ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ ಪುರಸಭೆಯಲ್ಲಿ ಬಿಜೆಪಿ ಆಡಳಿತ

ಗಿರೀಶ್‌ ಅಧ್ಯಕ್ಷ, ದೀಪಿಕಾ ಉಪಾಧ್ಯಕ್ಷೆಯಾಗಿ ಅವಿರೋಧ ಆಯ್ಕೆ, ಚುನಾವಣೆಗೆ ಗೈರಾದ ಕಾಂಗ್ರೆಸ್‌ ಸದಸ್ಯರು
Last Updated 5 ನವೆಂಬರ್ 2020, 13:06 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ನಿರೀಕ್ಷೆಯಂತೆಯೇ ಪಟ್ಟಣದ ಪುರಸಭೆಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಗುರುವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪಿ.ಗಿರೀಶ್‌ ಹಾಗೂಉಪಾಧ್ಯಕ್ಷರಾಗಿ ದೀಪಿಕಾ ಅವರುಅವಿರೋಧವಾಗಿ ಆಯ್ಕೆಯಾಗಿದ್ದಾರೆ.

23 ಸದಸ್ಯ ಬಲದ ಪುರಸಭೆಯಲ್ಲಿ ಬಿಜೆಪಿ 13 ಸ್ಥಾನಗಳನ್ನು ಹೊಂದಿ ಸರಳ ಬಹುಮತ ಪಡೆದಿದೆ. ಕಾಂಗ್ರೆಸ್‌ ಎಂಟು ಸದಸ್ಯರನ್ನು ಹೊಂದಿದ್ದರೆ, ಎಸ್‌ಡಿಪಿಐನ ಒಬ್ಬ ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ.

ಪಕ್ಷೇತರ ಸದಸ್ಯ ದೀಪು ಅವರು ಬಿಜೆಪಿಗೆ ಸೇರ್ಪಡೆಗೊಳ್ಳುವ ಮೂಲಕ ಬಿಜೆಪಿಯ ಬಲ 14ಕ್ಕೆ ಏರಿತ್ತು. ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಹಾಗೂ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಅವರಿಗೆ ಮತದಾನ ಹಕ್ಕು ಇದ್ದುದರಿಂದ ಬಿಜೆಪಿ ಅಭ್ಯರ್ಥಿಗಳಿಗೆ 16 ಮತಗಳು ಲಭ್ಯವಿತ್ತು.

ಪುರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ನಡೆಯದ ಮತದಾನ: ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಗಿರೀಶ್‌ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ದೀಪಿಕಾ ಅವರು ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್‌ನ ಎಂಟು ಸದಸ್ಯರು ಗೈರಾಗಿದ್ದರು. ಎಸ್‌ಡಿಪಿಐನ ರಾಜಗೋಪಾಲ್‌ ಅವರು ಚುನಾವಣಾ ಪ್ರಕ್ರಿಯೆಗೆ ಹಾಜರಾಗಿದ್ದರೂ ತಟಸ್ಥರಾಗಿದ್ದರು.

ಎರಡು ಸ್ಥಾನಗಳಿಗೂ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್‌ ನಂಜುಂಡಯ್ಯ ಅವರು ಗಿರೀಶ್‌ ಹಾಗೂ ದೀಪಿಕಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

ಕಾಂಗ್ರೆಸ್‌ ಶಸ್ತ್ರತ್ಯಾಗ: ಸೋಲು ಖಚಿತವಾಗಿದ್ದರಿಂದ ಕಾಂಗ್ರೆಸ್‌ ಚುನಾವಣೆಗೆ ಮುನ್ನವೇ ಶಸ್ತ್ರತ್ಯಾಗ ಮಾಡಿತ್ತು. ಎಲ್ಲ ಎಂಟು ಸದಸ್ಯರು ಚುನಾವಣೆಯಿಂದ ದೂರ ಉಳಿದರು.

ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ‌ಆಯ್ಕೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರು, ‘ನಮ್ಮ ಜಿಲ್ಲೆಯ ಎರಡು ನಗರಸಭೆಗಳು, ಈಗ ಇಲ್ಲಿನ ಪುರಸಭೆ ಕೂಡ ಬಿಜೆಪಿ ತೆಕ್ಕೆಗೆ ಬಂದಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿ ಕೆಲಸ ಮಾಡಲಾಗುವುದು’ ಎಂದರು.

ಶಾಸಕ ಸಿ.ಎಸ್.ನಿರಂಜನ ಕುಮಾರ್ ಅವರು ಮಾತನಾಡಿ, ‘ಶಾಸಕನಾದ ನಂತರ ನನ್ನ ಕ್ಷೇತ್ರದಲ್ಲಿ ಮೊದಲ ಭಾರಿಗೆ ಅಧಿಕಾರ ಹಿಡಿಯಲು ಯಶಸ್ವಿಯಾಗಿದ್ದೇವೆ. ಮುಂದಿನ ದಿನಗಳಲ್ಲಿ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿಗಳಲ್ಲಿ ಚುನಾವಣೆಗಳಲ್ಲಿ ಉತ್ತಮ ಸಾಧನೆ ಮಾಡಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಾಗುವುದು’ ಎಂದು ಹೇಳಿದರು.

ಅದ್ಧೂರಿ ವಿಜಯೋತ್ಸವ: ಪುರಸಭೆಯಲ್ಲಿ ಅಧಿಕಾರ ಹಿಡಿಯುವುದು ಖಚಿತವಾಗುತ್ತಿದ್ದಂತೆಯೇ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಂಭ್ರಮಿಸಿದರು.

ಪುರಸಭೆಯ ನೂತನ ಅಧ್ಯಕ್ಷ ಗಿರೀಶ್‌, ಶಾಸಕ ಸಿ.ಎಸ್‌.ನಿರಂಜನಕುಮಾರ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಸುಂದರ್‌ ಹಾಗೂ ಇತರ ಮುಖಂಡರು ಹಾಗೂ ಸದಸ್ಯರು ತೆರೆದ ವಾಹನದಲ್ಲಿ ರೋಡ್‌ ಶೋ ನಡೆಸಿದರು. ಕ್ರೇನ್‌ ಮೂಲಕ ಬೃಹತ್‌ ಗುಲಾಬಿ ಹಾರವನ್ನೂ ಹಾಕಲಾಯಿತು.

ಸಂಭ್ರಮಾಚರಣೆ ಸಂದರ್ಭದಲ್ಲಿ ಕೋವಿಡ್‌ ತಡೆ ನಿಯಮಗಳ ಪಾಲನೆಯನ್ನು ಮುಖಂಡರು, ಕಾರ್ಯಕರ್ತರು ಮರೆತಿದ್ದರು.

ನಿರ್ಲಕ್ಷಿಸಿದರೆ ಹೋರಾಟ: ಚುನಾವಣೆಯಲ್ಲಿ ತಟಸ್ಥರಾಗಿದ್ದ ಎಸ್‌ಡಿಪಿಐ ಸದಸ್ಯ ರಾಜ್‌ ಗೋಪಾಲ್‌ ಅವರು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಕ್ಕೆ ಗೌರವ ನೀಡಿ ಚುನಾವಣೆಯಲ್ಲಿ ಭಾಗವಹಿಸಿದ್ದೇನೆ. ಅಧಿಕಾರ ಪಡೆದಿರುವ ಬಿಜೆಪಿ ಪಟ್ಟಣದ ಅಭಿವೃದ್ಧಿಗೆ ಗಮನ ಹರಿಸಬೇಕು.ಎಲ್ಲ ವಾರ್ಡ್‌ಗಳನ್ನು ಸಮನಾಗಿ ಕಾಣಬೇಕು, ಉತ್ತಮ ಕೆಲಸಗಳನ್ನು ಮಾಡಬೇಕು. ಇಲ್ಲದಿದ್ದರೆ ಪುರಸಭೆಯ ಒಳಗೆ ಮತ್ತು ಹೊರಗೆ ಹೋರಾಟ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT