ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಶಾಸಕ ಎಂ.ಆರ್.ಮಂಜುನಾಥ್

Published 20 ಫೆಬ್ರುವರಿ 2024, 2:51 IST
Last Updated 20 ಫೆಬ್ರುವರಿ 2024, 2:51 IST
ಅಕ್ಷರ ಗಾತ್ರ

ಹನೂರು: ‘ಕ್ಷೇತ್ರದ ಸಮಸ್ಯೆಗಳ‌ ನಿವಾರಣೆ ಜೊತೆಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಿದ್ಧನಿದ್ದೇನೆ’ ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.

ಪಟ್ಟಣದ ವಿವೇಕಾನಂದ ಶಾಲೆಯಲ್ಲಿ ಎಸ್‌‌‌ಎಸ್‌‌ಎಲ್‌‌‌ಸಿ ಹಾಗೂ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಭರವಸೆ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಇದುವರೆಗೆ ತಾಲ್ಲೂಕಿನ ಏಳು ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲಾ ವಿದ್ಯಾರ್ಥಿಗಳೊಂದಿಗೂ ಮುಖಾಮುಖಿಯಾಗಿದ್ದೇನೆ. ಇದು ಎಂಟನೇ ಪರೀಕ್ಷಾ ಕೇಂದ್ರ. ಕಡಿಮೆ ಅವಧಿಯಲ್ಲಿ ಹೆಚ್ಚು ಶ್ರಮ ಅವಶ್ಯಕತೆಯಿದೆ. ಸಮಯವನ್ನು ಹೆಚ್ಚು ವ್ಯರ್ಥ ಮಾಡದೆ ಕಠಿಣ ಪರಿಶ್ರಮ ಬಹಳ ಮುಖ್ಯ. ಸೌಲಭ್ಯಗಳ‌ ಕೊರತೆ ನಡುವೆಯೂ ಹಿಂದಿನ ಫಲಿತಾಂಶಗಳಲ್ಲಿ ಕ್ಷೇತ್ರದ ಮಕ್ಕಳು ರಾಜ್ಯದ ಗಮನ ಸೆಳೆಯುವಂತೆ ಸಾಧನೆ ಮಾಡಿದ್ದಾರೆ. ಇಂಥ ಮಕ್ಕಳಿಗೆ ಅಗತ್ಯ ಸೌಲಭ್ಯ ಹಾಗೂ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರೆ ಅವರಿಂದ ಮತ್ತಷ್ಟು ಪರಿಣಾಮಕಾರಿ ಸಾಧನೆ ನಿರೀಕ್ಷಿಸಬಹುದು. ಈ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜತೆ ಚರ್ಚಿಸಿ ಮಕ್ಕಳಿಗೆ ಪರೀಕ್ಷೆ ಎದರಿಸಲು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲು ರಾಜ್ಯದಲ್ಲೇ ಮೊದಲ ಬಾರಿಗೆ ‘ಭರವಸೆ ತುಂಬುವ’ ಎಂಬ ವಿನೂತನ ಕಾರ್ಯಕ್ರಮವನ್ನು ಹನೂರು ಶೈಕ್ಷಣಿಕ ವಲಯದಲ್ಲಿ ಪ್ರಾರಂಭ ಮಾಡಲಾಗಿದೆ’ ಎಂದರು.

‘ವಿದ್ಯಾರ್ಥಿಗಳು ಉದ್ವೇಗಕ್ಕೆ ಒಳಗಾಗದೇ ನಿರಾತಂಕವಾಗಿ ಪರೀಕ್ಷೆ ಎದುರಿಸುವಂತಾಗಬೇಕು. ಧೈರ್ಯದಿಂದ ಪರೀಕ್ಷೆ ಎದುರಿಸಿದರೆ ಶೇ50ರಷ್ಟು ಪರೀಕ್ಷೆಯಲ್ಲಿ ತೇರ್ಗೆಡೆಯಾದಂತೆಯೇ ಎಂಬುದನ್ನು ವಿದ್ಯಾರ್ಥಿಗಳು ಅರಿಯಬೇಕು’ ಎಂದರು.

‘ವಿದ್ಯಾರ್ಥಿಗಳು ತಂದೆ ತಾಯಿಯರ ತ್ಯಾಗ, ಶಿಕ್ಷಕರ ಶ್ರಮ ಮತ್ತು ಮಾರ್ಗದರ್ಶನವನ್ನು ಅರಿತು ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಪಟ್ಟಣ ಪ್ರದೇಶಗಳಿಗೆ ಹೋಲಿಸಿದರೆ ಉತ್ತಮ ಪರಿಸರ ವಾತಾವರಣ ಹೊಂದಿರುವ ಗ್ರಾಮೀಣ ಭಾಗದ‌ ವಿದ್ಯಾರ್ಥಿಗಳು ಪ್ರಕೃತಿಯನ್ನೇ ಶಕ್ತಿಯನ್ನಾಗಿಸಿ ಮುನ್ನುಗ್ಗಬೇಕು. ಬರೆದಿರುವುದನ್ನು ಓದಿ, ಓದಿದ್ದನ್ನು ಮನನ ಮಾಡಿ ಉತ್ತಮ ರೀತಿಯಲ್ಲಿ ಪರೀಕ್ಷೆ ಎದುರಿಸಬೇಕು. ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಮತ್ತು ಗಣಿತ ವಿಷಯಗಳಲ್ಲಿ ಪ್ರಬುದ್ಧತೆ ಸಾಧಿಸುವ ನಿಟ್ಟಿನಲ್ಲಿ ಕಾರ್ಯಾಗಾರ ಕೈಗೊಳ್ಳಬೇಕಾದ ಅವಶ್ಯಕತೆ ಇದೆ. ನನ್ನ ಮೊದಲ ಆದ್ಯತೆ ಶಿಕ್ಷಣ, ಆರೋಗ್ಯ, ರೈತ ‌ಏಳಿಗೆಯಾಗಿದ್ದು, ಇದಕ್ಕೆ ಬೇಕಾದ ಸಹಕಾರ ಸದಾ ಒದಗಿಸುತ್ತೇನೆ’ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಂದ ಭರವಸೆ: ‘ಗ್ರಾಮೀಣ ಭಾಗದ ಮಕ್ಕಳ ಪರೀಕ್ಷಾ ಭಯ ಹೋಗಲಾಡಿಸಿ ಅವರನ್ನು ಪರೀಕ್ಷೆಗೆ ಸಿದ್ಧಗೊಳಿಸುವುದರ ಜೊತೆಗೆ ಅವರಲ್ಲಿ ಆತ್ಮಸ್ಥೈರ್ಯ ತುಂಬಲು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮಕ್ಕಳು ಉತ್ತಮ ಫಲಿತಾಂಶ ಪಡೆದು ತಾಲ್ಲೂಕಿನ ಕೀರ್ತಿ ಹೆಚ್ಚಿಸುವುದಾಗಿ ಶಾಸಕರಿಗೆ ಭರವಸೆ ನೀಡಿದರು. ಇಂತಹ ಕಾರ್ಯಕ್ರಮದಿಂದ ಸ್ಫೂರ್ತಿ, ಧೈರ್ಯ ಆತ್ಮವಿಶ್ವಾಸ ಮೂಡಿದೆ. ಖಂಡಿತ  ಉತ್ತಮ ಫಲಿತಾಂಶ ತಂದು ಓದಿದ ಶಾಲೆ, ಕಾಲೇಜು, ಶಿಕ್ಷಕರು, ತಂದೆ ತಾಯಿ, ನಿಮ್ಮೆಲ್ಲರಿಗೂ ಕೀರ್ತಿ ತರುತ್ತೇವೆ’ ಎಂದರು.

ಈ ಸಂದರ್ಭ ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶದ ಸ್ವಾಮಿಜಿ, ಜಿಲ್ಲಾಧಿಕಾರಿ ಟಿ. ಶಿಲ್ಪಾನಾಗ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಮಚಂದ್ರ ರಾಜೇ ಅರಸು, ತಹಶೀಲ್ದಾರ್ ಮಂಜುಳಾ ಉಪ ತಹಶೀಲ್ದಾರ್ ಧನಂಜಯ್, ಇ.ಓ ಉಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು, ಶಿಕ್ಷಣ ಸಂಯೋಜಕ ಕಿರಣ್, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎಂ.ಮಹಾದೇವ, ಕುಮಾರ್, ವಿವೇಕಾನಂದ ಶಾಲೆಯ ರಾಜೇಂದ್ರ ಇದ್ದರು.

ಕಾರ್ಯಕ್ರಮದಲ್ಲಿ ಹಾಜರಿದ್ದ ವಿದ್ಯಾರ್ಥಿಗಳು
ಕಾರ್ಯಕ್ರಮದಲ್ಲಿ ಹಾಜರಿದ್ದ ವಿದ್ಯಾರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT