ಶುಕ್ರವಾರ, ಜನವರಿ 15, 2021
21 °C
ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಹೇಳಿಕೆ

ರೈತ ಹೋರಾಟಕ್ಕೆ ಬೆಂಬಲ: ‌26ರಂದು ಬೆಂಗಳೂರಿನಲ್ಲಿ ಟ್ರ್ಯಾಕ್ಟರ್‌, ಬೈಕ್‌ ರ‍್ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ರೈತ ವಿರೋಧಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು ಎಂದು ದೆಹಲಿ ರೈತರು ನಡೆಸುವ ಹೋರಾಟವನ್ನು ಬೆಂಬಲಿಸಿ ಗಣರಾಜ್ಯೋತ್ಸವ (ಜ.26) ದಿನದಂದು ಬೆಂಗಳೂರಿನಲ್ಲಿ ಬೃಹತ್ ಟ್ರ್ಯಾಕ್ಟರ್ ಹಾಗೂ ಬೈಕ್ ರ‍್ಯಾಲಿ ನಡೆಸಲಾಗುವುದು’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ಬುಧವಾರ ಹೇಳಿದರು.

ನಗರದ‌ಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರ‍್ಯಾಲಿ ಮೂಲಕ ರಾಜಧಾನಿಯಲ್ಲಿ ಪರ್ಯಾಯ ಗಣರಾಜ್ಯೋತ್ಸವ ಪೆರೇಡ್‌ ನಡೆಸಲಾಗುವುದು. ಈ ಹೋರಾಟದಲ್ಲಿ ಮೈಸೂರು, ಚಾಮರಾಜನಗರ ಜಿಲ್ಲೆಗಳಿಂದ ಸಾವಿರಾರು ರೈತರು ಭಾಗವಹಿಸಲಿದ್ದಾರೆ’ ಎಂದರು.

‘ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನುಗಳ ಜಾರಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದು ರೈತರ ಹೋರಾಟಕ್ಕೆ ಜಯವಾಗಿದೆ. ಆದರೆ, ತಜ್ಞರ ಸಮಿತಿ ರಚಿಸಿರುವುದು ಕುರಿಯನ್ನು ಕಾಯಲು ತೋಳವನ್ನು ಕಾವಲಿಗೆ ಇಟ್ಟಂತೆ ಆಗಿದೆ. ಆದ್ದರಿಂದ ಈ ಸಮಿತಿಯನ್ನು ರದ್ದುಗೊಳಿಸಿ ರೈತ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಿ ವರದಿ ಪಡೆಯಬೇಕು’ ಎಂದು ಅವರು ಆಗ್ರಹಿಸಿದರು. 

‘ಸಮಿತಿಯಲ್ಲಿರುವ ತಜ್ಞರು ಸರ್ಕಾರದ ‌ಕಾನೂನುಗಳನ್ನು ರಚಿಸುವಲ್ಲಿ ಹಾಗೂ ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದವರೇ ಇದ್ದಾರೆ. ಇವರಿಂದಾಗಿ ರೈತರ ಒತ್ತಾಯಗಳ ಬಗ್ಗೆ ನಿಷ್ಪಕ್ಷಪಾತ ವರದಿ ತಯಾರಿಸುವುದು ಸಾಧ್ಯವಿಲ್ಲ. ಪರಿಣಿತರು ಹಾಗೂ ಹೋರಾಟ ನಿರತ ರೈತ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಬೇಕು’ ಎಂದು ಒತ್ತಾಯಿಸಿದರು.  

‘ಸುಪ್ರೀಂಕೋರ್ಟ್ ತೀರ್ಪು, ದೇಶದ ರೈತ ಸಂಘಟನೆಗಳ ಮುಂದಿನ ಹೋರಾಟದ ರೂಪುರೇಷೆಗಳು ಹಾಗೂ ಕೇಂದ್ರ, ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಸುಗ್ರೀವಾಜ್ಞೆಯ ಕಾಯ್ದೆಗಳ ಬಗ್ಗೆ ಇದೇ 16ರಂದು ಬೆಂಗಳೂರಿನ ಕೊಂಡೋಜಿ ಬಸಪ್ಪ ಸಭಾಂಗಣದಲ್ಲಿ ಮುಕ್ತ ಸಂವಾದ ನಡೆಯಲಿದೆ. ರಾಷ್ಟ್ರಮಟ್ಟದ ಹೋರಾಟ ನಿರತ ರೈತ ಮುಖಂಡರಾದ ಯೋಗೇಂದ್ರ ಯಾದವ್, ಯದುವೀರ್‌ಸಿಂಗ್, ಬಿಜು, ಐಯ್ಯಕಣ್ಣನ್ ಸೇರಿದಂತೆ ಇತರರು ಇದರಲ್ಲಿ ಭಾಗವಹಿಸಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು. 

ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಿಹಳ್ಳಿ ದೇವರಾಜ್, ತಾಲ್ಲೂಕು ಅಧ್ಯಕ್ಷ ಎಚ್.ಮೂಕಳ್ಳಿ ಮಹದೇವಸ್ವಾಮಿ, ರೈತ ಮುಖಂಡರಾದ ಎಚ್.ಡಿ.ಕೋಟೆ ಮಹದೇವಸ್ವಾಮಿ, ಆಲೂರು ಸಿದ್ದರಾಜು, ಕಿನಕಹಳ್ಳಿ ಬಸವಣ್ಣ, ಗೌಡಹಳ್ಳಿ ಷಡಕ್ಷರಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು