ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಅರಣ್ಯ ಇಲಾಖೆಗೂ ಮುಧೋಳ ನಾಯಿ

ಬಂಡೀಪುರ: ಮರಿಗಳಿಗಾಗಿ ಹುಡುಕಾಟ ಆರಂಭಿಸಿರುವ ಅಧಿಕಾರಿಗಳು
Last Updated 12 ಅಕ್ಟೋಬರ್ 2020, 16:04 IST
ಅಕ್ಷರ ಗಾತ್ರ

ಗುಂಡ್ಲುಪೇಟೆ (ಚಾಮರಾಜನಗರ): ಅರಣ್ಯ ಅಪರಾಧ ಪ್ರಕರಣಗಳಲ್ಲಿ ತೊಡಗಿದ್ದವರನ್ನು ಪತ್ತೆಹಚ್ಚಿ ಸುದ್ದಿ ಮಾಡಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಶ್ವಾನ ರಾಣಾನ ನಿವೃತ್ತಿ ನಂತರ, ಅದರ ಜಾಗದಲ್ಲಿ ಮುಧೋಳ ತಳಿಯ ನಾಯಿಗಳನ್ನು ನಿಯೋಜಿಸುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಯೋಚಿಸುತ್ತಿದ್ದಾರೆ.

ದೇಸಿ ಮತ್ತು ಕರ್ನಾಟಕದ್ದೇ ಆದ ಮುಧೋಳ ತಳಿಯ ಶ್ವಾನ ಚುರುಕಿಗೆ ಹೆಸರುವಾಸಿಯಾಗಿದೆ. ಇತ್ತೀಚೆಗೆ ಸೇನೆಗೆ ಸೇರ್ಪಡೆಗೊಳ್ಳುವ ಮೂಲಕ ಸುದ್ದಿ ಮಾಡಿತ್ತು.

ಅರಣ್ಯ ಸಂರಕ್ಷಣೆ ಕಾರ್ಯಕ್ಕೆ ಮುಧೋಳ ತಳಿಯ ಶ್ವಾನವೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿರುವ ಅಧಿಕಾರಿಗಳು, ಒಂದು ಗಂಡು ಮತ್ತು ಹೆಣ್ಣು ಶ್ವಾನ ಮರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಬಂಡೀಪುರ, ನಾಗರಹೊಳೆ ಹಾಗೂ ತಮಿಳುನಾಡಿನ ಮಧುಮಲೆ ಅರಣ್ಯದಲ್ಲಿ ನಡೆದಿದ್ದ ಹಲವು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ರಾಣಾ ಯಶಸ್ವಿಯಾಗಿತ್ತು. ಅದರ ನಿವೃತ್ತಿಯ ನಂತರ ಅದರಷ್ಟೇ ಸಾಮರ್ಥ್ಯದ ಶ್ವಾನಗಳ ಅಗತ್ಯವಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಮುಧೋಳ ಭಾಗದಲ್ಲಿ ಇರುವ ಅರಣ್ಯಾಧಿಕಾರಿಗಳಿಗೆ ಶ್ವಾನ ಹುಡುಕುವುದಕ್ಕೆ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಸೂಚಿಸಿದ್ದಾರೆ.

ಮುಧೋಳ ಸಮೀಪದ ತಿಮ್ಮಾಪುರದ ಶ್ವಾನ ಸಂಶೋಧನಾ ಕೇಂದ್ರದಿಂದ ನಾಯಿಗಳ ಖರೀದಿಗೆ ಬಾಗಲಕೋಟೆಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೇಳಿದ್ದಾರೆ.

‘ರಾಣಾ ಸದ್ಯ ಸಮರ್ಥವಾಗಿದೆ. ಆದರೆ, ಸರ್ಕಾರಿ ನೌಕರರಂತೆ ಅದಕ್ಕೂ ನಿವೃತ್ತಿ ಇದೆ. ಅದು ಬಲಿಷ್ಠವಾಗಿ ಇರುವಾಗಲೇ ಮುಧೋಳ ತಳಿ ಶ್ವಾನಗಳಿಗೆ ತರಬೇತಿ ನೀಡಿ ಕಾರ್ಯಾಚರಣೆಗೆ ತಯಾರು ಮಾಡಲು ಚಿಂತಿಸಲಾಗಿದೆ. ಇಲಾಖೆಯ ಗಮನಕ್ಕೆ ತಂದು ಶ್ವಾನದ ಮರಿಗಳಿಗೆ ಹುಡುಕಾಟ ನಡೆಸಲಾಗುತ್ತಿದೆ’ ಎಂದು‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT