ಶನಿವಾರ, ಅಕ್ಟೋಬರ್ 24, 2020
18 °C

ಗಾಂಧಿ ಗ್ರಾಮ ಪುರಸ್ಕಾರ: ಐದು ಗ್ರಾ.ಪಂ. ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನೂರು: ಗಾಂಧಿ ಜಯಂತಿ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯು ಪ್ರತಿ ವರ್ಷ ಕೊಡಮಾಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ 2019–20ನೇ ಸಾಲಿನಲ್ಲಿ ಪ್ರತಿ ತಾಲ್ಲೂಕಿಗೆ ಒಂದರಂತೆ ಜಿಲ್ಲೆಯ ಐದು ಗ್ರಾಮಪಂಚಾಯಿತಿಗಳನ್ನು ಆಯ್ಕೆ ಮಾಡಲಾಗಿದೆ. 

ಚಾಮರಾಜನಗರ ತಾಲ್ಲೂಕಿನ ಯರಗನಹಳ್ಳಿ, ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು, ಗುಂಡ್ಲುಪೇಟೆಯ ಹಂಗಳ, ಹನೂರಿನ ಸೂಳೇರಿಪಾಳ್ಯ ಹಾಗೂ ಯಳಂದೂರಿನ ಯರಗಂಬಳ್ಳಿ ಗ್ರಾಮಗಳು ಆಯ್ಕೆಯಾಗಿವೆ. ಪ್ರತಿ ತಾಲ್ಲೂಕಿನಲ್ಲಿ ಐದು ಗ್ರಾಮ ಪಂಚಾಯಿತಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿತ್ತು. ಪುರಸ್ಕಾರವು ₹5 ಲಕ್ಷ ನಗದು, ಫಲಕ ಒಳಗೊಂಡಿದೆ. ಈ ಬಾರಿ ಕೋವಿಡ್‌ ಕಾರಣದಿಂದ ಪ್ರದಾನ ಕಾರ್ಯಕ್ರಮ ಮುಂದೂಡಲಾಗಿದೆ. 

ಯರಗನಹಳ್ಳಿ: ಚಾಮರಾಜನಗರ ತಾಲ್ಲೂಕಿನ ಯರಗನಹಳ್ಳಿ ಗ್ರಾಮ ಪಂಚಾಯಿತಿ ಈ ಪುರಸ್ಕಾರಕ್ಕೆ ಆಯ್ಕೆಯಾಗುತ್ತಿರುವುದು ಇದು ನಾಲ್ಕನೇ ಬಾರಿ. ಈ ಹಿಂದೆ 2014–15, 2016–17, 2017–28ರಲ್ಲಿ ಆಯ್ಕೆಯಾಗಿತ್ತು. 

ಯರಗನಹಳ್ಳಿ, ಯಣಗಂಬ,ವಡ್ಡರಹಳ್ಳಿ, ಅಚ್ಚಟ್ಟಿಪುರ, ಕಿಲೆಗೆರೆ, ಮಾದಲವಾಡಿ ಗ್ರಾಮಗಳು ಈ ಪಂಚಾಯಿತಿ ವ್ಯಾಪ್ತಿಗೆ ಬರುತ್ತವೆ.  

‘ಕಂದಾಯ ವಸೂಲಿಯಲ್ಲಿ ಶೇ 100ರಷ್ಟು ಸಾಧನೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಏಳು ಶಾಲೆಗಳ ಮಕ್ಕಳಿಗೆ ಶುದ್ಧ ನೀರು ಕುಡಿಯುವ ನೀರಿನ ವ್ಯವಸ್ಥೆಗಾಗಿ ಆಕ್ವಾಗಾರ್ಡ್ ಅಳವಡಿಸಲಾಗಿತ್ತು. ಗ್ರಾಮ ಸಭೆ, ಸಾಮಾನ್ಯಸಭೆ, ಸ್ಥಾಯಿ ಸಮಿತಿ ಸಭೆ ಸೇರಿದಂತೆ ಎಲ್ಲ ಸಭೆಗಳನ್ನು ನಿಯಮಿತವಾಗಿ ಮಾಡಲಾಗಿ‌ತ್ತು. ಅನುದಾನದ ಸಮರ್ಪಕ ಬಳಕೆಯಲ್ಲೂ ಉತ್ತಮ ಸಾಧನೆ ಮಾಡಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಜನಪ್ರತಿನಿಧಿಗಳು, ಜನರು ಹಾಗೂ ಪಂಚಾಯಿತಿ ಸಿಬ್ಬಂದಿಯ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ’ ಎಂದು ಅವರು ಸಂತಸ ವ್ಯಕ್ತಪಡಿಸಿದರು. 

ಚಿಕ್ಕಲ್ಲೂರು: ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ಗ್ರಾಮ ಪಂಚಾಯಿತಿ ಇದೇ ಮೊದಲ ಬಾರಿಗೆ ಈ ಪುರಸ್ಕಾರಕ್ಕೆ ಆಯ್ಕೆಯಾಗಿದೆ. 

ತಾಲ್ಲೂಕಿನ ಚಿಕ್ಕಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಕೊತ್ತನೂರು, ಬಿ.ಜಿ.ದೊಡ್ಡಿ, ಪ್ರಕಾಶ್ ಪಾಳ್ಯ, ಮೇಗಲದೊಡ್ಡಿ, ಇರುದಾಳದೊಡ್ಡಿ, ಲಂಬಾಣಿ ದೊಡ್ಡಿ, ಮರಿಯಪುರ, ಮೊಳಗನಕಟ್ಟೆ, ಮತ್ತೀಪುರ, ಇಕ್ಕಡ ಹಳ್ಳಿ ಸೇರಿದಂತೆ 10 ಗ್ರಾಮಗಳು ಬರುತ್ತವೆ.

ಶುದ್ಧ ಕುಡಿಯುವ ನೀರು, ಸಿ.ಸಿ.ರಸ್ತೆ, ಚರಂಡಿ, ಬೀದಿ ದೀಪ, ಸ್ವಚ್ಚತೆ ಸೇರಿದಂತೆ ಅನೇಕ ಕಾರ್ಯಗಳು ಉತ್ತಮವಾಗಿ ನಡೆದಿದೆ. ಹಾಗೆಯೇ ಕಂದಾಯವೂ ವಸೂಲಿ ಶೇ 100ರಷ್ಟು ಸಾಧನೆಯಾಗಿದೆ. 14 ನೇ ಹಣಕಾಸು ಯೋಜನೆಯಲ್ಲಿ ಅನುದಾನಗಳನ್ನು ಪರಿಣಾಮಕಾರಿಯಾಗಿ ಬಳಸಲಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ 1,682 ಕುಟುಂಬಗಳಿದ್ದು, 6,932 ಜನಸಂಖ್ಯೆ ಹೊಂದಿದೆ.

‘ನರೇಗಾ ಅಡಿ ₹85 ಲಕ್ಷ ಅನುದಾನ ಬಂದಿದ್ದು, ಎಲ್ಲವನ್ನೂ ಬಳಕೆ ಮಾಡಲಾಗಿದೆ. ಗ್ರಾಮಗಳಲ್ಲಿ ಶೌಚಾಲಯದ ಅರಿವು, ಸ್ವಚ್ಚತೆಯ ಅರಿವು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಬಹಳ ಅಚ್ಚುಕಟ್ಟಾಗಿ ನಡೆಸಲಾಗಿದೆ ಹಾಗೂ ಗ್ರಾಮ ಸಭೆಗಳಲ್ಲಿ ಜನರ ಕುಂದು ಕೊರತೆಗಳನ್ನು ತಕ್ಷಣ ನಿವಾರಿಸುವ ಕೆಲಸಗಳನ್ನು ಸಹ ಮಾಡಲಾಗಿತ್ತು’ ಎಂದು ಪಿಡಿಒ ನಮಿತ ತೇಜಗೌಡ ಅವರು ಹೇಳಿದರು. 

‘ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು, ಮುಖಂಡರು ಹಾಗೂ ಪಂಚಾಯಿತಿಯ ಸಿಬ್ಬಂದಿಯ ಶ್ರಮದಿಂದಾಗಿ ಪುರಸ್ಕಾರ ಬಂದಿದೆ’ ಎಂದು ಅವರು ಹೇಳಿದರು. 

ಸೂಳೇರಿಪಾಳ್ಯ: ಹನೂರು ತಾಲ್ಲೂಕಿನ ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿಗೂ ಇದೇ ಮೊದಲ ಬಾರಿ ಈ ಪುರಸ್ಕಾರ ಒಲಿದಿದೆ. 

ಕಾಂಚಳ್ಳಿ, ಕೆ.ಗುಂಡಾಪುರ, ಮಂಚಾಪುರ, ಗಂಗನದೊಡ್ಡಿ ಹಾಗೂ ಪಚ್ಚೆದೊಡ್ಡಿ ಗ್ರಾಮಗಳು ಈ ಪಂಚಾಯಿತಿ ವ್ಯಾಪ್ತಿಗೆ ಬರುತ್ತವೆ. ಏಳು ಸಾವಿರ ಜನಸಂಖ್ಯೆ ಇದೆ.  2019-20ನೇ ಸಾಲಿನಲ್ಲಿ 22,510 ನರೇಗಾ ಕೂಲಿ ಕೆಲಸ ನೀಡಲಾಗಿದೆ. 480 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ₹3.20 ಲಕ್ಷ ತೆರಿಗೆ ವಸೂಲು ಮಾಡಿ ಶೇ100ರಷ್ಟು ಸಾಧನೆ ಮಾಡಲಾಗಿದೆ. 

ಜನಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ಗ್ರಾಮಪಂಚಾಯಿತಿ ಸಿಬ್ಬಂದಿಯ ಸಹಕಾರದಿಂದ ಇಷ್ಟು ಕಾರ್ಯಕ್ರಮ ಮಾಡಲು ಸಾಧ್ಯವಾಯಿತು’ ಎಂದು ಪಿಡಿಒ ಸುರೇಶ್‌ ಅವರು ಹೇಳಿದರು.

ಹಂಗಳಕ್ಕೆ ಹ್ಯಾಟ್ರಿಕ್‌ 

ಎರಡು ವರ್ಷಗಳಿಂದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಗ್ರಾಮ ಪಂಚಾಯಿತಿಯು ಈ ವರ್ಷವೂ ಪುರಸ್ಕಾರಕ್ಕೆ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್‌ ಸಾಧಿಸಿದೆ. ಒಟ್ಟು ನಾಲ್ಕು ಬಾರಿ ಈ ಪ್ರಶಸ್ತಿಗೆ ಆಯ್ಕೆಯಾಗಿದೆ. 

ಈ ಮೊದಲು 2013-15, 2015-16, 2017-18, ಮತ್ತು 2018-19ನೇ ಸಾಲಿನಲ್ಲಿ ಪ್ರಶಸ್ತಿ ಪಡೆದುಕೊಂಡಿತ್ತು.

‘ಈ ಬಾರಿಯೂ ಉತ್ತಮ ಸಾಧನೆ ಮಾಡಿರುವ ಪಂಚಾಯತಿ, ಪೂರಕ ದಾಖಲೆಗಳ ಅನ್ವಯ ಪರಿಶೀಲನಾ ಸಮಿತಿಯಲ್ಲಿ ಆಯ್ಕೆ ಆಗಿದೆ. ವಿವಿಧ ಕಾಮಗಾರಿ, ಯೋಜನೆಗಳ ಸದ್ಬಳಕೆ ಮಾನದಂಡಗಳ ಅಡಿಯಲ್ಲಿ ಆಯ್ಕೆಯಾಗಿದೆ’ ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕುಮಾರ ಸ್ವಾಮಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.