ಗುರುವಾರ , ಮೇ 26, 2022
30 °C
ಸಿಮ್ಸ್‌ ಬೋಧನಾ ಆಸ್ಪತ್ರೆಯಲ್ಲಿ ಮೊದಲಬಾರಿಗೆ ಶಸ್ತ್ರಚಿಕಿತ್ಸೆ, ಮಂಡಿ ಚಿಪ್ಪು, ಮೊಣಸಂದಿ ಚಿಕಿತ್ಸೆ ಲಭ್ಯ

ವೃದ್ಧೆಗೆ ಸೊಂಟದ ಮೂಳೆ ಬದಲಿ ಜೋಡಣೆ ಯಶಸ್ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರದ ಹೊರವಲಯದ ಯಡಬೆಟ್ಟದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಸಿಮ್ಸ್‌) ಬೋಧನಾ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ಹಿಪ್‌ ರಿಪ್ಲೇಸ್‌ಮೆಂಟ್‌ (ಸೊಂಟದ ಮೂಳೆ ಬದಲಿ ಜೋಡಣೆ) ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ತಾಲ್ಲೂಕಿನ ಮುತ್ತುಗದಹುಂಡಿಯ ನಿವಾಸಿ, 70 ವರ್ಷದ ನಿಂಗಮ್ಮ ಎಂಬ ವೃದ್ಧೆಗೆ 10 ದಿನಗಳ ಹಿಂದೆ ಆಸ್ಪತ್ರೆಯ ಮೂಳೆ ಚಿಕಿತ್ಸಾ ವಿಭಾಗದ ತಜ್ಞ ವೈದ್ಯರು ಯಶಸ್ವಿಯಾಗಿ ಹಿಪ್‌ ರಿಪ್ಲೇಸ್‌ಮೆಂಟ್‌ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ತೀವ್ರ ಸೊಂಟ ನೋವಿನಿಂದ ಬಳಲುತ್ತಿದ್ದ ನಿಂಗಮ್ಮ ಅವರು ಈಗ ಚೇತರಿಸಿಕೊಂಡಿದ್ದು ಬುಧವಾರ ಮನೆಗೆ ತೆರಳಿದ್ದಾರೆ.

ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ಉಚಿತವಾಗಿ ಈ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಾಗಿದೆ. 

ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಮ್ಸ್‌ ಡೀನ್‌ ಹಾಗೂ ನಿರ್ದೇಶಕ ಡಾ.ಜಿ.ಎಂ.ಸಂಜೀವ್‌ ಅವರು, ‘ಒಂದೂವರೆ ತಿಂಗಳ ಹಿಂದೆ ಆಯುಷ್ಮಾನ್‌ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಮೂಳೆಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ನಮ್ಮ ಆಸ್ಪತ್ರೆಗೆ ಅನುಮತಿ ನೀಡಲಾಗಿತ್ತು. ನಮ್ಮ ಆಸ್ಪತ್ರೆಯಲ್ಲಿ ಒಂಬತ್ತು ಸುಸಜ್ಜಿತ ಆಪರೇಷನ್‌ ಥಿಯೇಟರ್‌ಗಳಿದ್ದು (ಒಟಿ), ಈ ಪೈಕಿ ಎರಡು ಅತ್ಯಾಧುನಿಕ ಸೌಲಭ್ಯಗಳುಳ್ಳ,  ಹಾಗೂ ಸೋಂಕು ಉಂಟುಮಾಡದ ವ್ಯವಸ್ಥೆ ಹೊಂದಿರುವ ಒಟಿಗಳಿವೆ. ಹಿಪ್‌ ರಿಪ್ಲೇಸ್‌ಮೆಂಟ್‌ನಂತಹ ಶಸ್ತ್ರಚಿಕಿತ್ಸೆ ಅತ್ಯಂತ ಕ್ಲಿಷ್ಟಕರವಾಗಿದ್ದು, ಇಂತಹ ಒಟಿಗಳು ಅಗತ್ಯವಿದೆ. ಮೂಳೆ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮಾರುತಿ ಹಾಗೂ ಅರಿವಳಿಕೆ ವಿಭಾಗದ ಮುಖ್ಯಸ್ಥ ಡಾ.ದರ್ಶನ್‌ ನೇತೃತ್ವದ ತಂಡ ಯಶಸ್ವಿಯಾಗಿ ಈ ಚಿಕಿತ್ಸೆಯನ್ನು ನಡೆಸಿದೆ’ ಎಂದರು. 

‘ಖಾಸಗಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆಗೆ ₹3 ಲಕ್ಷದಿಂದ ₹4 ಲಕ್ಷದವರೆಗೆ ಖರ್ಚಾಗುತ್ತದೆ. ಬಿಪಿಎಲ್‌ ಕಾರ್ಡುದಾರರಿಗೆ ನಾವು ಉಚಿತವಾಗಿ ಮಾಡಿದ್ದೇವೆ. ಮಂಡಿ ಬದಲಿ ಜೋಡಣೆ (ನೀ ರಿಪ್ಲೇಸ್‌ಮೆಂಟ್‌), ಮೊಣಸಂದಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳನ್ನು ಆಸ್ಪತ್ರೆಯಲ್ಲಿ ಮಾಡಲಿದ್ದೇವೆ. ಜನರು ಈ ಸೌಲಭ್ಯ ಬಳಸಿಕೊಳ್ಳಬೇಕು’ ಎಂದರು. 

ಮೂಳೆ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮಾರುತಿ ಸಿ.ವಿ ಅವರು ಮಾತನಾಡಿ, ‘ಇಂತಹ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಮಾಡುವುದರಲ್ಲಿ ಫೆಲೋಶಿಪ್‌ ಪಡೆದವರು ನಮ್ಮಲ್ಲಿದ್ದಾರೆ. ಹಾಗಾಗಿ, ಶಸ್ತ್ರಕ್ರಿಯೆ ನಡೆಸಲು ಯಾವುದೇ ಕಷ್ಟವಾಗಲಿಲ್ಲ. ಶಸ್ತ್ರಕ್ರಿಯೆಗೆ ಬೇಕಾದಂತಹ ಎಲ್ಲ ಸೌಲಭ್ಯಗಳೂ ಆಸ್ಪತ್ರೆಯಲ್ಲಿವೆ. ಮಂಡಿಚಿಪ್ಪು ಬದಲಿ ಜೋಡಣೆಗೆ ಮೂವರು ರೋಗಿಗಳನ್ನು ನೋಂದಣಿ ಮಾಡಿಕೊಂಡಿದ್ದಾರೆ. ಶೀಘ್ರದಲ್ಲಿ ಶಸ್ತ್ರಚಿಕಿತ್ಸೆ ಮಾಡಲಿದ್ದೇವೆ’ ಎಂದರು.

ಡಾ.ಮಾರುತಿ, ಡಾ.ದರ್ಶನ್‌, ಡಾ.ಶಿವಣ್ಣ, ಡಾ.ರಾಘವೇಂದ್ರ, ಡಾ.ಮನೋಜ್‌, ಡಾ.ಯೋಗೇಶ್‌, ಡಾ.ಯೋಗಾನಂದ್‌, ಡಾ.ಕಾರ್ತಿಕ್‌, ಡಾ.ಮಹದೇವ ಪ್ರಸಾದ್‌ ಡಾ.ಸಂತೋಷ್‌, ಡಾ.ಸೌಮ್ಯ, ಡಾ.ಆಶಾ, ಶುಶ್ರೂಕ ಸಿಬ್ಬಂದಿ ಹಾಗೂ ಇತರ ಸಿಬ್ಬಂದಿಯನ್ನೊಳಗೊಂಡ ತಂಡ ಈ ಶಸ್ತ್ರಕ್ರಿಯೆ ನಡೆಸಿದೆ. 

ಶಸ್ತ್ರಕ್ರಿಯೆಗೆ ಒಳಪಟ್ಟ ನಿಂಗಮ್ಮ ಮಾತನಾಡಿ, ‘ಎರಡು ವರ್ಷಗಳಿಂದ ಸೊಂಟ ನೋವಿನಿಂದಾಗಿ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಈಗ ಶಸ್ತ್ರಕ್ರಿಯೆ ಮಾಡಿದ ನಂತರ ನೋವು ಕಡಿಮೆಯಾಗಿದೆ. ಚೇತರಿಸಿಕೊಳ್ಳುತ್ತಿದ್ದೇನೆ. ಇನ್ನು ಸ್ವಲ್ಪ ದಿನಗಳಲ್ಲಿ ನಡೆದಾಡಬಹುದು ಎಂದು ವೈದ್ಯರು ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಚೆನ್ನಾಗಿ ನೋಡಿಕೊಂಡಿದ್ದಾರೆ’ ಎಂದರು. 

ಆಯುಷ್ಮಾನ್‌ ಭಾರತ್‌, ಆರೋಗ್ಯ ಕರ್ನಾಟಕ ಯೋಜನೆಯ ನೋಡೆಲ್‌ ಅಧಿಕಾರಿ ಡಾ.ಮಹೇಶ್‌ ಅವರು ಮಾತನಾಡಿ, ‘ಈ ಮೊದಲು ಈ ಶಸ್ತ್ರಕ್ರಿಯೆಗಳಿಗಾಗಿ ರೋಗಿಗಳನ್ನು ಬೆಂಗಳೂರಿಗೆ ಕರೆದೊಯ್ಯಲಾಗುತ್ತಿತ್ತು. ಆ ಬಳಿಕ ಮೈಸೂರಿನಲ್ಲಿ ಈ ಸೌಲಭ್ಯ ಲಭ್ಯವಾಯಿತು. ಈಗ ನಮ್ಮ ಆಸ್ಪತ್ರೆಯಲ್ಲಿಯೇ ಈ ಸೌಕರ್ಯ ಸಿಗುತ್ತಿರುವುದು ಹೆಮ್ಮೆಯ ವಿಷಯ. ಖಾಸಗಿ ಆಸ್ಪತ್ರೆಗಳಲ್ಲಿ ಇದಕ್ಕಾಗಿ ಲಕ್ಷಾಂತರ ರೂಪಾಯಿ ವ್ಯಯಿಸಬೇಕು. ಆದರೆ, ಇಲ್ಲಿ ಬಿಪಿಎಲ್‌ ಕಾರ್ಡ್‌ದಾರರು ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದು’ ಎಂದರು. 

ಜಿಲ್ಲಾ ಸರ್ಜನ್ ಡಾ. ಶ್ರೀನಿವಾಸ, ಸ್ಥಾನಿಕ ವೈದ್ಯಾಧಿಕಾರಿ ಡಾ.ಎಚ್.ಎಸ್. ಕೃಷ್ಣಪ್ರಸಾದ್, ಇತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಮೇ 14ರಂದು ಪದವಿ ಪ್ರದಾನ 

ಸಿಮ್ಸ್‌ನ ಮೊದಲ ಬ್ಯಾಚ್‌ನ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ಈ ವರ್ಷ ಪೂರ್ಣಗೊಳಿಸಿದ್ದು, ಮೇ 14ರಂದು ಪದವಿ ಪ್ರದಾನ ಸಮಾರಂಭ ನಡೆಯಲಿದೆ. 

‌‘ಒಟ್ಟು 146 ವಿದ್ಯಾರ್ಥಿಗಳ ಪೈಕಿ 136 ಮಂದಿ ತೇರ್ಗಡೆ ಹೊಂದಿದ್ದಾರೆ. ಐದು ವರ್ಷಗಳ ಎಂಬಿಬಿಎಸ್‌ ಕೋರ್ಸ್‌ ಹಾಗೂ ಒಂದು ವರ್ಷದ ಹೌಸ್‌ ಸರ್ಜನ್‌ ಅವಧಿಯನ್ನೂ ಅವರು ಪೂರ್ಣಗೊಳಿಸಿದ್ದಾರೆ’ ಎಂದು ಡಾ.ಸಂಜೀವ್‌ ಹೇಳಿದರು.   

₹19 ಕೋಟಿ: ‘ಆಸ್ಪತ್ರೆಯಲ್ಲಿ ಪ್ರತ್ಯೇಕವಾದ ತೀವ್ರ ನಿಗಾ ಘಟಕದ (ಕ್ರಿಟಿಕಲ್‌ ಕೇರ್‌) ಸ್ಥಾಪನೆಗಾಗಿ ಕೇಂದ್ರ ಸರ್ಕಾರದಿಂದ ₹19 ಕೋಟಿ ಅನುದಾನ ಮಂಜೂರಾಗಿದೆ. ರಾಜ್ಯದಲ್ಲಿ ನಮ್ಮದು ಹಾಗೂ ಕಾರವಾರದ ವೈದ್ಯಕೀಯ ಕಾಲೇಜು ಇದಕ್ಕೆ ಆಯ್ಕೆಯಾಗಿದೆ. ಈಗಾಗಲೇ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.