ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರದಲ್ಲಿ ಧಾರಾಕಾರ ಮಳೆ

ಗುಂಡ್ಲುಪೇಟೆಯಲ್ಲೂ ವರ್ಷಧಾರೆ
Last Updated 1 ಅಕ್ಟೋಬರ್ 2021, 3:52 IST
ಅಕ್ಷರ ಗಾತ್ರ

ಚಾಮರಾಜನಗರ: ಬಹು ದಿನಗಳ ನಂತರ ಜಿಲ್ಲಾ ಕೇಂದ್ರದ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಧಾರಾಕಾರ ಮಳೆ ಸುರಿಯಿತು.

ಸಂಜೆ 4.15ರ ಸುಮಾರಿಗೆ ಆರಂಭವಾದ ಮಳೆ, ಒಂದು ಗಂಟೆ ಎಡೆಬಿಡದೆ ಸುರಿಯಿತು. ಆ ಬಳಿಕ ರಾತ್ರಿವರೆಗೂ ತುಂತುರು ಮಳೆ ಮುಂದುವರೆಯಿತು.

ನಗರ ವ್ಯಾಪ್ತಿಯಲ್ಲಿ ಮಾತ್ರ ಮಳೆಯಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚು ಮಳೆಯಾಗಿಲ್ಲ.

ಭಾರಿ ಮಳೆಗೆ ಚರಂಡಿಗಳು ಕಟ್ಟಿಕೊಂಡು ಬಿ.ರಾಚಯ್ಯ ಜೋಡಿ ರಸ್ತೆ, ಭುವನೇಶ್ವರಿ ವೃತ್ತದಿಂದ ಚಾಮರಾಜೇಶ್ವರ ದೇವಾಲಯದತ್ತ ಹೋಗುವ ರಸ್ತೆಗಳು ಸೇರಿದಂತೆ ಹಲವು ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಯಿತು. ತಗ್ಗು ಪ್ರದೇಶಗಳಿಗೂ ನೀರು ನುಗ್ಗಿತು.

ಹಲವು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದರೂ; ಉತ್ತಮ ಮಳೆಯಾಗಿರಲಿಲ್ಲ. ತುಂತುರು ಮಳೆಗಷ್ಟೇ ಸೀಮಿತವಾಗಿತ್ತು.

ಗುರುವಾರ ಬೆಳಿಗ್ಗೆಯಿಂದಲೇ ಬಿಸಿಲಿನ ವಾತಾವರಣ ಇತ್ತು. ಮಧ್ಯಾಹ್ನ 3.30ರ ಹೊತ್ತಿಗೆ ಮೋಡ ಕವಿಯಲು ಆರಂಭಿಸಿತು. ನಾಲ್ಕು ಗಂಟೆ ನಂತರ ಮೋಡ ದಟ್ಟೈಸಿತು. 4.15ರ ಸುಮಾರಿಗೆ ಏಕಾಏಕಿ ಮಳೆ ಸುರಿಯಲು ಆರಂಭಿಸಿತು.

ಗುಂಡ್ಲುಪೇಟೆಯಲ್ಲಿ ಬಿರುಸಿನ ಮಳೆ

ಗುಂಡ್ಲುಪೇಟೆ: ತಾಲ್ಲೂಕಿನ ವಿವಿಧೆಡೆ ಹಾಗೂ ಕಾಡಂಚಿನಲ್ಲಿ ಗುರುವಾರ ಗಂಟೆಗೂ ಹೆಚ್ಚು ಕಾಲ ಭರ್ಜರಿ ಮಳೆ ಸುರಿಯಿತು.

ಒಂದು ತಿಂಗಳಿನಿಂದ ಮಳೆ ಸುರಿಯದಿದ್ದರಿಂದ ಬೆಳೆಗಳು ಒಣಗುತ್ತಿದ್ದವು. ಗುರುವಾರದ ವರ್ಷಧಾರೆ ಬೆಳೆಗೆ ಜೀವ ತುಂಬಿದೆ ಎಂದು ರೈತ ಮಹೇಶ ತಿಳಿಸಿದರು.

ಮಳೆಯನ್ನೇ ನಂಬಿ ಕೆಲವು ರೈತರು ಆಲೂಗೆಡ್ಡೆ ಸೇರಿದಂತೆ ತರಕಾರಿ ಬೆಳೆದಿದ್ದರು. ಆದರೆ ವರುಣನ ಕೃಪೆಯಾಗಿರಲಿಲ್ಲ. ಇದರಿಂದಾಗಿ ಬೆಳೆ ಒಣಗಿ ನಾಶವಾಗುವ ಹಂತಕ್ಕೆ ಬಂದಿತ್ತು. ಹಲವು ರೈತರು ಟ್ಯಾಂಕರ್ ಮೂಲಕ ನೀರು ತಂದು ಬೆಳೆಗೆ ಹಾಕಿ, ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಇದೀಗ ಜೋರು ಮಳೆಯಾಗಿರುವುದರಿಂದ ಬೆಳೆಗಳಿಗೆ ಮರು ಜೀವ ಬಂದಂತಾಗಿದೆ.

ಗುಂಡ್ಲುಪೇಟೆ ಪಟ್ಟಣದಲ್ಲಿ ಭರ್ಜರಿ ಮಳೆಯಾಗಿದ್ದರಿಂದ ಪಟ್ಟಣದ ಊಟಿ ವೃತ್ತ, ಮಡಹಳ್ಳಿ ವೃತ್ತ ಹಾಗೂ ಸರ್ಕಾರಿ ಬಸ್ ನಿಲ್ದಾಣದ ಬಳಿ ನೀರು ನಿಂತು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಯಿತು.

ಅವೈಜ್ಞಾನಿಕ: ಪಟ್ಟಣದಲ್ಲಿ ಸುರಿದ ಜೋರು ಮಳೆಯಿಂದಾಗಿ, ಸಾರ್ವಜನಿಕರು–ವಿದ್ಯಾರ್ಥಿಗಳಿಗೆ ತೊಂದರೆಯಾಯಿತು.

ಸಂಜೆ ಮಳೆಯಾಗಿ ಬಸ್ ನಿಲ್ದಾಣದ ತುಂಬಾ ಕೆರೆಯಂತೆ ನೀರು ನಿಂತಿತ್ತು. ಮಡಹಳ್ಳಿ ವೃತ್ತದಲ್ಲಿ ಚರಂಡಿ ನೀರು ತುಂಬಿ ಹರಿಯುತ್ತಿದ್ದರಿಂದ ವಿದ್ಯಾರ್ಥಿಗಳು ಕಾಲೇಜಿನಿಂದ ಬರುವುದಕ್ಕೆ ಸಮಸ್ಯೆ ಆಯಿತು.

ರಾಷ್ಟ್ರೀಯ ಹೆದ್ದಾರಿ ಬದಿಯ ಇಕ್ಕೆಲಗಳಲ್ಲಿ ಈಚೆಗೆ ಚರಂಡಿ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಿರುವುದರಿಂದ, ಮಳೆ ನೀರು ಚರಂಡಿಗೆ ಹರಿಯದೆ ರಸ್ತೆಯಲ್ಲೇ ಹರಿಯುತ್ತಿದೆ. ಇದರಿಂದಾಗಿ ಮಳೆಯಾದರೆ ಸಮಸ್ಯೆ ಆಗುತ್ತಿದೆ ಎಂದು ಆಟೊ ಚಾಲಕರೊಬ್ಬರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT