ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಹಿರಿಯ ಪ್ರಾಥಮಿಕ ಶಾಲೆ ಆರಂಭ

ಗುಂಡ್ಲುಪೇಟೆ: ಗಡಿಭಾಗದ 21 ಶಾಲೆಗಳಲ್ಲಿ ಮುಂದುವರಿದ ವಿದ್ಯಾಗಮ ಕಾರ್ಯಕ್ರಮ
Last Updated 22 ಫೆಬ್ರುವರಿ 2021, 14:56 IST
ಅಕ್ಷರ ಗಾತ್ರ

ಚಾಮರಾಜನಗರ: 6ರಿಂದ 8ನೇ ತರಗತಿವರೆಗಿನ ಹಿರಿಯ ಪ್ರಾಥಮಿಕ ಶಾಲೆಗಳು ಜಿಲ್ಲೆಯಾದ್ಯಂತ ಸೋಮವಾರ ಆರಂಭವಾದವು.

ಗುಂಡ್ಲುಪೇಟೆ ತಾಲ್ಲೂಕಿನ ಗಡಿ ಭಾಗದಲ್ಲಿರುವ 21 ಶಾಲೆಗಳನ್ನು ಬಿಟ್ಟು ಉಳಿದ ಕಡೆಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 4.30ರವರೆಗೆ ತರಗತಿಗಳು ನಡೆದವು.

ಸರ್ಕಾರಿ, ಖಾಸಗಿ, ಕೇಂದ್ರೀಯ ವಿದ್ಯಾಲಯ ಸೇರಿದಂತೆ ಎಲ್ಲ ಶಾಲೆಗಳಲ್ಲೂ ತರಗತಿಗಳು ಆರಂಭವಾದವು. ಮೊದಲ ದಿನ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು.

ಕೇರಳದ ಗಡಿಗೆ ಹೊಂದಿಕೊಂಡಿರುವ ‌ಗುಂಡ್ಲುಪೇಟೆ ತಾಲ್ಲೂಕಿನ ಕಣ್ಣೇಗಾಲ, ಬೇರಂಬಾಡಿ, ಭೀಮನಬೀಡು‌, ಕೂತನೂರು ಸೇರಿದಂತೆ ಸುತ್ತಮುತ್ತಲಿನ 21 ಶಾಲೆಗಳಲ್ಲಿ ತರಗತಿಗಳು ನಡೆಯಲಿಲ್ಲ. ಕೇರಳದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಗಡಿ ಭಾಗದ ಶಾಲೆಗಳಲ್ಲಿ ತರಗತಿಗಳು ನಡೆಯಲಿಲ್ಲ. ಆದರೆ, ಜನವರಿ 1ರಿಂದ ಆರಂಭವಾಗಿರುವ ವಿದ್ಯಾಗಮ ಕಾರ್ಯಕ್ರಮ ಎಂದಿನಂತೆ ನಡೆಯಿತು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (ಡಿಡಿಪಿಐ) ಎಸ್‌.ಟಿ.ಜವರೇಗೌಡ ಅವರು, ‘ಇದುವರೆಗೂ ಎಲ್ಲ ಶಾಲೆಗಳಲ್ಲಿ 6, 7 ಮತ್ತು 8ನೇ ತರಗತಿವರೆಗೆ ವಿದ್ಯಾಗಮ ಕಾರ್ಯಕ್ರಮ ನಡೆಯುತ್ತಿತ್ತು. ಬೆಳಿಗ್ಗೆ 10ರಿಂದ 12.20ರವರೆಗೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ 4.30ರವರೆಗೆ ವಿದ್ಯಾಗಮ ನಡೆಯುತ್ತಿತ್ತು. ತರಗತಿಗಳು ಆರಂಭವಾಗಿರುವುದರಿಂದ ಬೆಳಿಗ್ಗೆ 10ರಿಂದ ಸಂಜೆ 4.30ರವರೆಗೆ ಮಕ್ಕಳು ಪಾಠ ಕೇಳಬೇಕಾಗುತ್ತದೆ’ ಎಂದು ಹೇಳಿದರು.

ಆಟ ಪಾಠದಲ್ಲಿ ತಲ್ಲೀನ: ಕೋವಿಡ್‌ನ ಕಾರಣದಿಂದಾಗಿ 11 ತಿಂಗಳ ಬಳಿಕ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ತರಗತಿಗಳಲ್ಲಿ ಪಾಠ ಕೇಳಿದರು. ಬಿಸಿಯೂಟ ಇಲ್ಲದೇ ಇರುವುದರಿಂದ ಕೆಲವರು ಊಟದ ಡಬ್ಬಿ ತಂದರೆ, ಶಾಲೆಯ ಹತ್ತಿರ ಮನೆಗಳಿರುವ ವಿದ್ಯಾರ್ಥಿಗಳು ಮಧ್ಯಾಹ್ನ ಮನೆಗೆ ತೆರಳಿ ಊಟ ಮಾಡಿಕೊಂಡು ಬಂದರು.ಸಂಜೆ ಹೊತ್ತು ವಿದ್ಯಾರ್ಥಿಗಳೆಲ್ಲ ಒಟ್ಟಾಗಿ ಸೇರಿ ಆಟೋಟದಲ್ಲಿ ತೊಡಗಿ ಖುಷಿ ಪಟ್ಟರು.

ಮಂಗಳವಾರದಿಂದ ತರಗತಿ ನಡೆಸಲು ಕ್ರಮ: ಡಿಡಿಪಿಐ

‘ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಕೇರಳ ಗಡಿಭಾಗದಲ್ಲಿರುವ 21 ಶಾಲೆಗಳನ್ನು ಗುರುತಿಸಲಾಗಿದೆ. ಸೋಮವಾರ ಇಲ್ಲಿ ತರಗತಿಗಳು ನಡೆದಿಲ್ಲ. ಆದರೆ, ವಿದ್ಯಾಗಮ ನಡೆದಿದೆ. ಮಕ್ಕಳು ಹಾಜರಾಗಿದ್ದಾರೆ. ಈ ಶಾಲೆಗಳು ಗಡಿ ಭಾಗದಲ್ಲಿ ಇದ್ದರೂ, ಕೇರಳದ ಜನವಸತಿ ಪಕ್ಕದಲ್ಲಿ ಇಲ್ಲ. ಅರಣ್ಯ ಪ್ರದೇಶವಿದೆ. ಹಾಗಾಗಿ, ಕೋವಿಡ್‌ ಬರುವ ಭೀತಿ ಇಲ್ಲ. ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಮಂಗಳವಾರದಿಂದ ಎಂದಿನಂತೆ ಅಲ್ಲೂ ತರಗತಿಗಳನ್ನು ಆರಂಭಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಡಿಡಿಪಿಐ ಜವರೇಗೌಡ ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT