ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಯಲ್ಲಿ ಸಿಗದ ಮೀನು; ಕೆರೆ, ದಡ, ಹೊಳೆ ಅಲೆಯುವ ಗ್ರಾಹಕರು

ಮತ್ಸ್ಯೋದ್ಯಮಕ್ಕೆ ಕೊರೊನಾ ಕಂಟಕ
Last Updated 2 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನಲ್ಲಿ ದಿಗ್ಬಂಧನ ಮತ್ತು ಕೋವಿಡ್–19 ಭೀತಿಯಿಂದ ಜನರಿಗೆ ಮಾಂಸ, ಮೊಟ್ಟೆ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಮೀನು, ಮಾಂಸ, ಮೊಟ್ಟೆ ಮಾರಾಟ ಮಾಡಬಹುದು ಎಂದು ಜಿಲ್ಲಾಡಳಿತ ಹೇಳಿದರೂ ಮಾಲೀಕರು ಅಂಗಡಿಗಳನ್ನು ತೆರೆಯುತ್ತಿಲ್ಲ. ಹಾಗಾಗಿ ಪೂರೈಕೆ ನಿಂತು ಹೋಗಿದೆ.

ಬೇಡಿಕೆ ಇಲ್ಲದಿರುವುದರಿಂದ ಕೆರೆ ಕಟ್ಟೆಗಳಲ್ಲಿ ಮೀನುಗಾರಿಕೆಯೂ ನಿಂತು ಹೋಗಿದೆ. ಹಾಗಾಗಿ ಮೀನಿಗಾಗಿ ಗ್ರಾಹಕರು ಮುಂಜಾನೆ ಮತ್ತು ಸಂಜೆ ಹೊತ್ತು ಜಲಾಶಯ ಹಾಗೂ ಮೀನು ಸಾಕಣೆ ಮಾಡುವ ಸ್ಥಳಗಳಲ್ಲಿ ಸುತ್ತಾಡುತ್ತಿದ್ದಾರೆ.

ಇದರ ನಡುವೆಯೇ, ಮೀನು ಕೃಷಿ ನಂಬಿ ಬದುಕು ಕಟ್ಟಿಕೊಂಡಿದ್ದ ಜನರು ಈಗ ತೆಪ್ಪ ಮತ್ತು ದೋಣಿಗಳನ್ನು ಎತ್ತಿಟ್ಟು ಮನೆಯಲ್ಲಿ ಕೂರುವಂತೆ ಆಗಿದೆ. ಜೀವನ ನಿರ್ವಹಣೆ ಮತ್ತು ಸಾಲಕ್ಕಾಗಿ ಇತರರನ್ನು ಕೈಚಾಚಬೇಕಾದ ಸ್ಥಿತಿಯೂ ಉಂಟಾಗಿದೆ.

‘ತಾಲ್ಲೂಕಿನಲ್ಲಿ ಸಣ್ಣ, ದೊಡ್ಡ ಜಲಾವರಗಳಲ್ಲಿ ಕಟ್ಲಾ, ರೋಹು, ಗೆಂಡೆ ಸೇರಿದಂತೆ ಹಲವಾರು ತಳಿಯ ಮೀನುಗಳನ್ನು ಬಿಡಲಾಗಿದೆ. ಈಗ ಇವುಗಳಿಗೆ ಬೇಡಿಕೆಯೂ ಇದೆ. ಯರಿಯೂರು ಕೆರೆಯಿಂದ ಪ್ರತಿದಿನ ನೂರಾರು ಕೆ.ಜಿ. ಮೀನನ್ನು ಸಂಗ್ರಹ ಮಾಡಲಾಗುತ್ತಿತ್ತು. ಈಗ ಸಾಂಕ್ರಾಮಿಕ ಭೀತಿಯಿಂದ ಶ್ರಮಿಕರು ಕೆರೆಗೆ ಇಳಿಯದಂತೆ ಆಗಿದೆ’ ಎಂದು ಮೀನು ಕೃಷಿಕ ರಂಗಸ್ವಾಮಿ ಅಳಲು ತೋಡಿಕೊಂಡರು.

‘ಬೇಸಿಗೆಯಲ್ಲಿ ಕೆರೆ, ಕಟ್ಟೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಕಳೆಗಿಡಗಳು ಹರಡಿಕೊಳ್ಳುತ್ತವೆ. ಇದರಿಂದ ಬೆಳೆದ ಮೀನುಗಳು ಕೆಸರಿನಲ್ಲಿ ಸಿಲುಕಿ ಇಳುವರಿ ಕಡಿಮೆಯಾಗುತ್ತದೆ. ಈಗ ತೆಪ್ಪ ಇಲ್ಲವೇ ಬಲೆ ಬಳಸಿ ಮೀನು ಸಂಗ್ರಹ ಮಾಡಬಹುದು. ದಿನ ಕಳೆದಂತೆ ನೀರು ಕೆರೆ ಕಟ್ಟೆಗಳಲ್ಲಿ ನೀರು ಕಡಿಮೆಯಾಗಲಿದ್ದು, ಮೀನುಗಳು ಸಿಗುವುದಿಲ್ಲ’ ಎಂದು ಮೀನು ಕೃಷಿಕ ಸಂಘದ ಗೋವಿಂದಶೆಟ್ಟಿ ಅವರು ಆತಂಕ ವ್ಯಕ್ತಪಡಿಸಿದರು.

‘ಕೆಲವು ದಿನಗಳಿಂದೀಚೆಗೆ ಕೆಲವರಷ್ಟೇ ಮುಂಜಾನೆ ಮತ್ತು ಸಂಜೆ ಹೊತ್ತು ಮೀನು ಸಂ‌ಗ್ರಹಿಸುತ್ತಿದ್ದಾರೆ.ಅವರು ಗ್ರಾಹಕರಿಗೆ ಪಾಸ್‌ ಕೊಟ್ಟು ಎರಡು, ಮೂರು ದಿನಗಳಿಗೊಮ್ಮೆ ಮೀನು ವಿತರಿಸುವ ಕೆಲಸ ಮಾಡುತ್ತಿದ್ದಾರೆ. ನಿಗದಿತ ಸ್ಥಳದಲ್ಲಿ ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಿದರೆ ಕೊಳ್ಳುವವರಿಗೂ ನೆರವಾಗುತ್ತದೆ’ ಎಂದು ಪಟ್ಟಣದ ನಿವಾಸಿ ಮಂಜುನಾಥ ಹೇಳಿದರು.

‘ಮೀನು ಮಾರಾಟಕ್ಕೆ ಅಗತ್ಯ ಕ್ರಮ’

‘ಯಳಂದೂರು ಪಟ್ಟಣದಲ್ಲಿ ಒಂದು ಮೀನು ಮಾರಾಟ ಕೇಂದ್ರವಿದೆ. ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮುಗಿ ಬೀಳುವ ಸಂಭವ ಇರುವುದರಿಂದ ಮೀನು ಮಾರಾಟಗಾರರು ಸಮಸ್ಯೆ ಎದುರಿಸುವಂತಾಗಿದೆ. ಗುಂಬಳ್ಳಿ ಕೆರೆಯಲ್ಲಿ ಮೀನು ಖರೀದಿಸಲು ಹೆಚ್ಚು ಜನ ಗುಂಪುಗೂಡಿದ್ದರಿಂದ, ಪೊಲೀಸರು ಜನದಟ್ಟಣೆ ನಿಯಂತ್ರಿಸಲು ಕ್ರಮವಹಿಸಬೇಕಾಯಿತು’ ಎಂದು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಬಿ.ಶ್ವೇತಾ ಹೇಳಿದರು.

‘ಕೆಸ್ತೂರು ಮತ್ತು ಯರಿಯೂರು ಕೆರೆಯಲ್ಲಿ ಮೀನುಗಾರಿಕಾ ಸಂಘದ ಸದಸ್ಯರು ಪಾಸ್‌ ವಿತರಿಸಿ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದಾರೆ. ಕೆಲ ಮೀನುಗಾರಿಕಾ ಸಂಘಗಳು ಮೀನು ಹಿಡಿಯುವುದನ್ನು ಶುಕ್ರವಾರದಿಂದ ನಿಲ್ಲಿಸುವುದಾಗಿ ತಿಳಿಸಿದ್ದಾರೆ. ಎಲ್ಲರಲ್ಲೂ ಗೊಂದಲ ಇದೆ.ಆದರೆ, ಸರ್ಕಾರದ ಆದೇಶದನ್ವಯ ಮಾರಾಟಕ್ಕೆ ಸಿದ್ಧತೆ ನಡೆಸಲಾಗುವುದು. ಇಲಾಖೆಯ ಅಧಿಕಾರಿಗಳ ಸಲಹೆ ಪಡೆದು ಕ್ರಮವಹಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT