ಭಾನುವಾರ, ಜನವರಿ 19, 2020
23 °C
ಜಿಲ್ಲೆಯಲ್ಲಿ ಶಂಕಿತ ಉಗ್ರನ ವಾಸ್ತವ್ಯ, ಅಡಗುತಾಣವಾಯಿತೇ ಗುಂಡ್ಲುಪೇಟೆ?

ಮೌಲ್ವಿಯ ಮತ್ತೆ ವಿಚಾರಣೆಗೆ ಕರೆದ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಶಂಕಿತ ಭಯೋತ್ಪಾದಕರ ಚಲನವಲನಗಳಿಗೆ ಸಂಬಂಧಿಸಿದಂತೆ ಗುಂಡ್ಲುಪೇಟೆ ಪಟ್ಟಣ ವ್ಯಾಪ್ತಿಯ ಮೌಲ್ವಿಯೊಬ್ಬರನ್ನು ಭಾನುವಾರ ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದ ಬೆಂಗಳೂರಿನ ಪೊಲೀಸರು ಮಂಗಳವಾರ ಮತ್ತೆ ವಿಚಾರಣೆಗಾಗಿ ಕರೆಸಿಕೊಂಡಿದ್ದಾರೆ. 

ಅಜ್ಞಾತ ಸ್ಥಳವೊಂದರಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಗೊತ್ತಾಗಿದೆ. ಇಸ್ಲಾಮಿಕ್‌ ಸ್ಟೇಟ್‌ನೊಂದಿಗೆ ನಂಟು ಹೊಂದಿದ್ದಾನೆ ಎನ್ನಲಾದ ಶಂಕಿತ ಉಗ್ರ ಮೆಹಬೂಬ ಪಾಷಾ ಗುಂಡ್ಲುಪೇಟೆಯಲ್ಲಿ ಉಳಿದುಕೊಂಡಿದ್ದ ಎಂಬ ಮಾಹಿತಿ ಖಚಿತವಾಗುತ್ತಿದ್ದಂತೆಯೇ ಆತನಿಗೂ ಹಾಗೂ ಇಲ್ಲಿ ಆಶ್ರಯ ನೀಡಿದವರಿಗೂ ಇರುವ ಸಂಬಂಧವನ್ನು ಪತ್ತೆ ಹಚ್ಚಲು ಪೊಲೀಸರು ಯತ್ನಿಸುತ್ತಿದ್ದಾರೆ. 

ಶನಿವಾರ ರಾತ್ರಿ ಇಬ್ಬರನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆದೊಯ್ದಿದ್ದ ಪೊಲೀಸರು, ಮೌಲ್ವಿಯನ್ನು ಭಾನುವಾರ ಬಿಡುಗಡೆ ಮಾಡಿದ್ದರು. ಮತ್ತೊಬ್ಬರನ್ನು ಸೋಮವಾರ ಮನೆಗೆ ಕಳುಹಿಸಿದ್ದರು. ಕರೆದಾಗಲೆಲ್ಲ ವಿಚಾರಣೆಗೆ ಬರಬೇಕು ಎಂದು ತನಿಖಾಧಿಕಾರಿಗಳು ಇಬ್ಬರಿಗೂ ಸೂಚಿಸಿದ್ದರು. ಅದರಂತೆ, ಮೌಲ್ವಿಯನ್ನು ಮತ್ತೆ ವಿಚಾರಣೆಗೆ ಕರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಡಗುತಾಣವೇ?: ಈ ಮಧ್ಯೆ, ಶಂಕಿತ ಉಗ್ರ ಜಿಲ್ಲೆಯಲ್ಲಿ ಆಶ್ರಯ ಪಡೆದಿದ್ದ ಎಂಬ ಸಂಗತಿ ಜಿಲ್ಲೆಯ ಜನರನ್ನು ಆತಂಕದಲ್ಲಿ ಕೆಡವಿದೆ. ಶಂಕಿತ ವ್ಯಕ್ತಿಗಳು ಜಿಲ್ಲೆಯನ್ನು ಅಡಗುತಾಣವನ್ನಾಗಿ ಬಳಸುತ್ತಿದ್ದಾರೆಯೇ ಎಂಬ ಪ್ರಶ್ನೆಯನ್ನೂ ಈ ಪ್ರಕರಣ ಹುಟ್ಟುಹಾಕಿದೆ. 

‘ಚಾಮರಾಜನಗರ ಜಿಲ್ಲೆ, ಅದರಲ್ಲೂ ಗುಂಡ್ಲುಪೇಟೆಯು ಕೇರಳ ಮತ್ತು ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವುದರಿಂದ ಶಂಕಿತರು ಈ ಭಾಗದಲ್ಲಿ ಓಡಾಡುತ್ತಿರಬಹುದು. ಅಗತ್ಯ ಬಿದ್ದ ಸಂದರ್ಭದಲ್ಲಿ ಜಿಲ್ಲೆಯನ್ನು ಅಡಗುತಾಣವನ್ನಾಗಿ ಬಳಸಿಕೊಳ್ಳುವ ಸಾಧ್ಯತೆಯನ್ನೂ ತಳ್ಳಿಹಾಕಲಾಗದು’ ಎಂದು ಜಿಲ್ಲೆಯ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

‌ಗುಂಡ್ಲುಪೇಟೆಯಲ್ಲಿ ಇಬ್ಬರನ್ನು ವಶಕ್ಕೆ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಭಾರಿ ರಹಸ್ಯ ಕಾಪಾಡಿಕೊಳ್ಳುತ್ತಿದ್ದು, ಏನೂ ಮಾಹಿತಿ ನೀಡುತ್ತಿಲ್ಲ. ‘ಇಬ್ಬರನ್ನು ಕರೆದುಕೊಂಡು ಹೋಗಿದ್ದರು. ಬಿಡುಗಡೆ ಮಾಡಿದ್ದಾರೆ’ ಎಂದಷ್ಟೇ ಹೇಳುತ್ತಿದ್ದಾರೆ. 

ಶಂಕಿತ ಮೆಹಬೂಬ ಪಾಷಾನೇ ಗುಂಡ್ಲುಪೇಟೆಯಲ್ಲಿ ತಂಗಿದ್ದನೇ, ಅಥವಾ ತಂಗಿದವರು ಬೇರೆಯವರೋ ಎಂಬ ಬಗ್ಗೆ ಪೊಲೀಸರು ಭಿನ್ನ ಹೇಳಿಕೆ ನೀಡುತ್ತಿದ್ದಾರೆ.  

ಕೆಲವು ಅಧಿಕಾರಿಗಳು ‘ಆತನೇ ಇಲ್ಲಿ ಬಂ‌ದು ಉಳಿದುಕೊಂಡಿದ್ದ’ ಎಂದು ಹೇಳಿದರೆ, ‘ಮೆಹಬೂಬಾ ಪಾಷಾನ ಜೊತೆ ಸಂಪರ್ಕದಲ್ಲಿದ್ದ ವ್ಯಕ್ತಿ ಗುಂಡ್ಲುಪೇಟೆಯಲ್ಲಿ ಆಶ್ರಯ ಪ‍ಡೆದಿದ್ದ’ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. 

ಜಿಲ್ಲೆಯಾದ್ಯಂತ ಕಟ್ಟೆಚ್ಚರ

ಈ ಮಧ್ಯೆ, ಶಂಕಿತರ ಚಲನವಲನಗಳ ಮೇಲೆ ನಿಗಾ ಇಟ್ಟಿರುವ ಜಿಲ್ಲಾ ಪೊಲೀಸರು ಜಿಲ್ಲೆಯಾದ್ಯಂತ, ಅದರಲ್ಲೂ ವಿಶೇಷವಾಗಿ ಗುಂಡ್ಲುಪೇಟೆಯಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. 

ಗುಂಡ್ಲುಪೇಟೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಧರ್ಮಗುರುಗಳ ಸಭೆ ನಡೆಸಿರುವ ಪೊಲೀಸರು, ಸಂಶಯಾಸ್ಪ‌ದ ವ್ಯಕ್ತಿಗಳು, ಅಪರಿಚತ ವ್ಯಕ್ತಿಗಳ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. 

ಈ ಬೆಳವಣಿಗೆಗಳ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ ಕುಮಾರ್‌ ಅವರು, ‘ಆಂತರಿಕ ಭದ್ರತಾ ವಿಭಾಗ, ಭಯೋತ್ಪಾದನಾ ನಿಗ್ರಹ ದಳ ಹಾಗೂ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆಯ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ನಾವು ಕಟ್ಟೆಚ್ಚ‌ರ ವಹಿಸಿದ್ದೇವೆ’ ಎಂದು ಹೇಳಿದರು. 

‘ಗಡಿ ಜಿಲ್ಲೆಯಾಗಿರುವುದರಿಂದ ಹೆಚ್ಚಿನ ನಿಗಾ ವಹಿಸಬೇಕಾಗುತ್ತದೆ. ಮಸೀದಿಗಳಲ್ಲಿ, ಮದರಸಾಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಸಂಬಂಧಿಸಿದವರಿಗೆ ಸೂಚಿಸಿದ್ದೇವೆ. ಅನುಮಾನಸ್ಪದರು, ಅಪರಿಚಿತರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಲಹೆಯನ್ನೂ ನೀಡಿದ್ದೇವೆ’ ಎಂದು ಅವರು ಹೇಳಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು