ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಂಚಿನ ರೈತರಿಗೆ ವರವಾದ 50:50 ಯೋಜನೆ

ಮಲೆ ಮಹದೇಶ್ವರ ವನ್ಯಧಾಮ: ಸೋಲಾರ್ ಬೇಲಿ ಅರ್ಧ ವೆಚ್ಚ ಇಲಾಖೆ, ಇನ್ನರ್ಧ ವೆಚ್ಚ ರೈತನದ್ದು
Last Updated 10 ಏಪ್ರಿಲ್ 2021, 15:07 IST
ಅಕ್ಷರ ಗಾತ್ರ

ಹನೂರು: ಕಾಡಾನೆಗಳ ಹಾವಳಿ ತಡೆಯುವ ಉದ್ದೇಶದಿಂದ ಕಾಡಂಚಿನ ಪ್ರದೇಶದಲ್ಲಿ ರೈಲ್ವೆ ಕಂಬಿ ಅಳವಡಿಸಿದ ಬೆನ್ನಲ್ಲೆ ಇತರೆ ಪ್ರಾಣಿಗಳು ಅರಣ್ಯದಂಚಿನ ರೈತರ ಜಮೀನಿಗೆ ಬಾರದಂತೆ ತಡೆಯಲು ಅರಣ್ಯ ಇಲಾಖೆಯು 50:50 ಯೋಜನೆ ಅಡಿಯಲ್ಲಿ ಸೋಲಾರ್ ಬೇಲಿ ನಿರ್ಮಿಸುತ್ತಿದೆ. ಇದಕ್ಕೆ ರೈತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಮಲೆಮಹದೇಶ್ವರ ವನ್ಯಧಾಮದಲ್ಲಿ ಆನೆಕಂದಕ, ಸೋಲಾರ್ ಬೇಲಿ, ರೈಲ್ವೆ ಕಂಬಿ ಅಳವಡಿಕೆ ಬಳಿಕ ರಾಮಾಪುರ ವನ್ಯಜೀವಿ ವಲಯ ವ್ಯಾಪ್ತಿಯ ಚೆನ್ನೂರು ಗ್ರಾಮದ ಶಾಂತಕುಮಾರ್ ಹಾಗೂ ಶೆಟ್ಟಳ್ಳಿ ಗ್ರಾಮದ ಸೂಸೈನಾಥನ್, ಪಿ.ಜಿ.ಪಾಳ್ಯ ವನ್ಯಜೀವಿ ವಲಯದ ಹೊಸಪಾಳ್ಯ ಗ್ರಾಮದ ಶಿವಪ್ಪ ಹಾಗೂ ಶಿವಸ್ವಾಮಿ ಅವರ ಜಮೀನುಗಳಿಗೆ ರಿಯಾಯಿತಿ ದರದಲ್ಲಿ ಒಟ್ಟು 6 ಕಿ.ಮೀ ಸೋಲಾರ್ ಬೇಲಿ ನಿರ್ಮಿಸಲಾಗಿದೆ.

50:50 ಯೋಜನೆ:ಬೇಸಿಗೆ ಮಾತ್ರವಲ್ಲದೇ ಕೃಷಿ ಚಟುವಟಿಕೆ ಸಂದರ್ಭದಲ್ಲೂ ಕಾಡಂಚಿನ ಜನರು ವನ್ಯಪ್ರಾಣಿಗಳ ಉಪಟಳಕ್ಕೆ ಹೈರಾಣಾಗುತ್ತಾರೆ. ಅರಣ್ಯ ಇಲಾಖೆ ವತಿಯಿಂದ ಸೋಲಾರ್ ಬೇಲಿ ಹಾಗೂ ಆನೆಕಂದಕವನ್ನು ನಿರ್ಮಿಸಿದ್ದರೂ ಅದನ್ನು ದಾಟಿ ಬರುವ ಪ್ರಾಣಿಗಳು ಜಮೀನಿನಲ್ಲಿ ಬೆಳೆದಿದ್ದ ಫಸಲನ್ನು ತಿಂದು ಹಾಳು ಮಾಡುತ್ತಿದ್ದವು.

ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಲೆಮಹದೇಶ್ವರ ವನ್ಯಧಾಮದ ಅರಣ್ಯಾಧಿಕಾರಿಗಳು 2020-21ನೇ ಸಾಲಿನ 50:50 ಯೋಜನೆಯಡಿಯಲ್ಲಿಕಾಡಂಚಿನ ರೈತರ ಜಮೀನುಗಳಿಗೆ ಸೋಲಾರ್ ಬೇಲಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಒಂದು ಕಿ.ಮೀ ಸೋಲಾರ್ ಬೇಲಿ ನಿರ್ಮಾಣಕ್ಕೆ ₹2.30 ಲಕ್ಷ ವೆಚ್ಚವಾಗುತ್ತದೆ. ಇದರಲ್ಲಿ ಅರಣ್ಯ ಇಲಾಖೆ ಶೇ 50ರಷ್ಟು ಹಣ ಭರಿಸಿದರೆ, ಉಳಿದ ಅರ್ಧ ವೆಚ್ಚವನ್ನು ರೈತರು ಭರಿಸಬೇಕಾಗುತ್ತದೆ.

ಯೋಜನೆಯಡಿ ನಿರ್ಮಿಸಲಾಗುವ ಬೇಲಿಯಲ್ಲಿ ಸಾಮಾನ್ಯಕ್ಕಿಂತ ಒಂದು ಎಳೆ ತಂತಿಯನ್ನು ಹೆಚ್ಚಾಗಿ ಅಳವಡಿಸಲಾಗಿರುತ್ತದೆ. ಇದು ಭೂಮಿಗೆ ಹತ್ತಿರವಾಗುವುದರಿಂದ ಕಾಡುಹಂದಿ, ಮೊಲ ಮುಂತಾದ ಸಣ್ಣ ಪ್ರಾಣಿಗಳೂ ಜಮೀನಿಗೆ ನುಗ್ಗದಂತೆ ತಡೆಯುತ್ತದೆ.

‘ಈಗಾಗಲೇ ಎರಡು ವಲಯಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಮಾಡಲಾಗಿದೆ. ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ತಮ್ಮ ಜಮೀನಿಗೂ ಸೋಲಾರ್ ಬೇಲಿ ನಿರ್ಮಿಸಿಕೊಡಿ ಎಂಬ ಬೇಡಿಕೆಯೂ ರೈತರಿಂದ ಕೇಳಿ ಬರುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲೆಲ್ಲಿ ಅಳವಡಿಸಲು ಸಾಧ್ಯವೋ ಎಂಬುದನ್ನು ಪರಿಶೀಲಿಸಿ ಬೇಲಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು’ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.

10 ಕಿ.ಮೀ ಸೋಲಾರ್ ಬೇಲಿ:ರೈತರ ಜಮೀನಿಗೆ ಸೋಲಾರ್ ಬೇಲಿ ನಿರ್ಮಾಣದ ಜೊತೆಗೆ ರಾಮಾಪುರ ಹಾಗೂ ಪಿ.ಜಿ ಪಾಳ್ಯ ವನ್ಯಜೀವಿ ವಲಯಗಳಲ್ಲಿ 10 ಕಿ.ಮೀ ತೂಗು ಸೋಲಾರ್ ಬೇಲಿ ನಿರ್ಮಿಸಲಾಗಿದೆ. ಸೋಲಾರ್ ಬೇಲಿ ಹಾಗೂ ಆನೆಕಂದಕ ನಿರ್ಮಿಸಲಾಗದ ಸ್ಥಳಗಳಲ್ಲಿ ತೂಗು ಸೋಲಾರ್ ಬೇಲಿಯನ್ನು ನಿರ್ಮಿಸಲಾಗಿದೆ.

‘ಕೆಲವು ಕಡೆ ವನ್ಯಪ್ರಾಣಿಗಳ ಉಪಟಳ ಜಾಸ್ತಿಯಾಗಿತ್ತು. ಸಿಬ್ಬಂದಿಯನ್ನು ನಿಯೋಜಿಸಿದರೂ ನಿಯಂತ್ರಣಕ್ಕೆ ಬಂದಿರಲಿಲ್ಲ. ಆದ್ದರಿಂದ ತೂಗು ಸೋಲಾರ್ ಬೇಲಿ ನಿರ್ಮಾಣ ಮಾಡಲಾಗಿದೆ. ಕೊಂಬುಡಿಕ್ಕಿ ಹಾಗೂ ಪೊನ್ನಾಚಿ ಗ್ರಾಮಗಳಲ್ಲೂ ವನ್ಯಪ್ರಾಣಿಗಳ ಹಾವಳಿ ಜಾಸ್ತಿಯಿರುವ ಬಗ್ಗೆ ರೈತರು ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಎರಡು ಸ್ಥಳಗಳಲ್ಲಿ 30ರಿಂದ 40 ಕಿ.ಮೀ ತೂಗು ಸೋಲಾರ್ ಬೇಲಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು’ ಎಂದು ಮಲೆಮಹದೇಶ್ವರ ವನ್ಯಧಾಮದ ಡಿಸಿಎಫ್ ವಿ. ಏಡುಕುಂಡಲು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ತಿಳಿಸಿದರು.

‘50:50 ಯೋಜನೆಯಡಿ ಬೇಲಿ ನಿರ್ಮಿಸಲು ರೈತರು ವೆಚ್ಚ ಭರಿಸುವುದರಿಂದ ಅರಣ್ಯ ಇಲಾಖೆಗೆ ಅದರ ನಿರ್ವಹಣೆ ಒತ್ತಡ ಕಡಿಮೆಯಾಗಲಿದೆ’ ಎಂದು ಅವರು ಹೇಳಿದರು.

ರೈತರು ಏನಂತಾರೆ?

ಪ್ರತಿ ವರ್ಷ ನಾವು ಬೆಳೆದ ಫಸಲು ವನ್ಯಪ್ರಾಣಿಗಳ ಪಾಲಾಗುತ್ತಿತ್ತು. ಈಗ ಅರಣ್ಯ ಇಲಾಖೆ ಜೊತೆಗೂಡಿ ಸೋಲಾರ್ ಬೇಲಿ ನಿರ್ಮಿಸಿಕೊಂಡಿರುವುದರಿಂದ ಕೊಂಚ ನೆಮ್ಮದಿಯಾಗಿದೆ ಎಂದು ಹೊಸಪಾಳ್ಯದ ರೈತ ಶಿವಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆನೆಗಳು ಅಪರೂಪಕ್ಕೆ ಜಮೀನಿಗೆ ಬರುತ್ತಿದ್ದವು. ಆದರೆ ಸಣ್ಣ ಪ್ರಾಣಿಗಳು ಪ್ರತಿ ದಿನ ಜಮೀನಿಗೆ ಲಗ್ಗೆ ಇಡುತ್ತಿದ್ದವು. ಈಗ ಸೋಲಾರ್ ಬೇಲಿ ನಿರ್ಮಾಣದಿಂದ ಅವುಗಳ ಹಾವಳಿ ತಪ್ಪಿದೆ’ ಎಂದು ಚೆನ್ನೂರಿನ ಶಾಂತಕುಮಾರ್‌ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT