ಶುಕ್ರವಾರ, ಮಾರ್ಚ್ 31, 2023
31 °C
ರೈತರಿಗೆ ಖುಷಿ ತಂದ ವರ್ಷಧಾರ

ಚಾಮರಾಜನಗರ, ಯಳಂದೂರು, ಕೊಳ್ಳೇಗಾಲದಲ್ಲಿ ಉತ್ತಮ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ/ಯಳಂದೂರು: ಜಿಲ್ಲೆಯ ಚಾಮರಾಜನಗರ, ಯಳಂದೂರು ಹಾಗೂ ಕೊಳ್ಳೇಗಾಲ ತಾಲ್ಲೂಕುಗಳಲ್ಲಿ ಭಾನುವಾರ ಉತ್ತಮ ಮಳೆಯಾಗಿದೆ. 

ಕೆಲವು ದಿನಗಳಿಂದ ಮಳೆಯಾಗದೆ ಜಿಲ್ಲೆಯ ಹಲವು ಭಾಗಗಳಲ್ಲಿ ಬಿತ್ತನೆಗೆ ಹಿನ್ನಡೆಯಾಗಿತ್ತು. ರೈತರು ಮಳೆಯ ನಿರೀಕ್ಷೆಯಲ್ಲಿದ್ದರು. ಭಾನುವಾರ ಸುರಿದ ಮಳೆಯು ಅವರಲ್ಲಿ ಖುಷಿಯನ್ನುಂಟು ಮಾಡಿದೆ. 

ಯಳಂದೂರು ತಾಲ್ಲೂಕು ವ್ಯಾಪ್ತಿಯಲ್ಲಿ ಬಿರುಸಿನ ಮಳೆಯಾಗಿದೆ. ಕೆಸ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 6.5 ಸೆಂ.ಮೀ, ಗುಂಬಳ್ಳಿಯಲ್ಲಿ 6.6 ಸೆಂ.ಮೀ ಮಳೆ ಬಿದ್ದಿದೆ. ಚಾಮರಾಜನಗರ ತಾಲ್ಲೂಕು ವ್ಯಾಪ್ತಿಯಲ್ಲೂ ಸಾಧಾರಣದಿಂದ ಉತ್ತಮ ಮಳೆಯಾಗಿದೆ. 

ಸಂಜೆ 5 ಗಂಟೆಗೆ ನಿಧಾನವಾಗಿ ಆರಂಭವಾದ ಮಳೆ ನಂತರ ಸ್ವಲ್ಪ ಹೊತ್ತು ಬಿಟ್ಟು, ಬಿರುಸು ಪಡೆಯಿತು. ರಾತ್ರಿ 9 ಗಂಟೆಯವರೆಗೂ ಸುರಿಯುತ್ತಿತ್ತು . ಗ್ರಾಮಿಣ ಪ್ರದೇಶಗಳಲ್ಲಿ ಹೆಚ್ಚು ಬಿರುಸಿನ ವರ್ಷಧಾರೆಯಾಗಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಕೆಲವು ಗ್ರಾಮಗಳಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತು. 

ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಗುಡುಗು ಮಿಂಚು ಸಹಿತ ರಾತ್ರಿ ಮಳೆ ಆರಂಭವಾಯಿತು. 

'ಬಿತ್ತನೆಗೆ ಭೂಮಿ ಸಿದ್ಧತೆಯಲ್ಲಿ ತೊಡಗಿದ್ದ ಕೃಷಿಕರು ಮಳೆಗಾಗಿ ಕಾಯುತ್ತಿದ್ದರು. ಆರ್ದ್ರಾ ಮಳೆ ಕೊನೆ ದಿನ ಉತ್ತಮವಾಗಿ ಸುರಿಯಿತು. ಇದರಿಂದ ಬೇಸಯಗಾರರ ಮುಖದಲ್ಲಿ ಸಂತಸ ಮೂಡಿದೆ' ಎಂದು ಕೃಷಿಕ ಮಾಂಬಳ್ಳಿ ಬಸಪ್ಪ ಹೇಳಿದರು.

ಹನೂರು, ಗುಂಡಡ್ಲುಪೇಟೆ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. 

ಮನೆಗೆ ನುಗ್ಗಿದ ನೀರು

‌ಕೊಳ್ಳೇಗಾಲ: ತಾಲ್ಲೂಕಿನಾದ್ಯಂತ ಭಾನುವಾರ ಉತ್ತಮ ಮಳೆಯಾಗಿದ್ದು, ತಾಲ್ಲೂಕಿನ ಎಡಮೋಳೆ ಗ್ರಾಮದಲ್ಲಿ ಮಳೆ ನೀರು ಮನೆಗೆ ನುಗ್ಗಿದೆ. 

ಮನೆಯ ಎದುರಿನ ಚರಂಡಿ ಕಟ್ಟಿಕೊಂಡಿತ್ತು. ಹೀಗಾಗಿ ನೀರು ಸರಾಗವಾಗಿ ಹರಿಯುತ್ತಿರಲಿಲ್ಲ. ಹೀಗಾಗಿ, ಚರಂಡಿ ನೀರಿನೊಂದಿಗೆ ಬೆರೆತ ಮಳೆ ನೀರು ಮನೆಗೆ ನುಗ್ಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು