ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಟ್ಟು ನಿಂತ ಜೆಸಿಬಿ; ತುರ್ತು ಕೆಲಸಕ್ಕೆ ಪರದಾಟ

ಗುಂಡ್ಲುಪೇಟೆ: ಯಂತ್ರ ದುರಸ್ತಿ ಮಾಡದ ಪುರಸಭೆ, ಸಾರ್ವಜನಿಕರ ಅಸಮಾಧಾನ
Published 8 ಮೇ 2024, 6:29 IST
Last Updated 8 ಮೇ 2024, 6:29 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಗುಂಡ್ಲುಪೇಟೆಯ ಪುರಸಭೆಯ ಜೆಸಿಬಿ ಯಂತ್ರ ಕೆಟ್ಟು ನಿಂತು ತಿಂಗಳಾದರೂ ರಿಪೇರಿ ಮಾಡದ ಕಾರಣ ಸಾರ್ವಜನಿಕರ ಸೇವೆಗೆ ಮತ್ತು ಪುರಸಭೆ ಕೆಲಸಕ್ಕೆ ಸಿಗುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಪರದಾಡಬೇಕಿದೆ.

ಜೆಸಿಬಿ ಕೆಟ್ಟಿರುವ ವಿಚಾರ ಪುರಸಭೆ ಆಡಳಿತಾಧಿಕಾರಿ ಸೇರಿದಂತೆ ಅಧಿಕಾರಿಗಳ ಗಮನದಲ್ಲಿ ಇದೆ. ಹಾಗಾಗಿದ್ದರೂ ದುರಸ್ತಿ ಮಾಡಿಲ್ಲ. ಈ ರೀತಿಯಲ್ಲಿ ಅನೇಕ ಯಂತ್ರ, ವಾಹನಗಳು ಮೂಲೆ ಗುಂಪಾಗಿವೆ ಎಂಬುದು ಪುರಸಭೆ ಸದಸ್ಯರ ಆರೋಪ.

‘ಪಟ್ಟಣದ ವ್ಯಾಪ್ತಿಯಲ್ಲಿ ಯಾರಾದರೂ ಮೃತ ಪಟ್ಟು ಹೂಳುವ ಸಂದರ್ಭದಲ್ಲಿ ಗುಂಡಿ ತೆಗೆಯಲು ಪುರಸಭೆ ಜೆಸಿಬಿ ಯಂತ್ರ ನೆರವಿಗೆ ಬರುತ್ತಿತ್ತು. ಇದೀಗ ಕೆಟ್ಟು ನಿಂತಿರುವುದರಿಂದ ಮೃತರ ಅಂತ್ಯಕ್ರಿಯೆಗೆ ಗುಂಡಿ ತೆಗೆಯಲು ಖಾಸಗಿ ಜೆಸಿಬಿಗಳ ಮೊರೆ ಹೋಗಬೇಕಿದೆ.  ಖಾಸಗಿ ಜೆಸಿಬಿ ಯಂತ್ರಗಳಿಗೆ ಗಂಟೆಗೆ ಸಾವಿರ ರೂಪಾಯಿ ನೀಡಬೇಕಿದೆ. ಬಡವರು ಎಲ್ಲಿಂದ ಹಣ ತರಬೇಕು? ಪುರಸಭೆ ಅಧಿಕಾರಿಗಳು ಕಮಿಷನ್‌ ಆಸೆಗೂ ಅಥವಾ ಬೇರೆ ಯಾವುದೋ ಉದ್ದೇಶಕ್ಕೋ ಯಂತ್ರದ ರಿಪೇರಿಗೆ ಆಸಕ್ತಿ ತೋರುತ್ತಿಲ್ಲ’ ಎಂದು ಸದಸ್ಯರೊಬ್ಬರು ಆರೋಪಿಸಿದರು.

ಜೆಸಿಬಿ ಕೆಟ್ಟು ನಿಂತಾಗಿನಿಂದ  ಚರಂಡಿಗಳ ಹೂಳು ಎತ್ತುವ ಕಾರ್ಯವೂ ನಡೆಯುತ್ತಿಲ್ಲ. ಅಲ್ಲಲ್ಲಿ ಚರಂಡಿಗಳು ಕಟ್ಟಿ ಕೊಂಡಿವೆ.   

ತುಕ್ಕು ಹಿಡಿಯುತ್ತಿರುವ ಆಟೊ: ಪುರಸಭೆಗೆ ಸೇರಿದ ಆಟೊ ಸೇರಿದಂತೆ ಕೆಲ ವಾಹನಗಳು ಕೆಟ್ಟು ನಿಂತು ಮೂಲೆ ಗುಂಪಾಗಿ ತುಕ್ಕು ಹಿಡಿಯುವ ಹಂತ ತಲುಪಿದೆ. ಆದರೆ ಈ ವಾಹನಗಳಿಗೆ ಪ್ರತಿ ವರ್ಷ ಇನ್ಸೂರೆನ್ಸ್ ಮಾಡಿಸಲಾಗುತ್ತದೆ. ಸಾರ್ವಜನಿಕರ ಉಪಯೋಗಕ್ಕೆ ಬಾರದ ವಾಹನಗಳಿಗೆ ಏಕೆ ವಿಮೆ ಮಾಡಿಸಬೇಕು ಎಂಬುದು ಸಾರ್ವಜನಿಕ ಪ್ರಶ್ನೆ.

ಪುರಸಭೆ ವ್ಯಾಪ್ತಿಯ ಕಸ ಸಂಗ್ರಹಣೆಗೆ ಎರಡು ವಾಹನಗಳು ಮಾತ್ರ ಇವೆ. ಎಲ್ಲಾ ವಾರ್ಡ್ ಗಳಲ್ಲಿ  ಕಸ ಸಂಗ್ರಹ ಮಾಡಲು ಕಷ್ಟ ವಾಗುತ್ತಿದೆ. ಇದರಿಂದಾಗಿ ಪಟ್ಟಣದ ಒಳಭಾಗದಲ್ಲಿ ರಸ್ತೆಯಲ್ಲಿ ಕಸ ಗುಡ್ಡೆಯಾಗಿ ಬಿದ್ದಿರುತ್ತದೆ.

‘ಪುರಸಭೆ ಸದಸ್ಯರ ಆಡಳಿತ 2023ರ ಮೇ 5ಕ್ಕೆ ಅಂತ್ಯಗೊಂಡ ನಂತರ ಅನೇಕ ಕೆಲಸಗಳು ನಡೆಯದೆ ಹಾಗೇ ಉಳಿದಿವೆ. ಸಾರ್ವಜನಿಕರ ಕೆಲಸಗಳು ಸಕಾಲದಲ್ಲಿ ಆಗುತ್ತಿಲ್ಲ. ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ’ ಎಂದು ಸದಸ್ಯರು ದೂರಿದರು. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ವಸಂತ ಕುಮಾರಿ, ‘ಜೆಸಿಬಿ ಟೈರ್‌ಗಳು ಹಾಳಾಗಿತ್ತು. ಅವುಗಳನ್ನು ಖರೀದಿಸಲು ಆದೇಶ ಮಾಡಲಾಗಿದೆ. ಚುನಾವಣಾ ಕಾರ್ಯದಲ್ಲಿ ಹೆಚ್ಚು ಸಕ್ರಿಯವಾಗಿದ್ದರಿಂದ ಈ ಕೆಲಸ ಬಾಕಿಯಾಗಿತ್ತು. ಶೀಘ್ರವಾಗಿ ದುರಸ್ತಿ ಮಾಡಲಾಗುವುದು’ ಎಂದು ಹೇಳಿದರು. 

ತುರ್ತು ಕೆಲಸಕ್ಕೆ ಖಾಸಗಿಯವರ ಅವಲಂಬನೆ ತುಕ್ಕು ಹಿಡಿಯುತ್ತಿದೆ ಆಟೊ ಕಸ ಸಂಗ್ರಹಕ್ಕೆ ಇರುವುದು ಎರಡೇ ವಾಹನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT