ಶನಿವಾರ, ಸೆಪ್ಟೆಂಬರ್ 25, 2021
23 °C
ಲೋಕ ಅದಾಲತ್‌ ಜಾಗೃತಿ ಗೀತೆ ಬರೆದ ನ್ಯಾಯಾಧೀಶ ಸದಾಶಿವ ಎಸ್‌.ಸುಲ್ತಾನ್‌ಪುರಿ

ಲೋಕ ಅದಾಲತ್‌: 2,962 ಪ್ರಕರಣ ಇತ್ಯರ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ವಾರಾಂತ್ಯದ ಕರ್ಫ್ಯೂ ನಡುವೆಯೇ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಶನಿವಾರ ಮೆಗಾ ಲೋಕ ಅದಾಲತ್‌ ನಡೆದಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. 

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ನೀಡಿರುವ ಅಂಕಿ ಅಂಶಗಳ ಪ್ರಕಾರ ಶನಿವಾರ ಸಂಜೆಯವರೆಗೆ, 2,962 ಪ್ರಕರಣಗಳನ್ನು ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ. ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 2,904 ಪ್ರಕರಣಗಳನ್ನು ಹಾಗೂ 58 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ.    

ನಾಲ್ಕು ತಾಲ್ಲೂಕುಗಳ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 20,148 ಪ್ರಕರಣಗಳ ಪೈಕಿ 7,806 ಪ್ರಕರಣಗಳನ್ನು ಶನಿವಾರದ ಮೆಗಾ ಲೋಕ ಅದಾಲತ್‌ಗಾಗಿ ಗುರತಿಸಲಾಗಿತ್ತು. 

ಅಡ್ಡಿಯಾಗದ ಕರ್ಫ್ಯೂ: ಕೋವಿಡ್‌ ಹರಡುವಿಕೆ ತಡೆಗಾಗಿ ಜಾರಿಗೊಳಿಸಲಾಗಿದ್ದ ವಾರಾಂತ್ಯದ ಕರ್ಫ್ಯೂವಿನಿಂದಾಗಿ ಲೋಕ ಅದಾಲತ್‌ನಲ್ಲಿ ಭಾಗವಹಿಸಲು ಬಂದಿದ್ದವರಿಗೆ ಯಾವುದೇ ತೊಂದರೆಯಾಗಲಿಲ್ಲ.  

ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನಕ್ಕಾಗಿ ಒಲವು ತೋರಿದ್ದ ಉಭಯ ಪಕ್ಷಗಾರರಿಗೆ ಹಾಗೂ ವಕೀಲರು ಹಾಗೂ ಪ್ರಕರಣಗಳಿಗೆ ಸಂಬಂಧಿಸಿದವರಿಗೆ ಹಾಜರಾಗಲು ಜಿಲ್ಲಾಡಳಿತ ಅವಕಾಶ ನೀಡಿತ್ತು. ಕೋವಿಡ್‌ ನಿಯಮಗಳನ್ನು ಪಾಲಿಸಿಕೊಂಡು ರಾಜಿ ಸಂಧಾನ ಪ್ರಕ್ರಿಯೆ ನಡೆಯಿತು. 

ಕವನ ಬರೆದ ನ್ಯಾಯಾಧೀಶ: ಲೋಕ ಅದಾಲತ್‌ನ ಉದ್ದೇಶ, ಅದರ ಲಾಭವನ್ನು ವಿವರಿಸುವ ಕವನವನ್ನು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾಶಿವ ಎಸ್‌.ಸುಲ್ತಾನ್‌ಪುರಿ ಅವರು ಬರೆದಿದ್ದು, ನಗರದ ನಮ್ಮೂರ ಥಿಯೇಟರ್ ಸಾಂಸ್ಕೃತಿಕ ಕಲಾ ಕೇಂದ್ರದ ಕಲಾವಿದರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಹಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. 

ಸೋಮವಾರವೂ ಅದಾಲತ್‌: ಈ ಸಂದರ್ಭದಲ್ಲಿ ಮಾತನಾಡಿದ ಸದಾಶಿವ ಎಸ್.ಸುಲ್ತಾನಪುರಿ ಅವರು, ‘ವಾರಾಂತ್ಯ ಕರ್ಫ್ಯೂ ನಡುವೆಯೇ ಜಿಲ್ಲಾಧಿಕಾರಿ ಅವರ ಅನುಮತಿ ಪಡೆದು ಕೋವಿಡ್ ನಿಯಮಗಳ ಪಾಲನೆಯೊಂದಿಗೆ ಲೋಕ ಅದಾಲತ್ ಆಯೋಜಿಸಲಾಗಿದೆ. ಜಿಲ್ಲೆಯ ಜನರಿಗೆ ತೊಂದರೆ ಯಾಗಬಾರದು ಎಂಬ ಉದ್ದೇಶದಿಂದ ಸೋಮವಾರ ಮಧ್ಯಾಹ್ನದ ಮೇಲೆ ಲೋಕ ಅದಾಲತ್‌ ಹಮ್ಮಿಕೊಳ್ಳಲಾಗಿದೆ. ಅದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಬೇಕು’ ಎಂದರು. 

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಧರ್ ಹಾಗೂ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು