ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಡಕಾಯತಿ ಯತ್ನ, ಬಿಹಾರದ ಐವರ ಬಂಧನ

ಯಳಂದೂರು: ಮೆಲ್ಲಹಳ್ಳಿ ಗೇಟ್‌ ಬಳಿ ಪೊಲೀಸರಿಂದ ಗುರುವಾರ ತಡರಾತ್ರಿ ಕಾರ್ಯಚಾರಣೆ
Last Updated 11 ಫೆಬ್ರುವರಿ 2022, 15:46 IST
ಅಕ್ಷರ ಗಾತ್ರ

ಯಳಂದೂರು:ಯಳಂದೂರು– ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯ ಮೆಲ್ಲಹಳ್ಳಿ ಗೇಟ್ ಬಳಿ ಡಕಾಯಿತಿ ನಡೆಸಲು ಹೊಂಚು ಹಾಕುತ್ತಿದ್ದ ಐವರನ್ನು ಗುರುವಾರ ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಉಪವಿಭಾಗದ ಡಿವೈಎಸ್‌ಪಿ ನಾಗರಾಜ್‌ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಬಂಧಿತ ಐವರೂ ಬಿಹಾರದವರು ಎಂದು ಪೊಲೀಸರು ತಿಳಿಸಿದ್ದಾರೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮೆಲ್ಲಹಳ್ಳಿ ಗೇಟ್ ಸಮೀಪ ಐವರ ತಂಡ ಕಬ್ಬಿಣದ ರಾಡು ಮತ್ತು ದೊಣ್ಣೆಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಒಂಟಿಯಾಗಿ ಸಂಚರಿಸುವವರ ಮೇಲೆ ಹಲ್ಲೆ ಮಾಡಿ ದೋಚಲು ಸಿದ್ಧತೆ ನಡೆಸಿದ್ದರು.

ಈ ಬಗ್ಗೆ, ಮಾಹಿತಿ ಸಂಗ್ರಹಿಸಿದ್ದ ಪೊಲೀಸರು ಗುರುವಾರ ರಾತ್ರಿ 11.35ರ ಸಮಯದಲ್ಲಿ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಬಿಹಾರ ರಾಜ್ಯದದಿಲೀಪ್ ಕುಮಾರ್, ಪವನ್ ಕುಮಾರ್, ಜಿ ಗೋವಿಂದ್ ಶಾ, ಕುಮುದ್ ಕುಮಾರ್ ಶಾ ಹಾಗೂ ಅರವಿಂದ್ ಶಾ ಎಂದು ಗುರುತಿಸಲಾಗಿದೆ.

ಬಂಧಿತರ ಬಳಿಯಿಂದ ಚಾಕು, ದೊಣ್ಣೆ, ಕಬ್ಬಿಣದ ರಾಡು, ಟಾರ್ಚ್ ಹಾಗೂ ಮುಖಕ್ಕೆ ಹಾಕಿಕೊಂಡಿದ್ದ ಮುಖ ಕವಚ, ಖಾರದಪುಡಿ ಪೊಟ್ಟಣಗಳು, ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ರಸ್ತೆಯಲ್ಲಿ ಒಬ್ಬೊಬ್ಬರಾಗಿ ಓಡಾಡುವವರನ್ನು ತಡೆದು ಹಲ್ಲೆ ಮಾಡಿ ಅವರಲ್ಲಿರುವ ನಗದು, ಒಡವೆಗಳನ್ನು ದೋಚುವ ಉದ್ದೇಶ ಹೊಂದಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಳ್ಳೇಗಾಲ ಸರ್ಕಲ್ ಇನ್‌ಸ್ಪೆಕ್ಟರ್‌ ಶಿವರಾಜ್ ಆರ್. ಮುಧೋಳ್, ಹನೂರು ಇನ್‌ಸ್ಪೆಕ್ಟರ್‌ ಸಂತೋಷ್ ಕಶ್ಯಪ್, ಯಳಂದೂರು ಸರ್ಕಲ್ ಇನ್‌ಸ್ಪೆಕ್ಟರ್‌ ಶಿವ ಮಾದಯ್ಯ, ಪಿಎಸ್ಐ ಕರಿಬಸಪ್ಪ, ಕೊಳ್ಳೇಗಾಲ ಪಿಎಸ್‌ಐ ಚೇತನ್, ಅನ್ಸರ್ ಪಾಷ, ಮಹೇಶ, ನಾಗೇಂದ್ರ ರಂಗಸ್ವಾಮಿ, ರಾಮಕೃಷ್ಣ, ರಾಮ ಶೆಟ್ಟಿ, ದೊರೆ ಸ್ವಾಮಿ, ವಾಸುದೇವ್, ಮಹೇಶ್ ನಂಜುಂಡಸ್ವಾಮಿ, ಮಾದೇಶ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT