ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಳ್ಳೇಗಾಲ | ಸಾವಯವ ಕೃಷಿ: 15 ಎಕರೆಯಲ್ಲಿ ತರಹೇವಾರಿ ಮಿಶ್ರ ಬೆಳೆ

Published 21 ಜೂನ್ 2024, 7:59 IST
Last Updated 21 ಜೂನ್ 2024, 7:59 IST
ಅಕ್ಷರ ಗಾತ್ರ

ಕೊಳ್ಳೇಗಾಲ: ರಾಸಾಯನಿಕ ಮುಕ್ತ ವ್ಯವಸಾಯ ಮಾಡಬೇಕು ಎಂಬ ಉದ್ದೇಶದಿಂದ 15 ಎಕರೆಯಲ್ಲಿ ಸಾವಯವ ಪದ್ಧತಿ ಅನುಸರಿಸಿ ಬೆಳೆ ಬೆಳೆದು ಯಶಸ್ಸು ಕಂಡಿದ್ದಾರೆ ತಾಲ್ಲೂಕಿನ ಪಾಳ್ಯ ಗ್ರಾಮದ ರೈತ ಲೋಕೇಶ್.

ಮಿಶ್ರ ಬೆಳೆಯಲ್ಲಿ ಯಶಸ್ಸು: 15 ಎಕರೆಯಲ್ಲಿ 15ಕ್ಕಿಂತಲೂ ಹೆಚ್ಚು ಮಿಶ್ರ ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕವಾಗಿ ಸ್ವಾವಲಂವನೆ ಸಾಧಿಸಿರುವ ಲೋಕೇಶ್‌ ತಾಲ್ಲೂಕಿಗೆ ಮಾದರಿ ರೈತ ಎನಿಸಿಕೊಂಡಿದ್ದಾರೆ.

ಬೆಳೆ ವೈವಿಧ್ಯ: ಟೊಮೆಟೊ, ಈರುಳ್ಳಿ, ಬಾಳೆ, ಪರಂಗಿ, ಜೋಳ, ಮೂಲಂಗಿ ಸಹಿತ ಹಲವು ಮಾದರಿಯ ಸೊಪ್ಪುಗಳನ್ನು ಲೋಕೇಶ್ ಬೆಳೆಯು ತ್ತಾರೆ. ಒಂದು ಬೆಳೆಯಲ್ಲಿ ನಷ್ಟವಾದರು ಇನ್ನೊಂದು ಬೆಳೆ ಕೈ ಹಿಡಿಲಿಯಲಿದೆ ಎಂಬ ಅನುಭವದ ಸತ್ಯವನ್ನು ಕಂಡುಕೊಂಡಿದ್ದಾರೆ ಲೋಕೇಶ್‌.

25 ವರ್ಷಗಳಿಂದಲೂ ಮಿಶ್ರ ಬೆಳೆಗಳನ್ನು ಬೆಳೆಯುತ್ತಿರುವ ಇವರು, ಕಳೆದ ವರ್ಷ 2 ಎಕರೆ ಟೊಮೆಟೊ ಹಾಕಿ ₹40 ಲಕ್ಷ ಆದಾಯ ಗಳಿಸಿದ್ದರು. ಮಿಶ್ರ ಬೆಳೆಗಳನ್ನು ಬೆಳೆಯುತ್ತಲೇ ತಾಲ್ಲೂಕಿನಾದ್ಯಂತ ಮಿಶ್ರಬೆಳೆ ಲೋಕೇಶ್ ಹಾಗೂ ಸಾವಯವ ಬೆಳೆಯ ರೈತ ಎಂದೇ ಪ್ರಸಿದ್ಧರಾಗಿದ್ದಾರೆ.

ಸಾವಯವ ಗೊಬ್ಬರ ಬಳಕೆ: 25 ವರ್ಷಗಳಿಂದಲೂ ಲೋಕೇಶ್‌ ರಾಸಾಯನಿಕ ಗೊಬ್ಬರವನ್ನು ಭೂಮಿಗೆ ತೋರಿಸಿಲ್ಲ. ಸಾವಯವ ಗೊಬ್ಬರ ಹಾಕಿಯೇ ಬೆಳೆ ಬೆಳೆಯುತ್ತಿದ್ದಾರೆ. ಹಸುವಿನ ಸಗಣಿ, ಕುರಿ ಗೊಬ್ಬರ, ಗಂಜಲವನ್ನು ಜಮೀನಿಗೆ ಹಾಕುತ್ತಾರೆ.

ಒಣಗಿದ ಎಲೆಗಳನ್ನು ಒಂದೆಡೆ ಸಂಗ್ರಹಿಸಿ ಗೊಬ್ಬರವನ್ನಾಗಿ ಪರಿವರ್ತಿಸಿ ಬೆಳೆಗಳಿಗೆ ಹಾಕುತ್ತಾರೆ. ವರ್ಷಕ್ಕೆ ಎರಡು ತಿಂಗಳು ಭೂಮಿಯನ್ನು ಖಾಲಿ ಬಿಡಬೇಕು. ಇದರಿಂದ ಉತ್ತಮ ಇಳುವರಿ ಪಡೆಯಬಹುದು ಎಂಬ ಗುಟ್ಟನ್ನು ಹೇಳುತ್ತಾರೆ ಲೋಕೇಶ್‌.

ರೈತ ಕುಟುಂಬದ ಲೋಕೇಶ್‌ ಬಿಎ ಪದವಿ  ಬಳಿಕ ಸಂಪೂರ್ಣವಾಗಿ ಕೃಷಿಯಲ್ಲಿ ತೊಡಿಗಿಸಿಕೊಂಡಿದ್ದಾರೆ. ರಾಸಾಯನಿಕ ಮುಕ್ತ ಕೃಷಿ ಇವರ ಗುರಿಯಾಗಿದ್ದು, ಇತರ ರೈತರಿಗೂ ರಾಸಾಯನಿಕ ಗೊಬ್ಬರ ಬಳಕೆಯ ದುಷ್ಪರಿಣಾಮ, ಸಾವಯವ ಗೊಬ್ಬರ ಬಳಕೆಯ ಪ್ರಯೋಜನಗಳ ಮನವರಿಕೆ ಮಾಡಿಕೊಡುತ್ತಿದ್ದಾರೆ.

‘ಹೈನುಗಾರಿಕೆಯಿಂದ ಹಾಲು, ಗೊಬ್ಬರ’

ರೈತ ಲೋಕೇಶ್ ವ್ಯವಸಾಯದ ಜೊತೆಗೆ ಹೈನುಗಾರಿಕೆಯಲ್ಲೂ ತೊಡಗಿದ್ದಾರೆ. ಇವರ ಬಳಿ 120ಕ್ಕೂ ಹೆಚ್ಚು ಹಳ್ಳಿಕಾರ್ ತಳಿಯ ಹಸುಗಳಿವೆ. ಹಾಲನ್ನು ಡೇರಿಗೆ ಹಾಕುವುದಿಲ್ಲ. ಮನೆಯ ಬಳಕೆಗೆ ಹಾಲು ಬಳಸುತ್ತಾರೆ. ಎಲ್ಲ ಹಸುಗಳ ಗೊಬ್ಬರವನ್ನು ಕೃಷಿಗೆ ಬಳಸಿ ಉತ್ತಮ ಬೆಳೆ ಬೆಳೆಯುತ್ತಿದ್ದಾರೆ. ಹಸುಗಳನ್ನು ಸಾಕಿರುವ ಉದ್ದೇಶ ಗೊಬ್ಬರಕ್ಕಾಗಿ ಹಾಗೂ ಹಳ್ಳಿಕಾರ್ ತಳಿಗಳನ್ನು ಉಳಿಸಿ ಬೆಳೆಸುವುದಕ್ಕಾಗಿ ಎನ್ನುತ್ತಾರೆ ಲೋಕೇಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT