ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಜಿಲ್ಲೆಯಾದ್ಯಂತ ಉತ್ತಮ ಮಳೆ, ತಂಪಾದ ಇಳೆ

ಸೋಮವಾರ ರಾತ್ರಿ ಐದು ತಾಲ್ಲೂಕುಗಳಿಗೂ ತಂಪೆರೆದ ಮಳೆ, ಸಂತೇಮರಹಳ್ಳಿ, ಯಳಂದೂರಿನಲ್ಲಿ ಹೆಚ್ಚು ಮಳೆ
Last Updated 7 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಾದ್ಯಂತ ಸೋಮವಾರ ಮಧ್ಯರಾತ್ರಿ ಮಿಂಚು ಸಹಿತ ಉತ್ತಮ ಮಳೆ ಬಿದ್ದಿದೆ. ಕರ್ನಾಟಕ ರಾಜ್ಯ ವಿ‍‍‍ಪತ್ತು ಮೇಲ್ವಿಚಾರಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಅಂಕಿ ಅಂಶಗಳ ಪ್ರಕಾರ, ಮಂಗಳವಾರ ಬೆಳಿಗ್ಗೆ 8.30ರವರೆಗೆ 24 ಗಂಟೆಗಳ ಅವಧಿಯಲ್ಲಿ 18 ಮಿ.ಮೀ (1.8 ಸೆಂ.ಮೀ) ಮಳೆಯಾಗಿದೆ.

ಬಿಸಿಲಿನ ಝಳದಿಂದ ಬಸವಳಿದಿದ್ದ ಜನ ಹಾಗೂ ಇಳೆಗೆ ಮಳೆ ತಂಪೆರದಿದೆ. ಮಳೆಯ ನಂತರ ರಾತ್ರಿ ಇಡೀ ವಾತಾವರಣ ತಂಪಾಗಿತ್ತು. ಮಂಗಳವಾರವೂ ಮೋಡದ ವಾತಾವರಣ ಇದ್ದಿದ್ದರೂ ಹೆಚ್ಚು ಬಿಸಿಲು ಇರಲಿಲ್ಲ.

ಸೋಮವಾರ ರಾತ್ರಿಗುಂಡ್ಲುಪೇಟೆ ತಾಲ್ಲೂಕಿನಲ್ಲಿ 22 ಮಿ.ಮೀ, ಕೊಳ್ಳೇಗಾಲ ತಾಲ್ಲೂಕು (ಹನೂರು ಸೇರಿ) 16 ಮಿ.ಮೀ ಹಾಗೂ ಯಳಂದೂರು ತಾಲ್ಲೂಕಿನಲ್ಲಿ 22 ಮಿ.ಮೀ ಮಳೆ ಬಿದ್ದಿದೆ. ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿ ಹಾಗೂ ಯಳಂದೂರು ಭಾಗದಲ್ಲಿ ಬಿರುಸಿನ ಮಳೆಯಾಗಿದೆ. ಯಳಂದೂರು ಹೋಬಳಿಯಲ್ಲಿ ಅತಿ ಹೆಚ್ಚು 34 ಮಿ.ಮೀ ಮಳೆಯಾಗಿದೆ. ಸಂತೇಮರಹಳ್ಳಿ ಹೋಬಳಿಯಲ್ಲಿ 33 ಮಿ.ಮೀ ಮಳೆ ಬಿದ್ದಿದೆ.

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಬಂಡೀಪುರದ ವ್ಯಾಪ್ತಿಯ ಮೇಲುಕಾಮನಹಳ್ಳಿ, ಗೋಪಾಲಸ್ವಾಮಿ ಬೆಟ್ಟ, ಕುಂದುಕೆರೆ ವಲಯದ, ತೆರಕಣಾಂಬಿ, ಬೇಗೂರು ಹೋಬಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ.

ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ತುಂತುರು ಮಳೆಯಾಗಲಿದೆ. ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಇತರ ಕಡೆಗಳಲ್ಲೂ ಮಳೆಯಾಗಿದೆ.

ಹನೂರು ತಾಲ್ಲೂಕು ವ್ಯಾಪ್ತಿಯಲ್ಲೂ ಮಳೆ ಸುರಿದಿದ್ದು, ಸ್ವಲ್ಪ ಪ್ರಮಾಣದಲ್ಲಿ ಬೆಳೆಹಾನಿ ಸಂಭವಿಸಿದೆ. ಹೂಗ್ಯಂ ಹಾಗೂ ಗಾಜನೂರು ಗ್ರಾಮದಲ್ಲಿ ಮುಸಕಿನ ಜೋಳ ಹಾಗೂ ಕಟಾವಿಗೆ ಬಂದಿದ್ದ ಬಾಳೆ ಫಸಲು ನೆಲಕಚ್ಚಿದೆ.

ಮಿಣ್ಯಂ ಗ್ರಾಮದ ಬೆಟ್ಟದಯ್ಯ ಜಮೀನಿನಲ್ಲಿ ಬೆಳೆಯಲಾಗಿದ್ದ 3 ಸಾವಿರ ಬಾಳೆ ಮರ, ಮಧುರ ಜಮೀನಿನಲ್ಲಿ ಬೆಳೆಯಲಾಗಿದ್ದ 2 ಸಾವಿರ ಬಾಳೆ, ಮಾದೇಗೌಡ ಜಮೀನಿನಲ್ಲಿ 2600 ಬಾಳೆ, ಕಾಳಮ್ಮ ಜಮೀನಿನಲ್ಲಿ 1 ಸಾವಿರ ಬಾಳೆ, ದೇವರವರ ಜಮೀನಿನಲ್ಲಿ 1500 ಬಾಳೆ, ಗಾಜನೂರು ಗ್ರಾಮದ ದೊಡ್ಡಮ್ಮ ಬೊಮ್ಮೇಗೌಡ ಜಮೀನಿನಲ್ಲಿ 1600 ಬಾಳೆ ಗಾಳಿಗೆ ಹೊಡೆತಕ್ಕೆ ಸಿಲುಕಿ ನೆಲಕ್ಕೆ ಬಿದ್ದಿವೆ.

ಲಕ್ಷಾಂತರ ರೂಪಾಯಿ ಮೌಲ್ಯದ ಬಾಳೆ ಬೆಳೆ ನಷ್ಟವಾಗಿರುವುದರಿಂದ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವೈಜ್ಞಾನಿಕ ಪರಿಹಾರ ಒದಗಿಸಬೇಕು, ಸಂಕಷ್ಟಕ್ಕೆ ಸಿಲುಕಿದ ರೈತರು ಹಾಗೂ ರೈತ ಸಂಘಟನೆಯ ಮುಖಂಡರು ಒತ್ತಾಯಿಸಿದ್ದಾರೆ.

ಬಾಳೆ ಬೆಳೆ ನಷ್ಟ ಉಂಟಾಗಿರುವ ಬಗ್ಗೆ ಮಾಹಿತಿ ತಿಳಿದು ಮಂಗಳವಾರ ಶಾಸಕ ಆರ್.ನರೇಂದ್ರ ಹಾಗೂ ತಹಶೀಲ್ದಾರ್ ಬಸವರಾಜು ಚಿಗರಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ಅವರು ವಿವಿಧ ತೋಟಗಳಿಗೆ ಭೇಟಿ ನೀಡಿ ನಷ್ಟವಾಗಿರುವ ಬೆಳೆಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಇನ್ನೂ ಮಳೆ: ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಜಿಲ್ಲೆಯಲ್ಲಿ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಮಳೆಯಾಗಲಿದೆ.

ಮಹದೇಶ್ವರ ಬೆಟ್ಟ: ಮಂಗಳವಾರವೂ ಮಳೆ
ಸೋಮವಾರ ತಡ ರಾತ್ರಿ ಮಹದೇಶ್ವರ ಬೆಟ್ಟ ಹಾಗೂ ಸುತ್ತ ಮುತ್ತಲ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಮಂಗಳವಾರ ಸಂಜೆಯೂ ಬೆಟ್ಟದ ಸುತ್ತಮುತ್ತಲು ಮಳೆಯಾಗಿದೆ.

ಸಂಜೆ 4:30 ಹೊತ್ತಿಗೆ ಪ್ರಾರಂಭವಾದ ಮಳೆ 6 ಗಂಟೆವರೆಗೂ ಸುರಿಯಿತು. ಮಳೆಯಿಂದಾಗಿ ಬೆಟ್ಟ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ತಂಪಾದ ವಾತಾವರಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT