ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಂಡಿಪುರ, ಚೌಡಹಳ್ಳಿಯ ಪ್ರತಿ ಮನೆಗೂ ನೀರಿನ ಸಂಪರ್ಕ

ಜಲ ಜೀವನ ಮಿಷನ್‌ ಯೋಜನೆ ಅನುಷ್ಠಾನ, ಹರ್‌ ಘರ್‌ ಜಲ್‌ ಗ್ರಾಮ ಘೋಷಣೆ
Last Updated 4 ಸೆಪ್ಟೆಂಬರ್ 2022, 5:06 IST
ಅಕ್ಷರ ಗಾತ್ರ

ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕಿನ ಹುಂಡಿಪುರ ಮತ್ತು ಚೌಡಹಳ್ಳಿ ಗ್ರಾಮಗಳ ಎಲ್ಲ ಮನೆಗಳಿಗೂ ಮನೆ ಮನೆಗೆ ಗಂಗೆ ಯೋಜನೆ ಅಡಿಯಲ್ಲಿ ನಲ್ಲಿ ಸಂಪರ್ಕ ಕಲ್ಪಿಸಲಾಗಿರುವುದರಿಂದ ಆ ಎರಡು ಗ್ರಾಮಗಳನ್ನು ಹರ್‌ ಘರ್‌ ಜಲ್‌ (ಪ್ರತಿ ಮನೆಯಲ್ಲೂ ನೀರು) ಗ್ರಾಮಗಳು ಎಂದು ಘೋಷಿಸಲಾಗಿದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಗುಂಡ್ಲುಪೇಟೆ ವಿಭಾಗ ಹಾಗೂ ಕೈಂಡ್ ಹಾರ್ಟ್ಸ್ ಅನುಷ್ಠಾನ ಬೆಂಬಲ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಗುಂಡ್ಲುಪೇಟೆ ತಾಲ್ಲೂಕಿನ ಹುಂಡಿಪುರ ಗ್ರಾಮ ಪಂಚಾಯಿತಿಯಲ್ಲಿ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ನಡೆಯಿತು.

ಗ್ರಾಮ ಪಂಚಾಯಿತಿಯಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯ ಅಧ್ಯಕ್ಷ ಮಹೇಂದ್ರ ಮಾತನಾಡಿ, ‘ಮನೆ ಮನೆಗೆ ಗಂಗೆ ಯೋಜನೆಯನ್ನು ಅನುಷ್ಠಾನ ಮಾಡುವ ಮೊದಲು ಡ್ರೋನ್ ಕ್ಯಾಮೆರಾ ಮೂಲಕ ಗ್ರಾಮದ ಹಳ್ಳಿಗಳ ನಕ್ಷೆಯನ್ನು ಸೆರೆ ಹಿಡಿದು ಯೋಜನೆ ರೂಪಿಸಿದ್ದಾರೆ.ಬದಲಾಗಿರುವ ಹೊಸ ವ್ಯವಸ್ಥೆಗೆ ನಾವು ಹೊಂದಿಕೊಳ್ಳಬೇಕೇ ವಿನಾ ಹಳೆ ವ್ಯವಸ್ಥೆಗೆ ಅಲ್ಲ. ಉತ್ತಮವಾದ ಯೋಜನೆ ಇದಾಗಿದೆ. ಮುಂದಿನ ತಲೆಮಾರಿಗೂ ನೀರನ್ನು ಉಳಿಸುವಂತಾಗಬೇಕು’ ಎಂದರು.

ನೀರಿನ ಬಳಕೆ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವಂತಾಗಬೇಕು. ಎಲ್ಲರಿಗೂ ಯೋಜನೆ ತಲುಪುವಂತಾಗಿರುವುದು ಗಮನಾರ್ಹ ಎಂದರು.

ಹುಂಡೀಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಮಾತನಾಡಿ, ‘ಹೊಸತನಕ್ಕೆ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ನೀರನ್ನು ಸಂಗ್ರಹಿಸಬೇಕಾಗಿರುವ ಜವಾಬ್ದಾರಿ ಎಲ್ಲರ ಮೇಲಿದೆ. ಸಾವಿರ ಅಡಿ ಆಳಕ್ಕೆ ಅಂತರ್ಜಲ ಮಟ್ಟ ಕುಸಿದಿದೆ. ತಾಲ್ಲೂಕು ವ್ಯಾಪ್ತಿಯಲ್ಲಿ ಕೊಳವೆಬಾವಿ ಕೊರೆಸುವುದನ್ನು ನಿಷೇಧಿಸಲಾಗಿದ್ದು ಕೆಂಪು ವಲಯ ಎಂದು ಗುರುತಿಸಲಾಗಿದೆ’ ಎಂದರು.

ಜಿಲ್ಲಾ ಯೋಜನಾ ವ್ಯವಸ್ಥಾಪಕಿ ಆಶಾ ರಮೇಶ್ ಮಾತನಾಡಿ, ‘ಗ್ರಾಮದಲ್ಲಿ ಶೇ 100ರಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಶಾಲೆ, ಅಂಗನವಾಡಿ ಹಾಗೂ ಗ್ರಾಮ ಪಂಚಾಯಿತಿ ಕಟ್ಟಡಗಳು ಸೇರಿದಂತೆ ಇತರೆ ಸರ್ಕಾರಿ ಕಟ್ಟಡಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಕಾಮಗಾರಿ ಸಂಪೂರ್ಣ ಮುಕ್ತಾಯಗೊಂಡ ನಂತರ ‘ಹರ್ ಘರ್ ಜಲ್’ ಪ್ರಮಾಣ ಪತ್ರವನ್ನು ದೃಢೀಕರಿಸಿ ಗ್ರಾಮವನ್ನು ‘ಹರ್ ಘರ್ ಜಲ್’ ಗ್ರಾಮವಾಗಿ ಘೋಷಣೆ ಮಾಡಲಾಗುತ್ತದೆ. ಗ್ರಾಮ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಯ ನೀರು ಮತ್ತು ನೈರ್ಮಲ್ಯ ಸಮಿತಿಯು ನಿರ್ವಹಣೆ ಮಾಡಬೇಕಾಗುತ್ತದೆ’ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ನಂಜಪ್ಪ ಮಾತನಾಡಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಗುಂಡ್ಲುಪೇಟೆ ಉಪ ವಿಭಾಗದ ಕಿರಿಯ ಎಂಜಿನಿಯರ್‌ ಶಿವಮೂರ್ತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರಸ್ವಾಮಿ, ಅನುಷ್ಠಾನ ಬೆಂಬಲ ಸಂಸ್ಥೆಯ ವಾಟರ್ ಸಪ್ಲೈ ಎಂಜಿನಿಯರ್ ಮೋಹನ್‌ಕುಮಾರ್, ಮಾಹಿತಿ ಶಿಕ್ಷಣ ಮತ್ತು ಸಂವಹನ ಸಮಾಲೋಚಕ ಹೊನ್ನಪ್ಪ ಹಲಗೆರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT