ಸೋಮವಾರ, ಜೂನ್ 14, 2021
27 °C
ಸಾರ್ವಜನಿಕ ಗಣೇಶೋತ್ಸವಕ್ಕೆ ಇದ್ದ ‘ವಿಘ್ನ’ ದೂರ, ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ

ಚಾಮರಾಜನಗರದ ಗಣೇಶ ವಿಗ್ರಹ ತಯಾರಕರಲ್ಲಿ ಮೂಡಿದ ಮಂದಹಾಸ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಗಣೇಶನ ಹಬ್ಬದ ಸಂದರ್ಭದಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಗಣೇಶೋತ್ಸವ ಹಾಗೂ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿರುವುದು ಗಣೇಶ ವಿಗ್ರಹನ ತಯಾರಕರಲ್ಲಿ ಹಾಗೂ ಸಾರ್ವಜನಿಕ ಗಣೇಶೋತ್ಸವ ಆಯೋಜಕರಲ್ಲಿ ಸಂತಸ ಉಂಟು ಮಾಡಿದೆ. 

ಈ ಮೊದಲು, ಕೋವಿಡ್‌–19 ಕಾರಣಕ್ಕೆ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅವಕಾಶ ನಿರಾಕರಿಸಿ ಸರ್ಕಾರ ಮಾರ್ಗಸೂಚಿ ಹೊರಡಿಸಿತ್ತು. 

ಜನರ ಧಾರ್ಮಿಕ ಭಾವನೆಗೆ ಸ್ಪಂದಿಸಿ, ಸಾಂಪ್ರದಾಯಿಕ ಗಣೇಶೋತ್ಸವ ಆಚರಣೆಗೆ ಧಕ್ಕೆ ಬಾರದಂತೆ ಕೆಲವು ಷರತ್ತುಗಳನ್ನು ವಿಧಿಸಿ ಪರಿಷ್ಕೃತ ಮಾರ್ಗಸೂಚಿಗಳನ್ನು ಸರ್ಕಾರ ಮಂಗಳವಾರ ಹೊರಡಿಸಿದೆ. ಜಿಲ್ಲಾ ಮಟ್ಟಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅವರೂ ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.

ಈ ವರ್ಷ ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆ ಮಾಡುವುದು, ಸಾರ್ವಜನಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸರ್ಕಾರ ನಿರ್ಧರಿಸಿದ ಬಳಿಕ ಮೂರ್ತಿ ತಯಾರಕರು ಕಂಗಾಲಾಗಿದ್ದರು. ತಯಾರಿಸಿರುವ ಗಣಪತಿ ವಿಗ್ರಹಗಳು ಮಾರಾಟವಾಗದೇ ನಷ್ಟವಾಗುವ ಭೀತಿಯಲ್ಲಿದ್ದರು. 

ಸರ್ಕಾರವು ಸಾಂಪ್ರದಾಯಿಕ ಆಚರಣೆಗೆ ಧಕ್ಕೆಯಾಗದಂತೆ ಗಣೇಶೋತ್ಸವ ನಡೆಸಲು ಅನುಮತಿ ನೀಡಿರುವುದರಿಂದ ವಿಗ್ರಹಗಳ ವ್ಯಾಪಾರ ಚುರುಕು ಪಡೆಯುವ ನಿರೀಕ್ಷೆಯಲ್ಲಿ ತಯಾರಕರು ಇದ್ದಾರೆ. 

ವ್ಯಾಪಾರದ ನಿರೀಕ್ಷೆ: ‘ಸರ್ಕಾರ ಸಾರ್ವಜನಿಕ ಕಾರ್ಯಕ್ರಮಗಳ ಮೇಲೆ ನಿರ್ಬಂಧ ವಿಧಿಸಿದ್ದರಿಂದ ಇದುವರೆಗೂ ಗಣೇಶನ ಮೂರ್ತಿಗಳ ಮಾರಾಟ ಆಗಿರಲಿಲ್ಲ. ಮನೆಗಳಲ್ಲಿ ಆಚರಿಸುವವರಿಗೆ ಮಾರಾಟ ಮಾಡುವುದಕ್ಕಾಗಿ ಅಂಗಡಿ ಇಟ್ಟಿದ್ದೆವು. ಹಾಗಿದ್ದರೂ ವ್ಯಾಪಾರ ಶುರು ಆಗಿರಲಿಲ್ಲ’ ಎಂದು ಅಮಚವಾಡಿಯ ಗಣೇಶನ ಮೂರ್ತಿ ತಯಾರಕ ಸಿದ್ದಪ್ಪಾಜಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಗಣೇಶನ ಹಬ್ಬಕ್ಕೆ ತೊಂದರೆ ಆಗಲಾರದು ಎಂಬ ಉದ್ದೇಶದಿಂದ ಕಳೆದ ವರ್ಷದ ರೀತಿಯಲ್ಲೇ ಮಣ್ಣಿನ ವಿಗ್ರಹಗಳನ್ನು ತಯಾರಿಸಿದ್ದೆವು. ಆದರೆ, ಅವಕಾಶ ಇಲ್ಲ ಎಂದಾಗ ನಷ್ಟದ ಭೀತಿಯಲ್ಲಿ ಇದ್ದೆವು. ಈಗ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿರುವುದರಿಂದ ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡುವುದಕ್ಕೆ ತೊಂದರೆ ಇಲ್ಲ. ಹಾಗಾಗಿ, ಇನ್ನು ಮುಂದೆ ವ್ಯಾಪಾರ ಆಗುವ ನಿರೀಕ್ಷೆ ಇದೆ’ ಎಂದು ಅವರು ಹೇಳಿದರು. 

ಅಮಚವಾಡಿಯಲ್ಲಿ ಸಿದ್ದಪ್ಪಾಜಿ ಹಾಗೂ ಅವರ ಅಣ್ಣ ತಮ್ಮಂದಿರ ನಾಲ್ಕು ಕುಟುಂಬಗಳು ಮೂರು ದಶಕಗಳಿಂದಲೂ ಹೆಚ್ಚು ಕಾಲದಿಂದ ಮಣ್ಣಿನ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ₹50ರಿಂದ ₹5,000 ಬೆಲೆಬಾಳುವ ವಿನಾಯಕನ ಮೂರ್ತಿಗಳು ಅವರ ಬಳಿ ಇವೆ. 

ವಿಸರ್ಜನಾ ಮೆರವಣಿಗೆಗೆ ಅವಕಾಶ ಇಲ್ಲ

ರಾಜ್ಯ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿರುವುದನ್ನು ಗಣೇಶೋತ್ಸವ ಸಂಘಟಕರು ಸ್ವಾಗತಿಸಿದ್ದಾರೆ. 

‘ಹೊಸ ಮಾರ್ಗಸೂಚಿಯಲ್ಲಿ ಸಾರ್ವಜನಿಕವಾಗಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದಕ್ಕೆ ಅವಕಾಶ ಇದೆ. ಷರತ್ತುಗಳೊಂದಿಗೆ ಸಾಂಪ್ರದಾಯಿಕವಾಗಿ ಆಚರಣೆ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಮೆರವಣಿಗೆಗೆ ಮಾಡುವುದಕ್ಕೆ ಅವಕಾಶ ಇಲ್ಲ’ ಎಂದು ಚಾಮರಾಜನಗರದ ಶ್ರೀವಿದ್ಯಾಗಣಪತಿ ಮಂಡಳಿಯ ಗೌರವ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯಂ ‘ಪ್ರಜಾವಾಣಿ’ಗೆ ತಿಳಿಸಿದರು. 

‘ನಮ್ಮದು ಈ ವರ್ಷದ್ದು 58ನೇ ವರ್ಷದ ಗಣೇಶೋತ್ಸವ. ಪರಿಷ್ಕೃತ ಮಾರ್ಗಸೂಚಿಯಂತೆ ಗಣೇಶನನ್ನು ಪ್ರತಿಷ್ಠಾಪಿಸಲು ನಿರ್ಧರಿಸಿದ್ದೇವೆ’ ಎಂದು ಅವರು ಹೇಳಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು