ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಖರೀದಿ ಕೇಂದ್ರ ತೆರೆಯಲು ರೈತರ ಕೂಗು

ಮೆಕ್ಕೆಜೋಳ ಕೊಯ್ಲು: ಮಧ್ಯವರ್ತಿಗಳ ವ್ಯವಹಾರಕ್ಕೆ ನಲುಗಿದ ಕೃಷಿಕರು
Published 17 ನವೆಂಬರ್ 2023, 5:26 IST
Last Updated 17 ನವೆಂಬರ್ 2023, 5:26 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನಲ್ಲಿ ಬರದ ಪರಿಸ್ಥಿತಿಯ ನಡುವೆಯೂ ಒಂದೆರಡು ಮಳೆಗೆ ಬಿತ್ತನೆಯಾಗಿದ್ದ ಮೆಕ್ಕೆಜೋಳ ಮತ್ತು ರಾಗಿ ಕಟಾವಿಗೆ ಬಂದಿದೆ. ಸಾಗುವಳಿದಾರರು ಸರ್ಕಾರದ ಬೆಂಬಲ ಬೆಲೆಯ ನಿರೀಕ್ಷೆಯಲ್ಲಿದ್ದಾರೆ. 

ಆದರೆ, ಈಗ ಕೊಯ್ಲಾದ ಫಸಲನ್ನು ರೈತರು ಕಡಿಮೆ ಬೆಲೆಗೆ ಮಾರಾಟ ಮಾಡಬೇಕಿದೆ. ಇದರಿಂದ ಲಾಭಾಂಶ ಮಧ್ಯವರ್ತಿಗಳ ಪಾಲಾಗುತ್ತಿದ್ದು, ಕೃಷಿಕರ ಕಳವಳವನ್ನು ಹೆಚ್ಚಿಸಿದೆ.

ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನ 3000 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿತ್ತು. ಮಳೆ ಕೊರತೆಯಿಂದ ರಾಗಿ ಮತ್ತು ಭತ್ತದ ನಾಟಿ ಪ್ರಮಾಣ ಕುಸಿದಿತ್ತು. 

ಮೆಕ್ಕೆಜೋಳದ ಕೊಯ್ಲಾಗುತ್ತಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿಲ್ಲ. ದಲ್ಲಾಳಿಗಳು ಪ್ರತಿ ಕ್ವಿಂಟಲ್‌ಗೆ ₹2,150 ಬೆಲೆ ನಿಗದಿಪಡಿಸಿದ್ದು, ಪ್ರತಿ ಕ್ವಿಂಟಾಲ್ ಮಾರಾಟದಿಂದ ಕೃಷಿಕರಿಗೆ ₹200 ರಿಂದ ₹300 ರೂಪಾಯಿ ನಷ್ಟವಾಗುತ್ತಿದೆ.

‘ಧಾರಣೆ ಗುಣಮಟ್ಟದ ಆಧಾರದ ಮೇಲೆ ಪ್ರತಿ ಕ್ವಿಂಟಲ್‌ಗೆ ₹2,200 ರಿಂದ ₹2600 ಇದೆ. ಆದರೆ, ಮಧ್ಯವರ್ತಿಗಳು ಕಡಿಮೆ ಬೆಲೆಗೆ ಖರೀದಿಸುತ್ತಿದ್ದಾರೆ. ಮೂರು ತಿಂಗಳ ಕಾಲ ಕ್ರಮವಹಿಸಿ ಬೆಳೆದ ಬೇಸಾಯಗಾರರು ಮಾರಾಟದ ಸಮಯದಲ್ಲಿ ನಷ್ಟ ಅನುಭವಿಸುವಂತೆ ಆಗಿದೆ. ಈ ಬಗ್ಗೆ ಸರ್ಕಾರ ಬೆಂಬಲ ಬೆಲೆ ಘೋಷಿಸಿ, ಕೃಷಿ ಉತ್ಪನ್ನ ಅನ್ಯರ ಪಾಲಾಗದಂತೆ ನೋಡಿಕೊಳ್ಳಬೇಕು’ ಎಂದು ಗೌಡಹಳ್ಳಿ ಪಂಚಾಯಿತಿ ವ್ಯಾಪ್ತಿಯ ರೈತ ಶಿವಣ್ಣ ಒತ್ತಾಯಿಸಿದರು.

‘ಕಳೆದ ಬಾರಿ ಉತ್ತಮ ಮಳೆಯಾಗಿತ್ತು. ಪಟ್ಟಣದಲ್ಲಿ ಭತ್ತ ಹಾಗೂ ಸಂತೆಮರಹಳ್ಳಿಯಲ್ಲಿ ರಾಗಿ ಖರೀದಿ ಕೇಂದ್ರ ತೆರೆಯಲಾಗಿತ್ತು. ಈ ಬಾರಿ ಸಣ್ಣ ಹಿಡುವಳಿದಾರರು ಕೊಳವೆಬಾವಿ ನೀರಿನಿಂದ ಮುಸುಕಿನಜೋಳ, ರಾಗಿ ಬೆಳೆದಿದ್ದಾರೆ. ಉತ್ತಮ ಧಾರಣೆಯ ನಿರೀಕ್ಷೆಯಲ್ಲಿ ಇದ್ದಾರೆ. ಆದರೆ, ಖರೀದಿ ಕೇಂದ್ರ ಇಲ್ಲದ ಪರಿಣಾಮ ರೈತರು ಪರಿತಪಿಸುವಂತೆ ಆಗಿದೆ’ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಹೊನ್ನೂರು ಪ್ರಕಾಶ್ ಅಳಲು ತೋಡಿಕೊಂಡರು.

ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆ ಎದುರಾಗಿದೆ. ಭತ್ತ, ರಾಗಿ ಬೆಳೆಗಾರರು ಸಂಕಷ್ಟದಲ್ಲಿ ಇದ್ದಾರೆ. ಕೃಷಿ ಉತ್ಪಾದನೆ ಕುಸಿದಿದೆ. ಈಗ ಕಟಾವಿಗೆ ಬಂದಿರುವ ಮೆಕ್ಕೆಜೋಳ ಮತ್ತು ರಾಗಿ ಉತ್ಪನ್ನಗಳು ನೀರಾವರಿ ಪ್ರದೇಶದಲ್ಲಿ ಬೆಳೆದಿದ್ದು, ನಿರೀಕ್ಷಿತ ಪ್ರಮಾಣದ ಉತ್ಪಾದನೆಯಾಗಿಲ್ಲ. ಕೃಷಿ ಇಲಾಖೆ ಮುಂದೆ ಖರೀದಿ ಕೇಂದ್ರ ಪ್ರಸ್ತಾವ ಇಲ್ಲ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಹೇಳಿದರು.

ಕೆಎಂಎಫ್‌ನಿಂದ ಖರೀದಿ

ಜಿಲ್ಲೆಯಲ್ಲಿ ಆಗದ ನೋಂದಣಿ ಚಾಮರಾಜನಗರ: ಈ ಮಧ್ಯೆ ಮೈಸೂರು ವಿಭಾಗದ ಜಿಲ್ಲೆಗಳ ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿ ಮಾಡುವುದಾಗಿ ಕೆಎಂಎಫ್‌ ಹೇಳಿತ್ತು.  ಕೆಎಂಎಫ್‌ನ ಹಾಸನ ಪಶು ಆಹಾರ ಘಟಕಕ್ಕೆ ಅವಶ್ಯವಿರುವ 30 ಸಾವಿರ ಟನ್ ಮೆಕ್ಕೆಜೋಳವನ್ನು ಹಾಸನ ಚಿಕ್ಕಮಗಳೂರು ಕೊಡಗು ಮೈಸೂರು ಮಂಡ್ಯ ಚಾಮರಾಜನಗರ ಜಿಲ್ಲಾ ವ್ಯಾಪ್ತಿಯ ರೈತರಿಂದ ಖರೀದಿಸಲಾಗುವುದು‌ ಎಂದು ಹೇಳಿತ್ತು. 13ರಿಂದ ಖರೀದಿ ಪ್ರಕ್ರಿಯೆ ಆರಂಭವಾಗಿದೆ.  ಆದರೆ ಜಿಲ್ಲೆಯಿಂದ ಈವರೆಗೆ ಯಾರೊಬ್ಬರೂ ನೋಂದಣಿ ಮಾಡಿಕೊಂಡಿಲ್ಲ ಎಂದು ಚಾಮುಲ್‌ ಮೂಲಗಳು ತಿಳಿಸಿವೆ. ₹2250ದರದಲ್ಲಿ (ಪ್ರತಿ ಕ್ವಿಂಟಲ್‌ಗೆ ಎರಡು ಗೋಣಿಚೀಲದ ಮೊತ್ತ ಮತ್ತು ಸಾಗಾಣಿಕೆ ಪ್ರೋತ್ಸಾಹವಾಗಿ ₹160 ಸೇರಿಸಿ ಒಟ್ಟು ₹2250) ಖರೀದಿ ಮಾಡಲು ಸರ್ಕಾರ ಕೆಎಂಎಫ್‌ಗೆ ಆದೇಶಿಸಿದೆ.  

‘ಫ್ರೂಟ್ಸ್‌ ಐಡಿ ಹೊಂದಿರುವ ರೈತರು ಹಾಲು ಉತ್ಪಾದಕರ ಸಂಘದ ಮೂಲಕ ನೋಂದಣಿ ಮಾಡಬೇಕು. ಒಂದು ಕೆಜಿಯಷ್ಟು ಮೆಕ್ಕೆಜೋಳವನ್ನು ನಮಗೆ ಕಳುಹಿಸಿದರೆ ಅದರ ಗುಣಮಟ್ಟವನ್ನು ಕೆಎಂಎಫ್‌ನ ಪಶುಘಟಕಗಳಲ್ಲಿ ಪರಿಶೀಲಿಸಿ ರೈತರಿಂದ ನೇರವಾಗಿ ಖರೀದಿಸಲಾಗುತ್ತದೆ. ರೈತರು ಫ್ರೂಟ್ಸ್‌ ತಂತ್ರಾಂಶದಲ್ಲಿ ನೋಂದಣಿಯಾಗಿರುವುದು ಕಡ್ಡಾಯ’ ಎಂದು ಚಾಮುಲ್‌ ವ್ಯವಸ್ಥಾಪಕ ನಿರ್ದೇಶಕ ರಾಜ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT