ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ನಗರ ಸ್ವಚ್ಛತೆಗೆ ಹೂ ಕುಂಡಗಳು!

ಕೊಳ್ಳೇಗಾಲ ನಗರಸಭೆಯ ಹೊಸ ಪ್ರಯತ್ನ ಕಾಣುವುದೇ ಯಶಸ್ಸು?
Last Updated 11 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಜನರು ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದನ್ನು ತಪ‍್ಪಿಸಿ, ಆ ಸ್ಥಳದ ಸೌಂದರ್ಯ ಕಾಪಾಡುವುದಕ್ಕಾಗಿ ಇಲ್ಲಿನ ನಗರಸಭೆಯು ಎಲ್ಲ ವಾರ್ಡ್‌ಗಳಲ್ಲಿ ಹೂ ಕುಂಡಗಳನ್ನು ಇಟ್ಟಿದೆ.

ಅಮೃತ್ ನಿರ್ಮಲ್ ನಗರ ಯೋಜನೆಯಡಿ ₹3 ಲಕ್ಷ ವೆಚ್ಚದಲ್ಲಿ ಹೂಕುಂಡಗಳನ್ನು ನಗರಸಭೆ ಖರೀದಿಸಿದೆ. ಜನರು ಹೆಚ್ಚು ಕಸಗಳನ್ನು ಎಸೆಯುವ ಜಾಗದಲ್ಲಿ ಇವುಗಳನ್ನು ಇಟ್ಟಿದ್ದು, 'ಇಲ್ಲಿ ಕಸವನ್ನು ಎಸೆಯಬಾರದು. ಎಸೆದರೆ ದಂಡ ವಿಧಿಸಲಾಗುವುದು’ ಎಂಬ ಎಚ್ಚರಿಕೆ ಫಲ‌ಕವನ್ನೂ ಅಳವಡಿಸಿದೆ.

ಹೂಕುಂಡಗಳಿರುವ ಸ್ಥಳಗಳಲ್ಲೂ ಕೆಲವರು ಕಸ ಎಸೆಯುವುದನ್ನು ಮುಂದುವರಿಸಿರುವುದರಿಂದ ನಗರಸಭೆಯ ಹೊಸ ಪ್ರಯೋಗಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತದೆ ಎಂಬುದನ್ನು ನೋಡಬೇಕಿದೆ.

ಕೆಲವು ಬಡಾವಣೆಯ ಜನರು, ಅಂಗಡಿಗಳ ಮಾಲೀಕರು ಜನರು ಕಸ ಹಾಕುವುದನ್ನು ತಪ್ಪಿಸುವುಕ್ಕೆ ದೇವರ ಫೋಟೊಗಳ ಮೊರೆ ಹೋಗಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ದೇವರ ಫೋಟೊಗಳನ್ನು ಇಟ್ಟು ಇಲ್ಲಿ ಕಸ ಹಾಕಬಾರದು ಎಂಬ ಫಲಕಗಳನ್ನು ಅಳವಡಿಸಿದ್ದಾರೆ.

ಬದಲಾಗದ ಜನ: ಪೌರ ಕಾರ್ಮಿಕರು ಮನೆ ಮನೆಗಳಿಗೆ ವಾಹನಗಳ ಮೂಲಕ ಬಂದು ಕಸ ಸಂಗ್ರಹಿಸುತ್ತಿದ್ದರೂ, ಹಲವರು ಕಾರ್ಮಿಕರಿಗೆ ತ್ಯಾಜ್ಯ ನೀಡದೆ ಸಾರ್ವಜನಿಕ ಸ್ಥಳಗಳಲ್ಲಿ ಹಾಕುತ್ತಿರುವ ಪ್ರವೃತ್ತಿ ಮುಂದುವರಿಸಿದ್ದಾರೆ. ನಗರಸಭೆ ಸಿಬ್ಬಂದಿ ಸಾರ್ವಜನಿಕರು ಓಡಾಡುವ ಸ್ಥಳದಿಂದ ಕಸ ತೆರವುಗೊಳಿಸಿದರೂ ಮರು ದಿನ ಅಷ್ಟೇ ಕಸ ಅಲ್ಲಿ ಬಿದ್ದಿರುತ್ತದೆ.

ಹೂವಿನ ಕುಂಡ ಇಟ್ಟು, ಆ ಸ್ಥಳದ ಸೌಂದರ್ಯವನ್ನು ಹೆಚ್ಚಿಸಿ, ಜನರಲ್ಲಿ ಜಾಗೃತಿ ಮೂಡಿಸಿದರೆ ಕಸ ಹಾಕುವುದು ಕಡಿಮೆಯಾಗಬಹುದು ಎಂಬ ಉದ್ದೇಶದಿಂದ ಈ ಪ್ರಯತ್ನ ಮಾಡಿದ್ದೇವೆ. ಬೀದಿ ನಾಟಕಗಳ ಮೂಲಕ ಅರಿವು ಮೂಡಿಸುವ ಪ್ರಯತ್ನವೂ ನಡೆಯುತ್ತಿದೆ ಎಂದು ನಗರಸಭೆ ಅಧ್ಯಕ್ಷೆ ರೇಖಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರದ ದೇವಾಂಗ ಪೇಟೆ, ಬಳೆ ಪೇಟೆ, ಓಂ ಶಕ್ತಿ ದೇವಸ್ಥಾನದ ರಸ್ತೆ, ನಾಯಕರ ಬೀದಿ, ಚಿನ್ನದ ಅಂಗಡಿ ಬೀದಿ, ಹೊಸ ಬಸ್ ನಿಲ್ದಾಣ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಡಾ.ರಾಜ್ ಕುಮಾರ್ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಕಸ ಹಾಕುವ ಸ್ಥಳಗಳಲ್ಲಿ ಸಿದ್ದಪ್ಪಾಜಿ, ಈಶ್ವರ, ಗಣಪತಿ, ಲಕ್ಷ್ಮಿ ಸರಸ್ವತಿ, ರಾಘವೇಂದ್ರ, ಶ್ರೀನಿವಾಸ, ಪಾರ್ವತಿ, ಮಹದೇಶ್ವರ, ಚಾಮುಂಡೇಶ್ವರಿ ಸೇರಿದಂತೆ ಅನೇಕ ದೇವರ ಪೋಟೊಗಳನ್ನು ಹಾಕಿದರೂ ಪ್ರಯೋಜನ ಆಗಿಲ್ಲ. ಇದರ ಜೊತೆಗೆ ನಗರಸಭೆಯವರು ಹೂವಿನ ಕುಂಡಗಳನ್ನು ಹಾಕಿದರೂ ಇದೇ ಚಾಳಿ ಮುಂದುವರೆಸುತ್ತಿದ್ದಾರೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ಮತ್ತು ನಗರಸಭೆಯವರಿಗೆ ಬೇಸರವಾಗಿದೆ. ಇನ್ನಾದರೂ ಕಸ ಹಾಕುವುದನ್ನು ತಪ್ಪಿಸಬೇಕು’ ಎಂದು ಬಳೆ ಪೇಟೆ ನಿವಾಸಿ ಕಾರ್ತಿಕ್ ಹೇಳಿದರು.

--

ಕೆಲವರು ಇ‌ನ್ನೂ ಕಸವನ್ನು ಹೊರಗಡೆ ಎಸೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ಕಡೆಗಳಲ್ಲೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ,ಕಸ ಎಸೆಯುವವರನ್ನು ಪತ್ತೆ ಮಾಡಿ ದಂಡ ಹಾಕುತ್ತೇವೆ.
-ರೇಖಾ, ಕೊಳ್ಳೇಗಾಲ ನಗರಸಭೆ ಅಧ್ಯಕ್ಷೆ

--

ಅಮೃತ್ ನಿರ್ಮಲ್ ನಗರ ಯೋಜನೆಯಡಿ ಹೂವಿನ ಕುಂಡಗಳನ್ನು ಹಾಕಲಾಗುತ್ತಿದೆ. ಜೊತೆಗೆ ಬೀದಿ ನಾಟಕ ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ
-ಭೂಮಿಕಾ, ಆರೋಗ್ಯ ನೀರಿಕ್ಷಕಿ

--

ಕಸ ಹಾಕಬೇಡಿ ಎಂದು ದೇವರ ಪೋಟೊ, ನಾಮಫಲಕವನ್ನು ಹಾಕಿದರೂ ಕೆಲವರು ಕಸ ಎಸೆಯುತ್ತಿದ್ದಾರೆ. ನಗರಸಭೆಯವರು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು
-ರಮ್ಯ, ದೇವಾಂಗ ಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT