕ್ಕಳ ರಕ್ಷಣೆ  ಕಾಯ್ದೆಯಡಿ ಪೊಲೀಸ್‌ ಇಲಾಖೆಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ ಬಹುತೇಕ ದ್ವಿಗುಣಗೊಂಡಿವೆ. 

2021 ಮತ್ತು 2023ರಲ್ಲಿ ತಲಾ 48 ಪ್ರಕರಣಗಳು ದಾಖಲಾಗಿತ್ತು. 2023ರಲ್ಲಿ ಇದು 83ಕ್ಕೆ ಏರಿದೆ. 75 ಆರೋಪಿಗಳನ್ನು ಬಂಧಿಸಲಾಗಿದೆ. ಜಿಲ್ಲಾ ಪೊಲೀಸ್‌ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಈ ಪೈಕಿ 38 ಪ್ರಕರಣಗಳು ಬಾಲ್ಯ ವಿವಾಹಕ್ಕೆ ಸಂಬಂಧಿಸಿದ್ದಾಗಿವೆ.

ಕಳೆದ ವರ್ಷ ಆರು ಪ್ರಕರಣಗಳಲ್ಲಿ ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. 

ಪ್ರಕರಣ ಜಾಸ್ತಿಯಾಗಿದ್ದೇಕೆ?: ಕಾಯ್ದೆ ಜಾರಿಯಾದ ಬಳಿಕವೂ ಮಕ್ಕಳ ಮೇಲೆ ನಡೆಯುತ್ತಿದ್ದ ಅತ್ಯಾಚಾರ ಸೇರಿದಂತೆ ಲೈಂಗಿಕ ದೌರ್ಜನ್ಯ ಪ್ರಕರಣಗಳೆಲ್ಲವೂ ವರದಿಯಾಗುತ್ತಿರಲಿಲ್ಲ.

ಆದರೆ, ಇತ್ತೀಚೆಗೆ ಪೊಲೀಸ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳು ಈ ಕಾಯ್ದೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡುತ್ತಿವೆ. ಗ್ರಾಮೀಣ ಭಾಗಗಳಲ್ಲೂ ಕಾಯ್ದೆಯ ಬಗ್ಗೆ ಅರಿವು ಮೂಡುತ್ತಿದೆ. 

ಇದಲ್ಲದೇ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳು ಮದುವೆಯಾಗಿರುವ ಅಥವಾ ಗರ್ಭಿಣಿಯಾಗಿರುವ ಸಂಗತಿ ತಿಳಿದಿದ್ದರೂ ಈ ಹಿಂದೆ ವೈದ್ಯಕೀಯ ಸಿಬ್ಬಂದಿ ಅಥವಾ ಇನ್ನಿತರ ಸಂಬಂಧಿಸಿದ ಇಲಾಖೆಗಳ ಸಿಬ್ಬಂದಿ ಮಾಹಿತಿ ನೀಡುತ್ತಿರ‌ಲಿಲ್ಲ. ಆದರೆ, ಈಗ ಮಾಹಿತಿ ನೀಡದವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುತ್ತಿರುವುದರಿಂದ ವೈದ್ಯರು ಹಾಗೂ ಇನ್ನಿತರ ಸಿಬ್ಬಂದಿ ಪ್ರಕರಣಗಳ ಬಗ್ಗೆ ತಿಳಿಸುತ್ತಿದ್ದಾರೆ. 

‘ಬಾಲಕಿಯರು ಅತ್ಯಾಚಾರಕ್ಕೆ ಒಳಗಾಗಿದ್ದರೆ, ಅಥವಾ ಗರ್ಭಿಣಿಯಾಗಿದ್ದರೆ, ಬಾಲ್ಯ ವಿವಾಹವಾಗಿರುವುದನ್ನು ಮುಚ್ಚಿಟ್ಟಿರುವ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ವಿರುದ್ಧವೂ ಕ್ರಮ ಕೈಗೊಳ್ಳುವ ಅವಕಾಶ ಕಾಯ್ದೆಯಲ್ಲಿದೆ. ಹೀಗಾಗಿ ಈಗ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹು ‘ಪ್ರಜಾವಾಣಿ’ಗೆ ತಿಳಿಸಿದರು. 

ಪೋಕ್ಸೊ ಪ್ರಕರಣಗಳಿಗಾಗಿಯೇ ಮಕ್ಕಳ ಸ್ನೇಹಿ ನ್ಯಾಯಾಲಯ ಜಿಲ್ಲೆಯಲ್ಲಿದ್ದು, ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಕಳೆದ ವರ್ಷ ಆರು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಇವೆಲ್ಲವೂ ಹಿಂದಿನ ವರ್ಷಗಳಲ್ಲಿ ದಾಖಲಾದ ಪ್ರಕರಣಗಳು. 

‘ಪೋಕ್ಸೊ ಪ್ರಕರಣಗಳಲ್ಲಿ 90 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುತ್ತೇವೆ. ಆ ಬಳಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುತ್ತದೆ’ ಎಂದು ಹೇಳುತ್ತಾರೆ ಪೊಲೀಸ್‌ ಅಧಿಕಾರಿಗಳು. 

ಬಾಲ್ಯ ವಿವಾಹ ಹೆಚ್ಚು: ಜಿಲ್ಲೆಯಲ್ಲಿ ನಡೆಯುತ್ತಿರುವ ಬಾಲ್ಯ ವಿವಾಹ ಪ್ರಕರಣಗಳಿಗೆ ಕಡಿವಾಣ ಬಿದ್ದಿಲ್ಲ. ಕಳೆದ ವರ್ಷ ದಾಖಲಾಗಿದ್ದ ಪೋಕ್ಸೊ ಪ್ರಕರಣಗಳಲ್ಲಿ 38 ದೂರುಗಳು ಬಾಲ್ಯವಿವಾಹಕ್ಕೆ ಸಂಬಂಧಿಸಿರುವುದು ಇದನ್ನು ಪುಷ್ಟೀಕರಿಸುತ್ತದೆ.  ಹಲವು ಸಮುದಾಯಗಳಲ್ಲಿ ಪೋಷಕರು ಈಗಲೂ ಹದಿ ಹರೆಯದ ಹೆಣ್ಣು ಮಕ್ಕಳಿಗೆ ಮದುವೆ ಮಾಡುತ್ತಿದ್ದಾರೆ.  

ಪದ್ಮಿನಿ ಸಾಹು
ಪದ್ಮಿನಿ ಸಾಹು
ಇನ್ನಷ್ಟು ಮೂಡಬೇಕಿದೆ ಜಾಗೃತಿ ಬಾಲ್ಯವಿವಾಹಕ್ಕೆ ಬೀಳದ ಕಡಿವಾಣ ಇಲಾಖೆಗಳ ನಡುವೆ ಬೇಕಿದೆ ಸಮನ್ವಯ
ಪೋಕ್ಸೊ ಬಾಲ್ಯವಿವಾಹದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಸಂಬಂಧಿಸಿದ ಎಲ್ಲ ಇಲಾಖೆಗಳು ‌ಸಮನ್ವಯದಿಂದ ಕೆಲಸ ಮಾಡಿದರೆ ಈ ಸಮಸ್ಯೆಗೆ ಕಡಿವಾಣ ಹಾಕಬಹುದು
ಪದ್ಮಿನಿ ಸಾಹು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಎರಡು ವಿಶಿಷ್ಟ ಪ್ರಕರಣ
ಕಳೆದ ವರ್ಷ ದಾಖಲಾದ ಪೋಕ್ಸೊ ಪ್ರಕರಣಗಳಲ್ಲಿ ಎರಡು ವಿಶಿಷ್ಟ ಪ್ರಕರಣಗಳಿವೆ. ಹೆಣ್ಣುಮಕ್ಕಳು ಎರಡನೇ ಬಾರಿ ಗರ್ಭಿಣಿಯಾದಾಗ ಈ ಪ್ರಕರಣಗಳು ಬೆಳಕಿಗೆ ಬಂದಿವೆ.  ‘ಇಬ್ಬರೂ ಹೆಣ್ಣುಮಕ್ಕಳು ಎರಡನೇ ಬಾರಿ ಗರ್ಭಿಣಿಯಾದಾಗ ಅವರ ವಯಸ್ಸು 18 ದಾಟಿತ್ತು. ಆದರೆ ಮೊದಲ ಬಾರಿ ಗರ್ಭಿಣಿಯಾಗಿದ್ದಾಗ ಅವರು ಬಾಲಕಿಯರಾಗಿದ್ದರು. ಹಾಗಾಗಿ ಮೊದಲಿನ ಪ್ರಕರಣ ಆಧರಿಸಿ ದೂರು ದಾಖಲಿಸಿದ್ದೇವೆ’ ಎಂದು ಎಸ್‌ಪಿ ಪದ್ಮಿನಿ ಸಾಹು ‘ಪ್ರಜಾವಾಣಿ’ಗೆ ತಿಳಿಸಿದರು.  ಎರಡನೇ ಸಲ ಗರ್ಭಿಣಿಯಾದಾಗ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದ ಸಂದರ್ಭದಲ್ಲಿ ಆರೋಗ್ಯ ಇಲಾಖೆಗೆ ವಿಚಾರ ತಿಳಿದು ಅದನ್ನು ಪೊಲೀಸರ ಗಮನಕ್ಕೆ ತಂದಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT