ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ| ಈಡೇರದ ಭರವಸೆ, ತಪ್ಪದ ನೆರೆ ಭೀತಿ

ಕಾವೇರಿ ನೀರಿನ ಮಟ್ಟ ಏರಿಕೆ; ನೂರಾರು ಎಕರೆ ಕೃಷಿ ಭೂಮಿ ಜಲಾವೃತ
Last Updated 15 ಜುಲೈ 2022, 19:30 IST
ಅಕ್ಷರ ಗಾತ್ರ

ಕೊಳ್ಳೇಗಾಲ: ತಾಲ್ಲೂಕಿನಲ್ಲಿ ಭಾರಿ ಎನ್ನುವಂತಹ ಮಳೆ ಬೀಳುವುದಿಲ್ಲ. ಆದರೂ ಈ ಒಂಬತ್ತು ಗ್ರಾಮಗಳಿಗೆ ಪ್ರತಿ ವರ್ಷ ನೆರೆ ಭೀತಿ ತಪ್ಪುವುದಿಲ್ಲ. ಜೀವನದಿ ಕಾವೇರಿ ಪಕ್ಕದಲ್ಲೇ ಹರಿಯುತ್ತಿರುವುದು ಇಲ್ಲಿನ ನಿವಾಸಿಗಳಿಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿದೆ.

ಕೆಆರ್‌ಎಸ್‌, ಕಬಿನಿ ಜಲಾಶಯಗಳಿಂದ ಹೆಚ್ಚುವರಿ ನೀರು ಬಿಟ್ಟರೆಮುಳ್ಳೂರು, ಹಳೇ ಹಂಪಾಪುರ, ಹಳೇ ಅಣಗಳ್ಳಿ, ದಾಸನಪುರ, ಹರಳೆ, ಸರಗೂರು, ಧನಗೆರೆ, ಸತ್ತೇಗಾಲ, ಯಡಕುರಿಯಾ ಗ್ರಾಮಗಳ ಜನರು ಬೆಚ್ಚಿ ಬೀಳುತ್ತಾರೆ. ಜಲಾಶಯಗಳ ಹೊರಹರಿವಿನ ಪ್ರಮಾಣ 1.25 ಲಕ್ಷ ಕ್ಯುಸೆಕ್‌ ದಾಟಿದರೆ ಜಮೀನುಗಳಿಗೆ ನೀರು ನುಗ್ಗುತ್ತದೆ. ಅದಕ್ಕೂ ಹೆಚ್ಚು ಬಿಟ್ಟರೆ ಜನವಸತಿ ಪ್ರದೇಶಕ್ಕೂ ನೀರು ಬರುತ್ತದೆ.

2019ರಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿತ್ತು. 2020 ಹಾಗೂ 2021ರಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳಿಂದ ಹೆಚ್ಚುವರಿ ನೀರು ಬಿಟ್ಟಿದ್ದರೂ, ಪ್ರವಾಹ ಪರಿಸ್ಥಿತಿ ಉಂಟಾಗಿರಲಿಲ್ಲ. ಆದರೆ ಈ ಬಾರಿ ನೆರೆ ಉಂಟಾಗಿದೆ.

ಪ್ರತಿ ವರ್ಷವೂ ಜುಲೈ–ಆಗಸ್ಟ್‌ನಲ್ಲಿ ಗ್ರಾಮದ ಜನರು ನೆರೆ ಭೀತಿಯಲ್ಲಿ ಇರುತ್ತಾರೆ. ಪ್ರವಾಹದ ಕಷ್ಟವೇ ಎಂದು ಕೆಲವರುಗ್ರಾಮದ ಮನೆ ಮತ್ತು ಜಮೀನುಗಳನ್ನು ಮಾರಾಟ ಮಾಡಿ ಕೊಳ್ಳೇಗಾಲಕ್ಕೆ ಬಂದು ವಾಸವಾಗಿದ್ದಾರೆ.

ನೂರಾರು ಎಕರೆ ಜಲಾವೃತ: ಎರಡು ದಿನಗಳಿಂದ ಕಾವೇರಿ ನದಿ ನೀರಿನ ಮಟ್ಟದಲ್ಲಿ ಗಮನಾರ್ಹವಾದ ಏರಿಕೆ ಕಂಡು ಬಂದಿದ್ದು, ಈ ಗ್ರಾಮಗಳ ನೂರಾರು ಎಕರೆ ಕೃಷಿ ಜಮೀನುಗಳು ಜಲಾವೃತವಾಗಿವೆ. ಬಾಳೆ, ಕಬ್ಬು, ಭತ್ತ, ಜೋಳದ ಗದ್ದೆಗಳು ಮುಳುಗಡೆಯಾಗಿವೆ. ಎರಡು ಮೂರು ದಿನ ನೀರು ನಿಂತರೆ ಬೆಳೆ ನಷ್ಟ ಖಚಿತ ಎಂದು ಹೇಳುತ್ತಾರೆ ಗ್ರಾಮಸ್ಥರು.

ತಾಲ್ಲೂಕಿನ ದ್ವೀಪ ಗ್ರಾಮ ಯಡಕುರಿಯಾದ ಶ್ರೀ ಸಿದ್ದಪ್ಪಾಜಿ ದೇವಸ್ಥಾನ ಹಾಗೂ ಗ್ರಾಮದ ಕೆಲ ರಸ್ತೆಗಳು ನೀರಿನಿಂದ ಜಲಾವೃತವಾಗಿವೆ. ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದ ಹುಲ್ಲಿನ ಮೆದೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ತಾಲ್ಲೂಕಿನ ಧನಗೆರೆ ಕಟ್ಟೆಗೆ ಹೋಗುವ ಜಮೀನಿನ ರಸ್ತೆಯು ನೀರಿನಿಂದ ಮುಳುಗಡೆಯಾಗಿದೆ. ಮರಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಜಾನುವಾರುಗಳಿಗೆ ಮೇವು ಕೊರತೆಯಾಗುವ ಆತಂಕವನ್ನು ಜನರು ವ್ಯಕ್ತಪಡಿಸಿದ್ದಾರೆ.

ಈಡೇರದ ಭರವಸೆ: ನೆರೆ ಬಾರದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಆದರೆ, ಇದುವರೆಗೆ ಯಾವುದೇ ಕೆಲಸ ಆಗಿಲ್ಲ.

2019ರಲ್ಲಿ ನೆರೆ ಉಸ್ತುವಾರಿ ಹೊತ್ತಿದ್ದ, ಈಗಿನ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ್ದರು. ಮುಳ್ಳೂರು ಗ್ರಾಮದಲ್ಲಿ ನೆರೆ ಪರಿಸ್ಥಿತಿಯನ್ನು ವೀಕ್ಷಣೆ ಮಾಡಿ, ‘ಈ ಗ್ರಾಮವನ್ನು ದತ್ತು ತೆಗೆದುಕೊಳ್ಳುತ್ತೇನೆ’ ಎಂದು ಭರವಸೆ ನೀಡಿದ್ದರು.

‘ಕಾವೇರಿ ನದಿ ತೀರಕ್ಕೆ ತಡೆಗೋಡೆ ನಿರ್ಮಿಸಿ ಶಾಶ್ವತ ಪರಿಹಾರ ಕಲ್ಪಿಸುವ ಯೋಜನೆಯನ್ನು ಪ್ರಸ್ತಾಪಿಸಿದ್ದರು. ಈ ಬಗ್ಗೆ ಮುಂದುವರಿಯಿರಿ’ ಎಂದು ಶಾಸಕರು ಹಾಗೂ ಅಧಿಕಾರಿಗಳಿಗೂ ತಿಳಿಸಿದ್ದರು. ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಹೇಳಿ ಹೋದವರು ಮತ್ತೆ ಗ್ರಾಮದ ಕಡೆ ಮುಖ ಹಾಕಿಲ್ಲ’ ಎಂದು ಗ್ರಾಮಸ್ಥರು ಆರೋಪಿಸಿದರು.

‘ಯೋಜನೆ ರೂಪಿಸಿದ್ದು ನಿಜ’

‘ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪ್ರತಿ ವರ್ಷ ಪ್ರವಾಹ ಬಂದಾಗ ತಡೆಗೋಡೆ ನಿರ್ಮಿಸುತ್ತೇವೆ ಎಂದು ಸುಳ್ಳು ಹೇಳಿ ಹೋಗುತ್ತಾರೆ. ಅವರಿಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೇನೂ ತಿಳಿದಿಲ್ಲ. ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ’ ಎಂದು ದಾಸನಪುರ ರಾಜಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಾಸಕ ಎನ್‌.ಮಹೇಶ್‌ ಅವರು, ‘ಕಾವೇರಿ ನದಿಯಲ್ಲಿ ನೀರು ಹೆಚ್ಚಾದಾಗ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿ ಗ್ರಾಮಕ್ಕೆ ಬರುತ್ತದೆ. ಆ ಕಾರಣ ನಾವು ನದಿ ತೀರಗಳಿಗೆ ತಡೆ ಗೋಡೆ ನಿರ್ಮಿಸಬೇಕು ಎಂಬ ಯೋಜನೆಯನ್ನು ರೂಪಿಸಿದ್ದೆವು. ಎರಡು ವರ್ಷಗಳಿಂದ ಕೋವಿಡ್ ಕಾರಣ ಹಣ ಬಿಡುಗಡೆಯಾಗಲಿಲ್ಲ ಈ ವರ್ಷ ಬಿಡುಗಡೆಯಾದರೆ ತಡೆಗೋಡೆ ನಿರ್ಮಿಸುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT