ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಸೆಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಮಾವ: ಕೊಳ್ಳೇಗಾಲದಲ್ಲಿ ಘಟನೆ

Last Updated 6 ಮಾರ್ಚ್ 2021, 16:27 IST
ಅಕ್ಷರ ಗಾತ್ರ

ಕೊಳ್ಳೇಗಾಲ: ನಗರದ ಆದರ್ಶ ನಗರದಲ್ಲಿ ಶನಿವಾರ ಸಂಜೆ ವ್ಯಕ್ತಿಯೊಬ್ಬರು ಸೊಸೆಯ ಕತ್ತನ್ನು ಚಾಕುವಿನಿಂದ ಕೊಯ್ದು, ಕೊಲೆ ಮಾಡಿದ ನಂತರ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆದರ್ಶ ನಗರ ಬಡಾವಣೆ ನಿವಾಸಿ ಚಿಕ್ಕುಚಯ್ಯ (55) ಹಾಗೂ ಅವರ ಮಗನ ಪತ್ನಿ ಸುಮಿತ್ರ (30) ಮೃತಪಟ್ಟವರು. ಈ ಘಟನೆಗೆ ಏನು ಕಾರಣ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೌಟುಂಬಿಕ ಕಲಹವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಸುಮಿತ್ರ ಅವರಿಗೆ ಅನೈತಿಕ ಸಂಬಂಧ ಇತ್ತು. ಈ ವಿಚಾರವಾಗಿ ಮನೆಯಲ್ಲಿ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.

ಚಿಕ್ಕುಚಯ್ಯ ಅವರು ಮರಣಪೂರ್ವ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ರದಲ್ಲಿದೇನಿದೆ ಎಂಬುದನ್ನು ಪೊಲೀಸರು ಬಹಿರಂಗ ಪಡಿಸಿಲ್ಲ. ಕೂಲಂಕಷ ತನಿಖೆಯ ಬಳಿಕ ನಿಖರ ಮಾಹಿತಿ ಸಿಗಲಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್‌ ಅವರು ಹೇಳಿದ್ದಾರೆ.

ಚಿಕ್ಕುಚಯ್ಯ ಅವರ ಮಗ ಸುರೇಂದ್ರ ಅವರು ಎಂಟು ವರ್ಷಗಳ ಹಿಂದೆ ತಮಿಳುನಾಡಿನ ಊಟಿಯ ಸುಮಿತ್ರ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಆರು ಮತ್ತು ನಾಲ್ಕು ವರ್ಷ ವಯಸ್ಸಿನ ಇಬ್ಬರು ಗಂಡು ಮಕ್ಕಳಿದ್ದಾರೆ. ಸುರೇಂದ್ರ ಅವರು ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಡಿ ಗ್ರೂಪ್‌ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಶನಿವಾರ ಮಧ್ಯಾಹ್ನದ ಮೇಲೆ ಮನೆಯಲ್ಲಿ ಚಿಕ್ಕುಚಯ್ಯ ಹಾಗೂ ಸುಮಿತ್ರ ಇಬ್ಬರೇ ಇದ್ದಾಗ ಘಟನೆ ನಡೆದಿದೆ. ಚಿಕ್ಕುಚಯ್ಯ ಅವರ ಪತ್ನಿ ಇಬ್ಬರು ಮೊಮ್ಮಕ್ಕಳೊಂದಿಗೆ ಆಸ್ಪತ್ರೆಗೆ ತೆರಳಿದ್ದರು.

ಸಂಜೆ ಸುರೇಂದ್ರ ಅವರು ಕೆಲಸ ಮುಗಿಸಿ ಮನೆಗೆ ಬಂದ ನಂತರ ಘಟನೆ ಬೆಳಕಿಗೆ ಬಂದಿದೆ. ಸುರೇಂದ್ರ ಅವರು ಬಾಗಿಲು ಬಡಿದರೂ, ಕರೆ ಮಾಡಿದರೂ ಯಾರೂ ಬಾಗಿಲು ತೆಗೆಯದೇ ಇದ್ದಾಗ ಹಿಂಬಾಗಿಲಿನಿಂದ ಮನೆಯೊಳಕ್ಕೆ‍ಪ್ರವೇಶಿಸಿದ್ದಾರೆ.

ಮನೆಯ ಹಾಲ್‌ನಲ್ಲಿ ಪತ್ನಿ ಸುಮಿತ್ರ ಅವರ ಮೃತದೇಹ ರಕ್ತದ ಮಡುವಿನಲ್ಲಿತ್ತು. ಸ್ಥಳದಲ್ಲೇ ಚಾಕು ಹಾಗೂ ಟ್ಯಾಬ್ಲೆಟ್‌ ಬಿದ್ದಿತ್ತು. ಸುರೇಂದ್ರ ಅವರು ತಂದೆಯ ಕೊಠಡಿಗೆ ಹೋಗಿ ನೋಡಿದಾಗ ಅವರ ಮೃತದೇಹ ನೇಣುಹಾಕಿಕೊಂಡ ಸ್ಥಿತಿಯಲ್ಲಿ ನೇತಾಡುತ್ತಿತ್ತು. ಚಿಕ್ಕುಚಯ್ಯ ಅವರ ಅಂಗಿಯಲ್ಲಿ ರಕ್ತದ ಕಲೆಗಳಿದ್ದವು.ನಂತರ ಅವರು ಸ್ಥಳೀಯರ ನೆರವಿನಿಂದ ಠಾಣೆಗೆ ವಿಷಯ ತಿಳಿಸಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಅನಿತಾ.ಬಿ.ಹದ್ದಣ್ಣನವರ್, ಡಿವೈಎಸ್ಪಿ ನಾಗರಾಜು, ಗ್ರಾಮಾಂತರ ಪೊಲೀಸ್ ಠಾಣೆಯ ಎಸ್.ಐ ಅಶೋಕ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಖಾರದ ಪುಡಿ ಎರಚಿ, ಕತ್ತು ಕೊಯ್ದು ಕೊಲೆ

ಘಟನೆಗೂ ಮುನ್ನ ಮನೆಯಲ್ಲಿ ಜಗಳ ಆಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸುಮಿತ್ರ ಕಿರುಚಾಡುವುದು ಸುತ್ತಮುತ್ತಲಿನವರಿಗೆ ಕೇಳಿಸಿದೆ. ಆದರೆ, ಚಿಕ್ಕುಚಯ್ಯ ಅವರ ಮನೆಯಲ್ಲಿ ಆಗಾಗ ಜಗಳವಾಗುತ್ತಿದ್ದುದರಿಂದ ಸ್ಥಳೀಯರು ಯಾರೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

‘ಚುಕ್ಕುಚ್ಚಯ್ಯ ಅವರು ಸುಮಿತ್ರ ಅವರ ಕತ್ತು ಕೊಯ್ಯುವುದಕ್ಕೂ ಮುನ್ನ ಆಕೆಯ ಕಣ್ಣಿಗೆ ಖಾರದ ಪುಡಿ ಎರಚಿದ್ದರು. ಅದರ ಉರಿ ತಾಳಲಾರದೆ ಅವರು ಕಿರುಚಾಡಿರುವ ಸಾಧ್ಯತೆ ಇದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಒಳಗಡೆ ಚಿಲಕ ಹಾಕಿಕೊಂಡು ಸುಮಿತ್ರ ಕತ್ತಿಗೆ ಚಾಕುವಿನಿಂದ ತಿವಿದು ಸಾಯಿಸಿದ ಬಳಿಕ ಚಿಕ್ಕುಚಯ್ಯ ಅವರು ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸಿದ ಬಳಿಕ ಪೂರ್ಣ ವಿವರಗಳನ್ನು ನೀಡಲಾಗುವುದು’ ಎಂದು ಅನಿತಾ ಬಿ.ಹದ್ದಣ್ಣವರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT