ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ: ಹೆದ್ದಾರಿಯಲ್ಲಿ ಭಾರಿ ಲಾರಿಗಳ ಸಂಚಾರ ನಿಷೇಧ

Last Updated 2 ಸೆಪ್ಟೆಂಬರ್ 2022, 15:21 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಹನೂರು ತಾಲ್ಲೂಕಿನ ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟ, ಪಾಲಾರ್‌ ಮೂಲಕ ತಮಿಳುನಾಡಿಗೆ ಹೋಗುವ ಅಂತರರಾಜ್ಯ ಹೆದ್ದಾರಿಯಲ್ಲಿ ಆರಕ್ಕಿಂತ ಹೆಚ್ಚು ಚಕ್ರಗಳನ್ನು ಹೊಂದಿರುವ ಭಾರಿ ಲಾರಿಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಆರು ಚಕ್ರದ ಲಾರಿಗಳ ಓಡಾಟವನ್ನೂ ರಾತ್ರಿ 9ರಿಂದ ಬೆಳಿಗ್ಗೆ 6 ಗಂಟೆಯವರೆಗೆ ನಿರ್ಬಂಧಿಸಲಾಗಿದೆ.

ಮದ್ರಾಸ್‌ ಹೈಕೋರ್ಟ್‌ನ ತೀರ್ಪಿನಂತೆ ಬೆಂಗಳೂರು–ಕೊಯಯತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ (209) ಬರುವ ತಮಿಳುನಾಡಿನ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದ ದಿಂಬಂ ಘಾಟಿಯಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 6 ಗಂಟೆಯವರೆಗೆ ವಾಹನಗಳ ಸಂಚಾರ ಸ್ಥಗಿತಗೊಂಡ ಬಳಿಕ ರಾತ್ರಿ ಹೊತ್ತಿನಲ್ಲಿ ಸರಕು ಸಾಗಣೆ ವಾಹನಗಳು ಮಹದೇಶ್ವರ ಬೆಟ್ಟ–ಪಾಲಾರ್‌ ಮೂಲಕ ಸಾಗುವ ಅಂತರರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿವೆ. ಇದರಿಂದಾಗಿ ಮಹದೇಶ್ವರ ಬೆಟ್ಟದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ಹೋಗಿತ್ತು. ರಸ್ತೆಯು ಕಿರಿದಾಗಿರುವುದರಿಂದ ಹಲವು ಅಪಘಾತಗಳೂ ಸಂಭವಿಸಿದ್ದವು. ಮಹದೇಶ್ವರ ಬೆಟ್ಟಕ್ಕೆ ಹೋಗುವ ಭಕ್ತರಿಗೂ ತೊಂದರೆಯಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಶುಕ್ರವಾರ ನಡೆದ ಶಾಸಕರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಹನೂರು ಶಾಸಕ ಆರ್.ನರೇಂದ್ರ ಅವರು ಈ ಬಗ್ಗೆ ಪ್ರಸ್ತಾಪಿಸಿದ್ದರು.ಅತಿ ಭಾರದ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕಬೇಕು ಎಂದು ಮನವಿಯನ್ನೂ ಮಾಡಿದ್ದರು.

ಇದಕ್ಕೆ ಸ್ಪಂದಿಸಿದ್ದ ಸಚಿವ ಸೋಮಣ್ಣ ಅವರು, ಅತಿ ಭಾರದ ಲಾರಿಗಳ ಸಂಚಾರವನ್ನು ರಾತ್ರಿ ಹೊತ್ತಿನಲ್ಲಿ ತಡೆಯಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.‍ಪಿ.ಶಿವಕುಮಾರ್‌ ಅವರಿಗೆ ಸೂಚಿಸಿದ್ದರು.

ಅದರಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರು ಆದೇಶ ಹೊರಡಿಸಿದ್ದಾರೆ. ಆದೇಶದಲ್ಲಿ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಮಹದೇಶ್ವರ ಬೆಟ್ಟ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಅವರ ಅಭಿಪ್ರಾಯಗಳನ್ನು ಉಲ್ಲೇಖಿಸಲಾಗಿದೆ.

‘ರಸ್ತೆ ಕಿರಿದಾಗಿದ್ದು, ಕಡಿದಾದ ತಿರುವುಗಳಿರುವುದರಿಂದ ಭಾರಿ ವಾಹನಗಳು ಸಂಚರಿಸಿದರೆ ರಸ್ತೆಗೆ ಹಾನಿಯಾಗುವುದರ ಜೊತೆಗೆ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಬೆಟ್ಟಕ್ಕೆ ಬರುವ ಸಾವಿರಾರು ಭಕ್ತರಿಗೂ ತೊಂದರೆಯಾಗಲಿದೆ. ಹೆದ್ದಾರಿಯು ವನ್ಯಧಾಮಗಳ ಹಾದು ಹೋಗಿರುವುದರಿಂದ ಅಪಘಾತದಲ್ಲಿ ವನ್ಯಜೀವಿಗಳ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇದೆ’ ಎಂದು ಆದೇಶದಲ್ಲಿ ಹೇಳಲಾಗಿದೆ.

‘ಸಾರ್ವಜನಿಕರು, ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಅಗತ್ಯ ವಸ್ತುಗಳ ಸಾಗಾಣಿಕೆ ವಾಹನಗಳು, ಅಗ್ನಿಶಾಮಕ ವಾಹನ, ಅಂಬುಲೆನ್ಸ್ ವಾಹನ, ರಾಜ್ಯ ಹಾಗೂ ಹೊರರಾಜ್ಯದ ಸರ್ಕಾರಿ, ಖಾಸಗಿ ಬಸ್‍ಗಳು, ಸರ್ಕಾರಿ ಇತರೆ ಎಲ್ಲ ರೀತಿಯ ಲಘು ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶವಿರುತ್ತದೆ’ ಎಂದು ಜಿಲ್ಲಾಧಿಕಾರಿಯವರು ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT