ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಹತ್ತಿ ಬಿತ್ತನೆ ಬೀಜಕ್ಕೆ ಮುಗಿಬಿದ್ದ ರೈತರು

ಬೇಡಿಕೆಗೆ ತಕ್ಕಂತೆ ಇಲ್ಲದ ಪೂರೈಕೆ, ಕೃಷಿ ಇಲಾಖೆ ವಿರುದ್ಧ ಕೃಷಿಕರ ಆಕ್ರೋಶ
Last Updated 4 ಏಪ್ರಿಲ್ 2023, 13:44 IST
ಅಕ್ಷರ ಗಾತ್ರ

ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ಮುಂಗಾರು ಪೂರ್ವ ಮಳೆ ಆರಂಭವಾಗುತ್ತಲೇ ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದು, ಬಿತ್ತನೆ ಬೀಜಗಳ ಕೊರತೆ ಎದುರಾಗಿದೆ.

ಪಟ್ಟಣ, ಬೇಗೂರು ಹೋಬಳಿ ವ್ಯಾಪ್ತಿಯಲ್ಲಿ ರೈತರು ಬಿತ್ತನೆ ಬೀಜಗಳಿಗಾಗಿ ಅಂಗಡಿಗಳ ಮುಂದೆ ಕಿ.ಮೀ ಸರತಿ ಸಾಲಿನಲ್ಲಿ ನಿಂತುಕೊಳ್ಳುತ್ತಿದ್ದಾರೆ. ಹತ್ತಿ ಬಿತ್ತನೆ ಬೀಜಕ್ಕೆ ಹೆಚ್ಚು ಬೇಡಿಕೆ ಇದ್ದು, ಬೇಡಿಕೆಯಷ್ಟು ಪೂರೈಕೆಯಾಗದಿರುವುದರಿಂದ ಬಿಕ್ಕಟ್ಟು ತಲೆದೋರಿದೆ. ಬಿತ್ತನೆ ಬೀಜ, ರಸಗೊಬ್ಬರ ಮಳಿಗೆಗಳಲ್ಲಿ ನೂಕುನುಗ್ಗಲು ಕಂಡು ಬಂದಿದೆ.

‘ಕಳೆದ ಬಾರಿ ರಾಜ್ಯದ ಎಲ್ಲ ಕಡೆಗಳಲ್ಲಿ ಹತ್ತಿ ಇಳುವರಿ ಕಡಿಮೆಯಾಗಿರುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆ ಪೂಜೆ ಪೂರೈಕೆಯಾಗಿಲ್ಲ. ಎಲ್ಲ ಕಡೆಗಳಲ್ಲಿ ಇದೇ ಪರಿಸ್ಥಿತಿ ಇದ್ದು, ಶೇ 50ರಷ್ಟು ಮಾತ್ರ ಪೂರೈಕೆಯಾಗುತ್ತಿದೆ. ಹೈದರಾಬಾದ್‌ನಿಂದ ಬರಬೇಕಾಗಿದ್ದು, ಇನ್ನೂ ಮೂರ್ನಾಲ್ಕು ದಿನಗಳು ಬೇಕು’ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ರೈತರ ಆಕ್ರೋಶ: ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ ಪೂರೈಕೆ ಮಾಡದ ಕೃಷಿ ಅಧಿಕಾರಿಗಳ ವಿರುದ್ಧ ರೈತರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಹಾಪ್‍ಕಾಮ್ಸ್ ಮಾರಾಟ ಮಳಿಗೆಯಲ್ಲಿ ಹತ್ತಿ ಬಿತ್ತನೆ ಖರೀದಿಸಲು ಸೋಮವಾರ ರೈತರ ಸಾಲು ಕಂಡು ಬಂದಿತ್ತು. ಅಲ್ಲಿ ದಾಸ್ತಾನು ಮುಗಿದಿರುವುದರಿಂದ ಮಂಗಳವಾರ ಖಾಸಗಿ ರಸಗೊಬ್ಬರ ಅಂಗಡಿಯಲ್ಲಿ ಮುಂದೆ ರೈತರು ಸಾವಿರ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂರಿದ್ದರು. ರೈತರನ್ನು ನಿಯಂತ್ರಿಸಲು ಪೊಲೀಸರೇ ಬರಬೇಕಾಯಿತು.

‘ತಾಲ್ಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಹೆಚ್ಚಾಗಿ ಹತ್ತಿ ಬೆಳೆಯುತ್ತಾರೆ. ಹೈಬ್ರಿಡ್ ತಳಿಯ ಹತ್ತಿ ಬೀಜವನ್ನು ರೈತರು ತಮ್ಮ ಬಳಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅಲ್ಲದೇ ಕೃಷಿ ಇಲಾಖೆಯಿಂದ ಹತ್ತಿಬೀಜ ಖರೀದಿಗೆ ಸಬ್ಸಿಡಿ ನೀಡುವುದಿಲ್ಲ. ಹೀಗಾಗಿ ಹಣಕೊಟ್ಟು ಖರೀದಿಸಬೇಕಾದ ಅನಿವಾರ್ಯತೆ ಇದೆ. ಆದರೆ ಹಣ ಕೊಟ್ಟರೂ ರಸಗೊಬ್ಬರ ಅಂಗಡಿಗಳಲ್ಲಿ ಹತ್ತಿಬೀಜ ಸಿಗುತ್ತಿಲ್ಲ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರತಿ ವರ್ಷ ಮುಂಗಾರುಪೂರ್ವದಲ್ಲೇ ತಾಲ್ಲೂಕಿನ ರೈತರು ಬಿತ್ತನೆ ಮಾಡುತ್ತಾರೆ ಎಂಬುದು ಗೊತ್ತಿದ್ದರೂ, ಅಧಿಕಾರಿಗಳು ಸಕಾಲದಲ್ಲಿ ದಾಸ್ತಾನು ಮತ್ತು ಮರಾಟಕ್ಕೆ ವ್ಯವಸ್ಥೆ ಮಾಡಿಲ್ಲ’ ಎಂದು ಮಗುವಿನಹಳ್ಳಿ ರೈತ ಚಿನ್ನಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್ ಪ್ರತಿಕ್ರಿಯಿಸಿ, ‘ಈಗಾಗಲೇ ಅವಶ್ಯಕತೆ ಇರುವ ಬಿತ್ತನೆ ಬೀಜಕ್ಕೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಚುನಾವಣಾ ಆಯೋಗದ ಅನುಮತಿ ನಂತರ ಎರಡು ಮೂರು ದಿನಗಳಲ್ಲಿ ರೈತರಿಗೆ ಬಿತ್ತನೆ ಬೀಜ ಸಿಗಲಿದೆ’ ಎಂದರು.

‘ರೈತರು ರೇವತಿ ಮಳೆಗೇ ಬಿತ್ತನೆ ಮಾಡಲು ಬಯಸುತ್ತಿದ್ದು, ಹತ್ತಿಗೆ ಬದಲಾಗಿ ಸೂರ್ಯಕಾಂತಿ ಬೆಳೆ ಬೆಳೆಯುವಂತೆ ರೈತರಲ್ಲಿ ಮನವಿ ಮಾಡುತ್ತಿದ್ದೇವೆ’ ಎಂದು ಜಂಟಿ ಕೃಷಿ ನಿರ್ದೇಶಕ ಮಧುಸೂದನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT