ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಗ್ರಾಮೀಣ ಜನರನ್ನು ಪಕ್ಷವಾರು ವಿಭಜಿಸಿದ ‘ಸಂಗ್ರಾಮ’

Last Updated 23 ಡಿಸೆಂಬರ್ 2020, 8:44 IST
ಅಕ್ಷರ ಗಾತ್ರ
ADVERTISEMENT
""
""

ಗ್ರಾಮ ಪಂಚಾಯಿತಿ ಚುನಾವಣೆ ಎಂದರೆ ಅದು ಪಕ್ಷ ರಹಿತ ಚುನಾವಣೆ;‘ಪಕ್ಷ ರಾಜಕೀಯ’ಕ್ಕೆ ಇಲ್ಲಿ ಅವಕಾಶ ಇಲ್ಲ ಎಂಬುದೆಲ್ಲ ಸರ್ಕಾರಿ ಕಡತಗಳಿಗೆ ಸೀಮಿತವಾಗಿರುವ ಸಾಲುಗಳು. ವಾಸ್ತವ ಇದಕ್ಕೆ ತದ್ವಿರುದ್ಧವಾಗಿದೆ. ಈಗ ರಾಜ್ಯದಾದ್ಯಂತ ನಡೆಯುತ್ತಿರುವ ಚುನಾವಣೆ ಇದನ್ನು ಸಾರಿ ಹೇಳುತ್ತದೆ. ಚುನಾವಣೆಯಲ್ಲಿ ಪಕ್ಷಗಳ ಪ್ರಭಾವ ಎಷ್ಟಿದೆ ಎಂದರೆ, ಇದು ಊರಿನ ಜನರನ್ನು ಪಕ್ಷವಾರು ವಿಭಜನೆ ಮಾಡಿದೆ.

ಗಡಿ ಜಿಲ್ಲೆ ಚಾಮರಾಜನಗರದ ಉದಾಹಣೆಯನ್ನೇ ತೆಗದುಕೊಳ್ಳೋಣ. ಮೊದಲ ಹಂತದಲ್ಲಿ ಗ್ರಾಮೀಣ ಜನರು ಭಾರಿ ಉತ್ಸಾಹದಲ್ಲಿ ಪಾಲ್ಗೊಂಡಿದ್ದಾರೆ. ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ ತಾಲ್ಲೂಕುಗಳಲ್ಲಿ ಶೇ 85.70ರಷ್ಟು ಮತದಾನವಾಗಿದೆ. ಅದರಲ್ಲೂ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಶೇ 88.26ರಷ್ಟು ಮಂದಿ ಮತಚಲಾಯಿಸಿದ್ದಾರೆ. ಸಾಮಾನ್ಯವಾಗಿ ಲೋಕಸಭೆ, ವಿಧಾನಸಭಾ ಚುನಾವಣೆಗಳಲ್ಲೂ ಇಷ್ಟು ಪ್ರಮಾಣದಲ್ಲಿ ಮತದಾನವಾಗುವುದಿಲ್ಲ.

ಅಭ್ಯರ್ಥಿಗಳು, ಕುಟುಂಬದವರು, ಬಂಧುಗಳ ಒತ್ತಡದ ಮೇರೆಗೆ ದೂರದ ಊರಿನಲ್ಲಿರುವವರು ಕೂಡ ಸಂಸಾರ ಸಮೇತರಾಗಿ ಬಂದು ಹಕ್ಕು ಚಲಾಯಿಸಿದ್ದಾರೆ. ಇದಕ್ಕೆ ಕಾರಣವಾಗಿದ್ದು ಪಕ್ಷಗಳ ಹಾಗೂ ಮುಖಂಡರ ಪ್ರತಿಷ್ಠೆ. ಗೆಲ್ಲಲೇ ಬೇಕು ಎಂಬ ಹಟ ತೊಟ್ಟಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಕಾರ್ಯಕರ್ತರು,ಮುಖಂಡರು ತಮ್ಮ ಊರಿನಲ್ಲಿ ಹೆಚ್ಚು ಜನರು ಬಂದು ಮತ ಚಲಾಯಿಸುವಂತೆ ನೋಡಿಕೊಂಡಿದ್ದಾರೆ.

ಮತಗಟ್ಟೆ ಬಳಿ ಕುಳಿತಿದ್ದ ಅಭ್ಯರ್ಥಿಗಳ ಬೆಂಬಲಿಗರು

ಈ ಬಾರಿಯ ಹಳ್ಳಿ ರಾಜಕಾರಣವನ್ನು ಗಮನಿಸಿದರೆ ಹಿಂದೆಂದಿಗಿಂತಲೂ ಪಕ್ಷಗಳ ಪ್ರಭಾವ ಹೆಚ್ಚಿರುವುವಂತೆ ಕಾಣಿಸುತ್ತದೆ. ಗ್ರಾಮ ಪಂಚಾಯಿತಿಗಳಲ್ಲಿ ಬೆರೆಳೆಣಿಕೆಯ ಅಭ್ಯರ್ಥಿಗಳನ್ನು ಬಿಟ್ಟು ಉಳಿದವರೆಲ್ಲರೂ ಪಕ್ಷಗಳ ಹೆಸರು ಹೇಳಿಕೊಂಡೇ ಸ್ಪರ್ಧಿಸಿದವರು. ಚುನಾವಣಾ ಆಯೋಗ ನೀಡಿರುವ ಚಿಹ್ನೆ ಮುನ್ನಲೆಯಿದ್ದರೆ, ಅವರು ಪ್ರತಿನಿಧಿಸುವ ಪಕ್ಷದ ಚಿಹ್ನೆ ಹಿನ್ನಲೆಯಲ್ಲಿ ಅವರ ಬೆನ್ನಿಗಿದೆ.

ಜಿಲ್ಲೆಯಾದ್ಯಂತ ಪಕ್ಷಗಳ ಮುಖಂಡರು, ಶಾಸಕರು, ಸಚಿವರು ಅಭ್ಯರ್ಥಿಗಳ ಆಯ್ಕೆ, ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಅಭ್ಯರ್ಥಿಗಳೂ ಅಷ್ಟೇ; ಪಕ್ಷದ ಹೆಸರು ಹೇಳಿಕೊಂಡೇ ಪ್ರಚಾರ ನಡೆಸಿದ್ದಾರೆ.

ಮೊದಲ ಹಂತದ ಮತದಾನದ ದಿನ ಹಳ್ಳಿ ಪಂಚಾಯಿತಿ ಕಣದಲ್ಲಿ ಪಕ್ಷಗಳ ಪ್ರಭಾವ ಸ್ಪಷ್ಟವಾಗಿ ಹೋಯಿತು.ಮತಗಟ್ಟೆಗಳಿಂದ 200 ಮೀಟರ್‌ ದೂರದಲ್ಲಿ ಪಕ್ಷಗಳು ತಮ್ಮ ಕಾರ್ಯಕರ್ತರನ್ನು ಇರಿಸಿ ಜನರಿಗೆ ಮತದಾರರ ಪಟ್ಟಿಯಲ್ಲಿರುವ ವಿವರಗಳನ್ನು ನೀಡುತ್ತಿದ್ದವು. ಅಭ್ಯರ್ಥಿಗಳು ಕೂಡ, ‘ನಮ್ಮ ಪಕ್ಷವನ್ನು ಮರೆಯಬೇಡಿ’ ಎಂದು ಜನರಿಗೆ ಕೈಮುಗಿದು ಮತಗಟ್ಟೆಗಳಿಗೆ ಕಳುಹಿಸುತ್ತಿದ್ದರು.

ಚಾಮರಾಜನಗರ ತಾಲ್ಲೂಕಿನ ಮುಕ್ಕಡಹಳ್ಳಿ ಹಾಗೂ ನಾಗವಳ್ಳಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಬೆಂಬಲಿಗರ ನಡುವೆ ಮತದಾನದ ವಿಚಾರದಲ್ಲಿ ಮಾತಿನ ಚಕಮಕಿಯೂ ನಡೆದಿದೆ.

ಯುವ ಅಭ್ಯರ್ಥಿಗಳು ತಾವು ಬಿಜೆಪಿ ಎಂದು ಹೇಳಿಕೊಂಡರೆ, ನಡುವಯಸ್ಸಿನವರು ತಾವು ಕಾಂಗ್ರೆಸ್‌ ನಿಂದ ಸ್ಪರ್ಧಿಸಿದ್ದೇವೆ ಎಂದು ಬಹಿರಂಗವಾಗಿಯೇ ಹೇಳಿಕೊಳ್ಳುತ್ತಿದ್ದರು.

‘ಹಲವು ವರ್ಷಗಳಿಂದ ಗ್ರಾಮದಲ್ಲಿ ಕಾಂಗ್ರೆಸ್‌ನವರೇ ಗೆಲ್ಲುತ್ತಿದ್ದಾರೆ. ಏನೂ ಅಭಿವೃದ್ಧಿ ಮಾಡಿಲ್ಲ. ಈ ಬಾರಿ ಗ್ರಾಮದಲ್ಲಿ ಬದಲಾವಣೆ ತರಬೇಕು ಎಂದು ಬಿಜೆಪಿಯಿಂದ ಕಣಕ್ಕಿಳಿದಿದ್ದೇನೆ. ಇಡೀ ಗ್ರಾಮದಲ್ಲಿ ಪಕ್ಷಕ್ಕೆ ಜನರ ಬೆಂಬಲ ಉತ್ತಮವಾಗಿದೆ’ ಎಂಬುದು ಚಾಮರಾಜನಗರ ತಾಲ್ಲೂಕಿನ ಜ್ಯೋತಿಗೌಡನಪುರದ ಯುವ ಅಭ್ಯರ್ಥಿಯೊಬ್ಬರ ಮಾತು.

‘ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಜನರು ಕೂಡ ಮಾತೆತ್ತಿದ್ದರೆ ಆ ಪಕ್ಷ, ಈ ಪಕ್ಷ ಎಂದು ಹೇಳುತ್ತಿದ್ದಾರೆ. ಯಾರೂ ಬಂದರೂ ಜನರ ಸಮಸ್ಯೆಗೆ ಸ್ಪಂದಿಸುವವರಿಲ್ಲ. ಅಭಿವೃದ್ಧಿ ಮಾಡುವವರಿಲ್ಲ’ ಎಂದು ಕೊಳಚೆ ನೀರು ಕಟ್ಟಿದ್ದ ಗ್ರಾಮದ‌ ಚರಂಡಿಯನ್ನು ತೋರಿಸುತ್ತಾ, ರೈತ ಸಂಘದ ಮುಖಂಡರೊಬ್ಬರು ಹೇಳಿದರು. ಅವರು ಕೂಡ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕಿನಲ್ಲಂತೂ ಪಕ್ಷವಾರು ವಿಭಜನೆ ಸ್ಪಷ್ಟವಾಗಿ ಗೋಚರಿಸಿದೆ. 34 ಗ್ರಾಮ ಪಂಚಾಯಿತಿಗಳ ಪೈಕಿ ಹೆಚ್ಚಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಬಣಗಳು ಹುಟ್ಟಿಕೊಂಡಿವೆ. ಬಿಜೆಪಿ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಹಾಗೂ ಕಾಂಗ್ರೆಸ್‌ ಮುಖಂಡ ಎಚ್‌.ಎಂ.ಗಣೇಶ್‌ ಪ್ರಸಾದ್‌ ಅವರ ಬೆಂಬಲಿಗರ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆದಿದೆ.

ಮತದಾನದ ದಿನ ‘ಮತದಾರರ ಪ್ರಭು’ಗಳನ್ನು ಒಲಿಸಲು ಅಭ್ಯರ್ಥಿಯ ಕೊನೆ ಕ್ಷಣದ ಕಸರತ್ತು

ಯುವ ಸಮೂಹ ಬಿಜೆಪಿಯತ್ತ ವಾಲಿದರೆ, ವಯಸ್ಕರು ಕಾಂಗ್ರೆಸ್‌ನತ್ತ ಒಲವು ತೋರಿದ್ದಾರೆ ಎಂದು ಹೇಳುತ್ತಾರೆ ಮುಖಂಡರು.ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ, ಯಾವ ಪಕ್ಷದ ಪರವೂ ಇಲ್ಲದೇ ಸ್ವತಂತ್ರವಾಗಿ ಸ್ಪರ್ಧಿಸಿರುವ ಕೆಲವರ ಮೇಲೆ ಒತ್ತಡ ಹಾಕಿ ನಾಮಪಾತ್ರ ವಾಪಸ್‌ ಪಡೆಯುವಂತೆಯೂ ಮಾಡಲಾಗಿದೆ.

ಎರಡನೇ ಹಂತದ ಚುನಾವಣೆಯ ಅಖಾಡವೂ ಇದ‌ಕ್ಕಿಂತ ಭಿನ್ನವಾಗಿಲ್ಲ. ಯಳಂದೂರು, ಕೊಳ್ಳೇಗಾಲದಲ್ಲಿ ಬಿಜೆಪಿ, ಕಾಂಗ್ರೆಸ್‌ ಮುಖಂಡರು ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ. ಹನೂರಿನಲ್ಲಿ ಜೆಡಿಎಸ್‌ ಪ್ರಬಲವಾಗಿದ್ದು ಉಳಿದ ಎರಡು ಪಕ್ಷಗಳಿಗೆ ಪೈಪೋಟಿ ನೀಡುತ್ತಿದೆ. ಗ್ರಾಮೀಣ ಜನರು ಜೆಡಿಎಸ್‌ ಪರ ಒಲವು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಕೂಡ ಜನರು ಸೆಳೆಯಲು ಭಾರಿ ಪ್ರಯತ್ನ ನಡೆಸುತ್ತಿವೆ.

ಗ್ರಾಮೀಣ ಭಾಗಗಳಲ್ಲಿ ಪಕ್ಷಗಳ ಪ್ರಭಾವಕ್ಕೆ ಮುಖ್ಯ ಕಾರಣ ಸ್ಥಳೀಯ ಶಾಸಕರು, ಪಕ್ಷಗಳ ಮುಖಂಡರ ಪ್ರತಿಷ್ಠೆ. ಗ್ರಾಮೀಣ ಮಟ್ಟದಲ್ಲಿ ತಮ್ಮ ಹಾಗೂ ಪಕ್ಷದ ಪ್ರಭಾವವನ್ನು ವೃದ್ಧಿಸಿಕೊಳ್ಳಲು ಈ ಚುನಾವಣೆಯನ್ನು ಅವರು ಬಳಸಿಕೊಳ್ಳುತ್ತಾರೆ. ಅದಕ್ಕೆ ಬೇಕಾಗಿ ಎಲ್ಲ ಸರ್ಕಸ್‌ಗಳನ್ನು ಮಾಡುತ್ತಾರೆ. ಫಲಿತಾಂಶ ಹೊರ ಬಿದ್ದ ನಂತರ, ಹೆಚ್ಚು ಬೆಂಬಲಿಗರು ಗೆದ್ದರೆ ಅದನ್ನು ತಮ್ಮದೇ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಾರೆ. ಒಂದು ವೇಳೆ ಕಡಿಮೆ ಸ್ಥಾನ ಬಂದರೆ, ‘ಇದು ಪಕ್ಷದ ಅಡಿಯಲ್ಲಿ ನಡೆಯುವ ಚುನಾವಣೆ ಅಲ್ಲ’ ಎಂಬ ಹೇಳಿಕೆ ನೀಡಿ, ತಮಗೂ ಅದಕ್ಕೂ ಸಂಬಂಧವಿಲ್ಲದಂತೆ ಸುಮ್ಮನಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT