ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಬಿತ್ತನೆ ವಿಳಂಬ; ಬಿರುಸಿನ ಆರಂಭ

Published 20 ಮೇ 2024, 7:03 IST
Last Updated 20 ಮೇ 2024, 7:03 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಎರಡು ವಾರದಿಂದೀಚೆಗೆ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಯು ಬರದಿಂದ ತತ್ತರಿಸಿದ್ದ ರೈತರಲ್ಲಿ ಆಶಾ ಭಾವನೆ ಮೂಡಿಸಿದ್ದು, ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. 

ವಾರದಿಂದೀಚೆಗೆ ಜಿಲ್ಲೆಯಾದ್ಯಂತ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಬಿತ್ತನೆಯ ಬಳಿಕವೂ ಮಳೆಯಾಗುವ ನಿರೀಕ್ಷೆಯಲ್ಲಿ ಕೃಷಿಕರಿದ್ದಾರೆ. 

ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮತ್ತು ಮುಂಗಾರು ಅವಧಿಯಲ್ಲಿ  1,09,369 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿಯನ್ನು ಕೃಷಿ ಇಲಾಖೆ ಹಾಕಿಕೊಂಡಿದೆ. ವಾರದಿಂದ 5,792 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಶೇಕಡವಾರು ಲೆಕ್ಕಾಚಾರದಲ್ಲಿ ಶೇ 5.30ರಷ್ಟು ಸಾಧನೆಯಾಗಿದೆ. ಜಿಲ್ಲೆಯ ಐದು ತಾಲ್ಲೂಕುಗಳ ಪೈಕಿ ಗುಂಡ್ಲುಪೇಟೆಯಲ್ಲಿ ಅತಿ ಹೆಚ್ಚು 33,447 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದ್ದು, 3,933 ಹೆಕ್ಟೇರ್‌ನಲ್ಲಿ ಬಿತ್ತನೆ ನಡೆದು ಶೇ 11.76ರಷ್ಟು ಗುರಿ ಸಾಧನೆಯಾಗಿದೆ. 

ಉತ್ತಮ ಮಳೆಯ ನಿರೀಕ್ಷೆ: ಕಳೆದ ವರ್ಷ ಬೇಸಿಗೆ, ಮುಂಗಾರು ಅವಧಿಯಲ್ಲಿ ಬಿದ್ದ ಮಳೆಗೆ ಹೋಲಿಸಿದರೆ, ಈ ವರ್ಷ ಮಳೆಯ ಪ್ರಮಾಣ ಕಡಿಮೆಯೇ ಇದೆ. ಆದರೆ, ಹವಾಮಾನ ಇಲಾಖೆಯು ಈ ಬಾರಿ ಮುಂಗಾರು ಅವಧಿಯಲ್ಲಿ ಉತ್ತಮ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿರುವುದರಿಂದ ರೈತರ ನಿರೀಕ್ಷೆ ಗರಿಗೆದರಿದೆ. ಹಾಗಾಗಿ, ಹೆಚ್ಚು ಧೈರ್ಯದಿಂದ ಬಿತ್ತನೆ ಆರಂಭಿಸಿದ್ದಾರೆ. 

ಜಿಲ್ಲೆಯಲ್ಲಿ ಎರಡು ವಾರಗಳಿಂದ ಮಳೆಯಾಗುತ್ತಿದ್ದರೂ, ಎಲ್ಲ ಭಾಗಗಳಲ್ಲೂ ಒಂದೇ ರೀತಿಯಲ್ಲಿ ಆಗಿಲ್ಲ. ಕೆಲವು ಭಾಗಗಳಿಗೆ ಇನ್ನೂ ಸಾಧಾರಣ ವರ್ಷಧಾರೆಯಾಗಿಲ್ಲ. 

ಮೇ 1ರಿಂದ ಮೇ 17ರವರೆಗೆ ವಾಡಿಕೆಯಲ್ಲಿ ಜಿಲ್ಲೆಯಲ್ಲಿ 6.4 ಸೆಂ.ಮೀ ಮಳೆಯಾಗುತ್ತದೆ. ಈ ವರ್ಷ 6.16 ಸೆಂ.ಮೀ ಆಗಿದೆ.

ಜನವರಿಯಿಂದ ಮೇ 17ರವರೆಗಿನ ಲೆಕ್ಕ ತೆಗೆದುಕೊಂಡರೆ, ಸಾಮಾನ್ಯವಾಗಿ ಐದೂವರೆ ತಿಂಗಳ ಅವಧಿಯಲ್ಲಿ 15.36 ಸೆಂ.ಮೀ ಮಳೆಯಾಗುತ್ತದೆ. ಈ ಬಾರಿ 7.26 ಸೆಂ.ಮೀನಷ್ಟು ಮಾತ್ರ ಮಳೆಯಾಗಿದೆ. ಅಂದರೆ,  ಶೇ 52ರಷ್ಟು ಮಳೆ ಕೊರತೆ ಇದೆ. ‌ಕಳೆದ ವರ್ಷ ಇದೇ ಅವಧಿಯಲ್ಲಿ 13.49 ಸೆಂ.ಮೀನಷ್ಟು ವರ್ಷಧಾರೆಯಾಗಿತ್ತು. ಜಿಲ್ಲೆಯ ಐದೂ ತಾಲ್ಲೂಕುಗಳಲ್ಲಿ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. 

ಬಿತ್ತನೆ ವಿಳಂಬ: ಬಿಸಿಲಿನ ತೀವ್ರತೆ ಬೆಂಡಾಗಿದ್ದ ಭೂಮಿಗೆ, ತೀವ್ರ ತಾಪಮಾನದ ಕಾರಣದಿಂದ ತತ್ತರಿಸಿದ್ದ ಜನರಿಗೆ ಈಗ ಬೀಳುತ್ತಿರುವ ಮಳೆ ತಂಪೆರೆದಿದ್ದರೂ, ಕೃಷಿ ಸಾಕಾಗುವಷ್ಟು ಬಂದಿಲ್ಲ ಎಂಬುದು ಬಹುತೇಕ ರೈತರ ಅಭಿಮತ. ಮುಂದೆ ಬರುವ ನಿರೀಕ್ಷೆಯಲ್ಲಿ ಜಮೀನನ್ನು ಹದಗೊಳಿಸುತ್ತಿದ್ದಾರೆ. ಕೊಳವೆ ಬಾವಿ ಸೌಲಭ್ಯ ಉಳ್ಳವರು ಧೈರ್ಯವಾಗಿ ಬಿತ್ತನೆ ನಡೆಸುತ್ತಿದ್ದಾರೆ. ಮಳೆಯನ್ನೇ ಅವಲಂಬಿಸಿರುವ ಎಲ್ಲ ರೈತರು ಇನ್ನೂ ಬಿತ್ತನೆಗೆ ಮುಂದಾಗಿಲ್ಲ. ಬಿತ್ತನೆ ಬೀಜ, ರಸಗೊಬ್ಬರ ಖರೀದಿ, ಮಣ್ಣನ್ನು ಹದಗೊಳಿಸುತ್ತಿದ್ದಾರೆ. ಮಳೆ ಮುಂದುವರಿದರೆ ಬಿತ್ತನೆ ಮಾಡಲಿದ್ದಾರೆ. 

‘ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಮುಂಗಾರು ಪೂರ್ವ ಬಿತ್ತನೆ ವಿಳಂಬವಾಗಿದೆ. ಸಾಮಾನ್ಯವಾಗಿ ಸೂರ್ಯಕಾಂತಿ ಸೇರಿದಂತೆ ಇತರೆ ಬೆಳೆಗಳ ಬಿತ್ತನೆ ಏಪ್ರಿಲ್‌ನಲ್ಲೇ ಆರಂಭವಾಗುತ್ತದೆ. ಈ ಬಾರಿ ಮಳೆಯಾಗದಿರುವುದರಿಂದ ಒಂದು ತಿಂಗಳಿನಷ್ಟು ವಿಳಂಬವಾಗಿದೆ’ ಎಂದು ಹೇಳುತ್ತಾರೆ ರೈತರು.

ಖರೀದಿ ಭರಾಟೆ: ಮುಂಗಾರು ಪೂರ್ವ ಅವಧಿಯಲ್ಲಿ ರೈತರು ಸೂರ್ಯಕಾಂತಿ, ಅಲಂಸದೆ, ಉದ್ದು, ಹೆಸರು, ಹೆಚ್ಚು ಬಿತ್ತನೆ ಮಾಡುತ್ತಾರೆ. ರಾಗಿ, ಜೋಳ, ಹುರುಳಿಯನ್ನು ಬಿತ್ತನೆ ಮಾಡುವವರೂ ಇದ್ದಾರೆ. ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಸದ್ಯ ಸೂರ್ಯಕಾಂತಿ, ಹೆಸರು, ಉದ್ದು, ಅಲಸಂತೆ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ. ರೈತರು ದೊಡ್ಡ ಸಂಖ್ಯೆಯಲ್ಲಿ ರೈತಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಖರೀದಿ ಮಾಡುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಿತ್ತನೆ ಬೀಜದ ಬೆಲೆ ಹೆಚ್ಚಾಗಿದೆ ಎಂಬುದು ರೈತರ ಅಭಿಪ್ರಾಯ. 

ಬಿತ್ತನೆ ಬೀಜ ಹಾಗೂ ರೈತರಿಗೆ ಬೇಕಾದಷ್ಟು ರಸಗೊಬ್ಬರ ದಾಸ್ತಾನು ಇದೆ ಎಂಬುದು ಅಧಿಕಾರಿಗಳ ಹೇಳಿಕೆ. 

 ಮಳೆ ನಿರೀಕ್ಷೆಯಲ್ಲಿ ಅನ್ನದಾತ

ಯಳಂದೂರು ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಒಂದೆರಡು ಮಳೆ ಸುರಿದಿದೆ. ಕಾಡಂಚಿನ ಪ್ರದೇಶ ಮತ್ತು ಬಿಳಿಗಿರಿರಂಗನಬೆಟ್ಟ ಸುತ್ತಮುತ್ತ ಸಾಧಾರಣ ಮಳೆಯಾಗಿದೆ. ಕೃಷಿಕರು ಭೂಮಿ ಸಿದ್ಧತೆಗೆ ತೊಡಗಿದ್ದು, ದ್ವಿದಳ ಧಾನ್ಯ ಮತ್ತು ಕಬ್ಬು ಬೆಳೆಗಳಿಗೆ ಭೂಮಿ ಹಸನು ಗೊಳಿಸುವ ಕೆಲಸಕ್ಕೆ ಮುಂದಾಗಿದ್ದು, ಮಳೆ ನಿರೀಕ್ಷೆಯಲ್ಲಿ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ.

ಕೃಷಿ ಇಲಾಖೆ ಮುಂಗಾರು ಪೂರ್ವದಲ್ಲಿ 3,500 ಹೆಕ್ಟೇರ್ ಪ್ರದೇಶಕ್ಕೆ ಬಿತ್ತನೆ  ಬೀಜ ವಿತರಿಸಲು ಸಿದ್ಧತೆ ನಡೆಸಿದೆ. ಸದ್ಯ ನೀರಾವರಿ ಭೂಮಿಗಳಲ್ಲಿ ನಾಟಿ ಪ್ರಕ್ರಿಯೆ ಆರಂಭವಾಗಿದೆ.

‘1 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಉದ್ದು, ಹೆಸರು 750, ಅಲಸಂದೆ 250, ರಾಗಿ 500 ಹೆಕ್ಟೇರ್ ಪ್ರದೇಶಕ್ಕೆ ಬಿತ್ತನೆ ಬೀಜ ವಿತರಿಸುವ ಗುರಿ ಹೊಂದಲಾಗಿದೆ. ಜೂನ್ ಆರಂಭದಲ್ಲಿ ಮೆಕ್ಕೆಜೋಳ ಮತ್ತು ಸೆಣಬು ಬೀಜ ಪೂರೈಸಲಾಗುವುದು. ರೈತರು ದ್ವಿದಳ ಧಾನ್ಯ ಕೊಳ್ಳಲು ಆಸಕ್ತಿ ತೋರಿದ್ದಾರೆ’ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಹೇಳಿದರು.

ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು

ಗುಂಡ್ಲುಪೇಟೆ: ತಾಲ್ಲೂಕಿನ ಹಂಗಳ, ಕಸಬಾ, ತೆರಕಣಾಂಬಿ ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರುಮಳೆ ಉತ್ತಮವಾಗಿ ಸುರಿದಿರುವ ಕಾರಣ ಭೂಮಿ ಹದ ಮಾಡಿಕೊಂಡು ರೈತರು ಹೆಚ್ಚಿನ ಪ್ರಮಾಣದಲ್ಲಿ ಸೂರ್ಯಕಾಂತಿ, ಜೋಳ, ಅಲಸಂದೆ ಸೇರಿದಂತೆ ದ್ವಿದಳ ಧಾನ್ಯಗಳ ಬಿತ್ತನೆಯಲ್ಲಿ ತೊಡಗಿದ್ದಾರೆ. ಕೆಲವೆಡೆ ಜಾನುವಾರು ಹಾಗು ಟ್ರ್ಯಾಕ್ಟರ್‌ಗಳು ಸಿಗದಿರುವುದರಿಂದ ಬಿತ್ತನೆ ಕೆಲಸ ಬಾಕಿ ಉಳಿದಿದೆ.

ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ ಇದೆ. ತಾಲೂಕಿನಲ್ಲಿ ಮಳೆ ಕೊರತೆ ಉಂಟಾಗಿದ್ದ ಕಾರಣ ಕೃಷಿ ಇಲಾಖೆ ಅಧಿಕಾರಿ ಹೆಚ್ಚಿನ ನಿಗಾ ವಹಿಸಿ ಮಳೆಗು ಮುನ್ನವೇ ಬಿತ್ತನೆ ಬೀಜಗಳನ್ನು ಶೇಖರಿಸಿಟ್ಟಿದ್ದರು. ಇದೀಗ ಕಳೆದೊಂದು ವಾರದಿಂದ ಉತ್ತಮ ಮಳೆಯಾದ ಪರಿಣಾಮ ಪಟ್ಟಣದ ಕೃಷಿ ಇಲಾಖೆ ಕಚೇರಿ, ಹಂಗಳ, ತೆರಕಣಾಂಬಿ, ಬೇಗೂರು ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬೇಡಿಕೆಗನುಗುಣವಾಗಿ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗುತ್ತಿದೆ. ಇದರಿಂದ ಈ ಬಾರಿ ಬಿತ್ತನೆ ಬೀಜ ಹಾಗೂ ಗೊಬ್ಬರಕ್ಕೆ ಯಾವುದೇ ಸಮಸ್ಯೆ ಉಂಟಾಗಿಲ್ಲ.

ವಿವಿಧ ಬೆಳೆಗಳ ಬಿತ್ತನೆ

ಹನೂರು ತಾಲೂಕಿನಾದ್ಯಂತ ಹದಿನೈದು ದಿನಗಳಿಂದ ಆಗಾಗ ಮಳೆಯಾಗುತ್ತಿದ್ದು ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆ ಗರಿಗೆದರಿದೆ. 

ಹನೂರು ಭಾಗದಲ್ಲಿ ಮುಖ್ಯವಾಗಿ ರಾಗಿ, ಜೋಳ ಹುರಳಿ ಫಸಲು ಮಳೆಯಾಶ್ರಿತ ಬೆಳೆಗಳಾಗಿದ್ದು  ಜೂನ್, ಜುಲೈ ತಿಂಗಳಲ್ಲಿ ಬಿತ್ತನೆ ಕಾರ್ಯ ಆರಂಭವಾಗುತ್ತದೆ. ಇದಕ್ಕೂ ಮುನ್ನ ಮುಂಗಾರಿನಲ್ಲಿ ಕೆಲವು ಕಡೆ ಕಂಬು(ಸಜ್ಜೆ), ಎಳ್ಳನ್ನು ಬಿತ್ತನೆ ಮಾಡಲಾಗುತ್ತದೆ.

ಹನೂರು ಹೋಬಳಿ ವ್ಯಾಪ್ತಿಯ ಮಲ್ಲಯ್ಯನಪುರ, ಕೌದಳ್ಳಿ, ಎಲ್ಲೇಮಾಳ, ಡಿ.ಎಂ.ಸಮುದ್ರ ಹಾಗೂ ಲೊಕ್ಕನಹಳ್ಳ ಮತ್ತು ರಾಮಾಪುರ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಈಗಾಗಲೇ ಎಳ್ಳನ್ನು ಬಿತ್ತನೆ ಮಾಡಲಾಗಿದೆ. ಉಳಿದ ಕಡೆ ರಾಗಿ ಹಾಗೂ ಜೋಳ ಬಿತ್ತನೆಗಾಗಿ ಭೂಮಿಯನ್ನು ಹಸನು ಮಾಡುತ್ತಿದ್ದಾರೆ.

ನಿರ್ವಹಣೆ: ಸೂರ್ಯನಾರಾಯಣ ವಿ.

ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಮಹದೇವ್‌ ಹೆಗ್ಗವಾಡಿಪುರ, ಮಲ್ಲೇಶ ಎಂ., ಅವಿನ್‌ ಪ್ರಕಾಶ್‌ ವಿ, ಬಿ.ಬಸವರಾಜು

ಚಾಮರಾಜನಗರ ತಾಲ್ಲೂಕಿನ ಕೂಡ್ಲೂರು ಗ್ರಾಮದ ಜಮೀನೊಂದರಲ್ಲಿ ಉಳುಮೆ ಮಾಡಿದ ಹೊಲದಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡುತ್ತಿರುವ ಮಹಿಳೆಯರು
ಚಾಮರಾಜನಗರ ತಾಲ್ಲೂಕಿನ ಕೂಡ್ಲೂರು ಗ್ರಾಮದ ಜಮೀನೊಂದರಲ್ಲಿ ಉಳುಮೆ ಮಾಡಿದ ಹೊಲದಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡುತ್ತಿರುವ ಮಹಿಳೆಯರು
ಸಂತೇಮರಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ದಾಸ್ತಾನು ಇಟ್ಟಿರುವುದು 
ಸಂತೇಮರಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ದಾಸ್ತಾನು ಇಟ್ಟಿರುವುದು 
ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಜಮೀನೊಂದರಲ್ಲಿ ಟ್ರ್ಯಾಕ್ಟರ್‌ ಮೂಲಕ ಉಳುಮೆ ಮಾಡುತ್ತಿರುವುದು 
ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಜಮೀನೊಂದರಲ್ಲಿ ಟ್ರ್ಯಾಕ್ಟರ್‌ ಮೂಲಕ ಉಳುಮೆ ಮಾಡುತ್ತಿರುವುದು 

ರೈತರು ಏನಂತಾರೆ?

ಬಿತ್ತನೆ ವಿಳಂಬವಾಗಿದೆ ಅಶ್ವಿನಿ ಮಳೆಗೆ ಸೂರ್ಯಕಾಂತಿ ಬಿತ್ತನೆ ಮಾಡಬೇಕು. ಈ ಬಾರಿ ಒಂದು ತಿಂಗಳು ವಿಳಂಬವಾಗಿದೆ. ನಾಲ್ಕೈದು ದಿನ ಮಳೆ ಬಂದರೆ ಸಾಲದು. ಇನ್ನಷ್ಟು ಮಳೆಯ ಅಗತ್ಯವಿದೆ. ವರ್ಷಧಾರೆಯಾಗುವ ನಿರೀಕ್ಷೆಯಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡುತ್ತಿದ್ದೇವೆ.

–ವಿಜಯ್ ಕುಮಾರ್‌ ಕೂಡ್ಲೂರು ಚಾಮರಾಜನಗರ ತಾಲ್ಲೂಕು

ಬಿತ್ತನೆ ಬೀಜ ದುಬಾರಿ ಸೂರ್ಯಕಾಂತಿ ಬಿತ್ತನೆ ಮಾಡಲು ಸಿದ್ಧತೆ ನಡೆಸುತ್ತಿದ್ದೇನೆ. ಮಳೆ ಬರುವ ನಿರೀಕ್ಷೆ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಿತ್ತನೆ ಬೀಜದ ಬೆಲೆ ₹500 ಹೆಚ್ಚಾಗಿದೆ. ಹೋದ ವರ್ಷ ರೈತ ಸಂಪರ್ಕ ಕೇಂದ್ರದಲ್ಲಿ ಎರಡು ಕೆಜಿಯ ಸೂರ್ಯಕಾಂತಿ ಬಿತ್ತನೆ ಬೀಜ ಪೊಟ್ಟಣಕ್ಕೆ ₹1250 ಇತ್ತು. ಈ ವರ್ಷ ಸಬ್ಸಿಡಿ ಕಳೆದು ₹1720 ನೀಡಬೇಕಾಗಿದೆ. 

–ಡಿ.ಸೋಮಣ್ಣ ಸೋಮವಾರಪೇಟೆ ಚಾಮರಾಜನಗರ ತಾಲ್ಲೂಕು 

ಸಕಾಲದಲ್ಲಿ ವಿತರಿಸಿ ಮುಂಗಾರು ಆರಂಭಕ್ಕೂ ಮೊದಲು ಕೃಷಿ ಇಲಾಖೆಯವರು ರೈತರಿಗೆ ಮುಂಜಾಗ್ರತಾ ಕ್ರಮವಾಗಿ ವ್ಯವಸಾಯ ಸಲಕರಣೆಗಳು ಬಿತ್ತನೆ ಬೀಜಗಳು ಹಾಗೂ ಕೀಟ ನಾಶಕ ಔಷಧಿಗಳನ್ನು ಶೇಖರಿಸಿಕೊಂಡಿರಬೇಕು. ಮಳೆ ಬಿದ್ದ ನಂತರ ಸಕಾಲದಲ್ಲಿ ವಿತರಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಮಳೆ ಬಂದ ನಂತರ ವಿತರಿಸಿದರೆ ಪ್ರಯೋಜನವಾಗುವುದಿಲ್ಲ.

–ಲೋಕೇಶ್ ಹೊನ್ನೇಗೌಡನ ಹುಂಡಿ ಚಾಮರಾಜನಗರ ತಾಲ್ಲೂಕು

ಮಳೆ ಬಂದಿಲ್ಲ ಹೊನ್ನೂರು ಅಂಬಳೆ ಕೆಸ್ತೂರು ಸುತ್ತಮುತ್ತ ಸಣ್ಣ ಮಳೆಯಾಗಿದೆ. ಭೂಮಿ ಇನ್ನೂ ತಂಪಾಗಿಲ್ಲ. ಉತ್ತಮ ಮಳೆ ಸುರಿದಲ್ಲಿ ಮಾತ್ರ ಮುಂಗಾರಿಗೆ ಭೂಮಿ ಸಿದ್ಧ ಪಡಿಸುವ ಕೆಲಸಕ್ಕೆ ವೇಗ ಸಿಗಲಿದೆ. ಮಳೆ ಕೊರತೆಯಾದಲ್ಲಿ ಮತ್ತೆ ಬೇಸಾಯ ಹಿನ್ನಡೆಯಾಗಲಿದೆ.

–ರಂಗಸ್ವಾಮಿ ಕೆಸ್ತೂರು ಯಳಂದೂರು ತಾಲ್ಲೂಕು

ಮಳೆಯ ನಿರೀಕ್ಷೆಯಲ್ಲಿ ಜಕ್ಕಳಿ ಭಾಗದಲ್ಲಿ ನಮಗೆ ನೀರಿನ ಕೊರತೆ ಇದೆ. ಕೆಲವು ದಿನಗಳಿಂದ ಮಳೆಯಾಗುತ್ತಿರುವ ಕಾರಣ ನಮ್ಮ ಭಾಗದಲ್ಲಿ ಅಲಸಂದೆ ಉರುಳಿ ಉದ್ದು ಬಿತ್ತನೆ ಮಾಡುತ್ತಿದ್ದೇವೆ.  ಮಳೆ ಬಂದರೇನೇ ನಾವು ಕೃಷಿ ಮಾಡಲು ಸಾಧ್ಯ. ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿದ್ದೇವೆ.

–ಜೀವನ್‌ಸನ್ ಜಕ್ಕಳಿ ಕೊಳ್ಳೇಗಾಲ ತಾಲ್ಲೂಕು

ಇನ್ನೂ ಮೊಳಕೆ ಬಂದಿಲ್ಲ ಎರಡು ಎಕರೆಯಲ್ಲಿ ಎಳ್ಳು ಬಿತ್ತನೆ ಮಾಡಿದ್ದೇನೆ. ಸಮರ್ಪಕ ಮಳೆಯಾಗಿದ್ದರೆ ಇಷ್ಟೊತ್ತಿಗಾಗಲೇ ಮೊಳಕೆ ಬರಬೇಕಿತ್ತು. ಆದರೆ ಇನ್ನು ಮೊಳಕೆ ಬಂದಿಲ್ಲ. ಮಳೆಗಾಗಿ ಕಾಯುತ್ತಿದ್ದೇನೆ.

– ರಾಜು ಮಲ್ಲಯ್ಯನಪುರ ಹನೂರು ತಾಲ್ಲೂಕು

ಬಿತ್ತನೆ ಬೀಜ ಗೊಬ್ಬರ ದಾಸ್ತಾನು ಇದೆ
ಮಳೆಯಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಬಿತ್ತನೆ ಆರಂಭವಾಗಿದೆ. ಸೂರ್ಯಕಾಂತಿ ಅಲಸಂದೆ ಉದ್ದು ಹೆಸರು ಬಿತ್ತನೆ ನಡೆಯುತ್ತಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜಗಳನ್ನು ವಿತರಿಸಲಾಗುತ್ತಿದೆ. ನಮ್ಮಲ್ಲಿ ಸಾಕಷ್ಟು ದಾಸ್ತಾನು ಇದೆ. ರಸಗೊಬ್ಬರದ ಸಂಗ್ರಹವೂ ಇದೆ. ಯಾವುದೇ ಸಮಸ್ಯೆ ಇಲ್ಲ –ಆಬೀದ್‌ ಎಸ್‌.ಎಸ್‌ ಜಂಟಿ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT