ಗುರುವಾರ , ಅಕ್ಟೋಬರ್ 6, 2022
24 °C
ಮಳೆ ಹಾನಿ ಪ್ರದೇಶಕ್ಕೆ ಡಿಸಿ, ಎಸಿ, ಶಾಸಕ ಭೇಟಿ

ಕೊಳ್ಳೇಗಾಲದಲ್ಲೂ ಪ್ರವಾಹದ ಅಬ್ಬರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ಸತತ ಮಳೆಯಿಂದ ಸುವರ್ಣಾವತಿ ನದಿ ಪ್ರವಾಹ, ಕರೆಗಳ ಕೋಡಿ ಬಿದ್ದ ನೀರಿನಿಂದ ಸಾವಿರಾರು ಎಕರೆ ಕೃಷಿ ಭೂಮಿ ಹಾಗೂ ಗ್ರಾಮಗಳು, ರಸ್ತೆಗಳು ಜಲಾವೃತವಾಗಿವೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ತಾಲ್ಲೂಕಿನ ಸೂರಾಪುರ, ರಾಮಪುರ, ಕುಣಗಳ್ಳಿ, ಬೆಂಡರಹಳ್ಳಿ, ಮಧುವನಹಳ್ಳಿ, ಹಳೇ ಹಂಪಾಪುರ ಗ್ರಾಮಗಳು ಜಲಾವೃತವಾಗಿವೆ. ಸುವರ್ಣಾವತಿ ನದಿ, ಕೆರೆಗಳ ನೀರು ಹರಿಯುತ್ತಿರುವ ಕಾರಣ ಗ್ರಾಮಗಳು ಮುಳುಗಡೆಯಾಗಿವೆ.

ತಾಲ್ಲೂಕಿನ ಕುಣಗಳ್ಳಿ ಗ್ರಾಮದ ಮುಖ್ಯ ರಸ್ತೆ, ಮುಳ್ಳೂರು ಗ್ರಾಮದ ರಸ್ತೆ ಮತ್ತು ಸೇತುವೆ ನೀರಿನಿಂದ ಸಂಪೂರ್ಣ ಮುಳುಗಿದ್ದು ಸಂಚಾರ ಬಂದ್ ಆಗಿದೆ. ಬಾಳೆ, ಕಬ್ಬು, ಜೋಳ, ತೆಂಗು, ತರಕಾರಿ ಸೇರಿ ಅನೇಕ ಬೆಳೆಗಳು ಹಾಳಾಗಿವೆ.

ನಗರಸಭೆ ಸದಸ್ಯೆ ಮನೆ ಮುಳುಗಡೆ: ಬೆಂಡರಹಳ್ಳಿ ಗ್ರಾಮದ ನಗರಸಭಾ ಸದಸ್ಯೆ ರಮ್ಯ ಮಹೇಶ್ ತೋಟದ ಮನೆ ನೀರಿನಿಂದ ಸಂಪೂರ್ಣ ಮುಳುಗಿದೆ. ಅವರನ್ನು ಬೇರೇಡೆಗೆ ಸ್ಥಳಾಂತರಿಸಲಾಗಿದೆ. ನಗರದ ಆದರ್ಶನಗರ ಹಾಗೂ ಹಳೇ ಕುರುಬರ ಬೀದಿ 80ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ.

ಮಧುವನಹಳ್ಳಿ ಜನರು ಕಾಳಜಿ ಕೇಂದ್ರಕ್ಕೆ: ಮಳೆಯ ಆರ್ಭಟದಿಂದ ಗುಂಡಾಲ್ ಜಲಾಶಯ ಭರ್ತಿಯಾಗಿದ್ದು ನಾಲೆ ಮೂಲಕ ನೀರು ದೊಡ್ಡರಂಗನಾಥ ಕೆರೆಗೆ ಬಂದು ಸೇರಿದೆ. ನೀರಿನ ಪ್ರಮಾಣ ಹೆಚ್ಚಾದ ಕಾರಣ ಮಧುವನಹಳ್ಳಿ ಜೆ.ವಿ ಗೌಡ ಕಾಲೋನಿ 40 ಮನೆಗಳಿಗೆ ನೀರು ನುಗ್ಗಿದೆ. ಭಾನುವಾರ ರಾತ್ರಿಯೇ ಗ್ರಾಮದ 78ಕ್ಕೂ ಮಂದಿ ಸಂತ್ರಸ್ತರನ್ನು ನಗರದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಕಾಳಜಿ ಕೇಂದ್ರಕ್ಕೆ ಹನೂರು ಶಾಸಕ ಆರ್.ನರೇಂದ್ರ, ಉಪವಿಭಾಗಾಧಿಕಾರಿ ಗೀತಾಹುಡೇದ, ತಹಶೀಲ್ದಾರ್ ಮಂಜುಳಾ, ಇಒ ಮಹೇಶ್, ಪಿ.ಎಸ್.ಐ ಮಂಜುನಾಥ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಾಂತರಿಸಿದರು.

ಕಾಳಜಿ ಕೇಂದ್ರಕ್ಕೆ ಶಾಸಕ ಆರ್.ನರೇಂದ್ರ ಭೇಟಿ: ತಾಲ್ಲೂಕಿನ ಮಧುವನಹಳ್ಳಿ ಗ್ರಾಮದ ಸಂತ್ರಸ್ಥರನ್ನು ಹನೂರು ಶಾಸಕ ಆರ್.ನರೇಂದ್ರ ಮಂಗಳವಾರ ಬೆಳಿಗ್ಗೆ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.

ಅನಾಹುತ ಆಗದಂತೆ ಎಚ್ಚರ ವಹಿಸಲು ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗೆ ಮಧುವನಹಳ್ಳಿ ಗ್ರಾಮದಲ್ಲಿಯೆ ಉಳಿದು ಪರಿಸ್ಥಿತಿ ನಿಭಾಯಿಸಲು ಸೂಚಿಸಿದರು. ಕಾಳಜಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಸಿಇಒ ಗಾಯಿತ್ರಿ ಭೇಟಿ ನೀಡಿದರು.

ಮನೆ ಹಾನಿ: ಅಧಿಕ ಮಳೆಯಿಂದಾಗಿ ಕೆಂಪನಪಾಳ್ಯ ಗ್ರಾಮದ 2 ಮನೆ ಹಾಗೂ ಜಕ್ಕಳ್ಳಿ ಗ್ರಾಮದ 1 ಮನೆ ಹಾನಿಗೊಳಗಾಗಿದ್ದು ತಾಲ್ಲೂಕು ಆಡಳಿತಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಪರಿಹಾರದ ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು