ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ವಿದ್ಯಾಗಣಪತಿ ವಿಸರ್ಜನೆ ಶೋಭಾಯಾತ್ರೆ ಇಂದು

ಪೊಲೀಸರಿಂದ ಬಿಗಿ ಭದ್ರತೆ, ಸೂಕ್ಷ್ಮ ಪ್ರದೇಶಗಳಲ್ಲಿ ಕಣ್ಗಾವಲು, ಪಥಸಂಚಲನ
Last Updated 21 ಅಕ್ಟೋಬರ್ 2022, 19:21 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ರಥದ ಬೀದಿಯ ಶ್ರೀ ವಿದ್ಯಾಗಣಪತಿ ಮಂಡಳಿಯು ಗಣೇಶ ಚತುರ್ಥಿ ದಿನ ಪ್ರತಿಷ್ಠಾಪಿಸಿರುವ (ಆ.31) ವಿದ್ಯಾಗಣಪತಿಯ ವಿಸರ್ಜನಾ ಮಹೋತ್ಸವ ಶನಿವಾರ (ಅ.23) ನಡೆಯಲಿದೆ.

ವಿದ್ಯಾಗಣಪತಿ ಮಂಡಳಿಯು ವಿಜೃಂಭಣೆಯ ವಿಸರ್ಜನಾ ಮೆರವಣಿಗೆಗೆ ಸಿದ್ಧತೆ ನಡೆಸಿದ್ದು, ಜಿಲ್ಲಾ ಪೊಲೀಸ್‌ ಇಲಾಖೆಯು ಬಿಗಿ ಬಂದೋಬಸ್ತ್‌ ವ್ಯವಸ್ಥೆ ಮಾಡಿದೆ.

ಶನಿವಾರ ಬೆಳಿಗ್ಗೆ 10.45ಕ್ಕೆ ವಿಸರ್ಜನೆ ಶೋಭಾಯಾತ್ರೆ ಆರಂಭವಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೇರಿದಂತೆ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಲಿದ್ದಾರೆ.

ಶೋಭಾಯಾತ್ರೆಯು ಗುರುನಂಜಶೆಟ್ಟರ ಛತ್ರದ ಮುಂಭಾಗದಿಂದ ಹೊರಟು ಖಡಕ್‌ ಮೊಹಲ್ಲಾ, ಡಾ.ಬಿ.ಆರ್.ಅಂಬೇಡ್ಕರ್ ಬೀದಿ, ಡೀವಿಯೇಷನ್ ರಸ್ತೆ, ದೇವಾಂಗ 3ನೇ ಬೀದಿ, ನಾಗಪ್ಪಶೆಟ್ಟರ ಚೌಕ, ದೊಡ್ಡಂಗಡಿ ಬೀದಿ, ಗಾಡಿಪೇಟೆ ಚೌಕ, ಮೇಗಲನಾಯಕರ ಬೀದಿ, ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದ ರಸ್ತೆ, ನಾಗಪ್ಪಶೆಟ್ಟರ ಚೌಕ, ದೊಡ್ಡಂಗಡಿ ಬೀದಿ, ಚಿಕ್ಕಅಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ವೀರಮದಕರಿನಾಯಕರ ಬೀದಿ, ಶ್ರೀ ಭಗೀರಥ ಉಪ್ಪಾರ ಬಡಾವಣೆ, ಶ್ರೀ ಆದಿಶಕ್ತಿ ದೇವಸ್ಥಾನ, ಬಣಜಿಗರ ಬೀದಿ, ಭ್ರಮರಾಂಬ 2ನೇ ಕ್ರಾಸ್, ಭ್ರಮರಾಂಬ 1ನೇ ಕ್ರಾಸ್, ಕುರುಬರ ಬೀದಿ, ಹಳ್ಳದ ಬೀದಿ, ಅಗ್ರಹಾರ ಬೀದಿ, ನಗರಸಭಾ ಕಚೇರಿ ರಸ್ತೆ, ಚಮಾಲ್ ಬೀದಿ, ವೀರಭದ್ರಸ್ವಾಮಿ ದೇವಸ್ಥಾನದ ಮುಂಭಾಗದಿಂದ ಜೈನರ ಬೀದಿ, ಕೊಳದ ಬೀದಿಯಲ್ಲಿ ಸಾಗಿ ದೊಡ್ಡರಸನ ಕೊಳದಲ್ಲಿ ಗಣಪತಿಯ ವಿಸರ್ಜನೆ ನಡೆಯಲಿದೆ.

‘ವಿಸರ್ಜನಾ ಮಹೋತ್ಸವಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿದ್ದೇವೆ. 15 ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಕೇರಳದ ಸಿಂಗಾರಿ ಮೇಳವೂ ಭಾಗವಹಿಸಲಿದೆ. ಎಲ್ಲ ಸಮುದಾಯದವರು, ಎಲ್ಲ ಪಕ್ಷಗಳ ಮುಖಂಡರು ಕೂಡ ಇದರಲ್ಲಿ ಭಾಗವಹಿಸಲಿದ್ದಾರೆ’ ಎಂದು ವಿದ್ಯಾಗಣಪತಿ ಮಂಡಳಿಯ ಅಧ್ಯಕ್ಷ ಮನೋಜ್‌ ಪಟೇಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಗಿ ಪೊಲೀಸ್‌ ಬಂದೋಬಸ್ತ್‌: ಶೋಭಯಾತ್ರೆಯ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಪೊಲೀಸ್‌ ಇಲಾಖೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಂಡಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿದೆ. ಶುಕ್ರವಾರ ಸಂಜೆಯಿಂದಲೇ ನಗರದಾದ್ಯಂತ ನಾಕಾಬಂದಿ ಹಾಕಿದೆ.

ದಕ್ಷಿಣ ವಲಯ ಐಜಿಪಿ ಪ್ರವೀಣ್‌ ಮಧುಕರ್‌ ಪವಾರ್‌ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಇತರ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು.

ಎಸ್‌ಪಿ ನೇತೃತ್ವದಲ್ಲಿ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ನಗರದ ಪ್ರಮುಖ ಬೀದಿಗಳಲ್ಲಿ ಶುಕ್ರವಾರ ಸಂಜೆ ಪಥಸಂಚಲನ ನಡೆಸಿದರು.

ಕಟ್ಟೆಚ್ಚರ, ಭದ್ರತೆಗೆ 1000 ಸಿಬ್ಬಂದಿ

ಪಥಸಂಚಲನಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್‌, ‘ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಜಿಲ್ಲೆಯ ಪೊಲೀಸರಲ್ಲದೆ, ದಕ್ಷಿಣ ವಲಯದ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಯ ನೆರವನ್ನು ಪಡೆಯಲಾಗಿದೆ. ಒಬ್ಬರು ಎಸ್‌ಪಿ, ಒಬ್ಬರು ಎಎಸ್‌ಪಿ, ಐವರು ಡಿವೈಎಸ್‌ಪಿ, 25 ಇನ್‌ಸ್ಪೆಕ್ಟರ್‌ಗಳು, 40 ಸಬ್‌ ಇನ್‌ಸ್ಪೆಕ್ಟರ್‌ಗಳು, ಕಮಾಂಡೊ ಪಡೆ, 5 ಕೆಎಸ್‌ಆರ್‌ಪಿ ತುಕಡಿಗಳು ಸೇರಿದಂತೆ 800ರಿಂದ 1000 ಸಿಬ್ಬಂದಿ ಭದ್ರತಾ ವ್ಯವಸ್ಥೆ ನೋಡಿಕೊಳ್ಳಲಾಗಿದ್ದಾರೆ’ ಎಂದರು.

‘ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ಇಡಲಾಗುವುದು. ಸಿಬ್ಬಂದಿಗೆ 25 ವಿಡಿಯೊ ಕ್ಯಾಮೆರಾ ನೀಡಲಾಗಿದೆ. 25 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿಲಾಗಿದೆ. ದೇವಾಲಯ, ಚರ್ಚ್‌, ಮಸೀದಿಗಳ ಬಳಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ.. ಗುಪ್ತಚರ, ಅಪರಾಧ ಘಟಕಗಳನ್ನೂ ನಿಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಬೆಳಿಗ್ಗೆ 10.45ಕ್ಕೆ ಶೋಭಾಯಾತ್ರೆ ಆರಂಭವಾಗಲಿದೆ. ಸರ್ಕಾರ, ಸುಪ್ರೀಂ ಕೋರ್ಟ್‌ನ ನಿಯಮಗಳನ್ನು ಪಾಲಿಸುತ್ತ ಉತ್ಸವವನ್ನು ನಡೆಸಲಾಗುವುದು.
ಮ‌ನೋಜ್‌ ಪಟೇಲ್‌, ಶ್ರೀ ವಿದ್ಯಾಗಣಪತಿ

ಗಣಪತಿ ವಿಸರ್ಜನೆ ಕಾರ್ಯಕ್ರಮವನ್ನು ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಯಶಸ್ವಿಗೊಳಿಸಲು ಎಲ್ಲರೂ ನಮ್ಮೊಂದಿಗೆ ಸಹಕರಿಸಬೇಕು.
ಟಿ.ಪಿ.ಶಿವಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT