ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಆರ್‌ಟಿ: ಬೇಡಗುಳಿಯಲ್ಲಿ ಸೋಲಿಗರ ಮನೆ ತೆರವು

ಜೆಸಿಬಿ ಮೂಲಕ ತೆರವುಗೊಳಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಬುಡಕಟ್ಟು ಅಭಿವೃದ್ಧಿ ಸಂಘ ಆಕ್ರೋಶ
Last Updated 3 ಫೆಬ್ರುವರಿ 2021, 13:33 IST
ಅಕ್ಷರ ಗಾತ್ರ

ಚಾಮರಾಜನಗರ: ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬರುವ ಬೇಡಗುಳಿಯಲ್ಲಿರುವ ಸೋಲಿಗರ ಎರಡು ಮನೆಗಳನ್ನು ಅರಣ್ಯ ಇಲಾಖೆ ತೆರವುಗೊಳಿಸಿದೆ.

‘ಇನ್ನೂ 10 ಮನೆಗಳನ್ನು ತೆರವುಗೊಳಿಸಲು ಅದು ಮುಂದಾಗಿದ್ದು, 30 ದಿನಗಳಗಾಗಿ ಮನೆ ಖಾಲಿ ಮಾಡುವಂತೆ ಅಧಿಕಾರಿಗಳು ಎಚ್ಚರಿಸಿದ್ದಾರೆ’ ಎಂದು ಸೋಲಿಗ ಮುಖಂಡರು ದೂರಿದ್ದಾರೆ.

85 ವರ್ಷದ ಮಸಣಮ್ಮ ಹಾಗೂ 40 ವರ್ಷದ ಪಾರ್ವತಮ್ಮ ಎಂಬುವವರಿಗೆ ಸೇರಿದ ಮನೆಗಳನ್ನು ಜೆಸಿಬಿ ಮೂಲಕ ಮೂರು ದಿನಗಳ ಹಿಂದೆ ಒಡೆದು ಹಾಕಲಾಗಿದೆ. ಅಧಿಕಾರಿಗಳು ಏಕಾಏಕಿ ಯಂತ್ರಗಳ ಮೂಲಕ ಮನೆ ತೆರೆವುಗೊಳಿಸಿರುವುದಕ್ಕೆ ಜಿಲ್ಲಾಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘವು ಆಕ್ರೋಶ ವ್ಯಕ್ತಪಡಿಸಿದೆ.

‘ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ತಾತ್ಕಾಲಿಕವಾಗಿ ಕಟ್ಟಡಗಳನ್ನು ಕಟ್ಟಿಕೊಳ್ಳಲಾಗಿದ್ದು, ಸೋಲಿಗರು ಆ ಪ್ರದೇಶವನ್ನು ತೆರವು ಮಾಡಲೇ ಬೇಕಾಗುತ್ತದೆ’ ಎಂದು ಬಿಆರ್‌ಟಿ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘12 ಕುಟುಂಬಗಳು 20 ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಅಲ್ಲಿ ವಾಸಿಸುತ್ತಿವೆ. ಇವರನ್ನು ಅಲ್ಲಿಂದ ಒಕ್ಕಲೆಬ್ಬಿಸಲು ಅಧಿಕಾರಿಗಳು ಹಲವು ಸಮಯದಿಂದಲೂ ಪ್ರಯತ್ನ ಪಡುತ್ತಿದ್ದಾರೆ. ಬಿಆರ್‌ಟಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ, ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ, ತೆರವುಗೊಳಿಸದಂತೆ ಹಲವು ಬಾರಿ ಮನವಿ ಮಾಡಿದ್ದೆವು. ಆದರೂ, ಮನೆಗಳನ್ನು ತೆರವುಗೊಳಿಸಿದ್ದಾರೆ. ಜೆಸಿಬಿ ಮೂಲಕ ಎಲ್ಲವನ್ನೂ ದ್ವಂಸಗೊಳಿಸಲಾಗಿದೆ’ ಎಂದು ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಡಾ.ಸಿ.ಮಾದೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೇಂದ್ರ ಸರ್ಕಾರದ 2006ರ ಅರಣ್ಯ ಹಕ್ಕು ಕಾಯ್ದೆಯ ಅಡಿಯಲ್ಲಿ ಇವರಿಗೆ ಹಕ್ಕುಪತ್ರ ನೀಡಬಹುದು. ಅಲ್ಲದೇ ಅರಣ್ಯ ಇಲಾಖೆಗಳ ನಿಯಮಕ್ಕೆ ಅನುಸಾರವಾಗಿ ಅವರಿಗೆ ಹಕ್ಕು ಪತ್ರಗಳನ್ನು ಕೊಡುವುದಕ್ಕೆ ಅವಕಾಶ ಇದೆ. ಹೀ‌ಗಿದ್ದರೂ, ಮನೆಯವರ ಒಪ್ಪಿಗೆ ಇಲ್ಲದೇ ತೆರವುಗೊಳಿಸುತ್ತಿರುವುದು ಸರಿಯಲ್ಲ. ಪಕ್ಕದಲ್ಲೇ ಇರುವ ಕಾಫಿ ಎಸ್ಟೇಟ್‌ಗಳ ಮಾಲೀಕರು ಸಾವಿರಾರು ಎಕರೆ ಅರಣ್ಯವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಗುತ್ತಿಗೆ ಅವಧಿ ಮುಗಿದರೂ ಜಾಗ ಬಿಟ್ಟುಕೊಟ್ಟಿಲ್ಲ. ಅವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳದ ಅಧಿಕಾರಿಗಳು, ಈಗ ಸೋಲಿಗರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

ಜಿಲ್ಲಾಧಿಕಾರಿ ಪರಿಶೀಲನೆ: ಈ ಮಧ್ಯೆ, ಮಂಗಳವಾರ ಬೇಡಗುಳಿಗೆ ಭೇಟಿ ನೀಡಿರುವ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಮನೆಗಳನ್ನು ತೆರವು ಮಾಡಿದ ಜಾಗಕ್ಕೂ ತೆರಳಿ ನಿವಾಸಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.

‘ಈ ವಿಚಾರವಾಗಿ ಡಿಸಿಎಫ್‌ ಅವರೊಂದಿಗೆ ಮಾತನಾಡುವ ಭರವಸೆಯನ್ನೂ ಜಿಲ್ಲಾಧಿಕಾರಿ ಅವರು ನೀಡಿದ್ದಾರೆ’ ಎಂದು ಮಾದೇಗೌಡ ಅವರು ಮಾಹಿತಿ ನೀಡಿದರು.

ಇಲಾಖೆ ಜಾಗ, ತೆರವು ಅನಿವಾರ್ಯ: ಡಿಸಿಎಫ್‌

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ಡಾ.ಜಿ.ಸಂತೋಷ್‌ಕುಮಾರ್‌ ಅವರು, ‘ಕಾಫಿ ಎಸ್ಟೇಟ್‌ಗೆ ನೀಡಿದ್ದ ಗುತ್ತಿಗೆ ಅವಧಿ ಪೂರ್ಣಗೊಂಡಿದ್ದರಿಂದ ಆ ಜಾಗ ಇಲಾಖೆಗೆ ಸುಪರ್ದಿಗೆ ಬಂದಿದೆ. ನಮ್ಮ ವಾಚರ್‌ ಒಬ್ಬರು ತಾತ್ಕಾಲಿಕವಾಗಿ ಅಲ್ಲಿ ಮನೆ ಕಟ್ಟಿಕೊಂಡಿದ್ದರು. ಅಲ್ಲಿ ನಾಲ್ಕೈದು ಕಟ್ಟಡಗಳಿವೆ. ವಾಚರ್‌ ಹಾಗೂ ಇನ್ನೂ ಕೆಲವರಿಗೆ ರಾಮಯ್ಯನ ಪೋಡುವಿನಲ್ಲಿ ಅರಣ್ಯ ಹಕ್ಕು ಪತ್ರ ನೀಡಲಾಗಿದೆ. ಈ ಜಾಗ ಇಲಾಖೆಯದ್ದಾಗಿರುವುರಿಂದ ತೆರವುಗೊಳಿಸಲೇಬೇಕಾಗುತ್ತದೆ. ನಾವು ಅವರಿಗೆ ನೋಟಿಸ್‌ ಕೂಡ ನೀಡಿದ್ದೇವೆ’ ಎಂದರು.

‘ನಾವು ಬುಡಕಟ್ಟು ಜನರ ವಿರುದ್ಧವಾಗಿಲ್ಲ. ಅವರಿಗೆ ತೊಂದರೆ ಕೊಡುವುದು ನಮ್ಮ ಉದ್ದೇಶವೂ ಅಲ್ಲ. ಅರಣ್ಯ ಹಕ್ಕು ಕಾಯ್ದೆಯ ಅಡಿಯಲ್ಲಿ ಹಕ್ಕು ಪತ್ರ ಕೊಡಬೇಕಾದರೆ, ಅವರು ಒಂದು ಪ್ರದೇಶದಲ್ಲಿ 75 ವರ್ಷಗಳಿಂದ ನೆಲೆಸಿರಬೇಕು. ಇವರೆಲ್ಲ ನಾಲ್ಕೈದು ವರ್ಷಗಳಿಂದ ಇಲ್ಲಿದ್ದಾರಷ್ಟೆ. ಅವರಿಗೆ ಹಕ್ಕು ಪತ್ರ ನೀಡಲು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದರು.

‘ಪರಿಶಿಷ್ಟ ಪಂಗಡದವರು 2005ಕ್ಕಿಂತ ಮೊದಲು ವಾಸಿಸುತ್ತಿದ್ದರೆ, ಅವರಿಗೆ ಹಕ್ಕು ಪತ್ರ ನೀಡಬಹುದು ಎಂದು ಕಾಯ್ದೆಯಲ್ಲಿದೆ. ಉಳಿದ ಅರಣ್ಯವಾಸಿಗಳಾದರೆ 75 ವರ್ಷಗಳು ಆಗಿರಬೇಕು’ ಎಂದು ಮಾದೇಗೌಡ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT